ಜಾಗತಿಕ ಪತ್ರಿಕಾ ಸ್ವಾತಂತ್ರ ಸೂಚ್ಯಂಕ ಶ್ರೇಯಾಂಕಗಳನ್ನು ಸರಕಾರವು ಒಪ್ಪುವುದಿಲ್ಲ: ಕೇಂದ್ರ ಸಚಿವ ಅನುರಾಗ ಠಾಕೂರ್

Update: 2023-03-27 16:13 GMT

ಹೊಸದಿಲ್ಲಿ,ಮಾ.27: ಜಾಗತಿಕ ಪತ್ರಿಕಾ ಸ್ವಾತಂತ್ರ ಸೂಚ್ಯಂಕ ಶ್ರೇಯಾಂಕಗಳನ್ನಾಗಲೀ ಅವುಗಳನ್ನು ನಿರ್ಧರಿಸುವ ವಿದೇಶಿ ಎನ್ಜಿಒ ‘ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್ ’ನ ತೀರ್ಮಾನಗಳನ್ನಾಗಲೀ ಸರಕಾರವು ಒಪ್ಪುವುದಿಲ್ಲ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ ಠಾಕೂರ್ ಅವರು ಸೋಮವಾರ ಸಂಸತ್ತಿನಲ್ಲಿ ಹೇಳಿದರು.

ಸರಕಾರವು ಶ್ರೇಯಾಂಕಗಳನ್ನು ಒಪ್ಪಿಕೊಳ್ಳದಿರುವುದಕ್ಕೆ ಅತ್ಯಂತ ಕಡಿಮೆ ಸ್ಯಾಂಪಲ್ ಗಾತ್ರ,ಪ್ರಜಾಪ್ರಭುತ್ವದ ಮೂಲಭೂತ ಅಂಶಗಳಿಗೆ ಕಡಿಮೆ ಅಥವಾ ಯಾವುದೇ ಮಹತ್ವ ನೀಡದಿರುವುದು,ಪ್ರಶ್ನಾರ್ಹವಾದ ಮತ್ತು ಪಾರದರ್ಶಕವಲ್ಲದ ಕಾರ್ಯವಿಧಾನದ ಅಳವಡಿಕೆ ಸೇರಿದಂತೆ ವಿವಿಧ ಕಾರಣಗಳಿವೆ ಎಂದು ಠಾಕೂರ್ ರಾಜ್ಯಸಭೆಯಲ್ಲಿ ಕಾಂಗ್ರೆಸ್ ಸಂಸದ ಅಖಿಲೇಶ ಪ್ರಸಾದ ಸಿಂಗ್ ಅವರ ಪ್ರಶ್ನೆಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದರು.

ಪತ್ರಕರ್ತರ ಸುರಕ್ಷತೆ ಕುರಿತಂತೆ ಠಾಕೂರ್,ಕೇಂದ್ರ ಸರಕಾರವು ಪತ್ರಕರ್ತರು ಸೇರಿದಂತೆ ದೇಶದ ಪ್ರತಿಯೊಬ್ಬ ಪ್ರಜೆಯ ಸುರಕ್ಷತೆ ಮತ್ತು ಭದ್ರತೆಗೆ ಅತ್ಯಂತ ಹೆಚ್ಚಿನ ಮಹತ್ವವನ್ನು ನೀಡುತ್ತದೆ. ವಿಶೇಷವಾಗಿ ಪತ್ರಕರ್ತರ ಸುರಕ್ಷತೆಗಾಗಿ ಅಕ್ಟೋಬರ್ 2017ರಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಲಹಾ ಸೂಚಿಯನ್ನು ಹೊರಡಿಸಲಾಗಿದ್ದು,ಮಾಧ್ಯಮ ವ್ಯಕ್ತಿಗಳ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಲು ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಅವುಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಭಾರತದ ಸಂವಿಧಾನದಡಿ ಅಭಿವ್ಯಕ್ತಿ ಸ್ವಾತಂತ್ಯದ ಖಾತರಿಯನ್ನು ನೀಡಲಾಗಿದೆಯೇ ಮತ್ತು ಹಕ್ಕು ಸಂಪೂರ್ಣವಾಗಿದೆಯೇ ಅಥವಾ ವಿದ್ಯುನ್ಮಾನ ಅಥವಾ ಮುದ್ರಣ ಮಾಧ್ಯಮಗಳಲ್ಲಿ ಅದರ ಬಳಕೆ ಅಥವಾ ದುರ್ಬಳಕೆಯ ಮೇಲೆ ಯಾವುದೇ ನಿರ್ಬಂಧವಿದೆಯೇ ಎಂಬ ಶಿವಸೇನೆ ಸಂಸದ ಅನಿಲ ದೇಸಾಯಿ ಅವರ ಇನ್ನೊಂದು ಪ್ರಶ್ನೆಗೆ ಉತ್ತರಿಸಿದ ಠಾಕೂರ್,ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರವು ವಿಧಿ 19(2)ರಲ್ಲಿ ಹೇಳಲಾಗಿರುವ ನಿರ್ಬಂಧಗಳೊಂದಿಗೆ ವಿಧಿ 19 (1)ರಡಿ ನಾಗರಿಕರಿಗೆ ಸಾಂವಿಧಾನಿಕವಾಗಿ ಖಾತರಿ ಪಡಿಸಲಾಗಿರುವ ಮೂಲಭೂತ ಹಕ್ಕು ಆಗಿದೆ ಎಂದು ತಿಳಿಸಿದರು.

ಪತ್ರಿಕಾ ಸ್ವಾತಂತ್ರವನ್ನು ಎತ್ತಿ ಹಿಡಿಯುವ ತನ್ನ ನೀತಿಗೆ ಅನುಗುಣವಾಗಿ ಸರಕಾರವು ಮಾಧ್ಯಮಗಳ ಕಾರ್ಯನಿರ್ವಹಣೆಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದೂ ಠಾಕೂರ ಹೇಳಿದರು.

Similar News