×
Ad

ಪರೀಕ್ಷೆಯಲ್ಲಿ ಹೆಚ್ಚುವರಿ ಸಮಯ ನೀಡದ್ದಕ್ಕೆ ಪೀಠೋಪಕರಣ ಧ್ವಂಸ ಮಾಡಿದ ವಿದ್ಯಾರ್ಥಿಗಳು

Update: 2023-02-26 13:40 IST

ಥೌಬಾಲ್ (ಮಣಿಪುರ): ರಾಜ್ಯ ಪರೀಕ್ಷಾ ಮಂಡಳಿ ಆಯೋಜಿಸಿದ್ದ 12ನೇ ತರಗತಿ ಪರೀಕ್ಷೆಯಲ್ಲಿ ಹೆಚ್ಚುವರಿ ಸಮಯ ಒದಗಿಸಲು ನಿರಾಕರಿಸಿದ್ದರಿಂದ ಪರೀಕ್ಷಾರ್ಥಿಗಳು ಶಾಲೆಯ ಪೀಠೋಪಕರಣಗಳನ್ನು ಧ್ವಂಸಗೊಳಿಸಿರುವ ಘಟನೆ ಥೌಬಾಲ್ ಜಿಲ್ಲೆಯಲ್ಲಿ ನಡೆದಿದೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.

ಈ ಘಟನೆಯು ಐರಿಪೋಕ್‌ನ ಆಕ್ಮೆ ಪ್ರೌಢ ಶಾಲೆಯಲ್ಲಿ ಸಂಭವಿಸಿದ್ದು, ಮಣಿಪುರ ಪ್ರೌಢ ಶಿಕ್ಷಣ ಮಂಡಳಿಯು ಆಯೋಜಿಸಿದ್ದ ಪರೀಕ್ಷೆಯು ಮುಕ್ತಾಯಗೊಳ್ಳಲು ಇನ್ನು ಐದು ನಿಮಿಷ ಮಾತ್ರವಿದ್ದಾಗ, ವಿದ್ಯಾರ್ಥಿಗಳು ಹೆಚ್ಚುವರಿ ಸಮಯ ಒದಗಿಸಲು ಪರೀಕ್ಷಕರನ್ನು ಒತ್ತಾಯಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

"ಮುಕ್ತಾಯದ ಗಂಟೆ ಬಾರಿಸಿದಾಗ, ಹಲವಾರು ಕಾರಣಗಳನ್ನು ಮುಂದು ಮಾಡಿ ಹೆಚ್ಚುವರಿ ಸಮಯಕ್ಕೆ ಆಗ್ರಹಿಸಿದ ಹಲವಾರು ವಿದ್ಯಾರ್ಥಿಗಳು ಹಿಂಸಾಚಾರದಲ್ಲಿ ತೊಡಗಿದರು. ಶಾಲೆಯ ಮೇಲೆ ಕಲ್ಲು ತೂರಾಟ ನಡೆಸಲಾಯಿತು ಮತ್ತು ಕಂಪ್ಯೂಟರ್ ಹಾಗೂ ಪೀಠೋಪಕರಣಗಳು ಸೇರಿದಂತೆ ಶಾಲೆಯ ಸ್ವತ್ತನ್ನು ಧ್ವಂಸಗೊಳಿಸಲಾಯಿತು" ಎಂದು ಅವರು ಹೇಳಿದ್ದಾರೆ.

ಘಟನೆಯಿಂದ ಓರ್ವ ಮಹಿಳಾ ಶಿಕ್ಷಕಿ ಹಾಗೂ 15 ವಿದ್ಯಾರ್ಥಿಗಳು ನಿತ್ರಾಣಗೊಂಡರು. ಅವರನ್ನು ಕೂಡಲೇ ಚಿಕಿತ್ಸೆಗಾಗಿ ಸಾಮುದಾಯಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಯಿತು. ಸದರಿ ಕೇಂದ್ರದಲ್ಲಿ ಒಟ್ಟು 405 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು ಎಂದು ತಿಳಿಸಿದ್ದಾರೆ.

ಹಿಂಸಾಚಾರದಲ್ಲಿ ಸಕ್ರಿಯವಾಗಿ ಭಾಗವಹಿಸಿದ ಎಂಟು ಮಂದಿ ವಿದ್ಯಾರ್ಥಿಗಳ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ.

ಇದನ್ನೂ ಓದಿ: ಉದ್ಯೋಗಿಗಳ ನಂತರ ರೊಬೊಟ್‌ಗಳನ್ನೂ ಕೆಲಸದಿಂದ ತೆಗೆದ ಗೂಗಲ್!

Similar News