'19.20.21'ರ ಹಿನ್ನೆಲೆಯಲ್ಲಿ 10,552ರ ಬಗ್ಗೆ

Update: 2023-03-08 02:39 GMT

ಭಾಗ-1

ಈ ದೇಶದಲ್ಲಿ UAPA ಕುಣಿಕೆಯಿಂದ ಬಚಾವಾದ ವಿಠಲ್ ಮಲೆಕುಡಿಯರ ಸಂಖ್ಯೆ ತುಂಬಾ ಕಡಿಮೆ. ಇತ್ತೀಚಿನ ವರದಿಗಳ ಪ್ರಕಾರ 2014-2021ರ ನಡುವೆ ಅಂದರೆ ಮೋದಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ 10,552 ನಾಗರಿಕರನ್ನು ಈ ಕಾಯ್ದೆಯಡಿ ಬಂಧಿಸಲಾಗಿದೆ. ಇವರಲ್ಲಿ ಕೇವಲ 253 ಜನರಿಗೆ ಮಾತ್ರ ಶಿಕ್ಷೆಯಾಗಿದೆ. ಉಳಿದವರಲ್ಲಿ 6,000ಕ್ಕೂ ಹೆಚ್ಚು ಜನರು ಈಗಲೂ ಜಾಮೀನು ಸಹ ಸಿಗದೆ ವಿವಿಧ ಜೈಲುಗಳಲ್ಲಿ ಕೊಳೆಯುತ್ತಿದ್ದಾರೆ. ಶೇ. 40ರಷ್ಟು ಪ್ರಕರಣಗಳು ಮಾತ್ರ ವಿಚಾರಣೆಯ ಹಂತ ತಲುಪಿದೆ. ಈ ಕಾನೂನು 2019ರ ನಂತರ ಎಷ್ಟು ಕರಾಳವಾಗಿದೆಯೆಂದರೆ ವಿಚಾರಣೆ ಇಲ್ಲದೆಯೂ ಆರೋಪಿಗಳನ್ನು ಹತ್ತಾರು ವರ್ಷ ಬಂಧನಕ್ಕೆ ದೂಡುತ್ತದೆ. ಹೀಗಾಗಿ ಈ ಕಾಯ್ದೆಯಲ್ಲಿ ಪ್ರಕ್ರಿಯೆಯೇ ದೊಡ್ಡ ಶಿಕ್ಷೆ.



ಕನ್ನಡದ ಯುವ ಹಾಗೂ ಜನಪರ ಆಶಯಗಳನ್ನುಳ್ಳ ನಿರ್ದೇಶಕ ಮಂಸೋರೆಯವರ '19.20.21' ಕನ್ನಡ ಚಿತ್ರರಂಗದ ಮಟ್ಟಿಗೆ ಅಪರೂಪದ ಮತ್ತು ಅತ್ಯಗತ್ಯವಾದ ನೈಜವಾದ ಕಥೆಯನ್ನು ಹೇಳುವ ಸಿನೆಮಾ. ಭಾರತದ ಪ್ರಜಾತಂತ್ರದ ಅವನತಿ ಮತ್ತು ಅಧಃಪತನಗಳ ಸಂಕೇತವೂ ಮತ್ತು ಪರಿಣಾಮವೂ ಆಗಿರುವ UAPA-(Unlawful Actvities (prevention) Act)- 'ಕಾನೂನು ಬಾಹಿರ ಚಟುವಟಿಕೆಗಳ ನಿಗ್ರಹ ಕಾಯ್ದೆ'ಯನ್ನು ಸರಕಾರ ಪ್ರಶ್ನಿಸುವ ಮತ್ತು ಹಕ್ಕು ಕೇಳುವ ನಾಗರಿಕರನ್ನು ದಮನಿಸುತ್ತಿದೆ ಎಂಬ ಕಥಾವಸ್ತು ಕನ್ನಡದ ಮಟ್ಟಿಗೆ ಹೊಸತು. ಹಾಗೂ ಅದು ಹೊಸತು ಅನ್ನುವುದೇ ಕನ್ನಡ ಚಿತ್ರರಂಗ ಪ್ರಧಾನವಾಗಿ ಇನ್ನು ಯಾವ ಜಮಾನದಲ್ಲಿದೆ ಎಂಬುದನ್ನು ತಿಳಿಸುತ್ತದೆ.

ಹಾಗೆಯೇ ಇತ್ತೀಚಿನ ದಿನಗಳಲ್ಲಿ ಬಿಡುಗಡೆಯಾದ ಮಂಸೋರೆಯವರ ಚಿತ್ರಗಳು, 'ಪಾಲಾರ್' ತರಹದ ಉತ್ತಮ ಪ್ರಯತ್ನಗಳು ಇಷ್ಟು ಕಾಲ ಯಜಮಾನರ ಹಟ್ಟಿಯ ಸುತ್ತಾ, ಧಣಿಕೂಡುವ ಪಟ್ಟದ ಸುತ್ತಾ ಇಲ್ಲವೇ ಪಾಳೇಗಾರಿತನವನ್ನೇ ಹೀರೋಗಿರಿ ಎಂದು ವೈಭವೀಕರಿಸುತ್ತಾ ಅಥವಾ ಮೇಲ್ಜಾತಿ-ಮಧ್ಯಮವರ್ಗಗಳ ಹಾಡು-ಪಾಡುಗಳನ್ನೇ ಬಗೆಬಗೆಯಾಗಿ ಚಿತ್ರಿಸುತ್ತಾ ನಿಂತ ನೀರಾಗಿದ್ದ ಕನ್ನಡ ಚಿತ್ರರಂಗವನ್ನು ದಲಿತರ ಕೇರಿಗಳ, ಆದಿವಾಸಿಗಳ ಕಾಡುಗಳ, ನಗರದ ಸ್ಲಂಗಳ ಕಡೆಗೆ ಕರೆದಯ್ಯುತ್ತಿರುವುದು ತನ್ನಂತೆ ತಾನೇ ಒಂದು ಉತ್ತಮ ಬೆಳವಣಿಗೆಯಾಗಿದೆ. ಹೀಗಾಗಿ ಕನ್ನಡಿಗರು 'ಪಾಲಾರ್', '19.20.21'ಗಳನ್ನು ಆಪ್ತವಾಗಿ ಬರಮಾಡಿಕೊಳ್ಳಬೇಕು. ಮಂಸೋರೆಯವರು '19.20.21'ರಲ್ಲಿ ಕರಾವಳಿಯ ಕುತ್ಲೂರಿನ ವಿಠಲ್ ಮಲೆಕುಡಿಯ ಅವರು ಅನುಭವಿಸಿದ ನೈಜ ಹಾಗೂ ದಾರುಣ ಅನುಭವಗಳನ್ನು ತೆರೆಗೆ ತರುವ ಮೂಲಕ ಕನ್ನಡದ ಸಿನೆಮಾ ರಂಗ ಈವರೆಗೆ ಕೇಳದಿದ್ದ ಹಲವಾರು ಪ್ರಶ್ನೆಗಳನ್ನು ಅತ್ಯಗತ್ಯವಾಗಿ ಸಮಾಜದ ಮುಂದಿರಿಸಿದೆ. ಈಗಾಗಲೇ ಸಿನೆಮಾದ ಕಥಾವಸ್ತುವಾಗಿರುವ ಕುತ್ಲೂರಿನ ಮಲೆಕುಡಿಯ ಆದಿವಾಸಿ ಜನಗಳ ದಾರುಣ ಬದುಕು, ಅದನ್ನು ಬದಲಿಸಬೇಕೆಂದು ಪ್ರಜಾತಾಂತ್ರಿಕವಾಗಿ ಹೋರಾಟ ಮಾಡಲು ಮುಂದಾದ ಯುವಕ ವಿಠಲ್ ಮಲೆಕುಡಿಯ ಮಾಡಿದ ಪ್ರಯತ್ನಗಳು ಹಾಗೂ ಎದುರಿಸಬೇಕಾದ ದಮನ, ಅವರ ಹೋರಾಟಕ್ಕೆ ಜೊತೆಯಾಗಿದ್ದ ಡಿವೈಎಫ್‌ಐನ ಮುನೀರ್ ಕಾಟಿಪಳ್ಳ, ವಕೀಲ ದಿನೇಶ್ ಉಳೆಪಾಡಿ, ಪತ್ರಕರ್ತ ನವೀನ್ ಸೂರಿಂಜೆ.. ಇವೆಲ್ಲದರ ಬಗ್ಗೆ ಸಾಕಷ್ಟು ಚರ್ಚೆಯಾಗಿದೆ.

ಸೂರಿಂಜೆಯವರು ಇದೇ ವಿಷಯದ ಬಗ್ಗೆ ಬರೆದ 'ಕುತ್ಲೂರು ಕಥನ' ಎಂಬ ಪುಸ್ತಕವೂ ಕಳೆದ ತಿಂಗಳಷ್ಟೇ ಬಿಡುಗಡೆಯಾಗಿದೆ. '19.20.21' ಸಿನೆಮಾದ ತಾಂತ್ರಿಕ ವಿಷಯಗಳ ಬಗ್ಗೆ ಸಿನೆಮಾ ವ್ಯಾಕರಣ ವನ್ನು ಬಲ್ಲವರು, ಸಿನೆಮಾ ಆಸಕ್ತರು ಬರೆದಿದ್ದಾರೆ. ಸಿನೆಮಾದ ವ್ಯಾಕರಣ ಗೊತ್ತಿಲ್ಲದವರೂ ಕೂಡ ಸಿನೆಮಾ ತಮಗೆ ತಟ್ಟಿದ ಬಗೆಯ ಬಗ್ಗೆ ಬರೆದಿದ್ದಾರೆ. ಒಟ್ಟಾರೆಯಾಗಿ ನೋಡಿದರೆ ಮೆಚ್ಚುಗೆಯಲ್ಲೂ ಅತಿರೇಕವಿದೆ. ಟೀಕೆಗಳಲ್ಲೂ ಅತಿರೇಕವಿದೆ. ಒಂದು ಸಿನೆಮಾವಾಗಿ 19.20.21ರ ಬಗ್ಗೆ ಈಗಾಗಲೇ ವ್ಯಕ್ತವಾಗಿರುವ ಮೆಚ್ಚುಗೆಗಳಿಗಾಗಲೀ, ಟೀಕೆಗಳಿಗಾಗಲೀ ವಿಶೇಷವಾಗಿ ಸೇರಿಸುವಂಥದ್ದನ್ನು ಯಾರೂ ಉಳಿಸಿಲ್ಲ ಎಂಬುದೇ ಚಿತ್ರದ ಒಂದು ದೊಡ್ಡ ಪ್ಲಸ್ ಪಾಯಿಂಟ್! ಮಂಸೋರೆಯವರು ಎಲ್ಲವನ್ನು ಸಮಾಧಾನ ಚಿತ್ತದಿಂದ ತೆಗೆದುಕೊಂಡು ಮನುಷ್ಯರಾಗಿ ಮತ್ತು ನಿರ್ದೇಶಕರಾಗಿ ಇನ್ನಷ್ಟು ಪಕ್ವಗೊಳ್ಳುತ್ತಾರೆಂದು ಆಶಿಸಬಹುದು. ಈ ಲೇಖನವು '19.20.21' ಹೇಳದೇ ಬಿಟ್ಟ ಇತಿಹಾಸ ಮತ್ತು ವರ್ತಮಾನಗಳನ್ನು ಹೇಳುವ ಪ್ರಯತ್ನ ಮಾಡುತ್ತದೆ.

ಎಲ್ಲಕ್ಕಿಂತ ಹೆಚ್ಚಾಗಿ ಸಿನೆಮಾದ ಪ್ರಮುಖ ವಿಲನ್ ಆಗಿರುವ UAPA ಮತ್ತು ಸಾಂಸ್ಥಿಕವಾಗಿಯೇ ಕ್ರೌರ್ಯವನ್ನು ಸಾಧನವಾಗಿ ಬಳಸುವ ಪೊಲೀಸ್ ಇಲಾಖೆಗೆ ಹೇಗೆ ಈ ಕಾಯ್ದೆ ಇನ್ನಷ್ಟು ಉತ್ತರದಾಯಿತ್ವವಿಲ್ಲದ ದುಷ್ಟತನವನ್ನು ಒದಗಿಸಿದೆ ಎಂಬುದನ್ನು ಅರ್ಥಮಾಡಿಕೊಳ್ಳದಿದ್ದರೆ ಸಿನೆಮಾದಲ್ಲಿ ಕಾಣಿಸಲಾಗಿರುವ ಕ್ರೌರ್ಯ ಆಯಾ ನಿರ್ದಿಷ್ಟ ಪೊಲೀಸ್ ಅಧಿಕಾರಿಗಳ ದುಷ್ಟತನದಲ್ಲಿ ಮಾತ್ರ ಹುಡುಕುವ ತಪ್ಪು ಮಾಡುತ್ತೇವೆ. ಅದಕ್ಕಿಂತ ಮುಖ್ಯವಾಗಿ ಒಂದು ಪ್ರಜಾತಾಂತ್ರಿಕ ಆಡಳಿತ ವ್ಯವಸ್ಥೆಯಲ್ಲಿ ಭಿನ್ನಮತವನ್ನು, ಪ್ರತಿರೋಧವನ್ನು ಸಾಂಸ್ಥಿಕವಾಗಿ ಬಗ್ಗುಬಡಿಯುವ ಇಂಥಾ ಸಂವಿಧಾನ ವಿರೋಧಿ ಖಿಅಅಯನ್ನು ಜಾರಿ ಮಾಡುವಲ್ಲಿ ಬಿಜೆಪಿ ಪಾತ್ರ ಗೊತ್ತೇ ಇದೆ. ಆದರೆ ಕಾಂಗ್ರೆಸ್, ಕಮ್ಯುನಿಸ್ಟ್, ಬಿಎಸ್‌ಪಿ, ಆಪ್‌ಗಳ ಪಾತ್ರವೇನಿತ್ತು? ಹೆಚ್ಚಿನ ವಿರೋಧವಿಲ್ಲದೆ ಎಲ್ಲಾ ರಾಜಕೀಯ ಪಕ್ಷಗಳು ಜಾರಿಗೆ ತಂದ ಈ ಸರ್ವಾಧಿಕಾರಿ ಕಾನೂನು ಯಾರಿಗೆ ಅಗತ್ಯವಿತ್ತು? ಇನ್ನು ಮುಂದಾದರೂ ವಿಠಲ್ ಮಲೆಕುಡಿಯರಂತಹವರು ಇದಕ್ಕೆ ಬಲಿಯಾಗದಿರಬೇಕೆಂದರೆ ಏನು ಮಾಡಬಹುದು..ಇವೇ ಇತ್ಯಾದಿ ಪ್ರಶ್ನೆಗಳನ್ನು ಈಗಲಾದರೂ ಕರ್ನಾಟಕ ಗಂಭೀರವಾಗಿ ಚರ್ಚಿಸಬೇಕಿದೆ.

ಏಕೆಂದರೆ UAPA ಎಂಬ ಕರಾಳ ಕಾನೂನು ಅಸ್ತಿತ್ವದಲ್ಲಿರುವವರೆಗೆ ಈ ದೇಶದ ದಲಿತ-ಆದಿವಾಸಿ- ಅಲ್ಪಸಂಖ್ಯಾತ- ಬಡಭಾರತದ ಯಾರೊಬ್ಬರ ಕಥೆಗಳಿಗೂ ಶಾಶ್ವತ ಶುಭ ಮುಕ್ತಾಯ ಇರುವುದಿಲ್ಲ. ಏಕೆಂದರೆ ಈ ದೇಶದಲ್ಲಿ UAPA ಕುಣಿಕೆಯಿಂದ ಬಚಾವಾದ ವಿಠಲ್ ಮಲೆಕುಡಿಯರ ಸಂಖ್ಯೆ ತುಂಬಾ ಕಡಿಮೆ. ಇತ್ತೀಚಿನ ವರದಿಗಳ ಪ್ರಕಾರ 2014-2021ರ ನಡುವೆ ಅಂದರೆ ಮೋದಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ 10,552 ನಾಗರಿಕರನ್ನು ಈ ಕಾಯ್ದೆಯಡಿ ಬಂಧಿಸಲಾಗಿದೆ. ಇವರಲ್ಲಿ ಕೇವಲ 253 ಜನರಿಗೆ ಮಾತ್ರ ಶಿಕ್ಷೆಯಾಗಿದೆ. ಉಳಿದವರಲ್ಲಿ 6,000ಕ್ಕೂ ಹೆಚ್ಚು ಜನರು ಈಗಲೂ ಜಾಮೀನು ಸಹ ಸಿಗದೆ ವಿವಿಧ ಜೈಲುಗಳಲ್ಲಿ ಕೊಳೆಯುತ್ತಿದ್ದಾರೆ.

ಶೇ. 40ರಷ್ಟು ಪ್ರಕರಣಗಳು ಮಾತ್ರ ವಿಚಾರಣೆಯ ಹಂತ ತಲುಪಿದೆ. ಈ ಕಾನೂನು 2019ರ ನಂತರ ಎಷ್ಟು ಕರಾಳವಾಗಿದೆಯೆಂದರೆ ವಿಚಾರಣೆ ಇಲ್ಲದೆಯೂ ಆರೋಪಿಗಳನ್ನು ಹತ್ತಾರು ವರ್ಷ ಬಂಧನಕ್ಕೆ ದೂಡುತ್ತದೆ. ಹೀಗಾಗಿ ಈ ಕಾಯ್ದೆಯಲ್ಲಿ ಪ್ರಕ್ರಿಯೆಯೇ ದೊಡ್ಡ ಶಿಕ್ಷೆ. ಈವರೆಗೆ ನಡೆದಿರುವ ವಿಚಾರಣೆಯಲ್ಲಿ ಶೇ.98ರಷ್ಟು ಆರೋಪಿ ನಿರಪರಾಧಿಗಳು ಬಿಡುಗಡೆಯಾಗಿದ್ದಾರೆ. ಅರ್ಥಾತ್ ಪೊಲೀಸರು ಯಾವುದೇ ಸಾಕ್ಷಿ ಪುರಾವೆ ಇಲ್ಲದೆ ಅವರನ್ನು ಬಂಧಿಸಿದ್ದರು. ವಿನಾಕಾರಣ ಶಿಕ್ಷೆ ಅನುಭವಿಸಿದ್ದರು. ಇವರಲ್ಲಿ ಶೇ. 80ರಷ್ಟು ಜನ ಬಿಜೆಪಿ ಶಾಸಿತ ರಾಜ್ಯಗಳವರು. ಶೇ. 60ಕ್ಕೂ ಹೆಚ್ಚು ಜನ ಆದಿವಾಸಿಗಳು. ಇವೆಲ್ಲವೂ ಕೇವಲ ಆಯಾ ಪೊಲೀಸ್ ಅಧಿಕಾರಿಗಳ ಕ್ರೌರ್ಯದಿಂದ ಸಂಭವಿಸಿದ್ದೆಂದು ಅರ್ಥಮಾಡಿಕೊಳ್ಳುವುದು ಮೂರ್ಖತನ. ಹೀಗಾಗಿ ಮೊದಲು ಕೇಳಿಕೊಳ್ಳಬೇಕಾದ ಪ್ರಶ್ನೆ UAPA ಏಕೆ ಜಾರಿಗೆ ಬಂತು ಎನ್ನುವುದು?

ಕಾಡಿನ ಕಾರ್ಪೊರೇಟೀಕರಣ, UAPA ಮತ್ತು ಕತ್ತಲೂರಿನ ದಿನಕರರು: 

19.20.21 ಸಿನೆಮಾದಲ್ಲಿ ಮಂಸೋರೆಯವರು ತೋರಿಸುವಂತೆ ಕುತ್ಲೂರು (ಕಾಡುಮಲೆ) ಪ್ರದೇಶವನ್ನು ಸರಕಾರ 1998ರಲ್ಲಿ ರಾಷ್ಟ್ರೀಯ ಉದ್ಯಾನವನವನ್ನಾಗಿ ಘೋಷಿಸುತ್ತದೆ. ಹೆಸರಿಗೆ ಅದು ರಾಷ್ಟ್ರೀಕರಣದಂತೆ ಕಂಡರೂ ಸಾರದಲ್ಲಿ ಕಾಡಿನ ಮಕ್ಕಳನ್ನು ಕಾಡಿನಿಂದ ಒಕ್ಕಲೆಬ್ಬಿಸಿ ಕಾಡಿನ ಸಂಪತ್ತನ್ನು ದೊಡ್ದ ದೊಡ್ಡ ಬಹುರಾಷ್ಟ್ರೀಯ ಕಂಪೆನಿಗಳಿಗೆ ಒಪ್ಪಿಸುವ ಯೋಜನೆಯೇ ಆಗಿತ್ತು. ಕಾಡಿನಲ್ಲಿರುವ ಜೀವ ವೈವಿಧ್ಯವನ್ನು ಆಧರಿಸಿ ಸರಕು ಸಾಮ್ರಾಜ್ಯ ಕಟ್ಟಿಕೊಂಡಿರುವ ಬಯೋ ಬಹುರಾಷ್ಟ್ರಿಯ ಕಂಪೆನಿಗಳು, ಕಾಡಿನ ನೆಲದೊಳಗಿರುವ ಖನಿಜ ಸಂಪತ್ತಿನ ಮೇಲೆ ಕಣ್ಣುಹಾಕಿದ್ದ ದೇಶ-ವಿದೇಶಗಳ ಖನಿಜ ಉದ್ಯಮಿಗಳು ಹಾಗೂ ಪ್ರವಾಸೋದ್ಯಮದಲ್ಲಿರುವ ದೇಶವಿದೇಶದ ಉದ್ಯಮಿಗಳ ಜೊತೆ ಆಳುವ ಸರಕಾರಗಳು 2 ಲಕ್ಷ ಕೋಟಿ ರೂ. ಮೌಲ್ಯಕ್ಕೂ ಹೆಚ್ಚಾದ ಒಪ್ಪಂದಗಳನ್ನು ಮಾಡಿಕೊಂಡ ಹಿನ್ನೆಲೆಯಲ್ಲಿ ಈ ರಾಷ್ಟ್ರೀಯ ಉದ್ಯಾನ ಯೋಜನೆಗಳು ಜಾರಿಗೆ ಬಂದಿತ್ತು. ಮಧ್ಯಭಾರತ, ಮಲೆನಾಡು, ಪಶ್ಚಿಮ ಘಟ್ಟಗಳು ಈ ಯೋಜನೆಯ ಭಾಗವಾದವು. ಈ ಉದ್ಯಮಿಗಳು ಕಾಡನ್ನು ಸೂರೆ ಮಾಡಬೇಕೆಂದರೆ ಆದಿವಾಸಿಗಳನ್ನು ಅಲ್ಲಿಂದ ಎತ್ತಂಗಡಿ ಮಾಡಬೇಕಾದುದು ಅನಿವಾರ್ಯವಾಗಿತ್ತು.

'19.20.21' ಸಿನೆಮಾದಲ್ಲೂ ತೋರಿಸುವಂತೆ ಆಮಿಷವನ್ನು ಒಡ್ಡುವುದು ಅಥವಾ ಬದುಕಲು ಸಾಧ್ಯವಾಗದಂತಹ ನಿರ್ಬಂಧಗಳನ್ನು ಒಡ್ಡಿ ತಾವಾಗಿಯೇ ಆದಿವಾಸಿಗಳು ಆ ಪ್ರದೇಶವನ್ನು ತೊರೆಯುವಂತೆ ಮಾಡುವುದು ರಾಷ್ಟ್ರೀಯ ಉದ್ಯಾನ ಯೋಜನೆಯ ಅಸಲಿ ಸ್ವರೂಪವಾಗಿತ್ತು. ಈ ಹಿನ್ನೆಲೆಯಲ್ಲೇ ಕರ್ನಾಟಕದಲ್ಲೂ ಮಲೆನಾಡು ಮತ್ತು ಕರಾವಳಿಯ ಕಾಡುಪ್ರದೇಶವನ್ನು ಕುದುರೆಮುಖ ರಾಷ್ಟ್ರೀಯ ಉದ್ಯಾನವೆಂದು ಘೋಷಿಸಿ ಆ ಕಾಡಿನೊಳಗೆ ವಾಸಿಸುತ್ತಿದ್ದ ಆದಿವಾಸಿಗಳನ್ನು ಎತ್ತಂಗಡಿ ಮಾಡುವುದಕ್ಕೆ 1998ರಲ್ಲಿ ಸರಕಾರ ಮುಂದಾಯಿತು. ಆಗ ಕರ್ನಾಟಕದಲ್ಲಿ ಅತ್ಯಂತ ಸಕ್ರಿಯವಾಗಿದ್ದ ಎಡಪಂಥೀಯ ಒಲವಿನ 'ಕರ್ನಾಟಕ ವಿಮೋಚನಾ ರಂಗ'-ಚಿತ್ರದಲ್ಲಿ ಅದನ್ನು 'ನಮ್ಮನಾಡು ವಿಮೋಚನಾ ರಂಗ'ವೆಂದು ತೋರಿಸಲಾಗಿದೆ-ಆದಿವಾಸಿಗಳಲ್ಲಿ ಬರಲಿರುವ ಆಪತ್ತಿನ ಬಗ್ಗೆ ಅರಿವು ಉಂಟು ಮಾಡಲು ಪ್ರಾರಂಭಿಸಿದರು. ಆದರೆ ಸಿನೆಮಾದಲ್ಲಿ ತೋರಿಸಿರುವಂತೆ ಅವರು ನಕ್ಸಲರೂ ಅಲ್ಲ. ಆಗಿನ್ನೂ ನಕ್ಸಲರ ಪ್ರವೇಶವೂ ಆಗಿರಲಿಲ್ಲ.

1998-2004ರ ನಡುವೆ ಕರ್ನಾಟಕ ವಿಮೋಚನಾ ರಂಗದ ಯುವಕ ಯುವತಿಯರು ಕಾಡಿನ ಮೂಲೆ ಮೂಲೆ ತಿರುಗಿ ಆದಿವಾಸಿಗಳಲ್ಲಿ ಅರಿವು ಉಂಟು ಮಾಡಿ ಅತ್ಯಂತ ಬೃಹತ್ತಾದ ಮತ್ತು ಶಾಂತಿಯುತವಾದ ಕುದುರೆಮುಖ ರಾಷ್ಟ್ರೀಯ ಉದ್ಯಾನ ವಿರೋಧಿ ಒಕ್ಕೂಟ ಚಳವಳಿಯನ್ನು ಕಟ್ಟಿದರು. ಮೆರವಣಿಗೆ, ಧರಣಿ, ಪ್ರದರ್ಶನ, ಸರಕಾರಿ ಕಚೇರಿ ಮುತ್ತಿಗೆಯಂಥ ಹೋರಾಟಗಳನ್ನು ದೊಡ್ಡ ಮಟ್ಟದಲ್ಲಿ ಮಾಡಿದ್ದು ಬಿಟ್ಟರೆ ವಿಮೋಚನಾ ರಂಗ ಯಾವುದೇ ಹಿಂಸಾತ್ಮಕ ಕಾರ್ಯಾಚರಣೆಗೆ ಎಂದೂ ಮುಂದಾಗಿರಲಿಲ್ಲ. ಆದರೆ ಅಗಿದ್ದ ಕಾಂಗ್ರೆಸ್‌ನ ಎಸ್.ಎಂ. ಕೃಷ್ಣ ಸರಕಾರ ಮತ್ತು ಉಸ್ತುವಾರಿ ಸಚಿವರಾಗಿದ್ದ ಚಂದ್ರೇಗೌಡರು ಆ ಬ್ರಹ್ಮನೇ ಬಂದರೂ ರಾಷ್ಟ್ರೀಯ ಉದ್ಯಾನ ಯೋಜನೆ ಬದಲಾಗಲ್ಲ ಎಂದು ಘೋಷಿಸಿದರು ಮತ್ತು ಆದಿವಾಸಿಗಳು ತೆಪ್ಪನೇ ಕಾಡಿನಿಂದ ಹೊರಬರದಿದ್ದರೆ ಅರಣ್ಯ ಇಲಾಖೆ ಕ್ರಮ ತೆಗೆದುಕೊಳ್ಳುವುದೆಂದು ಘೋಷಿಸಿ, '19.20.21'ರಲ್ಲಿ ತೋರಿಸಿರುವಂತೆ ಅರಣ್ಯ ಇಲಾಖೆ ನಡೆಸಿದ ದೌರ್ಜನ್ಯಗಳಿಗೆ ಹಸಿರು ನಿಶಾನೆ ತೋರಿಸಿದರು.

ಸತತ ಶಾಂತಿಯುತ ಹೋರಟಗಳನ್ನು ಮಾಡಿಯೂ ಹಕ್ಕುಗಳನ್ನು ಪಡೆದುಕೊಳ್ಳಲಾಗದ ಹತಾಷೆಯಲ್ಲಿದ್ದ ವಿಮೋಚನಾ ರಂಗದ ಕೆಲವು ಯುವಕ ಯುವತಿಯರಿಗೆ ಆಗ ನಕ್ಸಲ್ ಸಿದ್ಧಾಂತ ಆಕರ್ಷಿಸಿತು. ಶಸ್ತ್ರಾಸ್ತ್ರಗಳನ್ನು ಬಳಸಿ ಪ್ರಭುತ್ವ ನಡೆಸುತ್ತಿರುವ ದಮನವನ್ನು ಶಾಂತಿಯುತವಾಗಿ ಹಿಮ್ಮೆಟ್ಟಿಸಲು ಸಾಧ್ಯವಿಲ್ಲವೆಂದು ಆ ಯುವಕ ಯುವತಿಯರು ನಕ್ಸಲ್ ಹೋರಾಟವನ್ನು ಸೇರಿ ಪ್ರಾರಂಭದಲ್ಲಿ ಶಸ್ತ್ರಾಸ್ತ್ರಗಳನ್ನು ತೋರಿಸಿ-ಬಳಸಿ ಅಲ್ಲ-ಅರಣ್ಯ ಇಲಾಖೆಯನ್ನು ಕಿರುಕುಳವನ್ನು ಸಮರ್ಥವಾಗಿ ಹಿಮ್ಮೆಟ್ಟಿಸಿದರು. ಇದರಿಂದಾಗಿ ನಕ್ಸಲ್ ಹೋರಾಟ ಇಡೀ ಪ್ರದೇಶದಲ್ಲಿ ಜನಪ್ರಿಯವಾಗಿ ನೂರಾರು ಆದಿವಾಸಿ ಯುವಕ-ಯುವತಿಯರು ನಕ್ಸಲ್ ಚಳವಳಿಯ ಭಾಗವಾದರು. ಇದನ್ನು ಬಳಸಿಕೊಂಡು ಆಗಿನ ಕಾಂಗ್ರೆಸ್ ಸರಕಾರ ನಕ್ಸಲ್ ನಿಗ್ರಹ ಪಡೆಯನ್ನು ಸ್ಥಾಪಿಸಿ ಇಡೀ ಆದಿವಾಸಿ ಹಳ್ಳಿಗಳ ಮೇಲೆ ದಾಳಿ ಮಾಡಲು ಪ್ರಾರಂಭಿಸಿತು. '19.20.21' ಸಿನೆಮಾದಲ್ಲಿ ತೋರಿಸಿರುವಂತೆ ಈ ಕಿರುಕುಳದ ಭಾಗವಾಗಿ ವಿಠಲ್ ಮಲೆಕುಡಿಯರ ಕಥೆ 2010-12ರಲ್ಲಿ ಪ್ರಾರಂಭವಾದರೂ, ಕುತ್ಲೂರಿನ ಭಾಗದಲ್ಲೂ 2000-2004ರಿಂದಲೇ ಅರಣ್ಯ ಇಲಾಖೆಯ ಕಿರುಕುಳ ಪ್ರಾರಂಭವಾಗಿತ್ತು. ವಾಸ್ತವವಾಗಿ 'ವಾರ್ತಾಭಾರತಿ' ಪತ್ರಿಕೆ ಕುತ್ಲೂರಿನ ಜನತೆಯು ಅನುಭವಿಸುತ್ತಿರುವ ಬವಣೆಯನ್ನು 'ಕಾಡಿನ ಮಕ್ಕಳ ತಲೆಗೆ ನಕ್ಸಲೈಟ್ ಎಂಬ ಮುಳ್ಳಿನ ಕಿರೀಟ' ಎಂಬ ಶೀರ್ಷಿಕೆಯಲ್ಲಿ ಸರಣಿ ವರದಿಯಾಗಿ ಪ್ರಕಟಿಸಿತ್ತು.

Similar News