ಬಿಲ್ಕಿಸ್‌ ಬಾನು ಅತ್ಯಾಚಾರಿಗಳ ಅವಧಿಪೂರ್ಣ ಬಿಡುಗಡೆಯ ಬಗ್ಗೆ ಗುಜರಾತ್‌ ಹಾಗೂ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ನೋಟಿಸ್‌

ನಾವು ಕಾನೂನಿನ ಆಧಾರದ ಮೇಲೆ ನಿರ್ಧರಿಸುತ್ತೇವೆ, ಭಾವನೆಗಳ ಮೇಲಲ್ಲ ಎಂದ ನ್ಯಾಯಾಲಯ

Update: 2023-03-27 13:02 GMT

ಹೊಸದಿಲ್ಲಿ: 2002ರ ಗುಜರಾತ್‌ ಹತ್ಯಾಕಾಂಡ ಸಂದರ್ಭದಲ್ಲಿ ಬಿಲ್ಕಿಸ್ ಬಾನು ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಆಕೆಯ ಕುಟುಂಬ ಸದಸ್ಯರನ್ನು ಹತ್ಯೆಗೈದ 11 ಅಪರಾಧಿಗಳಿಗೆ ಕ್ಷಮಾದಾನ ನೀಡುವ ಗುಜರಾತ್ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಸೋಮವಾರ ನೋಟಿಸ್ ಜಾರಿ ಮಾಡಿದೆ.

ಅರ್ಜಿಗಳು ಭಾವನಾತ್ಮಕ ಮನವಿಗಳು ಎಂಬ ವಾದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳಾದ ಕೆ.ಎಂ.ಜೋಸೆಫ್ ಮತ್ತು ಬಿ.ವಿ.ನಾಗರತ್ನ ಅವರ ಪೀಠವು,  "ನಾವು ಕಾನೂನಿನ ಆಧಾರದ ಮೇಲೆ ಮಾತ್ರ ನಿರ್ಧರಿಸುತ್ತೇವೆ. ಭಾವನೆಗಳೊಂದಿಗೆ ಯಾವುದೇ ಸಂಬಂಧವಿಲ್ಲ." ಎಂದು ಹೇಳಿದೆ ಎಂದು barandbench.com ವರದಿ ಮಾಡಿದೆ.

ಬಿಲ್ಕಿಸ್ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ‌ ನಡೆದ ಅಪರಾಧವು ಘೋರವಾಗಿದೆ ಎಂದು ಹೇಳಿದ ನ್ಯಾಯಾಲಯವು, ವಿಚಾರಣೆಯ ಸಮಯದಲ್ಲಿ ಈ ವಿಷಯವನ್ನು ಕೇವಲ ಕಾನೂನಿನ ಆಧಾರದ ಮೇಲೆ ಮಾತ್ರ ನಿರ್ಧರಿಸಲಾಗುವುದು ಎಂದು ಒತ್ತಿ ಹೇಳಿದೆ.

ಪ್ರಕರಣದ 11 ಅಪರಾಧಿಗಳ ಬಿಡುಗಡೆಯನ್ನು ಇತರ ಪ್ರಕರಣಗಳಲ್ಲಿನ ಉಪಶಮನ ಮಾನದಂಡಗಳ ಪ್ರಕಾರ ಮಾಡಲಾಗಿದೆಯೇ ಎಂದು ಸುಪ್ರೀಂ ಕೋರ್ಟ್ ಇಂದು ಪ್ರಶ್ನಿಸಿದ್ದು, ಮುಂದಿನ ವಿಚಾರಣೆಯ ದಿನಾಂಕದಂದು ಎಲ್ಲಾ ಸಂಬಂಧಿತ ದಾಖಲೆಗಳನ್ನು ಹಾಜರುಪಡಿಸುವಂತೆ ಕೇಂದ್ರ ಮತ್ತು ಗುಜರಾತ್ ಸರ್ಕಾರಕ್ಕೆ ಸೂಚಿಸಿದೆ. 

"ನಮ್ಮ ಮುಂದೆ ಅನೇಕ ಕೊಲೆ ಪ್ರಕರಣಗಳಿವೆ, ಅಲ್ಲಿ ಅಪರಾಧಿಗಳು ವರ್ಷಗಳಿಂದ ಜೈಲುಗಳಲ್ಲಿ ಕೊಳೆಯುತ್ತಿದ್ದಾರೆ. ಈ ಪ್ರಕರಣಕ್ಕೆ ಇತರೆ ಪ್ರಕರಣಗಳಂತೆ ಮಾನದಂಡಗಳನ್ನು ಏಕರೂಪವಾಗಿ ಅನ್ವಯಿಸಲಾಗಿದೆಯೇ?" ಎಂದು ನ್ಯಾಯಮೂರ್ತಿ ಕೆ.ಎಂ.ಜೋಸೆಫ್ ಅವರನ್ನು ಪ್ರಶ್ನಿಸಿದ್ದಾರೆ.

ಕಳೆದ ವರ್ಷ ಸ್ವಾತಂತ್ರ್ಯ ದಿನಾಚರಣೆಯಂದು ಬಿಲ್ಕಿಸ್‌ ಬಾನು ಮೇಲೆ ಅತ್ಯಾಚಾರ ಎಸಗಿದ 11 ಜನರನ್ನು ಬಿಡುಗಡೆ ಮಾಡಿದ ಗುಜರಾತ್ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಗೆ ನ್ಯಾಯಮೂರ್ತಿ ಜೋಸೆಫ್ ಮತ್ತು ನ್ಯಾಯಮೂರ್ತಿ ಬಿವಿ ನಾಗರತ್ನ ಅವರ ವಿಶೇಷ ಪೀಠವನ್ನು ಸ್ಥಾಪಿಸಲಾಗಿದ್ದು, ನ್ಯಾಯಪೀಠವು ವಿಚಾರಣೆ ಆರಂಭಿಸಿದೆ.

Similar News