ವಿಶ್ವ ದಂತ ವೈದ್ಯರ ದಿನ

Update: 2023-03-06 04:51 GMT

ಮಾರ್ಚ್ 6 ರಂದು ವಿಶ್ವದಾದ್ಯಂತ ‘ದಂತ ವೈದ್ಯರ ದಿನ’ ಎಂದು ಆಚರಿಸಲಾಗುತ್ತದೆ. ದಂತ ವೈದ್ಯರ ಸೇವೆಯನ್ನು ಸ್ಮರಿಸುತ್ತಾ ಅವರಿಗೊಂದು ಧನ್ಯವಾದ ಅಥವಾ ಅಭಿನಂದನೆ ತಿಳಿಸುವ ಸುದಿನ. ಅದೇಕೋ ದಂತ ವೈದ್ಯರ ಬಗೆಗಿನ ಭಯ ಜನ ಸಾಮಾನ್ಯರಲ್ಲಿ ಇನ್ನೂ ಉಳಿದಿದೆ. ದಂತ ವೈದ್ಯರು ಎಂದರೆ ‘‘ನೋವು ಉಂಟು ಮಾಡುವವರು’’ ಎಂಬ ಹಣೆ ಪಟ್ಟಿ ಇನ್ನೂ ಪೂರ್ತಿಯಾಗಿ ಕಳಚಿ ಕೊಂಡಿಲ್ಲ. ತಲೆ ತಲಾಂತರಗಳಿಂದ ದಂತ ವೈದ್ಯರನ್ನು ‘ಖಳ ನಾಯಕ’ನ ರೀತಿಯಲ್ಲಿ ಚಿತ್ರಿಸಲಾಗಿದೆ ಮತ್ತು ಜನಮಾನಸದಲ್ಲಿ ದಂತ ವೈದ್ಯರ ಬಗ್ಗೆ ಭೀತಿಯ ಕಲ್ಪನೆ ಇನ್ನೂ ತೊಲಗಿಲ್ಲದಿ ರುವುದೇ ಸೋಜಿಗದ ಮತ್ತು ದೌರ್ಭಾಗ್ಯದ ಸಂಗತಿ.

ದಂತ ವೈದ್ಯರ ದಂತ ಕುರ್ಚಿ ಮಾತ್ರ ಹೆಚ್ಚಿನವರಿಗೆ ಮುಳ್ಳಿನ ಹಾಸಿಗೆಯಾಗಿ ಉಳಿದಿರುವುದೇ ಬಹು ದೊಡ್ಡ ಜೀರ್ಣಿಸಿಕೊಳ್ಳಲಾಗದ ಸತ್ಯ. 1790ರ ಮಾರ್ಚ್ 6 ರಂದು ಅಮೆರಿಕದ ಖ್ಯಾತ ದಂತ ವೈದ್ಯ ಜಾನ್ ಗ್ರೀನ್ವುಡ್ ಎಂಬಾತ ಪ್ರಪ್ರಥಮ ಬಾರಿಗೆ ಕಾಲಿನಿಂದ ಚಾಲಿತವಾದ ದಂತ ಕುರ್ಚಿಯನ್ನು ಸಂಶೋಧಿಸಿದರು. ಇದರ ನೆನಪಿಗಾಗಿ ಮಾರ್ಚ್ 6ನ್ನು ವಿಶ್ವ ದಂತ ವೈದ್ಯರ ದಿನ ಎಂದು ಆಚರಿಸುತ್ತಾರೆ. ಭಾರತ ದೇಶದಲ್ಲಿ ಡಾ. ಶಫಿವುದ್ದೀನ್ ಅಹ್ಮದ್ ಅವರನ್ನು ದಂತ ವೈದ್ಯ ಶಾಸ್ತ್ರದ ಪಿತಾಮಹ ಎಂದೂ, ವಿಶ್ವದಲ್ಲಿ ಡಾ. ಪಿಯರಿ ಫೌಚಾರ್ಡ್ ಅವರನ್ನು ಆಧುನಿಕ ದಂತ ವೈದ್ಯಕೀಯ ಶಾಸ್ತ್ರದ ಪಿತಾಮಹ ಎಂದೂ ಕರೆಯುತ್ತಾರೆ.

ಹಿಂದಿನ ಕಾಲದಲ್ಲಿ ವೈಜ್ಞಾನಿಕತೆ ತಂತ್ರಜ್ಞಾನ ಮತ್ತು ಕೌಶಲ್ಯಗಳ ಕೊರತೆ ಯಿಂದಾಗಿ ದಂತ ವೈದ್ಯಕೀಯ ಕ್ಷೇತ್ರ ಅಂದರೆ ಜನರಲ್ಲಿ ಒಂದು ರೀತಿಯ ಅವ್ಯಕ್ತ ಭಯ ಕಾಡುತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ. ಹೊಸ ಹೊಸ ಆವಿಷ್ಕಾರ ಬಂದಿದೆ. ತಂತ್ರಜ್ಞಾನ ಮತ್ತು ವೈದ್ಯ ವಿಜ್ಞಾನದಲ್ಲಿ ಅಪಾರ ಬದಲಾವಣೆ ಉಂಟಾಗಿದೆ. ಹಾಗಾಗಿ ದಂತ ವೈದ್ಯಕೀಯ ಕ್ಷೇತ್ರ ಈಗ ಮೊದಲಿನಂತೆ ಉಳಿದಿಲ್ಲ. ದಂತ ವೈದ್ಯಕೀಯ ಆಸ್ಪತ್ರೆ ಎಂದರೆ ಯಾವುದೋ ಹೊಸ ಲೋಕಕ್ಕೆ ಬಂದಂತೆ ಭಾಸವಾಗುವ ರೀತಿಯಲ್ಲಿ ಮಾರ್ಪಾಡಾಗಿದೆ. ವಿಶಾಲವಾದ ಜಾಗ, ಮೆತ್ತನೆಯ ದೇಹದಾಕೃತಿಯ ದಂತ ಕುರ್ಚಿ, ಹವಾ ನಿಯಂತ್ರಿತ ವಾತಾವರಣ, ಕಿವಿಗೊಪ್ಪುವ ಲಘು ಸಂಗೀತ, ಹೀಗೆ ಬಹಳಷ್ಟು ಬದಲಾವಣೆ ಉಂಟಾಗಿದೆ. 

ದಂತ ವೈದ್ಯಕೀಯ ಚಿಕಿತ್ಸೆ ಈಗ ಬರೀ ನೋವು ನಿವಾರಕ ವ್ಯವಸ್ಥೆಗಿಂತಲೂ, ಸೌಂದರ್ಯವರ್ಧಕ ಚಿಕಿತ್ಸೆಯಾಗಿ ಬದಲಾಗಿರುವುದು ಖಂಡಿತ ವಾಗಿಯೂ ಸತ್ಯ. ಇಷ್ಟೆಲ್ಲಾ ಬದಲವಣೆಯಾಗಿದ್ದರೂ ಜನರು ಮಾತ್ರ ದಂತ ವೈದ್ಯರ ಬಗ್ಗೆ ಇನ್ನೂ ತಪ್ಪು ಕಲ್ಪನೆಗಳನ್ನು ಹೊಂದಿರುವುದು ಸೋಜಿಗವೇ ಸರಿ. ಅದೇನೋ ಇರಲಿ ನಿಮ್ಮ ನೋವನ್ನು ಶಮನ ಮಾಡುವ ನಿಮ್ಮನ್ನು ಸದಾ ನಗಿಸಲು ಮತ್ತು ಹಸನ್ಮುಖಿಯಾಗಿ ಇರುವಂತೆ ಶುಭ್ರ ದಂತಪಂಕ್ತಿಗಳಿಗಾಗಿ ಸದಾಕಾಲ ಶ್ರಮ ಪಡುವ ದಂತ ವೈದ್ಯರನ್ನು ಸ್ಮರಿಸುವ ಮತ್ತು ಒಂದು ಪುಟ್ಟ ಥ್ಯಾಂಕ್ಸ್ ಹೇಳುವ ದಿನ ಮಾರ್ಚ್ 6. 

ದಂತ ವೈದ್ಯರ ಪಾತ್ರ: 

ಬಾಯಿ ಎನ್ನುವುದು ಬ್ಯಾಕ್ಟೀರಿಯಾಗಳ ಗುಂಡಿ. ಲಕ್ಷಾಂತರ ಬ್ಯಾಕ್ಟೀರಿಯಗಳು ಮತ್ತು ವೈರಾಣುಗಳು ಬಾಯಿಯಲ್ಲಿ ಮನೆ ಮಾಡಿ ಸಂಸಾರ ನಿರ್ವಹಣೆ ಮಾಡಿಕೊಂಡಿರುತ್ತದೆ. ದೇಹದ ರಕ್ಷಣಾ ವ್ಯವಸ್ಥೆ ಕುಸಿದಾಗ, ಅವುಗಳು ತಮ್ಮ ನಿಜರೂಪ ತೋರಿಸುತ್ತದೆ ಮತ್ತು ರೋಗ ಬರುವಂತೆ ಮಾಡುತ್ತದೆ. ಒಬ್ಬ ರೋಗಿ ಬಾಯಿ ತೆರೆದಾಗ, ದಂತವೈದ್ಯರು ಆತನ ಬಾಯಿಯಲ್ಲಿ ಬರೀ ಹಲ್ಲನ್ನು ಮಾತ್ರ ನೋಡುವುದಿಲ್ಲ. 

ಯಶೋದೆಯು ಕೃಷ್ಣನ ಬಾಯಿಯನ್ನು ತೆರೆಸಿ (ಮಣ್ಣು ತಿಂದಾಗ) ಬ್ರಹ್ಮಾಂಡವನ್ನು ಕಂಡಳು ಎಂಬುದಾಗಿ ನಮ್ಮ ಪುರಾಣ ಕಥೆಗಳಲ್ಲಿ ದಾಖಲಾಗಿದೆ. ಅದೇ ರೀತಿ ಕಲಿಯುಗದಲ್ಲಿ ರೋಗಿಯು ಬಾಯಿ ತೆರೆದಾಗ ದಂತ ವೈದ್ಯರು ರೋಗಿಯ ಬಾಯಿಯಲ್ಲಿ ಹತ್ತು ಹಲವಾರು ರೋಗದ ಲಕ್ಷಣಗಳನ್ನು ಗುರುತಿಸಿ ರೋಗವನ್ನು ಪತ್ತೆ ಹಚ್ಚುತ್ತಾರೆ. ರೋಗಿಯ ಬಾಯಿಯಲ್ಲಿ ದಂತ ವೈದ್ಯರು ಪತ್ತೆ ಹಚ್ಚಬಹುದಾದ ರೋಗಗಳು ಯಾವುದೆಂದರೆ ಮಧುಮೇಹ ರೋಗ, ಅಧಿಕ ರಕ್ತದೊತ್ತಡ, ಅನೀಮಿಯಾ ಅಥವಾ ರಕ್ತಹೀನತೆ, ಬಾಯಿ ಕ್ಯಾನ್ಸರ್, ರಕ್ತದ ಕ್ಯಾನ್ಸರ್, ವಿಟಮಿನ್ ಕೊರತೆ, ಶಿಲೀಂಧ್ರಗಳ ಸೋಂಕು, ಲಿವರ್ ತೊಂದರೆ, ಗ್ಯಾಸ್ಟ್ರಿಕ್ ಸಮಸ್ಯೆ, ಶ್ವಾಸಕೋಶದ ಕೀವು, ಏಡ್ಸ್ ರೋಗ, ರಕ್ತದ ಕಾಯಿಲೆಗಳು, ಮಾನಸಿಕ ಒತ್ತಡ, ಔಷಧಗಳ ದುಷ್ಪರಿ ಣಾಮ, ಅಪಸ್ಮಾರ ರೋಗ, ಹೆಪಟೈಟಿಸ್, ಜಾಂಡೀಸ್, ವೈರಾಣು ಸೋಂಕು, ಥೈರಾಯ್ಡ್ ಸಮಸ್ಯೆ, ರಸದೂತಗಳ ಏರುಪೇರು, ಡೆಂಗಿ ಜ್ವರ, ಚಿಕುನ್ ಗುನ್ಯಾ ಮತ್ತು ನಿದ್ರಾಹೀನತೆ. ಈ ಎಲ್ಲಾ ರೋಗಗಳು ಒಂದಲ್ಲ ಒಂದು ರೀತಿಯಲ್ಲಿ ಬೇರೆ ಬೇರೆ ರೂಪಗಳಲ್ಲಿ ಬಾಯಿಯಲ್ಲಿ ಪ್ರಕಟಗೊಳ್ಳುತ್ತದೆ.

ಉದಾಹರಣೆಗೆ ಮಧುಮೇಹ ರೋಗದಲ್ಲಿ ಹಲ್ಲಿನ ವಸಡಿನ ಸುತ್ತ ಕೀವು ತುಂಬಿ, ಹಲ್ಲಿನ ಸುತ್ತಲಿನ ದಂತದಾರ ಎಲುಬು ಕರಗಿ ಹಲ್ಲು ಅಲುಗಾಡುತ್ತದೆ ಮತ್ತು ಬಾಯಿ ವಿಪರೀತ ವಾಸನೆ ಹೊಂದಿರುತ್ತದೆ. ರಕ್ತಹೀನತೆ ಇರುವವರಲ್ಲಿ ಬಾಯಿಯ ಒಳ ಭಾಗದ ಪದರ ಬಿಳಿಚಿಕೊಂಡಿರುತ್ತದೆ. ಬಾಯಿ ಕ್ಯಾನ್ಸರ್ ಇದ್ದಲ್ಲಿ ಬಾಯಿಯೊಳಗೆ ಗಡ್ಡೆ ಅಥವಾ ಒಣಗದ ಹುಣ್ಣು ಇರುತ್ತದೆ. ರಕ್ತದ ಕ್ಯಾನ್ಸರ್ ಇದ್ದಲ್ಲಿ ವಸಡಿನಲ್ಲಿ ರಕ್ತ ಒಸರುತ್ತಿರುತ್ತದೆ. ವಿಟಮಿನ್ ಸಿ ಕೊರತೆ ಇದ್ದಲ್ಲಿ ವಸಡಿನಲ್ಲಿ ರಕ್ತಸ್ರಾವ, ವಿಟಮಿನ್ ಬಿ ಕಾಂಪ್ಲೆಕ್ಸ್ ಕೊರತೆ ಇದ್ದಲ್ಲಿ ಬೋಳು ನಾಲಗೆ ಇರುತ್ತದೆ. 

ಶಿಲೀಂಧ್ರಗಳ ಸೋಂಕು ಇದ್ದಲ್ಲಿ ನಾಲಿಗೆ ಮೇಲೆ ಬಿಳಿ ಪದರ ಇರುತ್ತದೆ. ಅದನ್ನು ಕ್ಯಾಂಡಿಡಿಯೋಸಿಸ್ ಎನ್ನುತ್ತಾರೆ. ಸಾಮಾನ್ಯವಾಗಿ ಅತೀ ಹೆಚ್ಚು ಆಂಟಿಬಯೋಟಿಕ್ ಬಳಸುವವರಲ್ಲಿ, ಸ್ಟೀರಾಯ್ಡ್ ಸೇವಿಸುವವರಲ್ಲಿ, ದೇಹದ ರಕ್ಷಣಾ ವ್ಯವಸ್ಥೆ ಕುಸಿದವರಲ್ಲಿ ಇದು ಹೆಚ್ಚು ಕಂಡುಬರುತ್ತದೆ. ಅಧಿಕ ರಕ್ತದೊತ್ತಡ ಮತ್ತು ಅಪಸ್ಮಾರ ರೋಗಕ್ಕೆ ಔಷಧ ಸೇವಿಸು ವವರಲ್ಲಿ ವಸಡುಗಳು ಅಡ್ಡಾದಿಡ್ಡಿಯಾಗಿ ಬೆಳೆಯುತ್ತಿದೆ. ಲಿವರ್ ತೊಂದರೆ ಇದ್ದಲ್ಲಿ ವಸಡಿನಲ್ಲಿ ರಕ್ತಸ್ರಾವ, ಮಾನಸಿಕ ಒತ್ತಡ ಇದ್ದಲ್ಲಿ ಬಾಯಿಯಲ್ಲಿ ಹುಣ್ಣು, ಜಾಂಡಿಸ್ ಇದ್ದಲ್ಲಿ ಬಾಯಿ ನಾಲಗೆ ಹಳದಿ ಬಣ್ಣಕ್ಕೆ ತಿರುಗುತ್ತದೆ. ಡೆಂಗಿ ಜ್ವರ ಮತ್ತು ಚಿಕುನ್ ಗುನ್ಯಾ ಇದ್ದಲ್ಲಿ ಪ್ಲೇಟ್ಲೇಟ್ಗಳ ಸಂಖ್ಯೆ ಕಡಿಮೆಯಾಗಿ ವಸಡಿನಲ್ಲಿ ರಕ್ತಸ್ರಾವ ಉಂಟಾಗುತ್ತದೆ. ಗ್ಯಾಸ್ಟ್ರಿಕ್ ಸಮಸ್ಯೆ ಇದ್ದಲ್ಲಿ ಹಲ್ಲು ಸವೆದು ಹೋಗಿ ದಂತ ಅತಿ ಸಂವೇದನೆ ಇರುತ್ತದೆ. ಶ್ವಾಸಕೋಶದ ಕೀವು ಮತ್ತು ಸೋಂಕು ಇದ್ದಲ್ಲಿ ವಿಪರೀತ ಬಾಯಿ ವಾಸನೆ ಇರುತ್ತದೆ. ಏಡ್ಸ್ ರೋಗ ಇದ್ದಲ್ಲಿ ನಾಲಗೆ ಮೇಲೆ ಬಿಳಿ ಕೂದಲು ಬೆಳೆಯುತ್ತದೆ.

ಬದಲಾದ ದಂತ ಚಿಕಿತ್ಸೆಯ ಸ್ವರೂಪ

ಹಿಂದಿನ ಕಾಲದಲ್ಲಿ ದಂತ ವೈದ್ಯರು ಎಂದರೆ ಕೇವಲ ಹಲ್ಲು ತೆಗೆಯಲು ಮಾತ್ರ ಸೀಮಿತವಾಗಿದ್ದರು. ಆದರೆ ಈಗ ವಿಜ್ಞಾನ, ತಂತ್ರಜ್ಞಾನ ಬೆಳೆದಂತೆ ಹೊಸ ಹೊಸ ಆವಿಷ್ಕಾರಗಳು ಬಂದಿವೆೆ. ಮೂರನೇ ದವಡೆ ಹಲ್ಲಿನ ಒಳಭಾಗ ದಂತ ಮಜ್ಜೆಯ ಒಳಗಿನ ಆಕಾರ ಕೋಶ ಜೀವಕೋಶಗಳಿಂದ ಹೊಸತಾದ ಹಲ್ಲನ್ನು ಸೃಷ್ಟಿ ಮಾಡುವಲ್ಲಿಯವರೆಗೆ ದಂತ ವೈದ್ಯ ವಿಜ್ಞಾನ ಬೆಳೆದಿದೆ. ಈಗ ದಂತ ಚಿಕಿತ್ಸೆ ಕೇವಲ ರೋಗ ಚಿಕಿತ್ಸೆ ಪದ್ಧತಿಯಾಗಿ ಉಳಿಯದೆ, ರೋಗ ಬರದಂತೆ ತಡೆಯುವ ಪ್ರಕ್ರಿಯೆಗೆ ಹೆಚ್ಚು ಒತ್ತು ನೀಡಲಾಗಿದೆ.

ನಿಯಮಿತವಾದ ದಂತ ತಪಾಸಣೆ, ದಂತ ಶುಚಿಗೊಳಿಸುವಿಕೆ, ಹಲ್ಲು ತುಂಬಿಸುವಿಕೆಯಿಂದ ಹಲ್ಲು ಹುಳುಕಾಗದಂತೆ ಮಾಡುವ ಪ್ರಕ್ರಿಯೆಗೆ ಹೆಚ್ಚು ಒತ್ತು ನೀಡಲಾಗಿದೆ. ಜೊತೆಗೆ ಸೌಂದರ್ಯ ವರ್ಧಕ ಚಿಕಿತ್ಸೆಯಾಗಿ ಬದಲಾಗಿದೆ. ಹಲ್ಲಿನ ಅಂದವನ್ನು ವಿನೀರ್, ಕಿರೀಟ(ಕ್ರೌನ್) ಮತ್ತು ಹೊಸತಾದ ಸಿಮೆಂಟ್‌ಗಳಿಂದ ತುಂಬಿಸಿ, ವ್ಯಕ್ತಿಯ ನಗುವಿನ ವಿನ್ಯಾಸವನ್ನೇ ಬದಲಿಸಿ, ಆತನ ಜೀವನದ ದೃಷ್ಟಿಕೋನವನ್ನೇ ಬದಲಾಯಿಸುವ ಕಾಲದಲ್ಲಿ ನಾವಿದ್ದೇವೆ. ಹಿಂಜರಿಕೆ, ಕೀಳರಿಮೆ ಹೋಗಿ ಹೊಸ ಆತ್ಮ ವಿಶ್ವಾಸ ಬಂದು, ಆ ವ್ಯಕ್ತಿಯ ಜೀವನದ ದೃಷ್ಟಿಕೋನ ಬದಲಾಗಿ, ಆತ್ಮವಿಶ್ವಾಸ ಹೆಚ್ಚಿ, ಹೊಸತಾದ ಮರುಜನ್ಮ ನೀಡಲಾಗುತ್ತದೆ. ಚಿಕಿತ್ಸೆಗೆ ಹೆಚ್ಚು ಒತ್ತು ನೀಡುತ್ತಿದ್ದ ದಂತ ಚಿಕಿತ್ಸಾ ಪದ್ಧತಿ ಈಗ ಹೆಚ್ಚು ರೋಗ ತಡೆಯುವ ಚಿಕಿತ್ಸೆಯಾಗಿ ಪರಿವರ್ತನೆಯಾಗಿದೆ.

ದಂತ ಚಿಕಿತ್ಸಾಲಯಗಳು ಬದಲಾಗಿ ಈಗ ದಂತ ಸ್ಪಾಗಳು ಹುಟ್ಟಿಕೊಂಡಿದೆ. ಒಟ್ಟು ಒಬ್ಬ ವ್ಯಕ್ತಿಯ ದೈಹಿಕ, ಮಾನಸಿಕ ಮತ್ತು ಪರಿಪೂರ್ಣ ಬೆಳವಣಿಗೆಯಲ್ಲಿ ಹಲ್ಲುಗಳ ಪಾತ್ರ ಬಹಳ ಮುಖ್ಯವಾಗಿದೆ. ಒಟ್ಟಿನಲ್ಲಿ ಸುಂದರ, ಸದೃಢವಾದ ಹಲ್ಲುಗಳು ಮನುಷ್ಯನ ಆತ್ಮ ವಿಶ್ವಾಸದ ಮತ್ತು ವ್ಯಕ್ತಿತ್ವದ ಪ್ರತೀಕ. ಸುಂದರವಾಗಿ ನಗಲು, ಆಹಾರ ಜಗಿಯಲು, ಸ್ಪಷ್ಟವಾಗಿ ಮಾತನಾಡಲು ಮತ್ತು ದೇಹದ ಆರೋಗ್ಯದ ಸಮತೋಲನವನ್ನು ಕಾಪಾಡಲು ಹಲ್ಲಿನ ಆರೋಗ್ಯ ಅತೀ ಅವಶ್ಯಕ. ಈ ನಿಟ್ಟಿನಲ್ಲಿ ವ್ಯಕ್ತಿಯ ಆರೋಗ್ಯ ಪಾಲನೆಯಲ್ಲಿ ದಂತ ವೈದ್ಯರ ಪಾತ್ರ ಅತ್ಯಂತ ಮಹತ್ವದ್ದಾಗಿದೆ.

Similar News