ಮರಣದಂಡನೆ ಶಿಕ್ಷೆಯಾಗಿ ಗಲ್ಲಿಗೇರಿಸುವ ಬದಲು ಬೇರೆ ಪರ್ಯಾಯವಿದೆಯೇ?: ಚರ್ಚೆ ನಡೆಸಲು ಕೇಂದ್ರಕ್ಕೆ ಸುಪ್ರೀಂ ಸೂಚನೆ

Update: 2023-03-21 10:31 GMT

 ಹೊಸದಿಲ್ಲಿ: ಮರಣದಂಡನೆ ಶಿಕ್ಷೆಯಾಗಿ ಗಲ್ಲಿಗೇರಿಸುವ ಬದಲು "ಕಡಿಮೆ ನೋವು ನೀಡುವ" ಮರಣದಂಡನೆ ವಿಧಿಸುವ ಕುರಿತಂತೆ ಕೇಂದ್ರ ಸರ್ಕಾರ ಪರಿಗಣಿಸಬೇಕು ಎಂದು ಇಂದು ಹೇಳಿದ ಸುಪ್ರೀಂ ಕೋರ್ಟ್‌ ಈ ಕುರಿತು ಚರ್ಚೆ ನಡೆಸಿ ಗಲ್ಲಿಗೇರಿಸುವ ಪರ್ಯಾಯ ಕಡಿಮೆ ನೋವು ಉಂಟು ಮಾಡುವ ಸಾಯಿಸುವ ವಿಧಾನವಿದೆಯೇ ಎಂದು ಪರಿಶೀಲಿಸಬೇಕು ಎಂದು ಹೇಳಿದೆ.

ಗಲ್ಲಿಗೇರಿಸುವ ಪರಿಣಾಮ ಕುರಿತು ಯಾವುದಾದರೂ ಅಧ್ಯಯನ ನಡೆಸಲಾಗಿದೆಯೇ ಎಂದು ಕೋರ್ಟಿಗೆ ಮಾಹಿತಿ ನೀಡುವಂತೆಯೂ ಅಟಾರ್ನಿ ಜನರಲ್‌ ಆರ್‌ ವೆಂಕಟರಮಣಿ ಅವರಿಗೆ ಸೂಚಿಸಲಾಯಿತು.

ಮರಣದಂಡನ ಶಿಕ್ಷೆ ವಿಧಿಸಲ್ಪಟ್ಟವರಿಗೆ ನೋವುರಹಿತ ಸಾವು ಒದಗಿಸುವ ಕುರಿತಾದ ಅರ್ಜಿಯ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್‌ ಈ ಕುರಿತು ತಜ್ಞರ ಸಮಿತಿ ರಚಿಸಲು ಕೂಡ ತಾನು ಸಿದ್ಧ ಎಂದು ಹೇಳಿದೆ. ನೇಣುಗಂಬಕ್ಕೇರಿಸುವ ಬದಲು ಗುಂಡಿಕ್ಕುವುದು, ವಿಷಕಾರಿ ಇಂಜೆಕ್ಷನ್‌ ನೀಡುವುದು ಅಥವಾ ಇಲೆಕ್ಟ್ರಿಕ್‌ ಚೇರ್‌ ಬಳಸುವ ಕುರಿತೂ ಅರ್ಜಿಯಲ್ಲಿ ಹೇಳಲಾಗಿದೆ.

ಮರಣದಂಡನೆ ಪ್ರಕ್ರಿಯೆ ತುಂಬಾ ಕ್ರೂರವಾಗಿದೆ ಎಂದು ಅರ್ಜಿದಾರರ ಪರ ವಕೀಲ ರಿಶಿ ಮಲ್ಹೋತ್ರ ಹೇಳಿದರು.

ಅರ್ಜಿದಾರರ ಇತರ ಸಲಹೆಗಳ ಕುರಿತು ಮಾತನಾಡಿದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌,, ವಿಷಕಾರಿ ಇಂಜೆಕ್ಷನ್‌ ನೀಡುವುದು ಕೂಡ ತುಂಬಾ ನೋವು ನೀಡುತ್ತದೆ ಎಂದರಲ್ಲದೆ ಗುಂಡಿಕ್ಕುವುದು ಮಿಲಿಟರಿ ಆಡಳಿತಗಳಲ್ಲಿ ನಡೆಯುತ್ತದೆ, ಅದು ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು  ಹೇಳಿದರು.

ಮರಣದಂಡನೆ ಭಾಗವಾಗಿ ನೇಣುಗಂಬಕ್ಕೇರಿಸುವ ಬದಲು ಬೇರೆ ಅತ್ಯುತ್ತಮ ವಿಧಾನವಿದ್ದಲ್ಲಿ, ಈಗಿನ ವಿಧಾನವನ್ನು ಅಸಂವಿಧಾನಿಕ ಎಂದು ಘೋಷಿಸಬಹುದಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದರು.

Similar News