ಕಳೆದ 5 ವರ್ಷಗಳಲ್ಲಿ ಗುಜರಾತ್‌ನಲ್ಲಿ ಅತ್ಯಧಿಕ ಪೊಲೀಸ್ ಕಸ್ಟಡಿ ಸಾವು: ಸಂಸತ್ತಿಗೆ ತಿಳಿಸಿದ ಕೇಂದ್ರ ಸರಕಾರ

Update: 2023-02-13 14:26 GMT

ಗಾಂಧಿನಗರ, ಫೆ. 13:  ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿದ ಪ್ರದೇಶಗಳಲ್ಲಿ ಗುಜರಾತ್‌ನಲ್ಲಿ 2017 ಹಾಗೂ 2022ರ ನಡುವೆ ಅತ್ಯಧಿಕ ಪೊಲೀಸ್ ಕಸ್ಟಡಿ ಸಾವು ಸಂಭವಿಸಿರುವುದು ವರದಿಯಾಗಿದೆ ಎಂದು ಕೇಂದ್ರ ಸರಕಾರ ಕಳೆದ ವಾರ ಸಂಸತ್ತಿಗೆ ತಿಳಿಸಿದೆ. 

ಕಳೆದ 5 ವರ್ಷಗಳಲ್ಲಿ ಗುಜರಾತ್‌ನ ಪೊಲೀಸ್ ಕಸ್ಟಡಿಯಲ್ಲಿ 80 ಜನರು ಮೃತಪಟ್ಟಿದ್ದಾರೆ. ಇದರಲ್ಲಿ 2021-22ರಲ್ಲಿ 24, 2020-21ರಲ್ಲಿ 17, 2019-20ರಲ್ಲಿ 12 ಹಾಗೂ 2018-19ರಲ್ಲಿ 13 ಹಾಗೂ 2017-18ರಲ್ಲಿ 14 ಮಂದಿ ಸಾವನ್ನಪ್ಪಿದ್ದಾರೆ.

ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಳೆದ ಐದು ವರ್ಷಗಳಲ್ಲಿ ಪೊಲೀಸ್ ಕಸ್ಟಡಿಯಲ್ಲಿ ಮೃತಪಟ್ಟವರ ಒಟ್ಟು ಸಂಖ್ಯೆ 699 ಎಂದು ಕೇಂದ್ರದ ಗೃಹ ಖಾತೆಯ ಸಹಾಯಕ ಸಚಿವ ನಿತ್ಯಾನಂದ ರಾಯ್ ಅವರು ಹೇಳಿದ್ದಾರೆ. ಸಂಸತ್ತಿನಲ್ಲಿ ಫೆಬ್ರವರಿ 8ರಂದು ಕಾಂಗ್ರೆಸ್ ಸಂಸದೆ ಫುಲೊ ದೇವಿ ನೇತಾಮ್ ಅವರ ಪ್ರಶ್ನೆಗೆ ನಿತ್ಯಾನಂದ ರಾಯ್ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.

ದೇಶದಲ್ಲಿ 2021-22ರಲ್ಲಿ 2,544 ಕಸ್ಟಡಿ ಸಾವುಗಳು ಸಂಭವಿಸಿರುವುದು  ವರದಿಯಾಗಿವೆ ಎಂದು ರಾಯ್ ಅವರು ಸಂಸತ್ತಿಗೆ ಮಾಹಿತಿ ನೀಡಿದ್ದರು. ಅತ್ಯಧಿಕ ಅಂದರೆ 501 ಕಸ್ಟಡಿ ಸಾವು ಉತ್ತರಪ್ರದೇಶದಿಂದ ವರದಿಯಾಗಿದೆ ಎಂದು ಅವರು ತಿಳಿಸಿದ್ದರು. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಪ್ರಕಾರ ‘‘ಕಸ್ಟಡಿ ಸಾವು’’ ಎಂದರೆ, ಪ್ರಕರಣದ ಆರೋಪಿಗಳಲ್ಲದೆ, ಕಸ್ಟಡಿಗೆ ತೆಗೆದುಕೊಳ್ಳಲಾದ ಸಾಕ್ಷಿಗಳ ಸಾವು ಕೂಡ ಒಳಗೊಳ್ಳುತ್ತದೆ.

ಬುಧವಾರ ಪ್ರಸ್ತುತಪಡಿಸಲಾದ ದತ್ತಾಂಶದಲ್ಲಿ ಸರಕಾರ, ಅತ್ಯಧಿಕ ಕಸ್ಟಡಿ ಸಾವು  ಗುಜರಾತ್ ಬಳಿಕ ಮಹಾರಾಷ್ಟ್ರದಲ್ಲಿ ವರದಿಯಾಗಿದೆ. ಇಲ್ಲಿ 2017-18ರಿಂದ 2021-22ರ ನಡುವೆ 76 ಕಸ್ಟಡಿ ಸಾವುಗಳು ಸಂಭವಿಸಿವೆ.

ಅನಂತರ ಉತ್ತರಪ್ರದೇಶದಲ್ಲಿ 41, ತಮಿಳುನಾಡಿನಲ್ಲಿ 40, ಬಿಹಾರದಲ್ಲಿ 38 ಪೊಲೀಸ್ ಕಸ್ಟಡಿ ಸಾವು ಸಂಭವಿಸಿದೆ. ಸಿಕ್ಕಿಂ ಹಾಗೂ ಗೋವಾದಲ್ಲಿ ತಲಾ 1 ಕಸ್ಟಡಿ ಸಾವು ಸಂಭವಿಸಿದೆ. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಮಾಹಿತಿ ಉಲ್ಲೇಖಿಸಿದ ರಾಯ್ ಅವರು, ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ 201 ವ್ಯಕ್ತಿಗಳ ಕುಟುಂಬಗಳಿಗೆ 5.8 ಕೋ. ರೂ. ಪರಿಹಾರ ನೀಡಲಾಗಿದೆ. ಅಲ್ಲದೆ ಪ್ರಕರಣಕ್ಕೆ ಸಂಬಂಧಿಸಿ ಶಿಸ್ತು ಕ್ರಮಗಳನ್ನು ಕೂಡ ತೆಗೆದುಕೊಳ್ಳಲಾಗಿದೆ ಎಂದರು. 

ಇದನ್ನು ಓದಿ: ಭಾರತವನ್ನು ಹಿಂದೂರಾಷ್ಟ್ರ ಮಾಡಲು 'ಮಹಾಯಜ್ಞ' ಆರಂಭಿಸಿರುವ ಧೀರೇಂದ್ರ ಶಾಸ್ತ್ರಿಯನ್ನು ಭೇಟಿಯಾದ ಕಮಲ್ ನಾಥ್

Similar News