ತೈಲ ಫ್ಯಾಕ್ಟರಿಯ ಟ್ಯಾಂಕರ್ ಸ್ವಚ್ಛಗೊಳಿಸುವ ವೇಳೆ ಉಸಿರುಗಟ್ಟಿ 7 ಕಾರ್ಮಿಕರು ಸಾವು

ಕಾಕಿನಾಡ: ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯ ಪೆದ್ದಪುರಂ ಎಂಬಲ್ಲಿನ ತೈಲ ಫ್ಯಾಕ್ಟರಿಯೊಂದರ ಟ್ಯಾಂಕರ್ ಸ್ವಚ್ಛಗೊಳಿಸುವ ವೇಳೆ ಉಸಿರುಗಟ್ಟಿ ಏಳು ಮಂದಿ ಕಾರ್ಮಿಕರು ಮೃತಪಟ್ಟ ಘಟನೆ ಇಂದು ವರದಿಯಾಗಿದೆ.
ಅಂಬಟಿ ಸುಬ್ಬಣ್ಣ ತೈಲ ಫ್ಯಾಕ್ಟರಿಯಲ್ಲಿ ನಡೆದ ಈ ದುರಂತದಲ್ಲಿ ಮಡಿದವರನ್ನು ವೆಚಂಗಿ ಕೃಷ್ಣ, ವೆಚಂಗಿ ನರಸಿಂಹನ್, ವೆಚಂಗಿ ಸಾಗರ್, ಕೊರತ್ತಡು ಬಂಜಿ ಬಾಬು, ಕರ್ರಿ ರಾಮ ರಾವ್, ಕಟ್ಟಮುರಿ ಜಗದೀಶ್ ಮತ್ತು ಪ್ರಸಾದ್ ಎಂದು ಗುರುತಿಸಲಾಗಿದೆ.
ಸುಮಾರು 24 ಅಡಿ ಆಳದ ಟ್ಯಾಂಕರ್ ಸ್ವಚ್ಛಗೊಳಿಸುವ ವೇಳೆ ಈ ದುರಂತ ಸಂಭವಿಸಿದೆ. ಫ್ಯಾಕ್ಟರಿಯನ್ನು ಸೀಲ್ ಮಾಡಲಾಗಿದೆ ಹಾಗೂ ಅದರ ಮಾಲೀಕರ ವಿರುದ್ಧ ಐಪಿಸಿ ಸೆಕ್ಷನ್ 304ಎ ಅನ್ವಯ ಪ್ರಕರಣ ದಾಖಲಿಸಲಾಗಿದೆ ಎಂದು ಕಾಕಿನಾಡ ಜಿಲ್ಲಾ ಕಲೆಕ್ಟರ್ ಕೃತ್ತಿಕಾ ಶುಕ್ಲಾ ತಿಳಿಸಿದ್ದಾರೆ.
ಫ್ಯಾಕ್ಟರಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ದುರಂತ ಸಂಭವಿಸಿದೆಯೇ ಎಂಬುದನ್ನು ತಿಳಿಯಲು ಜಂಟಿ ಕಲೆಕ್ಟರ್ ನೇತೃತ್ವದಲ್ಲಿ ನಾಲ್ಕು ಸದಸ್ಯರ ಸಮಿತಿಯನ್ನು ರಚಿಸಲಾಗಿದ್ದು ಮೂರು ದಿನಗಳೊಳಗೆ ಸಮಿತಿ ವರದಿ ಸಲ್ಲಿಸಲಿದೆ. ಈ ಫ್ಯಾಕ್ಟರಿ ಕಾರ್ಯಾಚರಿಸಲು ಅಗತ್ಯ ಅನುಮತಿ ಪಡೆದಯಕೊಳ್ಳಲಾಗಿದೆಯೇ ಎಂದು ಸಮಿತಿ ಪರಿಶೀಲನೆ ನಡೆಸುತ್ತಿದೆ.
ದುರಂತದಲ್ಲಿ ಮಡಿದವರ ಕುಟುಂಬಗಳಿಗೆ ರೂ. 25 ಲಕ್ಷ ಪರಿಹಾರವನ್ನು ರಾಜ್ಯ ಸರ್ಕಾರ ಘೋಷಿಸಿದೆ.
ಫ್ಯಾಕ್ಟರಿ ಆಡಳಿತ ಅಗತ್ಯ ಸುರಕ್ಷತಾ ಎಚ್ಚರಿಕೆಗಳನ್ನು ಕೈಗೊಳ್ಲದೇ ಇರುವುದರಿಂದ ದುರಂತ ಸಂಭವಿಸಿದೆ ಎಂದು ಮೃತರ ಕುಟುಂಬಗಳು ಆರೋಪಿಸಿವೆ. ಫ್ಯಾಕ್ಟರಿ ಆಡಳಿತದ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ ರವೀಂದ್ರನಾಥ್ ಬಾಬು ತಿಳಿಸಿದ್ದಾರೆ.
ಸ್ಥಳೀಯ ಶಾಸಕ ಚಿನ್ನರಾಜಪ್ಪ ಫ್ಯಾಕ್ಟರಿಗೆ ಭೇಟಿ ನೀಡಿದ ನಂತರ ಸುದ್ದಿಗಾರರ ಜೊತೆ ಮಾತನಾಡುತ್ತಾ ಅನನುಭವಿ ಕಾರ್ಮಿಕರನ್ನು ಟ್ಯಾಂಕರ್ ಸ್ವಚ್ಛಗೊಳಿಸಲು ನೇಮಿಸಲಾಗಿತ್ತು ಎಂದು ಆರೋಪಿಸಿದ್ದಾರೆ.







