ರಾಜಕೀಯ ವಿರೋಧಿಗಳ ವಿರುದ್ಧ ಗೂಢಚಾರಿಕೆ ಆರೋಪ: ಮನೀಶ್ ಸಿಸೋಡಿಯಾ ವಿರುದ್ಧ ತನಿಖೆ ನಡೆಸಲು ಕೇಂದ್ರ ಅನುಮತಿ
ಹೊಸದಿಲ್ಲಿ: ರಾಜಕೀಯ ವಿರೋಧಿಗಳ ವಿರುದ್ಧ ಗೂಢಚಾರಿಕೆ ನಡೆಸಿದ ಆರೋಪ ಎದುರಿಸುತ್ತಿರುವ ದಿಲ್ಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ವಿರುದ್ಧ ತನಿಖೆ ನಡೆಸಲು ಸಿಬಿಐಗೆ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಅನುಮತಿ ನೀಡಿದೆ.
ಮನೀಶ್ ಸಿಸೋಡಿಯಾ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿ ತನಿಖೆ ನಡೆಸಲು ಕೇಂದ್ರ ತನಿಖಾ ದಳಕ್ಕೆ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಅನುಮತಿ ನೀಡಿದ್ದು, ಈ ಅನುಮತಿಯನ್ನು ಫೆ. 17ರಂದು ನೀಡಲಾಗಿದೆ ಎಂದು ANI ಸುದ್ದಿ ಸಂಸ್ಥೆ ಹೇಳಿದೆ.
ಆಮ್ ಆದ್ಮಿ ಪಕ್ಷವು 2015ರಲ್ಲಿ ಮಾಹಿತಿ ಘಟಕವನ್ನು ಸ್ಥಾಪಿಸಿದ ನಂತರ ರಾಜಕೀಯ ಗೂಢಚಾರಿಕೆಯನ್ನು ಹೊಂದಿದೆ ಎಂದು ಸಿಬಿಐ ಆರೋಪಿಸಿದ ಬೆನ್ನಿಗೇ ಈ ಕ್ರಮವು ಪ್ರಕಟಗೊಂಡಿದೆ. ಮನೀಶ್ ಸಿಸೋಡಿಯಾ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲು ಅನುಮತಿ ನೀಡುವಂತೆ ಸಿಬಿಐ ಮಾಡಿದ್ದ ಮನವಿಯನ್ನು ಫೆಬ್ರವರಿ 9ರಂದು ಪುರಸ್ಕರಿಸಿದ್ದ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ, ವಿಷಯವನ್ನು ಗೃಹ ಸಚಿವಾಲಯಕ್ಕೆ ವರ್ಗಾಯಿಸಿದ್ದರು.
ಆದರೆ, ಈ ಆರೋಪವನ್ನು ಅಲ್ಲಗಳೆದಿರುವ ಆಮ್ ಆದ್ಮಿ ಪಕ್ಷವು, ಈ ಆರೋಪ ನಿರಾಧಾರವಾಗಿದ್ದು, ರಾಜಕೀಯ ಪ್ರೇರಿತವಾಗಿದೆ ಎಂದು ಪ್ರತಿ ಅರೋಪ ಮಾಡಿದೆ.
ಈ ಕುರಿತು ಬುಧವಾರ ಟ್ವೀಟ್ ಮಾಡಿರುವ ಮನೀಶ್ ಸಿಸೋಡಿಯಾ, ಆಮ್ ಆದ್ಮಿ ಪಕ್ಷ ಬೆಳೆಯುತ್ತಿರುವುದರಿಂದ ಇಂತಹ ಮತ್ತಷ್ಟು ಪ್ರಕರಣಗಳು ದಾಖಲಾಗಲಿವೆ. ಪ್ರತಿಸ್ಪರ್ಧಿಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸುವುದು ದುರ್ಬಲರು ಹಾಗೂ ಹೇಡಿಗಳ ಲಕ್ಷಣ ಎಂದು ಕಿಡಿ ಕಾರಿದ್ದಾರೆ.
ಇದಕ್ಕೂ ಮುನ್ನ ಅಬಕಾರಿ ನೀತಿ ವಿಷಯಕ್ಕೆ ಸಂಬಂಧಿಸಿದಂತೆ ಮನೀಶ್ ಸಿಸೋಡಿಯಾ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿಕೊಂಡಿತ್ತು.
ಇದನ್ನೂ ಓದಿ: ವಿವಾಹ ಆರತಕ್ಷತೆಗೂ ಮುನ್ನವೇ ರಕ್ತದ ಮಡುವಿನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ವಧು-ವರ