ಅದಾನಿ ಸಂಸ್ಥೆ ಪ್ರಶಸ್ತಿ ಸಮಾರಂಭದ ಪ್ರವರ್ತಕ ಎಂದು ತಿಳಿದು ದೇವಿ ಪ್ರಶಸ್ತಿ ನಿರಾಕರಿಸಿದ ಖ್ಯಾತ ತಮಿಳು ಕವಯತ್ರಿ

Update: 2023-02-10 12:16 GMT

ಹೊಸದಿಲ್ಲಿ: ಖ್ಯಾತ ತಮಿಳು ಕವಯತ್ರಿ (Tamil Poet) ಸುಕಿರ್ತರಾಣಿ (Sukirtharani) ಅವರು ತಮಗೆ ನೀಡಲಾದ ದೇವಿ ಪ್ರಶಸ್ತಿಯನ್ನು (Devi Award) ಸ್ವೀಕರಿಸಲು ನಿರಾಕರಿಸಿದ್ದಾರೆ. ಈ ಪ್ರಶಸ್ತಿ ಪ್ರದಾನ ಸಮಾರಂಭದ ಮುಖ್ಯ ಪ್ರವರ್ತಕರು ಅದಾನಿ ಸಂಸ್ಥೆ (Adani group) ಎಂದು ತಿಳಿದ ನಂತರ ಅವರ ಈ ನಿರ್ಧಾರ ಹೊರಬಿದ್ದಿದೆ.

ನನ್ನ ಬರಹಗಳು, ನನ್ನ ತತ್ವಗಳು ಹಾಗೂ ನಾನು ನಂಬಿರುವ ಸಿದ್ಧಾಂತಗಳಿಗೆ ಇದು ವಿರುದ್ಧವಾಗುವುದರಿಂದ ಈ ಪ್ರಶಸ್ತಿ ಸ್ವೀಕರಿಸುತ್ತಿಲ್ಲ ಎಂದು ಫೆಬ್ರವರಿ 4 ರಂದು ತಮ್ಮ ಫೇಸ್ಬುಕ್‌ ಪುಟದಲ್ಲಿ ಅವರು ಹೇಳಿಕೊಂಡಿದ್ದಾರೆ. ಅದಾನಿ ಸಮೂಹದ ವಿರುದ್ಧ ಹಲವು ಆರೋಪಗಳನ್ನು ಹೊರಿಸಿ  ಹಿಂಡೆನ್‌ಬರ್ಗ್‌ ಸಂಸ್ಥೆ ವರದಿ ಹೊರತಂದ ನಂತರ ಈ ಬೆಳವಣಿಗೆ ನಡೆದಿದೆ.

ದೇವಿ ಪ್ರಶಸ್ತಿಯನ್ನು 'ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ ಗ್ರೂಪ್‌' 12 ಮಹಿಳಾ ಸಾಧಕಿಯರಿಗೆ ವಿವಿಧ ಕ್ಷೇತ್ರಗಳ ಅವರ ಸಾಧನೆಗಾಗಿ ನೀಡುತ್ತಿದೆ. ಸುಕಿರ್ತರಾಣಿ ದಲಿತ ಸಾಹಿತ್ಯಕ್ಕೆ ನೀಡಿದ ಕೊಡುಗೆಗಾಗಿ ಅವರನ್ನು ಈ ಪ್ರಶಸ್ತಿಗೆ ಆರಿಸಲಾಗಿತ್ತು.

ಫೆಬ್ರವರಿ 8 ರಂದು ಚೆನ್ನೈನ ಐಟಿಸಿ ಗ್ರ್ಯಾಂಡ್‌ ಹೋಟೆಲ್‌ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆದಿತ್ತು. ವಿಜ್ಞಾನಿ ಗಗನ್‌ದೀಪ್‌ ಕಂಗ್‌, ಭರತನಾಟ್ಯ ಪ್ರವೀಣೆ ಪ್ರಿಯದರ್ಶಿನಿ ಗೋವಿಂದ್‌, ದಾನಿ ರಾಧಿಕಾ ಸಂತಾನಕೃಷ್ಣ ಮತ್ತು  ಸ್ಕ್ವಾಶ್‌ ಆಟಗಾರ್ತಿ ಜೋಶ್ನಾ ಚಿನ್ನಪ್ಪ ಈ ಬಾರಿಯ ಪ್ರಶಸ್ತಿಗೆ ಪಾತ್ರರಾಗಿದ್ದರು.

ಸುಕಿರ್ತರಾಣಿ ಅವರು ರಾಣಿಪೇಟ್‌ ಜಿಲ್ಲೆಯ ಲಾಲಾಪೇಟ್‌ ಎಂಬಲ್ಲಿ ಶಿಕ್ಷಕಿಯಾಗಿದ್ಧಾರೆ. ಆರು ಕವನ ಸಂಗ್ರಹಗಳು ಮತ್ತಿತರ ಸಾಹಿತ್ಯಕ ಕೃತಿಗಳನ್ನು ಅವರು ರಚಿಸಿದ್ದಾರೆ.

ಇದನ್ನೂ ಓದಿ: ಮೋದಿಗೆ ಅದಾನಿಯೇ ʻಪವಿತ್ರ ಗೋವುʼ: ಶಿವಸೇನೆ ವ್ಯಂಗ್ಯ

Similar News