ಅಕ್ರಮ ಸಾಲದ ಆ್ಯಪ್‌ಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಲಿ

Update: 2023-03-10 17:53 GMT

ಮಾನ್ಯರೇ,

ದೇಶದಲ್ಲಿ ಡಿಜಿಟಲ್ ವೇದಿಕೆ ಮೂಲಕ ಸಾಲ ನೀಡುವ ಅಕ್ರಮ ಆ್ಯಪ್‌ಗಳ ವಿರುದ್ಧ ದೇಶದೆಲ್ಲೆಡೆ ದೂರುಗಳು ದಾಖಲಾಗುತ್ತಿರುವುದರಿಂದ ಕೇಂದ್ರ ಗೃಹ ಸಚಿವಾಲಯವು, ಇಂತಹ ಅಕ್ರಮ ಆ್ಯಪ್‌ಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಮುಂದಾಗಿರುವುದು ಸ್ವಾಗತಾರ್ಹ. ಡಿಜಿಟಲ್ ವೇದಿಕೆ ಮೂಲಕ ಅಕ್ರಮವಾಗಿ ಸಾಲ ನೀಡುವ ಈ ಆ್ಯಪ್‌ಗಳು ಸಾಲ ವಸೂಲಿ ಸಂದರ್ಭದಲ್ಲಿ ಸಾಲ ಪಡೆದ ಗ್ರಾಹಕರಿಗೆ ಕಿರುಕುಳ ನೀಡುವುದು, ಬೆದರಿಸುತ್ತಿದ್ದು, ಇವುಗಳ ಕಿರುಕುಳಕ್ಕೆ ಬೇಸತ್ತು ದೇಶದಲ್ಲಿ ಸಾಕಷ್ಟು ಜನ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ.

ಕಡಿಮೆ ಆದಾಯವಿರುವ ಜನರನ್ನೇ ಗುರಿಯಾಗಿಸಿಕೊಳ್ಳುವ ಈ ಅಕ್ರಮ ಆ್ಯಪ್‌ಗಳು ಅವರನ್ನು ಸಾಲದ ದವಡೆಗೆ ಸಿಲುಕಿಸುತ್ತಿವೆ. ಗ್ರಾಹಕರು ಸಾಲ ಪಡೆಯುವಾಗ ನೀಡುವ ಗೌಪ್ಯ ಮಾಹಿತಿಗಳ ಮುಖಾಂತರ ಅವರ ಸಂಪರ್ಕ ಸಂಖ್ಯೆಗಳು, ಸಾಲ ಪಡೆದವರು ವಾಸವಿರುವ ಸ್ಥಳದ ಮಾಹಿತಿ, ಭಾವಚಿತ್ರಗಳೊಂದಿಗೆ ಅವರ ಸಂಪೂರ್ಣ ಮಾಹಿತಿಯನ್ನು ಕಲೆಹಾಕಿ ಸಾಲ ವಸೂಲಾತಿ ಸಂದರ್ಭದಲ್ಲಿ ಬೆದರಿಕೆ ಮೂಲಕ ಕಿರುಕುಳ ನೀಡುವುದು ಸಾಮಾನ್ಯವಾಗಿದೆ.
ಸರಕಾರ ಇಂತಹ ಸಾಲ ನೀಡುವ ಅಕ್ರಮ ಆ್ಯಪ್‌ಗಳ ಬಗ್ಗೆ ದೇಶದ ಜನತೆಯಲ್ಲಿ ನಿರಂತರ ಜಾಗೃತಿ ಮೂಡಿಸಬೇಕು. ಇಂತಹ ಆ್ಯಪ್‌ಗಳ ಬಗ್ಗೆ ಜನರೂ ಜಾಗರೂಕರಾಗಿರಬೇಕು. 

Similar News