ಅಮಾನ್ಯೀಕರಣಗೊಂಡ ನೋಟುಗಳನ್ನು ವಾಪಸ್‌ ಪಡೆಯಲು ಕೋರಿ ಸಲ್ಲಿಸಿದ ಅರ್ಜಿಗಳನ್ನು ಪರಿಶೀಲಿಸಲು ಸುಪ್ರೀಂ ನಕಾರ

ಕೇಂದ್ರಕ್ಕೆ ಮನವಿ ಸಲ್ಲಿಸಲು ಸೂಚನೆ

Update: 2023-03-21 09:42 GMT

 ಹೊಸದಿಲ್ಲಿ: ಅಮಾನ್ಯೀಕರಣಗೊಂಡ ರೂ 1,000 ಮತ್ತು ರೂ 500 ಮುಖಬೆಲೆಯ ನೋಟುಗಳನ್ನು ವಾಪಸ್‌ ಪಡೆದುಕೊಳ್ಳಬೇಕೆಂಬ ಕುರಿತು ಜನರ ಅರ್ಜಿಗಳನ್ನು ಪರಿಗಣಿಸಲು ನಿರಾಕರಿಸಿದ ಸುಪ್ರೀಂ ಕೋರ್ಟ್‌ ಈ ಕುರಿತು ಸರ್ಕಾರಕ್ಕೆ ಮನವಿ ಸಲ್ಲಿಸುವಂತೆ ಅರ್ಜಿದಾರರಿಗೆ ಸೂಚಿಸಿದೆ.

"ಅಮಾನ್ಯೀಕರಣಗೊಂಡ ಕರೆನ್ಸಿ ನೋಟುಗಳನ್ನು ವಾಪಸ್‌ ಪಡೆದುಕೊಳ್ಳಬೇಕೆಂದು ಕೋರಿ ಸಲ್ಲಿಸಲಾಗುವ ಹಲವು ಅರ್ಜಿಗಳನ್ನು ಸಂವಿಧಾನದ 142ನೇ ವಿಧಿಯನ್ವಯ ನಮ್ಮ ಅಧಿಕಾರ ಬಳಸಿ ಪರಿಶೀಲಿಸಲು, ಸಂವಿಧಾನಿಕ ಪೀಠದ ತೀರ್ಪಿನ ನಂತರ ನಮಗೆ ಸಾಧ್ಯವಾಗದು," ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ನ್ಯಾಯಮೂರ್ತಿಗಳಾದ ಬಿ ಆರ್‌ ಗವಾಯಿ ಮತ್ತು ವಿಕ್ರಮ್‌ ನಾಥ್‌ ಅವರ ಪೀಠ ಕೇಂದ್ರಕ್ಕೆ ಸೂಚನೆ ನೀಡಿ ಈ ಪ್ರಕರಣ ಕುರಿತಂತೆ ಬರುವ ಮನವಿಗಳನ್ನು 12 ವಾರಗಳೊಳಗೆ ಪರಿಣಗಣಿಸಬೇಕೆಂದು ಸೂಚಿಸಿದೆ.

ಕೇಂದ್ರ ಕೈಗೊಂಡ ಕ್ರಮದ ಕುರಿತು ಅರ್ಜಿದಾರರಿಗೆ ಅಸಮಾಧಾನವಿದ್ದಲ್ಲಿ ಅವರು ನಂತರ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲು ಸ್ವತಂತ್ರರು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

Similar News