ರಕ್ತದಲ್ಲಿ ಪತ್ರ ಬರೆದು ಬೆಳೆ ಹಾನಿ ಪರಿಶೀಲಿಸಲು ಬರುವಂತೆ ಮಹಾರಾಷ್ಟ್ರ ಸಿಎಂಗೆ ಆಮಂತ್ರಣ

ಈರುಳ್ಳಿ ಬೆಳೆಗೆ ಬೆಂಕಿ ಹಚ್ಚಿದ ರೈತ

Update: 2023-03-06 15:52 GMT

ನಾಸಿಕ್: ತಿಂಗಳುಗಟ್ಟಲೆ ಶ್ರಮವಹಿಸಿ ಬೆಳೆದಿದ್ದ ಈರುಳ್ಳಿ ಬೆಲೆಗೆ (Onion Crop) ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ನ್ಯಾಯಯುತ ಬೆಲೆಯನ್ನು ಖಾತ್ರಿಗೊಳಿಸಲು ವಿಫಲವಾಗಿದೆಯೆಂದು ಆಕ್ರೋಶಗೊಂಡ ರೈತನೊಬ್ಬ ತನ್ನ ಹೊಲದಲ್ಲಿದ್ದ ಈರುಳ್ಳಿ ಬೆಳೆಗೆ ಬೆಂಕಿ ಹಚ್ಚಿ ನಾಶಗೊಳಿಸಿರುವ ಘಟನೆ ನಾಸಿಕ್ ಜಿಲ್ಲೆಯ ಯಿಯೋಲಾ ತಾಲ್ಲೂಕಿನಲ್ಲಿ ನಡೆದಿದೆ ಎಂದು ndtv.com ವರದಿ ಮಾಡಿದೆ.

ನಾಸಿಕ್ ಜಿಲ್ಲೆಯ ಯಿಯೋಲಾ ತಾಲ್ಲೂಕಿನ ಕೃಷ್ಣ ಡೊಂಗ್ರೆ ಎಂಬ ರೈತ ತನ್ನ ಈರುಳ್ಳಿ ಬೆಲೆಗೆ ಸೂಕ್ತ ಬೆಲೆ ದೊರೆಯದಿದ್ದುದರಿಂದ ಹತಾಶಗೊಂಡು ಒಂದೂವರೆ ಎಕರೆಯಲ್ಲಿ ಬೆಳೆದಿದ್ದ ಈರುಳ್ಳಿ ಬೆಳೆಗೆ ಬೆಂಕಿ ಹಚ್ಚಿ ನಾಶಗೊಳಿಸಿದ್ದಾರೆ. ಈ ಕುರಿತು ndtv ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ಅವರು, ನಾನು ಕಳೆದ ನಾಲ್ಕು ತಿಂಗಳಿನಿಂದ ಈರುಳ್ಳಿ ಬೆಳೆಗೆ ರೂ. 1.5 ಲಕ್ಷ ವ್ಯಯಿಸಿದ್ದು, ಮಾರುಕಟ್ಟೆಗೆ ಸಾಗಿಸಲು ಮತ್ತೆ ರೂ. 30,000 ವೆಚ್ಚ ಮಾಡಬೇಕಿದೆ. ಹೀಗಿದ್ದೂ, ಈಗಿನ ಈರುಳ್ಳಿ ಮಾರುಕಟ್ಟೆ ದರದಲ್ಲಿ ನನಗೆ ಕೇವಲ ರೂ. 25,000 ದೊರೆಯಲಿದೆ" ಎಂದು ಅಳಲು ತೋಡಿಕೊಂಡಿದ್ದಾರೆ.

"ನಾನು ಒಂದೂವರೆ ಎಕರೆ ಜಮೀನಿನಲ್ಲಿ ಈ ಈರುಳ್ಳಿಯನ್ನು ಬೆಳೆಯಲು ಕಳೆದ ನಾಲ್ಕು ತಿಂಗಳಿನಿಂದ ಹಗಲೂ ರಾತ್ರಿ ದುಡಿದಿದ್ದೇನೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ತಪ್ಪಿನಿಂದಾಗಿ ನಾನೀಗ ಬೆಳೆಯನ್ನು ಸುಡುವ ಒತ್ತಡಕ್ಕೆ ಒಳಗಾಗಿದ್ದೇನೆ" ಎಂದು ಕೃಷ್ಣ ಡೊಂಗ್ರೆ ಹೇಳಿದ್ದಾರೆ.

ಈಗಿನ ಖರೀದಿ ದರಕ್ಕೆ ಮಾರಾಟ ಮಾಡಿದರೆ, ನನ್ನ ಜೇಬಿನಿಂದಲೇ ದುಡ್ಡು ಕೊಡಬೇಕಾಗುತ್ತದೆ ಎಂದಿರುವ ಅವರು, ರೈತರೊಂದಿಗೆ ನಿಲ್ಲುವ ಕುರಿತು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಚಿಂತಿಸಬೇಕಿದೆ ಎಂದು ಹೇಳಿದ್ದಾರೆ.

ಹದಿನೈದು ದಿನ ಕಳೆದರೂ ರಾಜ್ಯ ಸರ್ಕಾರದ ವತಿಯಿಂದ ಈವರೆಗೆ ಯಾರೂ ನಮ್ಮನ್ನು ಸಂಪರ್ಕಿಸಿಲ್ಲ ಎಂದು ಕೃಷ್ಣ ಡೊಂಗ್ರೆ ಪ್ರತಿಪಾದಿಸಿದ್ದಾರೆ. "ಹದಿನೈದು ದಿನ ಕಳೆದರೂ ಯಾರೂ ನಮ್ಮನ್ನು ಸಂಪರ್ಕಿಸಿಲ್ಲ ಮತ್ತು ಸಾಂತ್ವನವನ್ನೂ ಹೇಳಿಲ್ಲ. ನಾವು ರೈತರಿಗಾಗಿ ಏನನ್ನಾದರೂ ಮಾಡುತ್ತೇವೆ ಎಂದು ಹೇಳಲೂ ಯಾರೂ ಬಂದಿಲ್ಲ" ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈರುಳ್ಳಿ ದಹನದ ಸಮಾರಂಭಕ್ಕೆ ಮುಖ್ಯಮಂತ್ರಿ ಏಕನಾಥ್ ಶಿಂದೆ (Eknath Shinde) ಅವರಿಗೆ ನನ್ನ ರಕ್ತದಲ್ಲಿ ಪತ್ರ ಬರೆದು ಆಮಂತ್ರಿಸಿದ್ದು, ಆ ಸಂದರ್ಭದಲ್ಲಿ ಅವರು ಖುದ್ದು ರೈತರ ಪರಿಸ್ಥಿತಿಯನ್ನು ನೋಡಬಹುದಾಗಿದೆ ಎಂದು ಹೇಳಿದ್ದಾರೆ.

ಸರ್ಕಾರವು ಕನಿಷ್ಠ ಬೆಂಬಲ ಬೆಲೆ ಅಡಿಯಲ್ಲಿ ಬೆಳೆಯನ್ನು ಖರೀದಿಸಬೇಕು ಎಂದು ಆಗ್ರಹಿಸಿರುವ ಅವರು, "ಸದ್ಯದ ನಷ್ಟಕ್ಕೆ ಪ್ರತಿಯೊಬ್ಬರಿಗೂ ರೂ. 1,000 ಪರಿಹಾರ ನೀಡಬೇಕು" ಎಂದೂ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ರಾಹುಲ್ ಗಾಂಧಿ ವಿರುದ್ಧ ನಳಿನ್ ಕುಮಾರ್ ಕಟೀಲ್ ಅವಹೇಳನಕಾರಿ ಹೇಳಿಕೆ ವಿಡಿಯೋ ವೈರಲ್ 

Similar News