ಆ್ಯಂಬುಲೆನ್ಸ್‌‌ನಲ್ಲಿ ಹತ್ತನೆ ತರಗತಿ ಪರೀಕ್ಷೆ ಬರೆದ ವಿದ್ಯಾರ್ಥಿನಿ!

Update: 2023-03-21 09:01 GMT

ಬಾಂದ್ರಾ: Anjuman-I-Islam ಶಾಲೆಯ ಹತ್ತನೆ ತರಗತಿ ವಿದ್ಯಾರ್ಥಿನಿಯಾದ ಮುಬಾಶಿರ ಸಾದಿಖಿ ಸಯ್ಯದ್ ಶುಕ್ರವಾರ ತನ್ನ ವಿಜ್ಞಾನ 1ರ ಪರೀಕ್ಷೆಯನ್ನು ಮುಗಿಸಿ ಮಧ್ಯಾಹ್ಯ 1:30ರ ಸಮಯದಲ್ಲಿ ರಸ್ತೆ ದಾಟುವಾಗ ಆಕೆಗೆ ಕಾರು ಗುದ್ದಿದ್ದರಿಂದ ಆಕೆಯ ಎಡಗಾಲಿಗೆ ತೀವ್ರ ಪೆಟ್ಟಾಗಿತ್ತು. ಅಂದೇ ಆಕೆಯ ಕಾಲಿಗೆ ಶಸ್ತ್ರಚಿಕಿತ್ಸೆಯೂ ನಡೆದಿತ್ತು. ಆದರೆ, ಶಸ್ತ್ರಚಿಕಿತ್ಸಾಗಾರಕ್ಕೆ ತೆರಳುವ ಮುನ್ನ ನಾನು ಪರೀಕ್ಷೆಗೆ ಹಾಜರಾಗುವುದನ್ನು ಮುಂದುವರಿಸಲು ಬಯಸುತ್ತೇನೆ ಎಂದು ಆಕೆ ತನ್ನ ಶಾಲೆಯ ಶಿಕ್ಷಕರಿಗೆ ತಿಳಿಸಿದ್ದಳು.

ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಪರೀಕ್ಷಾ ಕೇಂದ್ರದ ಉಸ್ತುವಾರಿ ಸಂದೀಪ್ ಕರ್ಮಲೆ, "ಅಪಘಾತವು ಪರೀಕ್ಷಾ ಕೇಂದ್ರವಿದ್ದ ಸೇಂಟ್ ಸ್ಟ್ಯಾನಿಸ್ಲಾಸ್ ಪ್ರೌಢಶಾಲೆ ಎದುರು ಸಂಭವಿಸಿತ್ತು. ನಾವು ಘಟನೆಯ ಕುರಿತು ಶಾಲಾ ಪ್ರಾಂಶುಪಾಲರನ್ನು ಸಂಪರ್ಕಿಸಿದಾಗ, ಅವರು ಆಕೆಯನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಿದರು" ಎಂದು ತಿಳಿಸಿದ್ದಾರೆ.

"ನಾವು ಮುಬಾಶಿರಾ ಹಾಗೂ ಆಕೆಯ ಕುಟುಂಬದ ಸದಸ್ಯರೊಂದಿಗೆ ಆಸ್ಪತ್ರೆಯಲ್ಲಿ ಮಾತುಕತೆ ನಡೆಸಿದೆವು. ಆಕೆ ತುಂಬಾ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದುದರಿಂದ ಆಕೆ ಉಳಿದ ಪತ್ರಿಕೆಗಳ ಪರೀಕ್ಷೆಗೆ ಹಾಜರಾಗುತ್ತಾಳೆ ಎಂಬ ವಿಶ್ವಾಸ ಎಲ್ಲ ಶಿಕ್ಷಕರಲ್ಲೂ ಇತ್ತು. ನಂತರ ನಾವು ಶಿಷ್ಟಾಚಾರ ಪೂರೈಸಲು ಮುಂದಾದೆವು" ಎಂದು ಡಾ. ಎಂಐಜೆ ಬಾಲಕಿಯರ ಪ್ರೌಢಶಾಲೆಯ ಪ್ರಾಂಶುಪಾಲೆ ಸಬಾ ಪಟೇಲ್ ಹೇಳಿದ್ದಾರೆ.

ಪರೀಕ್ಷಾ ಮಂಡಳಿಯ ಕಾರ್ಯದರ್ಶಿ ಸುಭಾಷ್ ಬೊರಾಸೆ ಅವರನ್ನು ಸಂಪರ್ಕಿಸಿದಾಗ, ಅವರು ವಿದ್ಯಾರ್ಥಿನಿಗೆ ಆ್ಯಂಬುಲೆನ್ಸ್‌ನಲ್ಲಿ ಪರೀಕ್ಷೆ ಬರೆಯಲು ಅನುಮತಿ ನೀಡಿದರು. ಮತ್ತವರು ಅದಕ್ಕಾಗಿ ಅಗತ್ಯ ವ್ಯವಸ್ಥೆಗಳನ್ನು ಮಾಡಿದರು" ಎಂದು ಸಂದೀಪ್ ಕರ್ಮಲೆ ತಿಳಿಸಿದ್ದಾರೆ.

"ಅನುಮತಿ ದೊರೆತ ನಂತರ ಶನಿವಾರ ಕೆಲವು ಶಿಕ್ಷಕರು ಆಕೆಯ ನಿವಾಸಕ್ಕೆ ಭೇಟಿ ನೀಡಿದಾಗ, ಆಕೆ ಅಧ್ಯಯನದಲ್ಲಿ ತೊಡಗಿರುವುದು ಕಂಡು ಬಂದಿತು" ಎಂದು ಸಬಾ ಪಟೇಲ್ ಹೇಳಿದ್ದಾರೆ.

"ಮುಬಾಶಿರಾಳ ಕುಟುಂಬ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆ. ಹೀಗಾಗಿ ಶಾಲಾ ಶಿಕ್ಷಕರು ಆಕೆಗೆ ತುರ್ತು ನೆರವು ಒದಗಿಸಿದರು. ಇದಾದ ನಂತರ ನಮ್ಮ ಎಚ್ ವಾರ್ಡ್‌ನಲ್ಲಿರುವ ಎಲ್ಲ ಶಾಲೆಗಳೂ ಇದೇ ಕ್ರಮವನ್ನು ಅನುಸರಿಸಿ, ಆಕೆಗೆ ಆರ್ಥಿಕ ನೆರವು ಒದಗಿಸಿದವು" ಎಂದು ಅವರು ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಮುಬಾಶಿರಾ, "ನನ್ನ ಶಾಲಾ ಶಿಕ್ಷಕರು ನಾನು ಪರೀಕ್ಷೆಗೆ ಹಾಜರಾಗಲು ತುಂಬಾ ಪ್ರೋತ್ಸಾಹ ನೀಡಿದರು. ಅಲ್ಲದೆ ನನ್ನ ಕುಟುಂಬದವರೂ ನನ್ನ ಬೆನ್ನಿಗೆ ಬಲವಾಗಿ ನಿಂತರು. ನನಗೆ ನೆರವು ನೀಡಿದ ನನ್ನ ಎಲ್ಲ ಶಿಕ್ಷಕರು ಹಾಗೂ ಆ್ಯಂಬುಲೆನ್ಸ್ ಒದಗಿಸಿದ ಕ್ಯಾನ್ಸರ್ ಏಡ್ ಆ್ಯಂಡ್ ರಿಸರ್ಚ್ ಫೌಂಡೇಶನ್‌ಗೆ ಕೃತಜ್ಞತೆ ಅರ್ಪಿಸುತ್ತೇನೆ. ಮುಂದಿನ ಪತ್ರಿಕೆಯನ್ನೂ ನಾನು ಇದೇ ರೀತಿ ಬರೆಯಲಿದ್ದೇನೆ" ಎಂದು ಹೇಳಿದ್ದಾಳೆ.

ಇದನ್ನೂ ಓದಿ: ನಿಮ್ಮಲ್ಲಿ 80,000 ಪೊಲೀಸರಿದ್ದರೂ ಅಮೃತ್ ಪಾಲ್ ನನ್ನು ಏಕೆ ಬಂಧಿಸಿಲ್ಲ: ಪಂಜಾಬ್ ಸರಕಾರಕ್ಕೆ ಹೈಕೋರ್ಟ್ ತರಾಟೆ

Similar News