ನ್ಯಾ. ವಿಕ್ಟೋರಿಯಾ ಗೌರಿಗೆ 'ಸಾಂವಿಧಾನಿಕ ಮೌಲ್ಯಗಳ' ಕುರಿತು ಪತ್ರಗಳ ಗುಚ್ಛ ರವಾನಿಸಿದ ಬೆಂಗಳೂರು ನಾಗರಿಕರ ಗುಂಪು

Update: 2023-02-15 11:15 GMT

ಬೆಂಗಳೂರು: ಮದ್ರಾಸ್ ಹೈಕೋರ್ಟಿನ ಮಧುರೈ ಪೀಠಕ್ಕೆ ಇತ್ತೀಚೆಗೆ ಹೆಚ್ಚುವರಿ ನ್ಯಾಯಾಧೀಶೆಯಾಗಿ ನೇಮಕಗೊಂಡಿರುವ ನ್ಯಾ. ವಿಕ್ಟೋರಿಯಾ ಗೌರಿ ಅವರಿಗೆ ಜನಸಾಮಾನ್ಯರಿಗೆ ಸಂವಿಧಾನ ತಲುಪಿಸುವ ಗುರಿಯ ಉಪಕ್ರಮದ ಭಾಗವಾಗಿ ಸ್ಥಾಪನೆಗೊಂಡಿರುವ ಬೆಂಗಳೂರು ಮೂಲದ ಸಂವಿಧಾನ ಸುಧಾರಣೆ ಯೋಜನೆ ಸಂಘಟನೆಯ ಸದಸ್ಯರು ಸಾಂವಿಧಾನಿಕ ಮೌಲ್ಯಗಳ ಕುರಿತು ತಿಳಿ ಹೇಳುವ ಪತ್ರಗಳ ಗುಚ್ಛವನ್ನು ಬೆಂಗಳೂರಿನ ಪ್ರಧಾನ ಅಂಚೆ ಕಚೇರಿಯಿಂದ ರವಾನೆ ಮಾಡಿದರು.

ಈ ಪತ್ರಕ್ಕೆ ಸಂವಿಧಾನದಿಂದ ಆಯ್ದ ಕಲಾಕುಸುರಿ ಮಾಡಿದ್ದ ಸದಸ್ಯರು, ಸಂವಿಧಾನದ ಸಾರಾಂಶಗಳು ಹಾಗೂ ಉಳಿದ ಹಕ್ಕುಗಳೊಂದಿಗೆ ಧಾರ್ಮಿಕ ಹಕ್ಕನ್ನು ರಕ್ಷಿಸುವ ವಿಧಿ 25ರ ಕುರಿತು ಸಂವಿಧಾನ ಸಭೆಯಲ್ಲಿನ ಚರ್ಚೆ ಸಂದರ್ಭದಲ್ಲಿ ಟಿ.ಟಿ.ಕೃಷ್ಣಮಾಚಾರಿ ಅವರಿಗೆ ಸಂಬಂಧಿಸಿದ ನಿರ್ದಿಷ್ಟ ಕಂಡಿಕೆಯನ್ನು ಉಲ್ಲೇಖಿಸಿದ್ದಾರೆ.

ಈ ಯೋಜನೆಯ ಸದಸ್ಯರಾಗಿರುವ ಬಾಹ್ಯಾಕಾಶ ಎಂಜಿನಿಯರ್ ವಿನಯ್ ಕುಮಾರ್ ಪ್ರಕಾರ, ನಾಗರಿಕ ಸೌಕರ್ಯಗಳಿಗೆ ಸಂಬಂಧಿಸಿದಂತೆ ನಾವು ಈ ಹಿಂದೆಯೂ ಪತ್ರಗಳ ರವಾನೆ ಮಾಡಿದ್ದೇವೆ. ಸಂವಿಧಾನವನ್ನು ಜನಸಾಮಾನ್ಯರ ಬಳಿಗೆ ತೆಗೆದುಕೊಂಡು ಹೋಗುವ ಯೋಜನೆಯು ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಾದಾಗಲೇ ಮೊಳಕೆಯೊಡೆದಿತ್ತಾದರೂ, ಕೋವಿಡ್ ಸಾಂಕ್ರಾಮಿಕದ ಕಾರಣಕ್ಕೆ ವಿಳಂಬವಾಗಿತ್ತು. ಅದಕ್ಕೆ ಈ ಬಾರಿಯ ಗಣರಾಜ್ಯೋತ್ಸವದಂದು ಮರು ಚಾಲನೆ ನೀಡಲಾಯಿತು.

ಯೋಜನೆಯ ಮುಂದುವರಿಕೆಯ ಭಾಗವಾಗಿ ನಾವು ಸಂವಿಧಾನ ಸಾಕ್ಷರತೆಯನ್ನು ಮುಂದುವರಿಸಲು ಪತ್ರಗಳನ್ನು ಬಳಸುತ್ತಿದ್ದೇವೆ. ನ್ಯಾಯಾಧೀಶೆಯು ನೀಡಿದ ಕೆಲವು ಪ್ರತಿಕ್ರಿಯೆಗಳು ಕಳವಳಕಾರಿಯಾಗಿದ್ದು, ಸಾಂವಿಧಾನಿಕ ಮೌಲ್ಯಗಳಿಗೆ ವಿರುದ್ಧವಾಗಿರುವುದರಿಂದ ನಾವು ಈ ಮಾರ್ಗವನ್ನು ಆಯ್ಕೆ ಮಾಡಿಕೊಂಡೆವು. ಹೀಗಾಗಿ ನಾವು ಸಂವಿಧಾನ ಸಭೆಯ ಚರ್ಚೆಯಿಂದ ಕೃಷ್ಣಮಾಚಾರಿಯವರ ಹೇಳಿಕೆಯನ್ನು ಆಯ್ದುಕೊಂಡಿದ್ದು, ಈ ಹೇಳಿಕೆಯು ಹೇಗೆ ಅವರು ಕ್ರಿಶ್ಚಿಯನ್ ಶಿಕ್ಷಣ ಸಂಸ್ಥೆಯಲ್ಲಿ ಓದಿದರೂ, ಅವರಿಗೆ ಮತಾಂತರವಾಗಬೇಕು ಎಂದು ಅನ್ನಿಸಲೇ ಇಲ್ಲ ಎಂಬುದನ್ನು ವಿವರಿಸಿದೆ. ನಾವೂ ಅವರನ್ನು ಸ್ವಾಗತಿಸಿ, ಈ ಮೌಲ್ಯಗಳನ್ನು ಎತ್ತಿ ಹಿಡಿಯುವಂತೆ ಹೇಳಲು ಬಯಸುತ್ತೇವೆ" ಎಂದು ಹೇಳಿದ್ದಾರೆ.

"ಅವರು ನೀಡಿರುವ ಹೇಳಿಕೆಯನ್ನು ಪರಿಗಣಿಸಿ, ಈ ಪತ್ರಗಳು ಅವರಿಗೆ ಮುಖ್ಯ ನೆನಪೋಲೆ ಆಗಬಹುದು ಎಂಬ ಆಶಾವಾದವಿದೆ" ಎಂದು ಮತ್ತೊಬ್ಬ ಸದಸ್ಯೆ ಐಶ್ವರ್ಯ ಅಭಿಪ್ರಾಯ ಪಟ್ಟಿದ್ದಾರೆ.

Similar News