ಒಬಿಸಿಗಳನ್ನು ಬಿಜೆಪಿ ಓಲೈಸುತ್ತಿದ್ದರೂ ಭಾರತೀಯ ಸೇವಾ ಹುದ್ದೆಗಳಲ್ಲಿ ಪ್ರಾತಿನಿಧ್ಯ ಕುಸಿತ: ವರದಿ

Update: 2023-03-28 13:34 GMT

ಹೊಸದಿಲ್ಲಿ, ಮಾ.28: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಸಂಸತ್ತಿನಿಂದ ಅನರ್ಹಗೊಳಿಸಿದ್ದಕ್ಕಾಗಿ ತನ್ನ ಸರಕಾರದ ವಿರುದ್ಧ ಸಂಯೋಜಿತ ಪ್ರತಿಪಕ್ಷಗಳ ದಾಳಿಯನ್ನು ಎದುರಿಸಲು ಬಿಜೆಪಿಯು,ಅವರ ಹೇಳಿಕೆಯು ಇತರ ಹಿಂದುಳಿದ ವರ್ಗ (ಒಬಿಸಿ)ಗಳಿಗೆ ಮಾಡಿದ್ದ ಅವಮಾನವಾಗಿತ್ತು ಎಂದು ಬಿಂಬಿಸುತ್ತಿದೆ. ಇದೇ ವೇಳೆ ನರೇಂದ್ರ ಮೋದಿ ಸರಕಾರವು ರಾಜ್ಯಸಭೆಯಲ್ಲಿ ಒದಗಿಸಿರುವ ಮಾಹಿತಿಯು ಅಖಿಲ ಭಾರತ ಸೇವೆಗಳಲ್ಲಿ ಒಬಿಸಿಗಳು,ಎಸ್ಸಿಗಳು ಮತ್ತು ಎಸ್ಟಿಗಳು ಕಡಿಮೆ ಪ್ರಾತಿನಿಧ್ಯವನ್ನು ಹೊಂದಿದ್ದಾರೆ ಎನ್ನುವುದನ್ನು ತೋರಿಸಿದೆ.

ಕೇರಳದ ಸಂಸದ ಜಾನ್ ಬ್ರಿಟ್ಟಾಸ್ ಅವರ ಪ್ರಶ್ನೆಗೆ ನೀಡಿರುವ ಲಿಖಿತ ಉತ್ತರದಲ್ಲಿ ಸಹಾಯಕ ಸಿಬ್ಬಂದಿ ಸಚಿವ ಜಿತೇಂದ್ರ ಸಿಂಗ್ ಅವರು 2018 ಮತ್ತು 2022ರ ನಡುವೆ ಐಎಎಸ್,ಐಪಿಎಸ್ ಮತ್ತು ಭಾರತೀಯ ಅರಣ್ಯ ಸೇವೆ (ಐಒಎಫ್ಎಸ್)ಗಳಲ್ಲಿ ಎಷ್ಟು ಒಬಿಸಿ,ಎಸ್ಸಿ ಮತ್ತು ಎಸ್ಟಿ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗಿದೆ ಎನ್ನುವ ಬಗ್ಗೆ ವರ್ಷವಾರು ವಿವರಗಳನ್ನು ಒದಗಿಸಿದ್ದಾರೆ.
2018 ಮತ್ತು 2022ರ ನಡುವೆ ಐಎಎಸ್,ಐಪಿಎಸ್ ಮತ್ತು ಐಒಎಫ್ಎಸ್ ಹುದ್ದೆಗಳಿಗೆ ಒಟ್ಟು 4,365 ನೇಮಕಾತಿಗಳನ್ನು ಮಾಡಿಕೊಳ್ಳಲಾಗಿದ್ದು,ಈ ಪೈಕಿ ಕೇವಲ 695 ಅಭ್ಯರ್ಥಿಗಳು ಒಬಿಸಿ ಸಮುದಾಯಗಳಿಗೆ ಸೇರಿದವರಾಗಿದ್ದಾರೆ. 334 ಎಸ್ಸಿ ಮತ್ತು 166 ಎಸ್ಟಿ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ಅಂಕಿಅಂಶಗಳು ತೋರಿಸಿವೆ.

ಸರಕಾರದ ಉತ್ತರಕ್ಕೆ ಪ್ರತಿಕ್ರಿಯಿಸಿರುವ ಬ್ರಿಟ್ಟಾಸ್,ಇದು ಕಳವಳಕಾರಿಯಾಗಿದೆ. ಕಳೆದ ಐದು ವರ್ಷಗಳಲ್ಲಿ ಐಎಎಸ್,ಐಪಿಎಸ್ ಮತ್ತು ಐಒಎಫ್ಎಸ್ ಹುದ್ದೆಗಳಿಗೆ ಒಟ್ಟು ನೇಮಕಾತಿಗಳಲ್ಲಿ ಒಬಿಸಿಗಳ ಪಾಲು ಕೇವಲ ಶೇ.15.92ರಷ್ಟಿದ್ದರೆ,ಎಸ್ಸಿ/ಎಸ್ಟಿಗಳಿಗೆ ಸಂಬಂಧಿಸಿದಂತೆ ಇದು ಇನ್ನೂ ನಿರಾಶಾದಾಯಕವಾಗಿದೆ. ಈ ಸಮುದಾಯಗಳಿಗೆ ಅನುಕ್ರಮವಾಗಿ ಶೇ.7.65 ಮತ್ತು ಶೇ.3.80 ರಷ್ಟು ಪ್ರಾತಿನಿಧ್ಯ ದೊರಕಿದೆ. ದೇಶದ ಒಟ್ಟು ಜನಸಂಖ್ಯೆಯಲ್ಲಿ ಒಬಿಸಿಗಳು,ಎಸ್ಸಿ/ಎಸ್ಟಿಗಳ ಪ್ರಮಾಣಕ್ಕೆ ಈ ಸಂಖ್ಯೆಗಳನ್ನು ಹೋಲಿಸಿದರೆ ನೈಜ ದುರಾಚಾರವು ಬಯಲಾಗುತ್ತದೆ. 2011ರ ಜನಗಣತಿಯಂತೆ ದೇಶದ ಒಟ್ಟು ಜನಸಂಖ್ಯೆಯಲ್ಲಿ ಒಬಿಸಿಗಳು ಸುಮಾರು ಶೇ.41ರಿಂದ ಶೇ.52ರಷ್ಟಿದ್ದರೆ,ಎಸ್ಸಿಗಳು ಶೇ.16.6 ಮತ್ತು ಎಸ್ಟಿಗಳು ಶೇ.8.6ರಷ್ಟಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಅಖಿಲ ಭಾರತ ಸೇವೆಗಳಲ್ಲಿ ಈ ಸಮುದಾಯಗಳ ಗಮನಾರ್ಹವಾಗಿ ಕಡಿಮೆ ಪ್ರಾತಿನಿಧ್ಯವನ್ನು ಸರಿಪಡಿಸಲು ಸಮರೋಪಾದಿಯಲ್ಲಿ ಕ್ರಮವನ್ನು ಕೈಗೊಳ್ಳುವಂತೆ ತಾನು ಕೇಂದ್ರ ಸರಕಾರವನ್ನು ಆಗ್ರಹಿಸಿರುವುದಾಗಿಯೂ ಅವರು ಹೇಳಿದ್ದಾರೆ.

ಅಖಿಲ ಭಾರತೀಯ ಸೇವೆಗಳಲ್ಲಿ ಒಬಿಸಿಗಳ ಪ್ರಾತಿನಿಧ್ಯ ಕಡಿಮೆಯಾಗಿದ್ದರೂ ಈ ವರ್ಷದಲ್ಲಿ ನಡೆಯಲಿರುವ ಹಲವಾರು ಪ್ರಮುಖ ವಿಧಾನಸಭಾ ಚುನಾವಣೆಗಳ ಮೇಲೆ ಕಣ್ಣಿಟ್ಟಿರುವ ಆಡಳಿತಾರೂಢ ಬಿಜೆಪಿಯು ಇತ್ತೀಚಿಗೆ ಈ ಸಮುದಾಯಗಳ ಒಲೈಕೆಯಲ್ಲಿ ತೊಡಗಿದೆ. ಆದಿತ್ಯನಾಥ ಸರಕಾರವನ್ನು ‘ಠಾಕೂರ್-ಬ್ರಾಹ್ಮಣ ’ಸಂಯೋಜನೆ ಎಂದು ಬಣ್ಣಿಸುವುದನ್ನು ನಿವಾರಿಸಲು 2022ರಲ್ಲಿ ಬಿಜೆಪಿಯು ಒಬಿಸಿ ಸಮುದಾಯದ ಭೂಪೇಂದ್ರ ಚೌಧರಿಯವರನ್ನು ತನ್ನ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ನೇಮಿಸಿತ್ತು. ಕಳೆದ ವಾರ ಬಿಹಾರ ಮತ್ತು ಒಡಿಶಾದಲ್ಲಿ ತನ್ನ ರಾಜ್ಯ ಘಟಕಗಳ ಅಧ್ಯಕ್ಷರನ್ನಾಗಿ ಒಬಿಸಿ ನಾಯಕರನ್ನು ನೇಮಕಗೊಳಿಸಿದೆ.

Similar News