ಕುಂದಾಪುರ ಕನ್ನಡ ಅಕಾಡೆಮಿ, ಪೀಠ ಸ್ಥಾಪನೆ ಅಗತ್ಯ: ಸಾಹಿತಿ ಕೋ.ಶಿ.ಕಾರಂತ
ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ
ಗಂಗೊಳ್ಳಿ: ಅಪಾರ ಸಾಹಿತ್ಯಿಕ, ಸಾಂಸ್ಕೃತಿಕ ಸಂಪತ್ತು ಹೊಂದಿರುವ 25 ಲಕ್ಷಕ್ಕೂ ಅಧಿಕ ಮಂದಿ ಮಾತನಾಡುವ ಕುಂದಾಪುರ ಭಾಷೆಗೆ ಸರಕಾರ ವಿಶೇಷವಾದ ಸ್ಥಾನಮಾನ ನೀಡಬೇಕು. ಕುಂದಾಪುರ ಕನ್ನಡ ಅಕಾಡೆಮಿ ಹಾಗೂ ಕುಂದಾಪುರ ಕನ್ನಡ ಪೀಠ ಸ್ಥಾಪನೆಯಾಗಬೇಕು ಎಂದು ಸಾಹಿತಿ ಕೋ.ಶಿ.ಕಾರಂತ ಹೇಳಿದ್ದಾರೆ.
ಗಂಗೊಳ್ಳಿ ಸರಸ್ವತಿ ಪದವಿ ಪೂರ್ವ ವಿದ್ಯಾಲಯದ ಆವರಣದಲ್ಲಿ ರವಿವಾರ ನಡೆದ ಕುಂದಾಪುರ ತಾಲೂಕು 18ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು. ಈ ವಿಚಾರದಲ್ಲಿ ನಮ್ಮ ಶಾಸಕರು, ಜನಪ್ರತಿನಿಧಿಗಳು ಗಂಭೀರವಾಗಿ ಪ್ರಯತ್ನ ನಡೆಸದಿರುವುದು ಬೇಸರ ತರುತ್ತದೆ. ಯುವ ಸಮುದಾಯದ ಈ ವಿಷಯದಲ್ಲಿ ಹೋರಾಟ ನಡೆಸಬೇಕು ಎಂದರು.
ಕನ್ನಡಿಗರು ಕನ್ನಡವನ್ನು ಎಂದಿಗೂ ದುರ್ಬಲವಾಗಲು ಬಿಡಬಾರದು. ಯಾವ ಮಾಧ್ಯಮದರಲ್ಲಿ ಮಕ್ಕಳು ಕಲಿತರೂ ಮಾತೃ ಭಾಷೆಯನ್ನು ಮರೆಯಬಾರದು. ಕರಾವಳಿ ಪ್ರದೇಶದ ಪ್ರವಾಸೋದ್ಯಮಕ್ಕಾಗಿ ಅಭಿವೃದ್ಧಿಗೊಳಿಸಿ ಆದಷ್ಟು ಕನ್ನಡಿಗ ಯುವ ಜನರಿಗೆ ಉದ್ಯೋಗಾವಕಾಶ ದೊರಕುವಂತಾಗಬೇಕು ಎಂದು ಅವರು ತಿಳಿಸಿದರು.
ಸಮ್ಮೇಳನವನ್ನು ಉದ್ಘಾಟಿಸಿದ ಉದ್ಯಮಿ ಜಗನ್ನಾಥ ವಿ.ಪೈ ಗಂಗೊಳ್ಳಿ ಮಾತನಾಡಿ, ಸರಕಾರ ಕನ್ನಡ ಕಲಿಕೆ ಕಡ್ಡಾಯ ಮಾಡದಿರುವುದು ದುರದೃಷ್ಟ. ಹಳ್ಳಿಗಳಲ್ಲಿ ಇದ್ದಷ್ಟೂ ಭಾಷಾಭಿಮಾನ ನಗರಗಳಲ್ಲಿ ಇಲ್ಲ ಎಂದು ಹೇಳಿದರು.
ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಪುಸ್ತಕ ಬಿಡುಗಡೆಗೊಳಿಸಿ ದರು. ಸಾಹಿತಿ ಬೆಳಗೋಡು ರಮೇಶ್ ಭಟ್ ಕಾರಂತರ ಪರಿಚಯ, ಅಭಿನಂದನೆ ಮಾಡಿದರು.
ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಎ.ಎಸ್.ಎನ್.ಹೆಬ್ಬಾರ್, ಕುಸುಮಾ ಕಾರಂತ, ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಎಚ್.ಗಣೇಶ ಕಾಮತ್, ಕಾರ್ಯದರ್ಶಿ ಯು.ಎಸ್.ಶೆಣೈ, ಕಾಲೇಜಿನ ಪ್ರಾಂಶುಪಾಲೆ ಎಂ.ಸಿ.ಕವಿತಾ, ಪಂಚಾಯತ್ ಅಧ್ಯಕ್ಷ ಶ್ರೀನಿವಾಸ ಖಾರ್ವಿ, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ, ಮನೋಹರ್ ಪಿ., ಕಸಾಪ ಬೈಂದೂರು ಅಧ್ಯಕ್ಷ ಡಾ. ರಘು ನಾಯ್ಕ್, ಕಾರ್ಕಳ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಳ್ಳಿ, ಬ್ರಹ್ಮಾವರ ಅಧ್ಯಕ್ಷ ರಾಮಚಂದ್ರ ಐತಾಳ್, ಅಕ್ಷತಾ ಗಿರಿಶ್ ಉಪಸ್ಥಿತರಿದ್ದರು.
ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಸಾಪ ಕುಂದಾಪುರ ಅಧ್ಯಕ್ಷ ಡಾ.ಉಮೇಶ್ ಪುತ್ರನ್ ಸ್ವಾಗತಿಸಿದರು. ಕಾರ್ಯದರ್ಶಿ ದಿನಕರ ಶೆಟ್ಟಿ ನಿರೂಪಿಸಿದರು. ಮಂಜುನಾಥ ಕೆ.ಎಸ್. ವಂದಿಸಿದರು.
‘ಕುಂದಾಪುರ ಕನ್ನಡ ಜನರು ಸಾಹಿತ್ಯ, ಕ್ರೀಡೆ, ಚಲನಚಿತ್ರ, ರಂಗಭೂಮಿ, ಹೊಟೇಲು, ಕೈಗಾರಿಕೋದ್ಯಮ, ಬ್ಯಾಂಕಿಂಗ್, ಶಿಕ್ಷಣ, ವೈದ್ಯಕೀಯ ಕ್ಷೇತ್ರಗಳಲ್ಲಿ ಅಪಾರ ಕೊಡುಗೆ ನೀಡಿದ್ದು, ಇವೆಲ್ಲವನ್ನು ತಿಳಿಸುವ ಅಪೂರ್ವವಾದ ವಸ್ತು ಪ್ರದರ್ಶನ ಕೇಂದ್ರ ಸ್ಥಾಪನೆಗೊಳ್ಳಬೇಕು. ಶ್ರೇಷ್ಠ ಕವಿಗಳಾಗಿ ಕರ್ನಾಟಕಕ್ಕೆ ಕೀರ್ತಿ ತಂದ ಮೊಗೇರಿ ಗೋಪಾಲಕೃಷ್ಣ ಅಡಿಗರ ಹೆಸರಿನಲ್ಲಿ ಬಹುಪಯೋಗಿ ಭವನ ನಿರ್ಮಾಣ ಕಾರ್ಯ ಶೀಘ್ರ ಆಗಬೇಕಾಗಿದೆ’
-ಕೋ.ಶಿ.ಕಾರಂತ, ಸಮ್ಮೇಳನಾಧ್ಯಕ್ಷರು