ಬಿಬಿಸಿ ಸಾಕ್ಷ್ಯಚಿತ್ರ ನಿಷೇಧ, ಐಟಿ ದಾಳಿ ಟೀಕಿಸಿದ ಸುಪ್ರೀಂ ಕೋರ್ಟ್ ಮಾಜಿ ನ್ಯಾಯಾಧೀಶ ಜಸ್ಟಿಸ್ ರೋಹಿಂಟನ್ ನಾರಿಮನ್

Update: 2023-03-03 09:03 GMT

ಹೊಸದಿಲ್ಲಿ: 2002ರ ಗುಜರಾತ್ ಗಲಭೆಗೆ ಸಂಬಂಧಿಸಿದ ‘India: The Modi Question’ ಶೀರ್ಷಿಕೆಯ ಬಿಬಿಸಿ ಸಾಕ್ಷ್ಯಚಿತ್ರದ ಮೇಲೆ ಕೇಂದ್ರ ಸರಕಾರ ಇತ್ತೀಚೆಗೆ ನಿಷೇಧ ಹೇರಿರುವುದನ್ನು ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶ ಜಸ್ಟಿಸ್  ರೋಹಿಂಟನ್ ನಾರಿಮನ್(Justice Rohinton Nariman ) ಗುರುವಾರ ಟೀಕಿಸಿದ್ದಾರೆ.

ಆದಾಯ ತೆರಿಗೆ ಇಲಾಖೆಯು ಬಿಬಿಸಿ ಕಚೇರಿಯ ಮೇಲೆ ನಡೆಸಿದ ದಾಳಿಗಳನ್ನು ಅವರು ಟೀಕಿಸಿದರು. ದಾಳಿಗಳು ನಿಷೇಧಕ್ಕಿಂತ "ಇನ್ನೂ ಹೆಚ್ಚು ದುರದೃಷ್ಟಕರ" ಎಂದು ಹೇಳಿದರು.

"ಇತ್ತೀಚಿಗೆ ನಮ್ಮ ಗಮನ ಸೆಳೆದಿರುವ ಎರಡು ಬಿಬಿಸಿ ಸಾಕ್ಷ್ಯಚಿತ್ರಗಳನ್ನು ನಾನು ನೇರವಾಗಿ ಉಲ್ಲೇಖಿಸುತ್ತಿದ್ದೇನೆ. ಮೊದಲ ಸಾಕ್ಷ್ಯಚಿತ್ರವು ರಾಜ್ಯದ ಮುಖ್ಯಮಂತ್ರಿಯಾಗಿದ್ದ ನಮ್ಮ ಪ್ರಸ್ತುತ ಪ್ರಧಾನಿ ಹಾಗೂ  ಗೋಧ್ರಾ ಗಲಭೆಯ ಸಮಯದಲ್ಲಿ ಏನು ಮಾಡಲಾಗಿದೆ ಅಥವಾ ಏನು ಮಾಡಿಲ್ಲ ಎಂಬುದರ ಕುರಿತು ಮಾತನಾಡುತ್ತದೆ. ಎರಡನೆಯ ಸಾಕ್ಷ್ಯಚಿತ್ರವು ಇಂದು ನಮ್ಮ ಪ್ರಧಾನಿಯವರು ರಾಷ್ಟ್ರವನ್ನು ಮುನ್ನಡೆಸುತ್ತಿರುವುದನ್ನು ಪೌರತ್ವ ತಿದ್ದುಪಡಿ ಕಾಯ್ದೆಯ ಮೂಲಕ ರಾಜಕೀಯ ವಿಭಜಕವನ್ನು  ಉಲ್ಲೇಖಿಸುತ್ತದೆ, ಗೋರಕ್ಷಕರು ಜನರನ್ನು ಹತ್ಯೆ ಮಾಡುವುದು ಇತ್ಯಾದಿಗಳನ್ನು ಉಲ್ಲೇಖಿಸುತ್ತದೆ" ಎಂದು ರೋಹಿಂಟನ್ ವಿವರಿಸಿದರು.

ನಿಷೇಧದ ನಿರರ್ಥಕತೆಯನ್ನು ಎತ್ತಿ ತೋರಿಸಿದ ರೋಹಿಂಟನ್, ಇಂಟರ್ನೆಟ್ ಅನ್ನು "ಹೈಡ್ರಾ-ಹೆಡ್" ಎಂದು ಉಲ್ಲೇಖಿಸಿದರು. ಒಂದು ಸ್ಥಳದಿಂದ ತೆಗೆದುಹಾಕಿರುವುದು ಬೇರಡೆ ಕಾಣಿಸಿಕೊಳ್ಳುತ್ತದೆ ಎಂದು ಹೇಳಿದರು.

ಜಾರಿ ನಿರ್ದೇಶನಾಲಯ (ಈಡಿ) ಮತ್ತು ಆದಾಯ ಇಲಾಖೆಯಂತಹ ಸರಕಾರಿ ಯಂತ್ರಗಳನ್ನು ಬಲವಂತದ ರೀತಿಯಲ್ಲಿ ಬಳಸುವುದು ವಾಕ್ ಸ್ವಾತಂತ್ರ್ಯದ ಮೇಲೆ ತಣ್ಣನೆಯ ಪರಿಣಾಮವನ್ನು ಉಂಟುಮಾಡುತ್ತಿದೆ ಎಂದು ಮಾಜಿ ನ್ಯಾಯಾಧೀಶರು ಹೇಳಿದರು.

Similar News