ಗೌರಿ ಲಂಕೇಶ್ ಹತ್ಯೆಯಲ್ಲಿ ಸುಳ್ಳು ಸುದ್ದಿಯ ಬೃಹತ್ ಜಾಲದ ಪಾತ್ರ ಬಯಲು ಮಾಡಿದ 'ಫೋರ್ ಬಿಡನ್ ಸ್ಟೋರೀಸ್'

ಜಾಗತಿಕ ವರದಿಗಾರರ ಜಾಲದಿಂದ ತನಿಖಾ ವರದಿ

Update: 2023-02-15 11:00 GMT

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾಗಿ ಐದು ವರ್ಷಗಳು ಕಳೆದಿವೆ. ಸೆಪ್ಟೆಂಬರ್ 2017 ರಲ್ಲಿ ಗೌರಿ ಲಂಕೇಶ್‌ ರನ್ನು ಹತ್ಯೆಗೈಯಲಾಯಿತು. ಇದೀಗ ಅವರ ಹತ್ಯೆ ಮತ್ತದರ ನಂತರದ ಹಲವು ನಿಗೂಢ ಅಂಶಗಳು ಒಂದೊಂದೇ ಬಯಲಾಗತೊಡಗಿವೆ. ಗೌರಿ ಲಂಕೇಶ್ ರವರು ಸುಳ್ಳು ಸುದ್ದಿಗಳಿಂದಾಗುತ್ತಿರುವ ಅಪಾಯದ ಬಗ್ಗೆ ಚಿಂತಿತರಾಗಿದ್ದು, ಆ ಜಾಲವನ್ನು ಬಯಲು ಮಾಡಬೇಕು ಎಂದು ಬಯಸಿದ್ದರು. ತಮಗಿರುವ ಸೀಮಿತ ಸೌಲಭ್ಯ ಹಾಗು ಸಂಪನ್ಮೂಲಗಳಿಂದ ಅದನ್ನು ನಿರ್ವಹಿಸುವ ಸಾಧ್ಯತೆ ಕುರಿತು ಯೋಚಿಸುತ್ತಿದ್ದರು. 

Forbidden Stories ಎಂಬ ಫ್ರಾನ್ಸ್ ಮೂಲದ ಆನ್ಲೈನ್ ವೇದಿಕೆ ಗೌರಿ ಹತ್ಯೆಯ ಬಳಿಕ  ದೊಡ್ಡ ವರದಿಗಾರರ ಜಾಲವೊಂದನ್ನು ಕಟ್ಟಿಕೊಂಡು ದೇಶದಲ್ಲಿರುವ ಸುಳ್ಳು ಸುದ್ದಿಗಳ ಜಾಲದ ಬಗ್ಗೆ ಸಂಶೋಧನೆ ಮಾಡಿದೆ. ಜೊತೆಗೆ ಗೌರಿ ಲಂಕೇಶ್ ಸಾವಿಗೂ ಈ ಸುಳ್ಳು ಸುದ್ದಿಗಳ ಜಾಲ ಹೇಗೆ ಕಾರಣವಾಯಿತು ಎಂಬುವುದನ್ನು ಪತ್ತೆ ಹಚ್ಚಿದೆ.  

‘Forbidden Stories‘ ಪತ್ರಕರ್ತರು ಮತ್ತು ವರದಿಗಾರರು ತಮ್ಮ ಬರಹಗಳನ್ನು ಯಾವುದೇ ರೀತಿಯ ಸೆನ್ಸರ್‌ಶಿಪ್ ಇರದಂತೆ ಪ್ರಕಟಿಸಲು ಸುರಕ್ಷಿತ ದಾರಿಯಾಗಿ ಕಾರ್ಯನಿರ್ವಹಿಸುವ ಆನ್ಲೈನ್ ವೇದಿಕೆಯಾಗಿದೆ. ಬೆದರಿಕೆಗೊಳಗಾದ, ಜೈಲುಪಾಲಾದ ಅಥವಾ ಹತ್ಯೆಗೀಡಾದ ಪತ್ರಕರ್ತರ ಅಪೂರ್ಣ ವರದಿಗಾರಿಕೆ ಕೆಲಸಗಳನ್ನು ಮುಂದುವರಿಸುವುದು ಇದರ ಪ್ರಮುಖ ಧ್ಯೇಯವಾಗಿದೆ. "ಸತ್ಯ ಜನರಿಗೆ ತಲುಪಬಾರದು ಎಂದು ಪತ್ರಕರ್ತನನ್ನು ಕೊಂದರೆ ಆ ಸತ್ಯ ಇನ್ನಷ್ಟು ಹೆಚ್ಚು ಜನರಿಗೆ ತಲುಪುವಂತೆ ನಾವು ಮಾಡುತ್ತೇವೆ.  ಪತ್ರಕರ್ತನನ್ನು ಕೊಂದರೆ ಸತ್ಯವನ್ನು ಕೊಲ್ಲಲಾಗದು ಎಂದು ಜಗತ್ತಿಗೆ ತಿಳಿಸುವುದು ತನ್ನ ಉದ್ದೇಶ" ಎಂದು ‘Forbidden Stories‘ ಹೇಳುತ್ತದೆ.

ಈ ವರದಿ ಫೆಬ್ರವರಿ 14ರಂದು ಪ್ರಕಟವಾಗಿದೆ. ಗೌರಿ ಹತ್ಯೆ ಹಿನ್ನೆಲೆಯಲ್ಲಿನ ಈ  ತನಿಖಾ ವರದಿ ಯೋಜನೆಗೆ  ಫೋರ್ ಬಿಡನ್ ಸ್ಟೋರೀಸ್ ಇಟ್ಟ ಹೆಸರು ‘ಸ್ಟೋರಿ ಕಿಲ್ಲರ್ಸ್’ ಎಂದಾಗಿತ್ತು.  ಗೌರಿ ಹತ್ಯೆಯ ಬಳಿಕ ‘Forbidden Stories‘ ಜಾಗತಿಕವಾಗಿ 30 ಮಾಧ್ಯಮಗಳಿಂದ 100 ಪತ್ರಕರ್ತರ ಒಕ್ಕೂಟವನ್ನು ರಚಿಸಿದ್ದು, ಭಾರತದಿಂದ ದಕ್ಷಿಣ ಅಮೆರಿಕಾವರೆಗೆ, ಯುರೋಪ್ ವರೆಗೆ ವಿಸ್ತರಿಸಿಕೊಂಡಿರುವ ಬೃಹತ್ ಸುಳ್ಳುಸುದ್ದಿ ಮಾರುಕಟ್ಟೆಯ ಪದರಗಳನ್ನು ಈ ಪತ್ರಕರ್ತರು ಬಿಚ್ಚಿಟ್ಟಿದ್ದಾರೆ. ಪ್ರಜಾಪ್ರಭುತ್ವವನ್ನೇ ಬುಡಮೇಲು ಮಾಡಲು ಸುಳ್ಳುಸುದ್ದಿ ಪ್ರಚಾರ ಜಾಲ ಹೇಗೆ ಕೆಲಸ ಮಾಡುತ್ತಿದೆ ಎಂಬುದು ಈ ಮೂಲಕ ಮತ್ತೊಮ್ಮೆ ಬಹಿರಂಗವಾಗಿದೆ.  

|| ಆ ತನಿಖಾ ವರದಿಯ ಮುಖ್ಯಾಂಶಗಳು ಹೀಗಿವೆ... : 

►ದ್ವೇಷ ರಾಜಕೀಯ ಹಾಗು ಸುಳ್ಳು ಸುದ್ದಿ ವಿರುದ್ಧದ ಗೌರಿ ಹೋರಾಟವೇ ಅವರ ಕೊಲೆಗೆ ಕಾರಣವಾಯಿತು. 

►ಗೌರಿ ದೇಶದಲ್ಲಿ ಬಲವಾಗಿ ಬೇರೂರಿರುವ ಅಪಪ್ರಚಾರದ ಸಿಂಡಿಕೇಟ್ ಅನ್ನು  ಬಯಲುಗೊಳಿಸುವ ಉದ್ದೇಶ ಹೊಂದಿದ್ದರು. ಕೊಲೆಯಾಗುವ  ದಿನ  ಅವರು  ತಮ್ಮ ಗೌರಿ ಲಂಕೇಶ್ ಪತ್ರಿಕೆಯಲ್ಲಿ ಬರೆದ ಸಂಪಾದಕೀಯಲ್ಲೂ ಇದನ್ನೇ ಬರೆದಿದ್ದರು.  ಅದೇ  ಅವರ ಕೊನೆಯ ಸಂಪಾದಕೀಯ ಬರಹವಾಯಿತು. 

► ಪತ್ರಿಕೆ ಮೂಲಕ ಸತ್ಯ ಹೇಳುತ್ತಾ, ಬೀದಿಗಿಳಿದು ಜನರಿಗಾಗಿ ಹೋರಾಟ ಮಾಡುತ್ತಲೂ ಇದ್ದ ಗೌರಿ ವಿರುದ್ಧ ಬಲಪಂಥೀಯ ಗುಂಪುಗಳು ವ್ಯವಸ್ಥಿತ  ಅಪಪ್ರಚಾರದಲ್ಲಿ, ಚಾರಿತ್ರ್ಯವಧೆಯಲ್ಲಿ ತೊಡಗಿದ್ದವು.

[ಬಲಪಂಥೀಯ ಗುಂಪುಗಳ ಫೇಸ್‌ಬುಕ್ ಪುಟದಿಂದ ಮಾಡಲಾದ ಪೋಸ್ಟ್]

► ಸುಳ್ಳುಸುದ್ದಿ ಹರಡುವಲ್ಲಿ ಆಗ  ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದು ಮಹೇಶ್ ವಿಕ್ರಮ್  ಹೆಗ್ಡೆ ನಡೆಸುತ್ತಿದ್ದ ಪೋಸ್ಟ್ ಕಾರ್ಡ್ ಎಂಬ  ಸೈಟ್. ಅದು ಇಂದಿಗೂ ದೇಶದಲ್ಲಿ ಸುಳ್ಳು ಸುದ್ದಿ ಹರಡುವಲ್ಲಿ ಅಷ್ಟೇ ಪ್ರಭಾವಶಾಲಿಯಾಗಿದೆ. ಈ ವೆಬ್ ಸೈಟ್ ಮೊದಲು ಹರಿಬಿಟ್ಟ ಸುಳ್ಳು ಸುದ್ದಿಗಳನ್ನು ಬಿಜೆಪಿ ಐಟಿ ಸೆಲ್ ಹಾಗು ಅದರ ಬೆಂಬಲಿಗರು ವ್ಯಾಪಕವಾಗಿ ಪ್ರಚಾರ ಮಾಡುತ್ತಾರೆ. 

 

[ಮಹೇಶ್ ವಿಕ್ರಮ್ ಹೆಗ್ಡೆ - ಪೋಸ್ಟ್ ಕಾರ್ಡ್ ನ್ಯೂಸ್ ಸಂಸ್ಥಾಪಕ]

►ಮಹೇಶ್  ಹೆಗ್ಡೆ ಬಿಜೆಪಿಗೆ ಹತ್ತಿರವಾಗಿದ್ದರು. ಬಿಜೆಪಿ ಗೆಲುವಿನಲ್ಲಿ ನಾನು ನಿರ್ಣಾಯಕ ಪಾತ್ರ ವಹಿಸಿದ್ದೇನೆ ಎಂದು ಮುಲಾಜಿಲ್ಲದೆ ಹೇಳಿಕೊಳ್ಳುತ್ತಿದ್ದರು. ಬಿಜೆಪಿ ಸರಕಾರದಲ್ಲಿ  ಸಕ್ರಿಯ ಸಲಹೆಗಾರರೇ ನಿರ್ದೇಶಕರಾಗಿದ್ದ ಕಂಪನಿಯನ್ನು ಕೂಡ ಮಹೇಶ್ ಸ್ಥಾಪಿಸಿದ್ದರು. ಸುಳ್ಳು ಸುದ್ದಿ ಹರಡಿದ ಆರೋಪದ ಮೇಲೆ ಮಹೇಶ್ ವಿರುದ್ಧ ಪ್ರಕರಣ ದಾಖಲಾದಾಗ ಅವರ ಪರವಾಗಿ ವಾದಿಸಿದ್ದು ಈಗಿನ ಬಿಜೆಪಿ ಸಂಸದ ತೇಜಸ್ವಿ ಸೂರ್ಯ. 

[ತೇಜಸ್ವಿ ಸೂರ್ಯ- ಬಿಜೆಪಿ ಸಂಸದ]

►ಪ್ರಧಾನಮಂತ್ರಿ ಕೂಡ ಫಾಲೋ ಮಾಡುವ ಪೋಸ್ಟ್‌ಕಾರ್ಡ್ ಗೌರಿಯವರನ್ನು ಹಿಂದೂ ದ್ವೇಷಿ ಎಂದು ಹೇಳಿತ್ತು. 2012ರ ಗೌರಿಯವರ ಭಾಷಣದ, ಈಗಿಲ್ಲದ ಯೂಟ್ಯೂಬ್ ವೀಡಿಯೋವನ್ನು ಪೋಸ್ಟ್ ಕಾರ್ಡ್ ಸಹ-ಸಂಸ್ಥಾಪಕರಾದ ಮಹೇಶ್ ವಿಕ್ರಮ್ ಹೆಗ್ಡೆ ಮತ್ತು ವಿವೇಕ್ ಶೆಟ್ಟಿ ಇಬ್ಬರೂ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. 

 

[Photo Credit- Forbidden Stories]

► ಇಂಥ ಹೊತ್ತಲ್ಲಿಯೇ ಗೌರಿ ಲಂಕೇಶ್ ಹತ್ಯೆಯಾಯಿತು. ಪೊಲೀಸರು 17 ಶಂಕಿತರನ್ನು ಬಂಧಿಸಿದರು. ಎಲ್ಲರೂ ಹಿಂದುತ್ವ ಸಂಘಟನೆ  ಸನಾತನ ಸಂಸ್ಥೆ, ಅದರ ಅಂಗಸಂಸ್ಥೆಯಾದ ಹಿಂದೂ ಜನಜಾಗೃತಿ ಸಮಿತಿ (HJS) ಮತ್ತಿತರ ಧಾರ್ಮಿಕ ಗುಂಪುಗಳೊಂದಿಗೆ ಸಂಬಂಧ ಹೊಂದಿದ್ದರು. ಪೊಲೀಸ್ ಮೂಲಗಳ ಪ್ರಕಾರ, ಈ ಅನಾಮಧೇಯ ಸಿಂಡಿಕೇಟ್ ಸದಸ್ಯರು ಒಂದು ವರ್ಷಕ್ಕೂ ಹೆಚ್ಚು ಕಾಲ ಹತ್ಯೆಗೆ ಸಂಚು ರೂಪಿಸಿದ್ದರು, ಶಸ್ತ್ರಾಸ್ತ್ರಗಳನ್ನು ಪಡೆದಿದ್ದರು, ಗೌರಿಯವರ ಚಲನವಲನಗಳ ಮೇಲೆ ಕಣ್ಣಿಟ್ಟಿದ್ದರು.

►ಗೌರಿಯ ಕೊಲೆಯ ನಂತರವೂ ಪೋಸ್ಟ್‌ಕಾರ್ಡ್ ಗೌರಿ ಅವಹೇಳನವನ್ನು ಬಿಟ್ಟಿರಲಿಲ್ಲ. ಹತ್ಯೆ ತನಿಖೆ ಕುರಿತಾಗಿಯೂ ತಪ್ಪು ಮಾಹಿತಿ ಹರಡುವ ಕೆಲಸ ನಡೆದಿತ್ತು.  

►ಗೌರಿಯವರ 2012ರ ಭಾಷಣದ ಯೂಟ್ಯೂಬ್ ವೀಡಿಯೋ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಾಗು ವಾಟ್ಸ್ ಆಪ್ ನಲ್ಲಿ ವ್ಯಾಪಕವಾಗಿ ಹರಡಲಾಗಿತ್ತು. ನಂತರ ಆಕೆಯ ಹಂತಕರಿಗೆ ಅದನ್ನೇ ತೋರಿಸಿ ಪ್ರಚೋದಿಸಲಾಯಿತು . 

[Photo Credit- Forbidden Stories]

||► ಗೌರಿ ಹತ್ಯೆಯ ವಿಚಾರಣೆ ಪ್ರಕ್ರಿಯೆಯ ಕುರಿತು ವೆಬ್‌ಸೈಟ್ ವಿವರಿಸಿರುವುದು ಹೀಗೆ:

ಪ್ರಕರಣದ ತನಿಖೆಗಾಗಿ ರಚಿಸಲಾದ ವಿಶೇಷ ತನಿಖಾ ಘಟಕ ಮೊದಲ ಶಂಕಿತ ನವೀನ್‌ಕುಮಾರ್‌ನನ್ನು ಬಂಧಿಸಲು ಆರು ತಿಂಗಳು ಬೇಕಾಯಿತು. ಮತ್ತೆ ಹಲವು ತಿಂಗಳುಗಳ ನಂತರ ಸರಿಸುಮಾರು 10,000 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆಯಾಯಿತು. 17  ಶಂಕಿತರನ್ನು ಹೆಸರಿಸಲಾಗಿತ್ತು. ಅವರಲ್ಲಿ ಒಬ್ಬ ಇನ್ನೂ ತಲೆಮರೆಸಿಕೊಂಡಿದ್ದಾನೆ.

ಕೊಲೆಯ ಮಾಸ್ಟರ್ ಮೈಂಡ್ ಎನ್ನಲಾದ ಅಮೋಲ್ ಕಾಳೆ, ಧಾರ್ಮಿಕ ಸಭೆಗಳಲ್ಲಿ ಬಲಪಂಥೀಯ ಕಾರ್ಯಕರ್ತರನ್ನು ಆಯ್ಕೆ ಮಾಡಿ ಹತ್ಯೆಗೆ ತರಬೇತಿ ನೀಡುವವನಾಗಿದ್ದ. ಕೇಸ್ ಫೈಲ್ ಗಳ ಪ್ರಕಾರ, ಧ್ಯಾನ, ಶಸ್ತ್ರಾಸ್ತ್ರ ತರಬೇತಿ ಮತ್ತು ಧಾರ್ಮಿಕ ಶಿಕ್ಷಣವನ್ನು ಒಳಗೊಂಡಿರುವ ತಿಂಗಳ ಅವಧಿಯ ತರಬೇತಿಯನ್ನು ಹಂತಕರಿಗೆ ಕಾಳೆ ನೀಡಿದ್ದಾನೆ. ಗೌರಿಯವರ ಲೇಖನಗಳನ್ನು ಓದಲು ಮತ್ತು ಅವರ ಭಾಷಣಗಳ ವೀಡಿಯೊಗಳನ್ನು ವೀಕ್ಷಿಸಲು ಅವರಿಗೆ ಕೊಡಲಾಗಿತ್ತು. ಸಿಂಡಿಕೇಟ ನ ಕನಿಷ್ಠ ಐವರು ಸದಸ್ಯರಿಗೆ ಗೌರಿಯವರ 2012ರ ಭಾಷಣದ ವೀಡಿಯೊವನ್ನು ತೋರಿಸಲಾಗಿತ್ತು.  ಹಿಂದೂ ಧರ್ಮದ ಬೇರುಗಳನ್ನು ಗೌರಿ ಪ್ರಶ್ನಿಸಿದ್ದಾರೆ ಎಂದೇ ಅವರಿಗೆ ಹೇಳಲಾಗಿತ್ತು. ಗೌರಿಗೆ ಗುಂಡು ಹಾರಿಸಿದ ಪರಶುರಾಮ್ ವಾಗ್ಮೋರೆ ತನಗೆ ಆ ವೀಡಿಯೊವನ್ನು ಪದೇ ಪದೇ ತೋರಿಸಲಾಗಿತ್ತು ಎಂದು ಹೇಳಿದ್ದ. 

ಇದೆಲ್ಲ ಆದಮೇಲೆ ಸುರಕ್ಷಿತವಾದ ಬಾಡಿಗೆ ಮನೆಯಲ್ಲಿ ಸೇರಿದ್ದ ಸಂಚುಕೋರರು, ಯಾವ ಬೆಲೆ ತೆತ್ತಾದರೂ ಗೌರಿಯನ್ನು ಕೊಲ್ಲುವ ನಿರ್ಧಾರಕ್ಕೆ ಬರುತ್ತಾರೆ. ಅವರನ್ನು ತಡೆಯದಿದ್ದರೆ ಸಮಾಜದಲ್ಲಿ ಹಿಂದೂ ಧರ್ಮಕ್ಕೆ ಅಪಖ್ಯಾತಿ ಎಂಬ ನಿಲುವಿಗೆ ಅವರೆಲ್ಲ ಬರುತ್ತಾರೆ.

ಪೊಲೀಸ್ ಮೂಲಗಳ ಪ್ರಕಾರ, ಯೂಟ್ಯೂಬ್‌ನಿಂದ ಕಾಳೆಯ ಲ್ಯಾಪ್‌ಟಾಪ್‌ಗೆ ಡೌನ್‌ಲೋಡ್ ಮಾಡಲಾದ ವೀಡಿಯೊ ಭಾರತದ ಬಲಪಂಥೀಯ ಗುಂಪುಗಳ ನಡುವೆ ವ್ಯಾಪಕವಾಗಿ ಹರಿದಾಡಿತ್ತು. ಫೋರೆನ್ಸಿಕ್ ವಿಶ್ಲೇಷಣೆಯಲ್ಲಿ, ಓಪನ್-ಸೋರ್ಸ್ ಪರಿಕರ ಬಳಸಿ ವ್ಯಾಪಕವಾಗಿ ಹಂಚಿಕೊಳ್ಳಲಾದ ಎಂಟು ವಿಭಿನ್ನ YouTube ಲಿಂಕ್ ಗಳ ಪುರಾವೆಗಳನ್ನು ಸಂಶೋಧಕರು ಪತ್ತೆ ಮಾಡಿದ್ದಾರೆ. ಇದರಲ್ಲಿ ಮೂರು ಲಿಂಕ್ಗಳಲ್ಲಿ 10 ಕೋಟಿಗಿಂತಲೂ  ಹೆಚ್ಚು ಲೈಕ್ಸ್, ಶೇರ್ ಮತ್ತು ಕಮೆಂಟ್ ಕಂಡುಬಂದಿವೆ.  

2014ರಲ್ಲಿ, ಕರ್ನಾಟಕ ಬಿಜೆಪಿಯ ಅಧಿಕೃತ ಪುಟದಲ್ಲಿ ಕೂಡ, "ಮುಂದಿನ ಬಾರಿ ನಾವು ಇಂಥ ಭಾಷಣಗಳನ್ನು ಕೇಳಿದಾಗ ನಾವು ಸೂಕ್ತ ಕಾನೂನು ಉತ್ತರವನ್ನು ನೀಡಬೇಕು" ಎಂಬ ಹೇಳಿಕೆಯೊಡನೆ ವೀಡಿಯೊ ಶೇರ್ ಆಗಿತ್ತು.  


[ಕರ್ನಾಟಕದ ಬಿಜೆಪಿಯ ಅಧಿಕೃತ ಫೇಸ್‌ಬುಕ್ ಪುಟದಿಂದ ಮಾಡಲಾದ ಪೋಸ್ಟ್]

ಕೋಮು ಸೌಹಾರ್ದತೆಗೆ ಭಂಗ ತಂದಿರುವ ಆರೋಪದ ಮೇಲೆ ದಾಖಲಾಗಿದ್ದ ಕೇಸ್ ಒಂದರ  ಹಿನ್ನೆಲೆಯಲ್ಲಿ ಗೌರಿಯವರು ಕೋರ್ಟ್ಗೆ ಹಾಜರಾಗುವುದಿತ್ತು. ಅದಕ್ಕಿಂತ 10 ದಿನಗಳ ಮೊದಲೇ ಅವರ ಹತ್ಯೆಯಾಯಿತು. ನಾನು ಹೇಳಿದ ಮಾತುಗಳಿಗೆ ಈಗಲೂ ಬದ್ಧ ಎಂಬ ಮಾತುಗಳನ್ನೇ ಅವರು ಹೇಳಿದ್ದರು. ಆದರೆ, ತನ್ನನ್ನು ಸಮರ್ಥಿಸಿಕೊಳ್ಳುವುದಕ್ಕೂ ಅವರಿಗೆ ಅವಕಾಶವಿರದಂತೆ ಹಂತಕರು ಕೊಂದು ಮುಗಿಸಿದ್ದ ವಿಚಾರಗಳನ್ನು ‘Forbidden Stories‘ ಉಲ್ಲೇಖಿಸಿದೆ.

Similar News