×
Ad

ಪಿಎನ್‌ಬಿ ಹಗರಣದ ಆರೋಪಿ‌ ಮೆಹುಲ್‌ ಚೊಕ್ಸಿಯನ್ನು ರೆಡ್‌ ನೋಟಿಸ್‌ ಡೇಟಾಬೇಸ್‌ನಿಂದ ಕೈಬಿಟ್ಟ ಇಂಟರ್‌ಪೋಲ್‌

Update: 2023-03-21 13:09 IST

ಹೊಸದಿಲ್ಲಿ: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ಸಂಬಂಧಿಸಿದಂತೆ ರೂ. 13000 ಕೋಟಿ ಹಗರಣದಲ್ಲಿ ಬೇಕಾಗಿರುವ ವಜ್ರೋದ್ಯಮಿ ಮೆಹುಲ್‌ ಚೋಕ್ಸಿ ಹೆಸರನ್ನು ಇಂಟರ್‌ಪೋಲ್‌ನ (Interpol) ರೆಡ್‌ ನೋಟಿಸ್‌ (Red Notice) ಡೇಟಾಬೇಸ್‌ನಿಂದ ತೆಗೆದುಹಾಕಲಾಗಿದೆ ಎಂದು ತಿಳಿದು ಬಂದಿದೆ. ಲಿಯೋನ್‌ನಲ್ಲಿ ಮುಖ್ಯ ಕಾರ್ಯಾಲಯ ಹೊಂದಿರುವ ಇಂಟರ್‌ಪೋಲ್‌ಗೆ ಮೆಹುಲ್‌ ಚೊಕ್ಸಿ (Mehul Choksi) ಮಾಡಿದ ವಿನಂತಿಯ ಮೇರೆಗೆ ಈ ಕ್ರಮಕೈಗೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ. ಈ ಬೆಳವಣಿಗೆ ಕುರಿತು ಸಿಬಿಐ ಇನ್ನೂ ಪ್ರತಿಕ್ರಿಯಿಸಿಲ್ಲ.

ಮೆಹುಲ್‌ ಚೊಕ್ಸಿ ವಿರುದ್ಧ ಇಂಟರ್‌ಪೋಲ್‌ 2018 ರಲ್ಲಿ ರೆಡ್‌ ನೋಟಿಸ್‌ ಹೊರಡಿಸಿತ್ತು. ಈ ನೋಟಿಸ್‌ ಹೊರಡಿಸುವ ಹೊತ್ತಿಗೆ ಚೊಕ್ಸಿ ಭಾರತದಿಂದ ಪಲಾಯನಗೈದು ಆಂಟಿಗುವಾ ಮತ್ತು ಬಾರ್ಬುಡಾದಲ್ಲಿ ಪೌರತ್ವ ಪಡೆದು ಆಶ್ರಯ ಪಡೆದು 10 ತಿಂಗಳುಗಳಾಗಿತ್ತು.

ತನ್ನ ವಿರುದ್ಧ ರೆಡ್‌ ನೋಟಿಸ್‌ ಹೊರಡಿಸಲು ಸಿಬಿಐ ಸಲ್ಲಿಸಿದ್ದ ಅರ್ಜಿಯನ್ನು ಚೊಕ್ಸಿ ಪ್ರಶ್ನಿಸಿದ್ದನಲ್ಲದೆ ಇದು ರಾಜಕೀಯ ಷಡ್ಯಂತ್ರದ ಭಾಗ ಎಂದು ಬಣ್ಣಿಸಿದ್ದ. ಭಾರತದಲ್ಲಿನ ಜೈಲಿನ ಸ್ಥಿತಿಗಳು, ತನ್ನ ವೈಯಕ್ತಿಕ ಸುರಕ್ಷತೆ ಮತ್ತು ಆರೋಗ್ಯ ಕುರಿತೂ ಆತ ಪ್ರಶ್ನೆಗಳನ್ನೆತ್ತಿದ್ದ.

ಆತನ ಅಭಿಪ್ರಾಯಗಳನ್ನು ತಿರಸ್ಕರಿಸಿ ಇಂಟರ್‌ಪೋಲ್‌ ರೆಡ್‌ ಕಾರ್ನರ್‌ ನೋಟಿಸ್‌ ಹೊರಡಿಸಿತ್ತು.

ಈ ಪ್ರಕರಣದಲ್ಲಿ ಚೊಕ್ಸಿ ಹಾಗೂ ಆತನ ಸೋದರಳಿಯ ನೀರವ್‌ ಮೋದಿ ವಿರುದ್ಧ ಸಿಬಿಐ ಪ್ರತ್ಯೇಕ ಚಾರ್ಜ್‌ ಶೀಟ್‌ ಸಲ್ಲಿಸಿತ್ತು.

ಈ ನಡುವೆ ಚೊಕ್ಸಿ ಆಂಟಿಗುವಾ ಮತ್ತು ಬಾರ್ಬುಡಾದಿಂದ ತೆರಳಿ ನೆರೆಯ ಡೊಮಿನಿಶಿಯಾ ಪ್ರವೇಶಿಸಿದ್ದರೆ ಅಲ್ಲಿ ಅಕ್ರಮ ಪ್ರವೇಶಕ್ಕಾಗಿ ಆತನನ್ನು ವಶಪಡಿಸಿಕೊಳ್ಳಲಾಗಿತ್ತು. ಈ ವಿಚಾರ ಹೊರಬೀಳುತ್ತಿದ್ದಂತೆಯೇ ಸಿಬಿಐ ಡಿಐಜಿ ಶಾರ್ದಾ ರಾವತ್‌ ನೇತೃತ್ವದ ತಂಡ ಅಲ್ಲಿಗೆ ಧಾವಿಸಿ ರೆಡ್‌ ನೋಟಿಸ್‌ ಆಧಾರದಲ್ಲಿ ಆತನನ್ನು ಕರೆತರಲು ಪ್ರಯತ್ನಿಸಿತ್ತು.

ಆದರೆ ಚೊಕ್ಸಿ ವಕೀಲರು ಡೊಮಿನಿಶಿಯಾ ಹೈಕೋರ್ಟಿನಲ್ಲಿ ಹೇಬಿಯಸ್‌ ಕಾರ್ಪಸ್‌ ಅರ್ಜಿ ಸಲ್ಲಿಸಿದ್ದರಿಂದ ಹಾಗೂ ಅದನ್ನು ವಿಚಾರಣೆಗಾಗಿ ಸ್ವೀಕರಿಸಿದ್ದರಿಂದ ಆತನನ್ನು ಭಾರತಕ್ಕೆ ಕರೆತರುವ ಪ್ರಯತ್ನ ಕೈಗೂಡಿರಲಿಲ್ಲ.

ಡೊಮಿನಿಶಿಯಾದಲ್ಲಿ 51 ದಿನಗಳ ಕಾಲ ಜೈಲಿನಲ್ಲಿದ್ದ ನಂತರ ಜುಲೈ 2021 ರಂದು ಚೊಕ್ಸಿಗೆ ಜಾಮೀನು ದೊರಕಿತ್ತು  ಹಾಗೂ ಆಂಟಿಗುವಾಗೆ ತೆರಳಿ ಚಿಕಿತ್ಸೆ ಪಡೆಯಲು ಅನುಮತಿಸಲಾಗಿತ್ತು. ವೈದ್ಯರು ಆತ ದೈಹಿಕವಾಗಿ ದೃಢವಾಗಿದ್ದಾನೆಂದು ಪ್ರಮಾಣಪತ್ರ ನೀಡಿದ ನಂತರ ವಿಚಾರಣೆಗೆ ಹಾಜರಾಗಬೇಕೆಂದೂ ಅವನಿಗೆ ಸೂಚಿಸಲಾಗಿತ್ತು.

ಡೊಮಿನಿಶಿಯಾಗೆ ಅಕ್ರಮ ಪ್ರವೇಶ ಕುರಿತಂತೆ ಚೊಕ್ಸಿ ವಿರುದ್ಧದ ಪ್ರಕರಣವನ್ನು ನಂತರ ಕೈಬಿಡಲಾಗಿತ್ತು.

ಇದನ್ನೂ ಓದಿ: ಎಂಟು ವರ್ಷಗಳಲ್ಲಿ ಐಟಿ ಶೋಧದಲ್ಲಿ ವಶಪಡಿಸಿಕೊಂಡ ಸಂಪತ್ತು ಎಷ್ಟು ಗೊತ್ತೇ?

Similar News