ಸಿಎಎ ಪ್ರತಿಭಟನೆ, ಮಾವೋವಾದಿ ನಂಟು ಆರೋಪ: ಶಾಸಕ ಅಖಿಲ್‌ ಗೊಗೊಯಿಗೆ ಬಂಧನದಿಂದ ರಕ್ಷಣೆ ನೀಡಿದ ಸುಪ್ರೀಂ ಕೋರ್ಟ್‌

Update: 2023-02-22 11:09 GMT

ಹೊಸದಿಲ್ಲಿ: ಸಿಎಎ ವಿರೋಧಿ ಪ್ರತಿಭಟನೆಗಳು ಹಾಗೂ ಶಂಕಿತ ಮಾವೋವಾದಿಗಳ ಜೊತೆಗಿನ ನಂಟು ಪ್ರಕರಣದಲ್ಲಿ ಅಸ್ಸಾಂನ ಪಕ್ಷೇತರ ಶಾಸಕ ಅಖಿಲ್‌ ಗೊಗೊಯಿ ಅವರಿಗೆ ಬಂಧನದಿಂದ ರಕ್ಷಣೆಯನ್ನು ಸುಪ್ರೀಂ ಕೋರ್ಟ್‌ ಒದಗಿಸಿದೆಯಲ್ಲದೆ, ಗೊಗೊಯಿ ಅವರ ಅಪೀಲಿನ ಕುರಿತಂತೆ ಎನ್‌ಐಎ ಪ್ರತಿಕ್ರಿಯೆಯನ್ನೂ ಕೋರಿದೆ.

ಎರಡು ಪ್ರಕರಣಗಳಲ್ಲಿ ತಮ್ಮ ವಿರುದ್ಧ ದೋಷಾರೋಪ ಹೊರಿಸುವುದಕ್ಕೆ ಅಸ್ಸಾಂನ ವಿಶೇಷ ಎನ್‌ಐಎ ನ್ಯಾಯಾಲಯಕ್ಕೆ ಗುವಹಾಟಿ ಹೈಕೋರ್ಟ್‌ ಅನುಮತಿಸಿ ಫೆಬ್ರವರಿ 9 ರಂದು ಹೊರಡಿಸಿದ ಆದೇಶವನ್ನು ಪ್ರಶ್ನಿಸಿ ಗೊಗೊಯಿ ಅವರು ಸುಪ್ರೀಂ ಕೋರ್ಟ್‌ ಕದ ತಟ್ಟಿದ್ದರು.

ಈ ಪ್ರಕರಣದಲ್ಲಿ ಗೊಗೊಯಿ ಹೊರತಾಗಿ ಧೈಜಿಯಾ ಕೊನ್ವರ್‌, ಬಿಟ್ಟು ಸೊನೋವಾಲ್‌ ಮತ್ತು ಮಾನಶ್‌ ಕೊನ್ವರ್‌ ಆರೋಪಿಗಳಾಗಿದ್ದರು. ಒಟ್ಟು ನಾಲ್ಕು ಮಂದಿಯಲ್ಲಿ ಈ ಹಿಂದೆ ಗೊಗೊಯಿ ಅವರ ಜಾಮೀನು ಅರ್ಜಿ ಮಾತ್ರ ತಿರಸ್ಕೃತಗೊಂಡಿತ್ತಲ್ಲದೆ 567 ದಿನಗಳ ಕಾಲ ಜೈಲಿನಲ್ಲಿ ಕಳೆದ ಬಳಿಕ ವಿಶೇಷ ಎನ್‌ಐಎ ನ್ಯಾಯಾಲಯ ನಾಲ್ಕು ಮಂದಿಯನ್ನೂ ದೋಷಮುಕ್ತಗೊಳಿಸಿದ ನಂತರ ಬಿಡುಗಡೆಗೊಂಡಿದ್ದರು. ಇದನ್ನು ಪ್ರಶ್ನಿಸಿ ಎನ್‌ಐಎ ಹೈಕೋರ್ಟ್‌ ಕದ ತಟ್ಟಿದ ನಂತರ ಪ್ರಕರಣ ಮುಂದುವರಿಸುವಂತೆ ಹೈಕೋರ್ಟ್‌ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಗೊಗೊಯಿ ಸುಪ್ರೀಂ ಕೋರ್ಟ್‌ ಕದ ತಟ್ಟಿದ್ದರು.

Similar News