ಗೂಗಲ್‌ನ ಪುಣೆ ಕಚೇರಿಯಲ್ಲಿ ಹುಸಿಬಾಂಬ್ ಕರೆ: ಹೈದರಾಬಾದ್‌ನಲ್ಲಿ ಆರೋಪಿಯ ಬಂಧನ

Update: 2023-02-13 15:33 GMT

ಪುಣೆ,ಫೆ.13: ಇಲ್ಲಿಯ ಗೂಗಲ್ ಕಚೇರಿಯ ಆವರಣದಲ್ಲಿ ಬಾಂಬ್ ಇರಿಸಲಾಗಿದೆ ಎಂಬ ಅನಾಮಧೇಯ ಬೆದರಿಕೆ ಕರೆಯಿಂದಾಗಿ ರವಿವಾರ ರಾತ್ರಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು,ಆದರೆ ತನಿಖೆಯ ಬಳಿಕ ಅದು ಹುಸಿ ಬಾಂಬ್ ಬೆದರಿಕೆಯಾಗಿತ್ತು ಎನ್ನುವುದು ದೃಢಪಟ್ಟಿದೆ ಎಂದು ಪೊಲೀಸರು  ಇಲ್ಲಿ ಸೋಮವಾರ ತಿಳಿಸಿದರು.

ಪಾನಮತ್ತ ಸ್ಥಿತಿಯಲ್ಲಿ ಕರೆಯನ್ನು ಮಾಡಿದ್ದ ಎನ್ನಲಾಗಿರುವ ವ್ಯಕ್ತಿಯನ್ನು ಹೈದರಾಬಾದ್‌ನಲ್ಲಿ ಪತ್ತೆ ಹಚ್ಚಿ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಕಂಪನಿಯ ಪುಣೆ ಕಚೇರಿಯಲ್ಲಿ ಬಾಂಬ್ ಇರಿಸಲಾಗಿದೆ ಎಂಬ ಕರೆಯೊಂದು ರವಿವಾರ ರಾತ್ರಿ 7:54ಕ್ಕೆ ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ (ಬಿಕೆಸಿ)ನಲ್ಲಿರುವ ಗೂಗಲ್ ಕಚೇರಿಗೆ ಬಂದಿತ್ತು. ಕಂಪನಿಯ ಅಧಿಕಾರಿಗಳು ಸಲ್ಲಿಸಿದ್ದ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಿಕೊಂಡಿದ್ದ ಬಿಕೆಸಿ ಪೊಲೀಸರು ಪುಣೆ ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದರು.

ಪುಣೆಯ ಮುಂಧ್ವಾ ಪ್ರದೇಶದಲ್ಲಿಯ ಬಹುಮಹಡಿಗಳ ವಾಣಿಜ್ಯ ಸಂಕೀರ್ಣದ 11ನೇ ಅಂತಸ್ತಿನಲ್ಲಿರುವ ಗೂಗಲ್ ಕಚೇರಿಗೆ ಧಾವಿಸಿದ್ದ ಪುಣೆ ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳ ವ್ಯಾಪಕ್ ಶೋಧಗಳನ್ನು ನಡೆಸಿದ್ದು,ಅದೊಂದು ಹುಸಿ ಬೆದರಿಕೆ ಕರೆಯಾಗಿತ್ತು ಎನ್ನುವುದು ಬೆಳಕಿಗೆ ಬಂದಿತ್ತು ಎಂದು ಡಿಸಿಪಿ ವಿಕ್ರಾಂತ್ ದೇಶಮುಖ್ ತಿಳಿಸಿದರು.

ಬೆದರಿಕೆ ಕರೆ ತೆಲಂಗಾಣದ ಹೈದರಾಬಾದ್‌ನಿಂದ ಬಂದಿತ್ತು. ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಲಾಗಿದೆ. ತಾನು ಪಾನಮತ್ತನಾಗಿದ್ದಾಗ ಕರೆಯನ್ನು ಮಾಡಿದ್ದೆ ಎಂದು ಆತ ಹೇಳಿಕೊಂಡಿದ್ದಾನೆ. ಘಟನೆಯ ಕುರಿತು ತನಿಖೆ ಪ್ರಗತಿಯಲ್ಲಿದೆ ಎಂದರು.

ಇದನ್ನು ಓದಿ: ಪಂಡಿತರ ಕುರಿತು ಭಾಗ್ವತ್ ಹೇಳಿಕೆ ವಿವಾದದ ನಡುವೆ ಜಾತಿ ವ್ಯವಸ್ಥೆಯನ್ನು ಸಮರ್ಥಿಸಿದ ಪುರಿ ಶಂಕರಾಚಾರ್ಯ

Similar News