×
Ad

ಉಡುಪಿ ಜಿಲ್ಲೆಗೆ ಮಂಜೂರಾದ ಇಎಸ್‌ಐ ಆಸ್ಪತ್ರೆ ತಕ್ಷಣ ನಿರ್ಮಾಣಗೊಳ್ಳಲಿ: ಗೋಪಾಲ್ ಅಪ್ಪು ಕೋಟೆಯಾರ್

Update: 2023-02-25 19:17 IST

ಉಡುಪಿ : ಕೇಂದ್ರ ಸರಕಾರ ಹಾಗೂ ಕಾರ್ಮಿಕ ವಿಮಾ ಯೋಜನೆಯ ಆಶ್ರಯದಲ್ಲಿ ಉಡುಪಿ ಜಿಲ್ಲೆಗೆ ಘೋಷಿಸಲಾದ 100 ಹಾಸಿಗೆಗಳ ಸೂಪರ್‌ಸ್ಪೆಷಾಲಿಟಿ ಇಎಸ್‌ಐ ಆಸ್ಪತ್ರೆಯನ್ನು ಕೂಡಲೇ ನಿರ್ಮಿಸುವಂತೆ ದಿ ಕಾಮನ್ ಪೀಪಲ್ ವೆಲ್ಫೇರ್ ಫೌಂಡೇಷನ್‌ನ ಅಧ್ಯಕ್ಷ ಗೋಪಾಲ್ ಅಪ್ಪು ಕೋಟೆಯಾರ್ ಕೇಂದ್ರ ಸರಕಾರವನ್ನು ಒತ್ತಾಯಿಸಿದ್ದಾರೆ.

ಜಿಲ್ಲೆಯ ಬಹುದಿನಗಳ ಬೇಡಿಕೆಯಾದ ಸುಸಜ್ಜಿತ ಇಎಸ್‌ಐ ಆಸ್ಪತ್ರೆಯನ್ನು  ಕಾರ್ಮಿಕ ಇಲಾಖೆ ಎಂಟು ತಿಂಗಳ ಹಿಂದೆ ಘೋಷಿಸಿತ್ತು. ಮೊದಲು ಬ್ರಹ್ಮಾವರದಲ್ಲಿ ನಂತರ ಮಣಿಪಾಲದಲ್ಲಿ ಆಸ್ಪತ್ರೆ ನಿರ್ಮಾಣಗೊಳ್ಳಲಿದೆ ಎಂದು ಹೇಳಲಾಗಿತ್ತು. ಆದರೆ ಈಗ ಆ ಬಗ್ಗೆ ಯಾವುದೇ ವಿಚಾರ ಕೇಳಿಬರುತ್ತಿಲ್ಲ. ಸಂಸದರು ಸೇರಿದಂತೆ ನಮ್ಮ ಯಾವುದೇ ಜನಪ್ರತಿನಿಧಿಗಳು ಈ ಬಗ್ಗೆ ಮಾತನಾಡುತ್ತಿಲ್ಲ ಎಂದು ಕೋಟೆಯಾರ್ ಇಲ್ಲಿ ಕರೆದ ಪತ್ರಿಕಾಗೋಷ್ಠಿ ಯಲ್ಲಿ ತಿಳಿಸಿದರು.

ಉಡುಪಿಗೆ ಮಂಜೂರಾದ ಇಎಸ್‌ಐ ಆಸ್ಪತ್ರೆಯ ನಿರ್ಮಾಣ ಕಾರ್ಯ ವನ್ನು ಕೇಂದ್ರ ಕಾರ್ಮಿಕ ಇಲಾಖೆಯ ಮೂಲಕ ಕೂಡಲೇ ಪ್ರಾರಂಭಿಸುವಂತೆ ಆಗ್ರಹಿಸಿ ಫೌಂಡೇಷನ್ ಈಗಾಗಲೇ ಪತ್ರಾಂದೋಲವನ್ನು ಪ್ರಾರಂಭಿಸಿದೆ ಎಂದವರು ಹೇಳಿದರು.

ಶಾಂತಿಬಾಯಿ ನೇಮಕ: ಉಡುಪಿಯಲ್ಲಿ ಸರಕಾರಿ ವಕೀಲರಾಗಿ ಸುಮಾರು ೨೫ವರ್ಷ ಸೇವೆ ಸಲ್ಲಿಸಿ ಸೇವಾ ನಿವೃತ್ತರಾದ ಶಾಂತಿಬಾಯಿ ಇವರನ್ನು ಫೌಂಡೇಷನ್‌ನ ಕಾನೂನು ವಿಭಾಗದ ಕರ್ನಾಟಕದ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂದು ಕೋಟೆಯಾರ್ ತಿಳಿಸಿದರು. ಇದೇ ಸಂದರ್ಭದಲ್ಲಿ  ಅವರು ಶಾಂತಿಬಾಯಿ ಅವರಿಗೆ ನೇಮಕಾತಿ ಪತ್ರವನ್ನು ಹಸ್ತಾಂತರಿಸಿದರು.

ಇದೇ ವೇಳೆ ರಾಜ್ಯದಲ್ಲಿ ಗುತ್ತಿಗೆದಾರರ ಅಡಿಯಲ್ಲಿ ಕೆಲಸ ಮಾಡುವ ಎಲ್ಲಾ ಕೆಲಸಗಾರರಿಗೂ ಸಮಾನ ವೇತನ ನೀಡಬೇಕೆಂದು ಹಾಗೂ ಅಂಥ ವ್ಯಕ್ತಿಗಳಿಗೆ ಸರಕಾರ ನೌಕರಿ ಭದ್ರತೆಯನ್ನು ನೀಡಬೇಕೆಂದು ಒತ್ತಾಯಿಸಿ ಫೌಂಡೇಷನ್ ಪತ್ರ ಆಂದೋಲನವನ್ನು ನಡೆಸುತ್ತಿದೆ.ಈ ಬಗ್ಗೆ ಈಗಾಗಲೇ 200 ಕ್ಕೂ ಅಧಿಕ ಪತ್ರಗಳನ್ನು ಪ್ರಧಾನಮಂತ್ರಿ, ಮುಖ್ಯಮಂತ್ರಿ ಹಾಗೂ ಕಾರ್ಮಿಕ ಆಯೋಗ ಗಳಿಗೆ ಬರೆಯಲಾಗಿದೆ ಎಂದವರು ತಿಳಿಸಿದರು.

ಕರ್ನಾಟಕ ರಾಜ್ಯದಲ್ಲಿ ಸುಮಾರು ಆರು ಲಕ್ಷ ಮಂದಿ ಕಾರ್ಮಿಕರು ಗುತ್ತಿಗೆದಾರರ ಅಡಿಯಲ್ಲಿ ಕೆಲಸ ಮಾಡುತಿದ್ದು, ಇವರಿಗೆ ಸಮಾನ ವೇತನ, ಗ್ರಾಚ್ಯುಟಿ, ಸಮಾನ ವೇಳಾಪಟ್ಟಿ ಅನ್ವಯಿಸಬೇಕು ಎಂದು ಸುಪ್ರೀಂ ಕೋರ್ಟ್ ಹಾಗೂ ರಾಜ್ಯ ಹೈಕೋರ್ಟ್‌ಗಳು 15 ತೀರ್ಪುಗಳನ್ನು ನೀಡಿವೆ. ಆದರೆ ಸರಕಾರ ಈವರೆಗೆ ಅವರಿಗೆ ಸಮಾನ ವೇತನ ನೀಡಿಲ್ಲ ಎಂದು ಆರೋಪಿಸಿದರು.

ತಮ್ಮ ಮನವಿಯನ್ನು ಜಾರಿಗೊಳಿಸದೇ ಇದ್ದರೆ ಫೌಂಡೇಷನ್ ವತಿಯಿಂದ ಜಿಲ್ಲಾ ಮಟ್ಟದಲ್ಲಿ ಉಪವಾಸ ಸತ್ಯಾಗ್ರಹವನ್ನು ನಡೆಸಿ ಚುನಾವಣೆಯ ವೇಳೆಯಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ದೊಡ್ಡ ಮಟ್ಟದ ಆಂದೋಲನವನ್ನು ನಡೆಸಲಾಗುವುದು ಎಂದು ಗೋಪಾಲ ಕೋಟೆಯಾರ್   ಎಚ್ಚರಿಸಿದರು.

ಚುನಾವಣೆಗೆ ಪೂರ್ವಭಾವಿಯಾಗಿ ಇದೇ ಮಾ.1ರಿಂದ ‘ನನ್ನ ಮತ ಮಾರಾಟಕ್ಕಿಲ್ಲ’ ಅಭಿಯಾನ ಶುರು ಮಾಡಲಿದ್ದೇವೆ ಎಂದೂ ಕೋಟೆಯಾರ್ ನುಡಿದರು. ಕಾನೂನು ವಿಭಾಗದ ಗೀತಾ ಎಸ್.ಪೂಜಾರಿ ಉಪಸ್ಥಿತರಿದ್ದರು.

Similar News