ಝುಬೇರ್ ವಿರುದ್ಧ ಮಾನಹಾನಿಕರ ಪೋಸ್ಟ್: ಆರೋಪಿ ವಿರುದ್ಧ ಏನು ಕ್ರಮ ಕೈಗೊಂಡಿದ್ದೀರಿ ಎಂದು ಕೇಳಿದ ದಿಲ್ಲಿ ಹೈಕೋರ್ಟ್

Update: 2023-03-02 15:42 GMT

ಹೊಸ ದಿಲ್ಲಿ: ವಾಸ್ತವ ಪರಿಶೋಧಕ ಹಾಗೂ ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮುಹಮ್ಮದ್ ಝುಬೇರ್ ವಿರುದ್ಧ ಪೋಕ್ಸೊ ಪ್ರಕರಣದಲ್ಲಿ ಪ್ರಾಥಮಿಕ ಮಾಹಿತಿ ವರದಿ ದಾಖಲಿಸಿದ ನಂತರ ಅವರ ವಿರುದ್ಧ ಮಾನಹಾನಿಕಾರಕ ಪೋಸ್ಟ್‌ಗಳನ್ನು ಮಾಡಿದ್ದ ವ್ಯಕ್ತಿಯ ವಿರುದ್ಧ ಏನು ಕ್ರಮ ಕೈಗೊಂಡಿದ್ದೀರಿ ಎಂದು ದಿಲ್ಲಿ ಹೈಕೋರ್ಟ್, ದಿಲ್ಲಿ ಪೊಲೀಸರನ್ನು ಗುರುವಾರ ಪ್ರಶ್ನಿಸಿದೆ ಎಂದು livelaw.in ವರದಿ ಮಾಡಿದೆ.

ಮುಹಮ್ಮದ್ ಝುಬೇರ್ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣದ ವಿಚಾರಣೆ ನಡೆಸಿದ ನ್ಯಾ. ಅನೂಪ್ ಜೈರಾಮ್ ಭಂಭಾನಿ, "ಈ ವ್ಯಕ್ತಿ(ಝುಬೇರ್)ಯ ವಿರುದ್ಧ ನೀವು ಯಾವುದೇ ಸಾಕ್ಷಿಯನ್ನು ಪತ್ತೆ ಹಚ್ಚಲಾಗಲಿಲ್ಲ ಮತ್ತು ಈತನ ಹೆಸರನ್ನು ಆರೋಪ ಪಟ್ಟಿಯಲ್ಲೂ ನಮೂದಿಸಿಲ್ಲ. ಆದರೆ, ಅಪರಾಧ ಸ್ವರೂಪದ ಟ್ವೀಟ್‌ಗಳನ್ನು ಮಾಡಿದ ವ್ಯಕ್ತಿ(ಜಗದೀಶ್ ಸಿಂಗ್)ಯ ವಿರುದ್ಧ ನೀವೇನು ಕ್ರಮ ಕೈಗೊಂಡಿದ್ದೀರಿ?" ಎಂದು ದಿಲ್ಲಿ ಪೊಲೀಸರ ಪರ ವಕೀಲರನ್ನು ಖಾರವಾಗಿ ಪ್ರಶ್ನಿಸಿದ್ದಾರೆ.

ಝುಬೇರ್ ಅವರು ಬಳಕೆದಾರರೊಬ್ಬರ ಪ್ರೊಫೈಲ್ ಭಾವಚಿತ್ರವೊಂದನ್ನು ಪೋಸ್ಟ್ ಮಾಡಿ, ನಿಮ್ಮ ಮೊಮ್ಮಗಳ ಚಿತ್ರವನ್ನು ಪ್ರೊಫೈಲ್ ಭಾವಚಿತ್ರವಾಗಿಸಿಕೊಂಡು ಮಾನಹಾನಿಕಾರಕ ಭಾಷೆಯಲ್ಲಿ ಪ್ರತಿಕ್ರಿಯಿಸುವುದು ಸಮರ್ಪಕವೇ ಎಂದು ಪ್ರಶ್ನಿಸಿದ್ದರು. ಈ ಪೋಸ್ಟ್ ಮಾಡುವಾಗ ಝುಬೇರ್, ಆ ಅಪ್ರಾಪ್ತ ಬಾಲಕಿಯ ಮುಖವನ್ನು ಮರೆಮಾಚಿದ್ದರು. ಈ ಪೋಸ್ಟಿಗೆ ಸಂಬಂಧ ಪಟ್ಟಂತೆ ಝುಬೇರ್ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.

ಆ ಟ್ವೀಟ್‌ನಲ್ಲಿ, "ಮಿ. ಎಕ್ಸ್‌ಎಕ್ಸ್‌ಎಕ್ಸ್, ಸಾಮಾಜಿಕ ಮಾಧ್ಯಮಗಳಲ್ಲಿ ಜನರನ್ನು ನಿಂದಿಸುವ ನಿಮ್ಮ ಅರೆಕಾಲಿಕ ಉದ್ಯೋಗದ ಬಗ್ಗೆ ನಿಮ್ಮ ಮೊಮ್ಮಗಳಿಗೆ ತಿಳಿದಿದೆಯಾ? ನಿಮ್ಮ ಪ್ರೊಫೆಲ್ ಭಾವಚಿತ್ರವನ್ನು ಬದಲಿಸಿ ಎಂಬುದು ನನ್ನ ಸಲಹೆಯಾಗಿದೆ" ಎಂದು ಬರೆದಿದ್ದರು.

ಆನಂತರ, ಸದರಿ ಬಳಕೆದಾರ ಝುಬೇರ್ ವಿರುದ್ಧ ತನ್ನ ಮೊಮ್ಮಗಳಿಗೆ ಸೈಬರ್ ಲೈಂಗಿಕ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ ಹಲವು ದೂರುಗಳನ್ನು ದಾಖಲಿಸಿದ್ದರು. ಈ ದೂರನ್ನು ಆಧರಿಸಿ, ದಿಲ್ಲಿ ಪೊಲೀಸರು ಪೋಕ್ಸೋ ಕಾಯ್ದೆ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 509B, ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 67 ಹಾಗೂ 67A ಅನ್ವಯ ಝುಬೇರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು.

ನ್ಯಾ‌. ಭಂಭಾನಿ ಅವರು ಪ್ರಕರಣದ ಮರು ವಿಚಾರಣೆಯನ್ನು ಮಾರ್ಚ್ 13ಕ್ಕೆ ನಿಗದಿಗೊಳಿಸಿದ್ದು, ಪ್ರಕರಣ ಅಂದೇನಾದರೂ ತಾರ್ಕಿಕ ಅಂತ್ಯ ತಲುಪಬಹುದೇ ಎಂದು ನೋಡಬೇಕಿದೆ ಎಂದು ಹೇಳಿದ್ದಾರೆ.

Similar News