ಹಥ್ರಾಸ್ ಪ್ರಕರಣ ಬಿಜೆಪಿಯ ‘ಬೇಟಿ ಬಚಾವೊ’ ಘೋಷಣೆಯ ಪೊಳ್ಳುತನ ತೋರಿಸಿದೆ: ಕಾಂಗ್ರೆಸ್

Update: 2023-03-05 17:12 GMT

ಹೊಸದಿಲ್ಲಿ: ಹಥ್ರಾಸ್ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಮೂವರು ಆರೋಪಿಗಳ ಬಿಡುಗಡೆ ಕುರಿತು ಕಾಂಗ್ರೆಸ್ ರವಿವಾರ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. ಪ್ರಕರಣದ ತೀರ್ಪು ಉತ್ತರ ಪ್ರದೇಶ ಪೊಲೀಸ್ ಮತ್ತು ನಂತರ ಸಿಬಿಐನ ‘ದುರ್ಬಲ ಮತ್ತು ಕಳಪೆ ’ತನಿಖೆಯನ್ನು ಬಯಲಿಗೆಳೆದಿದೆ ಎಂದು ಅದು ಆರೋಪಿಸಿದೆ.

ಹಥ್ರಾಸ್ ನ ವಿಶೇಷ ನ್ಯಾಯಾಲಯವು ಪ್ರಕರಣದ ಪ್ರಮುಖ ಆರೋಪಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿ ಇತರ ಮೂವರು ಆರೋಪಿಗಳನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ ಬಿಡುಗಡೆಗೊಳಿಸಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ನ ಈ ಹೇಳಿಕೆ ಹೊರಬಿದ್ದಿದೆ.

ಪ್ರಕರಣದಲ್ಲಿ ಬಿಜೆಪಿಯ ಪಾತ್ರವು ಅದರ ‘ಬೇಟಿ ಬಚಾವೊ, ಬೇಟಿ ಪಢಾವೊ’ ಘೋಷಣೆಯ ಪೊಳ್ಳುತನವನ್ನು ಬಯಲಿಗೆಳೆದಿದೆ ಎಂದು ಇಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದ ಕಾಂಗ್ರೆಸ್ ನಾಯಕಿ ಡಾಲಿ ಶರ್ಮಾ, ಪ್ರತಿಯೊಬ್ಬರನ್ನೂ ಬೆಂಬಲಿಸುವ ಘೋಷಣೆಗಳನ್ನು ಹೊರಡಿಸುತ್ತಲೇ ಇರುವ ಬಿಜೆಪಿಯು ದಲಿತ ಸಮುದಾಯದ ಯುವತಿಗೆ ನ್ಯಾಯವನ್ನು ವಂಚಿಸಿದ ಅಪರಾಧವನ್ನೆಸಗಿದೆ. ಕಳಪೆ ತನಿಖೆಯು ಮೂವರು ಆರೋಪಿಗಳ ಬಿಡುಗಡೆಗೆ ಕಾರಣವಾಗಿದೆ ಎಂದರು. 

ದಲಿತ ಯುವತಿಯ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ನಡೆದಿದ್ದರೂ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು ಎನ್ನುವುದನ್ನು ಪ್ರಾಸಿಕ್ಯೂಶನ್ಗೆ ಸಾಧ್ಯವಾಗದಿದ್ದುದು ಅತ್ಯಂತ ದುರದೃಷ್ಟಕರವಾಗಿದೆ ಎಂದು ಶರ್ಮಾ ಕಿಡಿಕಾರಿದರು.

ಕಾಂಗ್ರೆಸ್, ಅದರ ನಾಯಕ ರಾಹುಲ್ ಗಾಂಧಿ ಮತ್ತು ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಬಲಿಪಶು ಯುವತಿಯ ಕುಟುಂಬಕ್ಕೆ ನ್ಯಾಯಕ್ಕಾಗಿ ನಿರಂತರ ಆಗ್ರಹಿಸಿದ್ದರು ಎಂದು ಹೇಳಿದ ಅವರು,ಕಳೆದ ಒಂಭತ್ತು ವರ್ಷಗಳಲ್ಲಿ ಈ ಎಲ್ಲ ಬರ್ಬರ ಘಟನೆಗಳು ನಡೆದಿದ್ದರೂ ಪ್ರಧಾನಿ ನರೇಂದ್ರ ಮೋದಿಯವರು ತುಟಿಪಿಟಕ್ಕೆಂದಿಲ್ಲ ಎನ್ನುವುದು ಗಮನಾರ್ಹವಾಗಿದೆ. ಅವರ ಮೌನ ಏನನ್ನು ಸೂಚಿಸುತ್ತದೆ ಎಂದು ಪ್ರಶ್ನಿಸಿದರು.

ಬಿಜೆಪಿ ನಾಯಕರು ಭಾಗಿಯಾಗಿದ್ದ ಇತರ ಪ್ರಕರಣಗಳೂ ಇವೆ ಎಂದು ಹೇಳಿದ ಶರ್ಮಾ,2017ರ ಉನ್ನಾವೊ ಅತ್ಯಾಚಾರ ಮತ್ತು ಉತ್ತರಾಖಂಡದ ಅಂಕಿತಾ ಭಂಡಾರಿ ಕೊಲೆಯಂತಹ ಪ್ರಕರಣಗಳು ಹಾಗೂ ಬಿಲ್ಕಿಸ್ ಬಾನೊ ಪ್ರಕರಣದಲ್ಲಿ ಅಪರಾಧಿಗಳ ಬಿಡುಗಡೆಯನ್ನು ಉಲ್ಲೇಖಿಸಿದರು.

ಇದನ್ನು ಓದಿ: ಉತ್ತರ ಪ್ರದೇಶ| ಚರ್ಚ್‌ ಮೇಲೆ ಬಜರಂಗದಳ ದಾಳಿ: ಎರಡು ವಾರ ಕಳೆದರೂ ಎಫ್‌ಐಆರ್‌ ದಾಖಲಿಸದ ಪೊಲೀಸರು; ವರದಿ

Similar News