ರಾಹುಲ್ ಪೋಸ್ಟರ್‌ಗೆ ಬಿಜೆಪಿ, ಶಿವಸೇನೆ ಶಾಸಕರಿಂದ ಚಪ್ಪಲಿ ಏಟು: ಖಂಡನೆ

Update: 2023-03-23 17:03 GMT

ಮುಂಬೈ, ಮಾ. 23:  ಹಿಂದುತ್ವವಾದಿ ವಿ.ಡಿ. ಸಾವರ್ಕರ್ ವಿರುದ್ಧ ನೀಡಿದ್ದಾರೆ ಎನ್ನಲಾದ ಹೇಳಿಕೆ ಕುರಿತಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪೋಸ್ಟರ್‌ಗೆ ಬಿಜೆಪಿ ಹಾಗೂ ಶಿವಸೇನೆ ಶಾಸಕರು ಚಪ್ಪಲಿಯಂದ ಹೊಡೆದಿದ್ದಾರೆ. ಇದಕ್ಕೆ ಪ್ರತಿಪಕ್ಷ ಮಹಾ ವಿಕಾಸ ಅಘಾಡಿ ಶಾಸಕರು ಗುರುವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.   

ಬಿಜೆಪಿ, ಶಿವಸೇನೆ ಸದಸ್ಯರು ಮಹಾರಾಷ್ಟ್ರ ವಿಧಾನ ಸಭೆಯ ಮೆಟ್ಟಿಲುಗಳ ಮೇಲೆ ರಾಹುಲ್ ಪೋಸ್ಟರ್‌ಗೆ ಚಪ್ಪಲಿಯಿಂದ ಹೊಡೆದಿದ್ದಾರೆ. ಈ ಬಗ್ಗೆ ವಿಧಾನ ಸಭೆ ಸ್ಪೀಕರ್ ರಾಹುಲ್ ನರ್ವೇಕರ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಹಾಗೂ ತನಿಖೆ ನಡೆಸುವುದಾಗಿ ಭರವಸೆ ನೀಡಿದ್ದಾರೆ. 

ವಿಧಾನ ಸಭೆಯಲ್ಲಿ ಈ ವಿಷಯ ಎತ್ತಿದ ಕಾಂಗ್ರೆಸ್ ನಾಯಕ ಬಾಳಾಸಾಹೇಬ್ ಥೊರಾಟ್, ಈ ಕೃತ್ಯದಲ್ಲಿ ಭಾಗಿಯಾದವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದರು. ವಿಧಾನ ಭವನದ ಆವರಣದಲ್ಲಿ ಇಂತಹ ಘಟನೆ ನಡೆದಿರುವುದು ತಪ್ಪು ಎಂದು ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ. ಅಲ್ಲದೆ, ರಾಹುಲ್ ಗಾಂಧಿ ಅವರು ನೀಡಿದ ಹೇಳಿಕೆಯನ್ನು ಖಂಡಿಸಿದ್ದಾರೆ. 

ಸಾರ್ವರ್ಕರ್ ಅವರು 11 ವರ್ಷ ಅಂಡಮಾನ್ ಕಾರಾಗೃಹದಲ್ಲಿ ಇದ್ದರು. ಆದುದರಿಂದ ರಾಹುಲ್ ಗಾಂಧಿ ಅವರ ಹೇಳಿಕೆಯನ್ನು ಖಂಡಿಸಬೇಕಿದೆ ಎಂದು ಫಡ್ನಾವಿಸ್ ಹೇಳಿದ್ದಾರೆ.   ಸದನ ಮರು ಆರಂಭವಾದಾಗ ರಾಹುಲ್ ಗಾಂಧಿ ಅವರ ಹೇಳಿಕೆ ಕುರಿತಂತೆ ಬಿಜೆಪಿ ಶಾಸಕ ಅತುಲ್ ಭಟ್ಖಾಲ್ಕರ್ ಈ ವಿಷಯ ಎತ್ತಿದರು. ಕ್ರಿಮಿನಲ್ ಪ್ರಕರಣದಲ್ಲಿ ಜಾಮೀನಿನಲ್ಲಿ ಹೊರಗಿರುವ ವ್ಯಕ್ತಿ ಸ್ವಾತಂತ್ರ್ಯ ಹೋರಾಟಗಾರನನ್ನು ಅವಮಾನ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.

ಈ ನಡುವೆ ಸ್ವೀಕರ್ ನರ್ವೇಕರ್, ‘‘ನಾನು ಕೂಲಂಕುಷ ತನಿಖೆ ನಡೆಸಲಿದ್ದೇನೆ. ಇದು ಪುನರಾವರ್ತನೆಯಾಗಬಾರದು. ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು’’ ಎಂದರು. ಆಡಳಿತಾರೂಡ ಮೈತ್ರಿ ಒಕ್ಕೂಟದ ಶಾಸಕರನ್ನು ತರಾಟೆಗೆ ತೆಗೆದುಕೊಂಡ ಅವರು, ‘‘ನೀವು ಖಂಡಿಸಲು ಬಯಸಿದರೆ, ಸೂಕ್ತ ಸ್ಥಳದಲ್ಲಿ ಪ್ರತಿಭಟನೆ ಮಾಡಿ’’ ಎಂದರು.

Similar News