ಈ ಹಿಂದೆ ಯಾವೆಲ್ಲ ಭಾರತೀಯ ಸಂಸದರು, ಶಾಸಕರು ಅನರ್ಹಗೊಂಡಿದ್ದರು?: ಇಲ್ಲಿದೆ ಮಾಹಿತಿ

Update: 2023-03-25 07:01 GMT

ಹೊಸದಿಲ್ಲಿ: ಕ್ರಿಮಿನಲ್ ಮಾನಹಾನಿ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿರುವ ರಾಹುಲ್ ಗಾಂಧಿ ಲೋಕಸಭಾ ಸದಸ್ಯತ್ವದಿಂದ ಅಮಾನತುಗೊಂಡಿದ್ದು, ಈ ಹಿಂದೆ ಇಂತಹ ವಿರಳ ಪ್ರಕರಣಗಳಲ್ಲಿ ಅನರ್ಹತೆಗೊಳಗಾಗಿದ್ದ ಸಂಸದರು ಹಾಗೂ ಶಾಸಕರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.

ಜನಪ್ರತಿನಿಧಿ ಕಾಯ್ದೆ ಪ್ರಕಾರ, ಯಾವುದೇ ವ್ಯಕ್ತಿಗೆ ಎರಡು ವರ್ಷ ಅಥವಾ ಅದಕ್ಕೂ ಮೇಲ್ಪಟ್ಟ ಶಿಕ್ಷೆ ಘೋಷಣೆಯಾದರೆ, ಶಿಕ್ಷೆ ಘೋಷಣೆಯಾದ ದಿನದಿಂದಲೇ ತನ್ನ ಸ್ಥಾನದಿಂದ ಅನರ್ಹಗೊಳ್ಳುತ್ತಾನೆ ಹಾಗೂ ಶಿಕ್ಷೆ ಪೂರೈಸಿದ ನಂತರ ಆರು ವರ್ಷಗಳ ಕಾಲ ಯಾವುದೇ ಚುನಾವಣೆಗೆ ಸ್ಪರ್ಧಿಸಲು ಅನರ್ಹನಾಗಿರುತ್ತಾನೆ ಎಂದು hindustantimes.com ವರದಿ ಮಾಡಿದೆ.

ಕ್ರಿಮಿನಲ್ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿ ತಮ್ಮ ಸದಸ್ಯತ್ವದಿಂದ ಅಮಾನತಾದ ಸಂಸದರು, ಶಾಸಕರ ವಿವರ ಈ ಕೆಳಗಿನಂತಿದೆ:

ಲಾಲೂ ಪ್ರಸಾದ್ ಯಾದವ್:

ಸೆಪ್ಟೆಂಬರ್, 2013ರಲ್ಲಿ ಮೇವು ಹಗರಣದಲ್ಲಿ ತಪ್ಪಿತಸ್ಥರೆಂದು ಘೋಷಣೆಗೊಳಗಾದ ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ತಮ್ಮ ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಂಡಿದ್ದರು. ಅವರು ಬಿಹಾರದ ಸರಣ್ ಕ್ಷೇತ್ರದಿಂದ ಸಂಸದರಾಗಿದ್ದರು.

ಜೆ.ಜಯಲಲಿತಾ:

2014ರಲ್ಲಿ ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣದಲ್ಲಿ ಎಐಎಡಿಎಂಕೆ ಮುಖ್ಯಸ್ಥೆ ಜೆ.ಜಯಲಲಿತಾ ದೋಷಿಯೆಂದು ಘೋಷಣೆಗೊಳಗಾಗಿ, ನಾಲ್ಕು ವರ್ಷದ ಶಿಕ್ಷೆಗೆ ಗುರಿಯಾಗಿದ್ದರು. ಅವರು ಅನರ್ಹಗೊಂಡಾಗ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದರು ಮತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿ ಬಂದಿತ್ತು.

ಪಿ.ಪಿ.ಮುಹಮ್ಮದ್ ಫೈಸಲ್:

2023ರಲ್ಲಿ ಕೊಲೆ ಪ್ರಯತ್ನ ಪ್ರಕರಣದಲ್ಲಿ ದೋಷಿಯೆಂದು ಘೋಷಣೆಗೊಳಗಾಗಿ, ಹತ್ತು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ ಲಕ್ಷದ್ವೀಪದ ಎನ್‌ಸಿಪಿ ಸಂಸದ ಪಿ.ಪಿ.ಮುಹಮ್ಮದ್ ಫೈಸಲ್ ಅವರ ಲೋಕಸಭಾ ಸದಸ್ಯ ಸ್ವಯಂಚಾಲಿತವಾಗಿ ಅನರ್ಹಗೊಂಡಿತ್ತು. ಆದರೆ, ಕೇರಳ ಹೈಕೋರ್ಟ್ ಅವರ ವಿರುದ್ಧದ ತೀರ್ಪು ಹಾಗೂ ಶಿಕ್ಷೆ ಎರಡನ್ನೂ ಅಮಾನತುಗೊಳಿಸಿತ್ತು. ಅವರ ಪ್ರಕಾರ, ಲೋಕಸಭಾ ಕಾರ್ಯಾಲಯವು ಇನ್ನಷ್ಟೇ ಅವರ ಅನರ್ಹತೆ ರದ್ದತಿಯ ಕುರಿತು ಅಧಿಸೂಚನೆ ಹೊರಡಿಸಬೇಕಿದೆ.

ಅಝಂ ಖಾನ್:

2019ರಲ್ಲಿ ದ್ವೇಷ ಭಾಷಣ ಮಾಡಿದರೆಂದು ಎಸ್‌ಪಿ ನಾಯಕ ಅಝಂ ಖಾನ್ ಅವರನ್ನು ಉತ್ತರ ಪ್ರದೇಶದ ನ್ಯಾಯಾಲಯವೊಂದು ಅಕ್ಟೋಬರ್ 2022ರಲ್ಲಿ ದೋಷಿ ಎಂದು ಘೋಷಿಸಿ, ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದರಿಂದ ಅವರು ತಮ್ಮ ಶಾಸಕ ಸ್ಥಾನದಿಂದ ಅನರ್ಹಗೊಂಡಿದ್ದರು. ಅವರು ಉತ್ತರ ಪ್ರದೇಶದ ರಾಮ್‌ಪುರ ಸರ್ದಾರ್ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು.

ಅನಿಲ್ ಕುಮಾರ್ ಸಾಹ್ನಿ:

ವಂಚನೆಯ ಪ್ರಕರಣದಲ್ಲಿ ಬಿಹಾರದ ನ್ಯಾಯಾಲಯವೊಂದು ಅಕ್ಟೋಬರ್, 2022ರಲ್ಲಿ ದೋಷಿ ಎಂದು ಘೋಷಿಸಿ, ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದರಿಂದ ಆರ್‌ಜೆಡಿ ಶಾಸಕ ಅನಿಲ್ ಕುಮಾರ್ ಸಾಹ್ನಿ ತಮ್ಮ ಶಾಸಕ ಸ್ಥಾನದಿಂದ ಅನರ್ಹಗೊಂಡಿದ್ದರು. ಅವರು ಬಿಹಾರದ ಕುರ್ಹಾನಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು.

ವಿಕ್ರಂ ಸಿಂಗ್ ಸೈನಿ:

2013ರಲ್ಲಿ ನಡೆದಿದ್ದ ಮುಝಫ್ಫರ್ ನಗರ ಗಲಭೆ ಪ್ರಕರಣದಲ್ಲಿ ದೋಷಿಯೆಂದು ಘೋಷಣೆಯಾಗಿ, ಎರಡು ವರ್ಷಗಳ ಜೈಲು ಶಿಕ್ಷೆಗೊಳಗಾಗಿದ್ದ ಬಿಜೆಪಿ ಶಾಸಕ ವಿಕ್ರಂ ಸಿಂಗ್ ಸೈನಿ ಅಕ್ಟೋಬರ್, 2022ರಿಂದ ಅನರ್ಹಗೊಂಡಿದ್ದರು. ಅವರು ಮುಝಫ್ಫರ್‌ನಗರದ ಖತೌಲಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು.

ಪ್ರದೀಪ್ ಚೌಧರಿ:

ಹಲ್ಲೆ ಪ್ರಕರಣವೊಂದರಲ್ಲಿ ನ್ಯಾಯಾಲಯದಿಂದ ದೋಷಿ ಎಂದು ಘೋಷಣೆಯಾಗಿ, ಮೂರು ವರ್ಷಗಳ ಜೈಲು ಶಿಕ್ಷೆಗೊಳಗಾಗಿದ್ದ ಹರ್ಯಾಣದ ಕಾಂಗ್ರೆಸ್ ಶಾಸಕ ಪ್ರದೀಪ್ ಚೌಧರಿ, ಜನವರಿ, 2021ರಿಂದ ಅನರ್ಹಗೊಂಡಿದ್ದರು. ಅವರು ಕಾಲ್ಕಾ ಕ್ಷೇತ್ರದ ಶಾಸಕರಾಗಿದ್ದರು.

ಕುಲದೀಪ್ ಸಿಂಗ್ ಸೆಂಗರ್:

ಅತ್ಯಾಚಾರ ಪ್ರಕರಣದಲ್ಲಿ ನ್ಯಾಯಾಲಯದಿಂದ ದೋಷಿಯೆಂದು ಘೋಷಣೆಗೊಳಗಾಗಿದ್ದ ಉತ್ತರ ಪ್ರದೇಶದ ಶಾಸಕ ಕುಲದೀಪ್ ಸಿಂಗ್ ಸೆಂಗರ್ ಅವರನ್ನು ಫೆಬ್ರವರಿ, 2020ರಲ್ಲಿ ಅನರ್ಹಗೊಳಿಸಲಾಗಿತ್ತು. ಅವರು ಉನ್ನಾಂವ್‌ನ ಬಂಗಾರ್‌ಮಾವು ಕ್ಷೇತ್ರದಿಂದ ಚುನಾಯಿತರಾಗಿದ್ದರು. ಅವರು ದೋಷಿಯೆಂದು ಘೋಷಣೆಯಾಗುವುದಕ್ಕೂ ಮುನ್ನ ಬಿಜೆಪಿಯು ಅವರನ್ನು ಪಕ್ಷದಿಂದ ಉಚ್ಚಾಟಿಸಿತ್ತು.

ಅಬ್ದುಲ್ಲಾ ಅಝಂ ಖಾನ್:

15 ವರ್ಷದಷ್ಟು ಹಳೆಯದಾದ ಪ್ರಕರಣದಲ್ಲಿ ಉತ್ತರ ಪ್ರದೇಶ ನ್ಯಾಯಾಲಯವೊಂದು ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದರಿಂದ ಎಸ್‌ಪಿ ಶಾಸಕ ಅಬ್ದುಲ್ಲಾ ಅಝಂ ಖಾನ್ ಉತ್ತರ ಪ್ರದೇಶ ವಿಧಾನಸಭೆಯಿಂದ ಫೆಬ್ರವರಿ, 2023ರಿಂದ ಅನರ್ಹಗೊಂಡಿದ್ದರು. ಅವರು ಉತ್ತರ ಪ್ರದೇಶ ವಿಧಾನಸಭೆಯಲ್ಲಿ ರಾಮಪುರ ಜಿಲ್ಲೆಯನ್ನು ಪ್ರತಿನಿಧಿಸುತ್ತಿದ್ದರು.

ಅನಂತ್ ಸಿಂಗ್:

ತಮ್ಮ ನಿವಾಸದಲ್ಲಿ ಅಕ್ರಮ ಶಸ್ತ್ರಾಸ್ತ್ರಗಳು ಪತ್ತೆಯಾದ ಪ್ರಕರಣದಲ್ಲಿ ದೋಷಿ ಎಂದು ಘೋಷಿಸಲ್ಪಟ್ಟ ಆರ್‌ಜೆಡಿ ಶಾಸಕ ಅನಂತ್ ಸಿಂಗ್ ಅವರನ್ನು ಜುಲೈ, 2022ರಿಂದ ಬಿಹಾರ ವಿಧಾನಸಭೆಯಿಂದ ಅನರ್ಹಗೊಳಿಸಲಾಗಿತ್ತು. ಅವರು ಪಾಟ್ನಾ ಜಿಲ್ಲೆಯ ಮೊಕಾಮಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು.

Similar News