ಗಂಡಾಳ್ವಿಕೆಯ ಮತ್ತೊಂದು ಸಾಕ್ಷಿ

Update: 2023-03-11 04:32 GMT

ಹಣೆಯಲ್ಲಿ ಕುಂಕುಮ ಇಲ್ಲ ಎಂದಕೂಡಲೇ ಗಂಡ ಬದುಕಿದ್ದಾನೆಯೇ ಎಂಬ ಪ್ರಶ್ನೆ ಮೂಡುವುದೇ ಪ್ರಾಚೀನ ಮನಸ್ಥಿತಿ ಅಲ್ಲವೇ? ಹಣೆ ಆಕೆಯದು, ಬದುಕು ಆಕೆಯದು. ತನ್ನ ಜೀವನೋಪಾಯದ ಹಾದಿಯಲ್ಲಿ ಆಕೆ ಸುರಿಸಿರಬಹುದಾದ ಬೆವರು ಹಣೆಯ ಕುಂಕುಮವನ್ನಷ್ಟೇ ಅಲ್ಲ ಆಕೆಯ ಜೀವನದ ಅಮೂಲ್ಯ ಕ್ಷಣಗಳನ್ನೂ ಅಳಿಸಿಹಾಕಿರಬಹುದಲ್ಲವೇ? ಇದು ಸಂಸದರ ಗಮನಕ್ಕೆ ಬರಬೇಕಿತ್ತಲ್ಲವೇ?

ಪಿತೃ ಪ್ರಧಾನತೆ ಮತ್ತು ಅತಿರೇಕದ ಮತಾಂಧತೆ ಒಟ್ಟಾದರೆ ಏನಾಗಬಹುದು ಎನ್ನುವುದಕ್ಕೆ ಕೋಲಾರದ ಸಂಸದ  ಮುನಿಸ್ವಾಮಿ ಸ್ಪಷ್ಟ ನಿದರ್ಶನ ಒದಗಿಸಿದ್ದಾರೆ. ಹೆಣ್ಣು ಮಕ್ಕಳು ಯಾವ ಉಡುಪು ಧರಿಸಬೇಕು, ಯಾವ್ಯಾವ ಸ್ಥಾವರಗಳಿಗೆ ಪ್ರವೇಶಿಸಬೇಕು, ಯಾವ ದೈಹಿಕ/ಜೈವಿಕ ಸ್ಥಿತಿಯಲ್ಲಿ ಪ್ರವೇಶಿಸಬೇಕು ಎಂದೆಲ್ಲಾ ಆಜ್ಞಾಪಿಸುತ್ತಿದ್ದ ಗಂಡು ಸಮಾಜ ಈಗ ಆಕೆಯ ಹಣೆಯ ಮೇಲಿನ ಬಿಂದಿ, ಚುಕ್ಕೆ, ಬೊಟ್ಟು, ತಿಲಕಗಳನ್ನೂ ನಿರ್ದೇಶಿಸಲು ಮುಂದಾಗಿದೆಯೇ? ಈ ಮಾತುಗಳು ಮಾನ್ಯ ಸಂಸದರ ಬಾಯಿಂದಲೇ ಹೊರಟಿದ್ದರೂ,  ಇದರ ಹಿಂದಿನ ಮನಸ್ಥಿತಿಗೆ ಶತಮಾನಗಳ ಪರಂಪರೆ ಇದೆ. ಒಂದು ಪುರುಷಾಧಿಪತ್ಯದ ನೆಲೆಯೂ ಇದೆ. 21ನೇ ಶತಮಾನದಲ್ಲೂ ಜೀವಂತವಾಗಿರುವ ಪಿತೃಪ್ರಧಾನತೆ ಮತ್ತು ಇದರಿಂದಲೇ ಪೋಷಿಸಲ್ಪಡುವ ಗಂಡಾಳ್ವಿಕೆಯ ಅಹಮಿಕೆಗೆ, ಸಂಪ್ರದಾಯ ಮತ್ತು ಪರಂಪರೆಗಳನ್ನು ಪೋಣಿಸಿದಾಗ ಇಂತಹ ವಿಕೃತ ಕಲ್ಪನೆಗಳು ಗರಿಗೆದರುತ್ತವೆ.

ಹೆಣ್ಣು ತನ್ನಿಚ್ಛೆಯಂತೆ ಬದುಕುವ ಹಕ್ಕನ್ನು ಈ ದೇಶದ ಸಂವಿಧಾನ ನೀಡಿದೆ. ತಾನು ಅನುಸರಿಸಲಿಚ್ಛಿಸುವ ಮತ-ಧರ್ಮವನ್ನು ಆಯ್ಕೆ ಮಾಡಿಕೊಳ್ಳುವಷ್ಟೇ, ಹೆಣ್ಣಿಗೆ ಆಯಾ ಧರ್ಮದ ಆಚರಣೆಗಳನ್ನು ಅನುಕರಿಸುವ/ ಧಿಕ್ಕರಿಸುವ ಹಕ್ಕೂ ಇರುತ್ತದೆ. ಸಂವಿಧಾನವನ್ನು ಪ್ರತಿನಿಧಿಸುವ ಮಾನ್ಯ ಸಂಸದರಿಗೆ ಕಾಣಬೇಕಾಗಿದ್ದುದು ಆಕೆಯ ಜೀವನೋಪಾಯದ ಹಾದಿಯಲ್ಲಿ ಎದುರಾಗಬಹುದಾದ ಸವಾಲುಗಳು, ಸಂಕಷ್ಟಗಳೇ ಹೊರತು ಆಕೆಯ ಬರಿದಾದ ಹಣೆ ಅಲ್ಲ.  ಹಣೆಯಲ್ಲಿ ಕುಂಕುಮ ಇಲ್ಲ ಎಂದಕೂಡಲೇ ಗಂಡ ಬದುಕಿದ್ದಾನೆಯೇ ಎಂಬ ಪ್ರಶ್ನೆ ಮೂಡುವುದೇ ಪ್ರಾಚೀನ ಮನಸ್ಥಿತಿ ಅಲ್ಲವೇ? ಹಣೆ ಆಕೆಯದು, ಬದುಕು ಆಕೆಯದು. ತನ್ನ ಜೀವನೋಪಾಯದ ಹಾದಿಯಲ್ಲಿ ಆಕೆ ಸುರಿಸಿರಬಹುದಾದ ಬೆವರು ಹಣೆಯ ಕುಂಕುಮವನ್ನಷ್ಟೇ ಅಲ್ಲ ಆಕೆಯ ಜೀವನದ ಅಮೂಲ್ಯ ಕ್ಷಣಗಳನ್ನೂ ಅಳಿಸಿಹಾಕಿರಬಹುದಲ್ಲವೇ? ಇದು ಸಂಸದರ ಗಮನಕ್ಕೆ ಬರಬೇಕಿತ್ತಲ್ಲವೇ? ತನ್ನ ಹಣೆ ಹೇಗಿರಬೇಕು ಎಂದು ನಿರ್ಧರಿಸುವ ಹಕ್ಕು ಆಕೆಗಿದೆ. ಆಳುವ ವರ್ಗದ ಪ್ರತಿನಿಧಿಯಾಗಿ ಆಕೆಯಂತಹ ಕೋಟ್ಯಂತರ ಅಸಹಾಯಕ ಮಹಿಳೆಯರ ಹಣೆಬರಹ ತಿದ್ದುವ/ಉಜ್ವಲಗೊಳಿಸುವ ಜವಾಬ್ದಾರಿ ಸಂಸದರ ಮೇಲಿರುತ್ತದೆ ಅಲ್ಲವೇ ?

ವ್ಯಕ್ತಿಗತ ಧಾರ್ಮಿಕ ಆಚರಣೆಗಳು ಮತ್ತು ಈ ಆಚರಣೆಗಳನ್ನು ಸಾಂಕೇತಿಕವಾಗಿ ಪ್ರತಿನಿಧಿಸುವ ಧಾರಣಾ ಚಿಹ್ನೆಗಳು ಹೆಣ್ಣು ಕುಲವನ್ನು ನಿರ್ಬಂಧಿಸುವ ಪ್ರಬಲ ಅಸ್ತ್ರಗಳಾಗಿಯೇ ಇತಿಹಾಸದುದ್ದಕ್ಕೂ ನಡೆದುಬಂದಿವೆ. ಗಂಡು ಸಮಾಜಕ್ಕೆ ಇರುವ ವಿನಾಯಿತಿ/ರಿಯಾಯಿತಿಗಳನ್ನು ಹೆಣ್ಣು ಕುಲಕ್ಕೆ ನೀಡುವಲ್ಲಿ ಪಿತೃಪ್ರಧಾನ ಮೌಲ್ಯಗಳು ಅಡ್ಡಿಯಾಗುತ್ತವೆ. ಪುರುಷಪ್ರಧಾನ ಸಮಾಜದ ಆಡಳಿತ ವ್ಯವಸ್ಥೆಯಲ್ಲಿ ಈ ನಿರ್ಬಂಧಕಗಳ ಮುಖಾಂತರವೇ ಹೆಣ್ಣಿನ ಮೇಲೆ ನಿಯಂತ್ರಣ ಸಾಧಿಸಲಾಗುತ್ತದೆ. ಅಂತರ್‌ರಾಷ್ಟ್ರೀಯ ಮಹಿಳಾ ದಿನದಂದೇ ಇಂತಹ ವಿಕೃತ ಪರಂಪರೆ ಮತ್ತು ಮನಸ್ಥಿತಿ ಪ್ರಕಟವಾಗಿರುವುದು ವಿಡಂಬನೆಯಷ್ಟೇ ಅಲ್ಲ ಕಾಲದ ದುರಂತವೂ ಹೌದು.

ಸನ್ಮಾನ್ಯ ಸಂಸದರು ಈ ದುರಂತವನ್ನು ಪ್ರತಿನಿಧಿಸಿದ್ದಾರೆ. ಜನಪ್ರತಿನಿಧಿಗಳಲ್ಲಿ ಸಾಂವಿಧಾನಿಕ ಮೌಲ್ಯಗಳು ಕುಸಿಯುತ್ತಿರುವಂತೆಯೇ ನೈತಿಕ ಮೌಲ್ಯಗಳೂ ಶಿಥಿಲವಾಗುತ್ತಿರುವುದರ ಸಂಕೇತವಾಗಿ ಈ ಪ್ರಸಂಗವನ್ನು ನೋಡಬೇಕಿದೆ. ಸಂಸದರ ಮಾತುಗಳು ಖಂಡನಾರ್ಹ ಆದರೆ ಈ ಹೇಳಿಕೆಯನ್ನು ಖಂಡಿಸಲೂ ಹಿಂಜರಿಯುವ ರಾಜಕೀಯ ನಾಯಕತ್ವದ ಬಗ್ಗೆ ಏನು ಹೇಳುವುದು? ಗಂಡಾಳ್ವಿಕೆಯ ಮನಸ್ಥಿತಿ ಕಲೆ-ಸಾಹಿತ್ಯ-ರಂಗಭೂಮಿಯನ್ನೂ ಆವರಿಸುತ್ತಿರುವ ಈ ಹೊತ್ತಿನಲ್ಲಿ ಈ ಪ್ರಕರಣ, ಸೂಕ್ಷ್ಮ ಸಂವೇದನೆಯ ಮನಸ್ಸುಗಳನ್ನು ಬಡಿದೆಬ್ಬಿಸಬೇಕಲ್ಲವೇ? ಇಲ್ಲಿರುವುದು ರಾಜಕೀಯ ಅಥವಾ ತತ್ವ ಸಿದ್ಧಾಂತ ಅಲ್ಲ, ನಾವು ಪ್ರಶ್ನಿಸಬೇಕಿರುವುದು ಹೆಣ್ತನವನ್ನು ಗೌರವಿಸದ ಗಂಡಾಳ್ವಿಕೆಯ ದರ್ಪ/ಅಹಮಿಕೆಗಳನ್ನು.

Similar News