2019, 2021 ರ ನಡುವೆ 1.12 ಲಕ್ಷಕ್ಕೂ ಹೆಚ್ಚು ದಿನಗೂಲಿ ಕಾರ್ಮಿಕರ ಆತ್ಮಹತ್ಯೆ: ಕೇಂದ್ರ

Update: 2023-02-13 16:43 GMT

ಹೊಸದಿಲ್ಲಿ: 2019 ಮತ್ತು 2021 ರ ನಡುವೆ 1.12 ಲಕ್ಷಕ್ಕೂ ಹೆಚ್ಚು ದಿನಗೂಲಿ ಕಾರ್ಮಿಕರು ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಸರ್ಕಾರ ಸಂಸತ್ತಿಗೆ ತಿಳಿಸಿದೆ.

2019 ರಲ್ಲಿ 32,563 ದಿನಗೂಲಿ ಕಾರ್ಮಿಕರು, 2020 ರಲ್ಲಿ 37,666 ಮತ್ತು 2021 ರಲ್ಲಿ 42,004 ದಿನಗೂಲಿ ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಕಾರ್ಮಿಕ ಸಚಿವ ಭೂಪೇಂದರ್ ಯಾದವ್ ಅವರು ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದ ಸು ತಿರುನಾವುಕ್ಕರಸರ್ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

2020 ರಿಂದ 2021 ರ ನಡುವಿನ ಅವಧಿಯಲ್ಲಿ, ಕರೋನವೈರಸ್ ಸಾಂಕ್ರಾಮಿಕದ ಮೊದಲ ಎರಡು ಅಲೆಗಳ ಸಮಯದಲ್ಲಿ ಹೆಚ್ಚು ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ.

ಮಾರ್ಚ್ 2020 ರಲ್ಲಿ ದೇಶಾದ್ಯಂತ ಲಾಕ್‌ಡೌನ್ ಹೇರಿದಾಗ ಪ್ರಮುಖ ನಗರಗಳಿಂದ ವಲಸೆ ಕಾರ್ಮಿಕರು ಸಾಮೂಹಿಕ ವಲಸೆ ಹೋಗಿದ್ದರು. ಅವರಲ್ಲಿ ಬಹುತೇಕರು ಕಾಲ್ನಡಿಗೆಯ ಮೂಲಕವೇ ಸಾವಿರಾರು ಕಿಮೀ ದೂರವಿರುವ ತಮ್ಮ ರಾಜ್ಯಗಳಿಗೆ ವಲಸೆ ಹೋಗಿದ್ದರು.  ಸಾರ್ವಜನಿಕ ಸಾರಿಗೆಯ ವ್ಯವಸ್ಥೆಯನ್ನು ಸ್ಥಗಿತಗೊಳಿಸಿದ್ದರಿಂದ ನಡೆದೇ ತಮ್ಮೂರುಗಳನ್ನು ತಲುಪಬೇಕಾದ ಅನಿವಾರ್ಯತೆ ವಲಸೆ ಕಾರ್ಮಿಕರಿಗೆ ಏರ್ಪಟ್ಟಿತ್ತು.

2020 ರಲ್ಲಿ ಪ್ಯಾಸೆಂಜರ್ ರೈಲು ಸೇವೆಗಳನ್ನು ಸ್ಥಗಿತಗೊಳಿಸಿದ್ದರೂ ರೈಲ್ವೆ ಹಳಿಗಳ ಮೇಲೆ 8,700 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, ಅವರಲ್ಲಿ ಹೆಚ್ಚಿನವರು ವಲಸಿಗರು ಎಂದು ಸರ್ಕಾರ ಹೇಳಿದೆ.

Similar News