ನಿಷೇಧಿತ ಸಂಘಟನೆಯ ಸದಸ್ಯತ್ವವೊಂದೇ ಯುಎಪಿಎ ಅಡಿ ಅಪರಾಧ ಎಂದು ಪರಿಗಣಿಸಲು ಸಾಕು: ಸುಪ್ರೀಂ ಕೋರ್ಟ್‌

2011ರ ಆದೇಶ ವಾಪಸ್‌

Update: 2023-03-24 08:51 GMT

ಹೊಸದಿಲ್ಲಿ: ನಿಷೇಧಿತ ಸಂಘಟನೆಗಳ ಸದಸ್ಯತ್ವ ಹೊಂದಿದ ಮಾತ್ರಕ್ಕೆ ಒಬ್ಬರ ಮೇಲೆ ಯುಎಪಿಎ (UAPA) ಕಾಯಿದೆ ಹೇರಲು ಸಾಧ್ಯವಿಲ್ಲ, ಹಿಂಸೆಯಲ್ಲಿ ತೊಡಗಿದ್ದಾರೆಂಬುದಕ್ಕೆ ಸಾಕ್ಷ್ಯವಿದ್ದರೆ ಮಾತ್ರ ಸದಸ್ಯರ ಮೇಲೆ ಕಾಯಿದೆ ಹೇರಬಹುದಾಗಿದೆ ಎಂದು 2011 ರಲ್ಲಿ ತಾನು ನೀಡಿದ್ದ  ತೀರ್ಪನ್ನು ಸುಪ್ರೀಂ ಕೋರ್ಟ್‌ ವಾಪಸ್‌ ಪಡೆದಿದೆ.

ವ್ಯಾಪಕ ಪರಿಣಾಮ ಬೀರಬಹುದಾಗಿದೆ ಎಂದು ತಿಳಿಯಲಾದ ಸುಪ್ರೀಂ ಕೋರ್ಟ್‌ ಆದೇಶವನ್ನು ನ್ಯಾಯಮೂರ್ತಿಗಳಾದ ಎಂ ಆರ್‌ ಶಾ, ಸಿ ಟಿ ರವಿಕುಮಾರ್‌ ಮತ್ತು ಸಂಜಯ್‌ ಕಾರೋಲ್‌ ಅವರ ಪೀಠ ನೀಡಿದೆಯಲ್ಲದೆ ಯುಎಪಿಎ ಇದರ ಸೆಕ್ಷನ್‌ (ಎ)(ಐ) ಅನ್ನು ಎತ್ತಿ ಹಿಡಿದಿದೆ. ಇದರ ಪ್ರಕಾರ ನಿಷೇಧಿತ ಸಂಘಟನೆಯ ಸದಸ್ಯತ್ವ ಹೊಂದಿರುವುದು ಕಾನೂನಿನ ಪ್ರಕಾರ ಅಪರಾಧವಾಗುತ್ತದೆ.

2011 ರ ತೀರ್ಪನ್ನು ಆರುಪ್‌ ಭುಯನ್‌ ಮತ್ತು ಅಸ್ಸಾಂ ರಾಜ್ಯದ ನಡುವಿನ ಪ್ರಕರಣದಲ್ಲಿ ನ್ಯಾಯಮೂರ್ತಿಗಳಾದ ಮಾರ್ಕಾಂಡೇಯ ಕಟ್ಜು ಮತ್ತು ಗ್ಯಾನ್‌ ಸುಧಾ ಮಿಶ್ರಾ ಅವರ ಪೀಠ ನೀಡಿತ್ತು. ಉಗ್ರವಾದ ಮತ್ತು ವಿಧ್ವಂಸಕ ಕೃತ್ಯಗಳ ಕಾಯಿದೆಯಡಿ ಭುಯಾನ್‌ ಜಾಮೀನು ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ ತನ್ನ ತೀರ್ಪು ನೀಡಿತ್ತು, ಭುಯಾನ್‌ ನಿಷೇಧಿತ ಉಲ್ಫಾ ಸದಸ್ಯನೆಂಬ ಆರೋಪವಿತ್ತು.

ಅದೇ ವರ್ಷ ಇನ್ನೊಂದು ಇಂತಹುದೇ ಪ್ರಕರಣದಲ್ಲಿ ಯುಎಪಿಎ ಅಡಿಯಲ್ಲಿ ಪ್ರಕರಣ ಎದುರಿಸುತ್ತಿದ್ದ ವ್ಯಕ್ತಿಯ ಜಾಮೀನು ಅರ್ಜಿ ವಿಚಾರಣೆ ವೇಳೆಯೂ ಕೋರ್ಟ್‌ ಮೇಲಿನ ಮಾತುಗಳನ್ನೇ ಹೇಳಿತ್ತು.

ಈ ಪ್ರಕರಣವನ್ನು ವಿಸ್ತೃತ ಪೀಠದ ಮುಂದಿಡಬೇಕು ಏಕೆಂದರೆ ಹಿಂದಿನ ಪೀಠ ಕೇಂದ್ರದ ಅಭಿಪ್ರಾಯ ಆಲಿಸಿಲ್ಲ ಎಂದು ಸರ್ಕಾರ ಹೇಳಿತ್ತು. ಈ ಅಪೀಲನ್ನು ವಿಚಾರಣೆಗೆ 2014 ರಲ್ಲಿ ನ್ಯಾಯಮೂರ್ತಿಗಳಾದ ದೀಪಕ್‌ ಮಿಶ್ರಾ ಮತ್ತು ಎ ಎಂ ಸಪ್ರೆ ಅವರ ಪೀಠ ಒಪ್ಪಿತ್ತು. ಅದೇ ವರ್ಷ ವಿಸ್ತೃತ ಪೀಠಕ್ಕೆ ಪ್ರಕರಣ ವಹಿಸಲಾಗಿತ್ತು.

ಪ್ರಸ್ತುತ ತ್ರಿಸದಸ್ಯ ಪೀಠವು ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಮತ್ತು ವಕೀಲ ಸಂಜಯ್‌ ಪಾರಿಖ್‌ (ಎನ್‌ಜಿಒ ಒಂದರ ಇಂಟರ್‌ವೀನರ್)‌ ಅವರ ವಾದವನ್ನು ಆಲಿಸಿತ್ತು. 2011 ರಲ್ಲಿ ಜಾಮೀನು ಅರ್ಜಿಗಳ ವಿಚಾರಣೆಗೆ ಸಂಬಂಧಿಸಿದಂತೆ ಆದೇಶ ನೀಡಲಾಗಿತ್ತು ಮತ್ತು ನಿಬಂಧನೆಗಳ ಸಂವಿಧಾನಾತ್ಮಕ ಬದ್ಧತೆಯನ್ನು ಪ್ರಶ್ನಿಸಿಲ್ಲ ಎಂದು ಹೇಳಿತ್ತು.

ಕೇಂದ್ರದ ಅಭಿಪ್ರಾಯವನ್ನು ಈ ಹಿಂದೆ ಆಲಿಸದೇ ಇರುವುದಕ್ಕೂ ಹಿಂದಿನ ಪೀಠವನ್ನು ಈಗಿನ ಪೀಠ ತರಾಟೆಗೆ ತೆಗೆದುಕೊಂಡಿತು.  

Similar News