ರಾಹುಲ್‌ ಸದಸ್ಯತ್ವ ಅನರ್ಹ: ಹಳೆಯ ಬಿಜೆಪಿಗರಿಗೆ ತಂದಿದೆ ಅಸಮಾಧಾನ

Update: 2023-03-28 14:42 GMT

ಹೊಸದಿಲ್ಲಿ: ರಾಹುಲ್‌ ಗಾಂಧಿ ಅವರ ಸಂಸತ್‌ ಸದಸ್ಯತ್ವ ಸ್ಥಾನದಿಂದ ಅನರ್ಹಗೊಳಿಸಿರುವುದನ್ನು ವಿಪಕ್ಷಗಳು, ನ್ಯಾಯಾಂಗ ತಜ್ಞರು ರಾಜಕೀಯ ವಿಶ್ಲೇಷಕರು ಸೇರಿದಂತೆ ಹಲವು ಚಿಂತಕರು ಖಂಡಿಸಿದ್ದಾರೆ. ಇದೊಂದು ಅಪ್ರಜಾಪ್ರಭುತ್ವ ನಡೆಯೆಂದು ಕೇಂದ್ರ ಸರ್ಕಾರದ ವಿರುದ್ಧ ಆರೋಪಗಳು ಕೇಳಿ ಬರುತ್ತಿದೆ. ಈ ನಡುವೆ, ಬಿಜೆಪಿಯ ಮಾಜಿ ರಾಷ್ಟ್ರಾಧ್ಯಕ್ಷ ಜನಾ ಕೃಷ್ಣಮೂರ್ತಿಯವರ ಪುತ್ರ ಅನಂತ ನಾರಾಯಣ್ ಕೂಡಾ ರಾಹುಲ್ ಗಾಂಧಿಯನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಫೇಸ್‌ಬುಕ್‌ ಮೂಲಕ ಪ್ರತಿಕ್ರಿಯಿಸಿದ ಅನಂತ ನಾರಾಯಣ್‌ ಅವರು ರಾಹುಲ್‌ ಗಾಂಧಿ ಹೆಸರನ್ನು ಹಾಗೂ ಮೋದಿ ನಾಮವನ್ನು ಪರೋಕ್ಷವಾಗಿ ಉಲ್ಲೇಖಿಸಿ ಪ್ರಕರಣದ ಬಗ್ಗೆ ವಿಶ್ಲೇಷಣೆಯನ್ನು ನೀಡಿದ್ದಾರೆ. 

(ಅನಂತ ನಾರಾಯಣ್‌ ಅವರು ʼRʼ ಎಂದು ಸಂಬೋಧಿಸಿದ್ದನ್ನು ಇಲ್ಲಿ ರಾಹುಲ್‌ ಗಾಂಧಿ ಎಂದು ಪರಿವರ್ತಿಸಲಾಗಿದೆ. ಅವರ ಫೇಸ್‌ಬುಕ್‌ ಪೋಸ್ಟ್‌ನ ಪ್ರಮುಖ ಭಾಗವನ್ನು ಇಲ್ಲಿ ಕೊಡಲಾಗಿದೆ) 

(R) ಗಾಂಧಿ 2019 ರಲ್ಲಿ ಚುನಾವಣಾ ಪ್ರಚಾರದಲ್ಲಿ (M) ಮೋದಿ ಉಪನಾಮದ ಮೂವರನ್ನು ಉಲ್ಲೇಖಿಸುತ್ತಾರೆ. ಈ ಮೂವರು ವ್ಯಕ್ತಿಗಳಿಗೂ ಮೋದಿ ಎಂಬ ಉಪನಾಮ ಹೇಗಿದೆ ಎನ್ನುವುದನ್ನು ಪ್ರಶ್ನಿಸುತ್ತಾ, ಇನ್ನೆಷ್ಟು ಮೋದಿ ಹೆಸರಿನ ಕಳ್ಳರಿದ್ದಾರೆ ಎಂದು ಪ್ರಶ್ನಿಸುತ್ತಾರೆ. ಮೋದಿ ಹೆಸರಿನ ಶಾಸಕರೊಬ್ಬರು ರಾಹುಲ್‌ ಸಂಪೂರ್ಣ ಸಮುದಾಯವನ್ನು ನಿಂದಿಸಿದ್ದಾರೆಂದು ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುತ್ತಾರೆ. ಅದೇ ಶಾಸಕ ತಾವು ಹಾಕಿರುವ ಅರ್ಜಿಗೆ ಮೂರು ವರ್ಷಗಳ ಬಳಿಕ ತಡೆ ನೀಡುತ್ತಾರೆ. ವರ್ಷದ ಬಳಿಕ ಆ ಸ್ಟೇ ಆರ್ಡರ್‌ ಅನ್ನು ತೆರವುಗೊಳಿಸುತ್ತಾರೆ. ಫೆಬ್ರವರಿ 27 ರಂದು ಹೊಸ ನ್ಯಾಯಾಧೀಶರ ಎದುರಿಗೆ ಪ್ರಕರಣದ ವಿಚಾರಣೆ ಬರುತ್ತದೆ. ಮಾರ್ಚ್‌ನಲ್ಲಿ ತೀರ್ಪು ನೀಡುವ ಜಡ್ಜ್‌ ಮಾನನಷ್ಟ ಪ್ರಕರಣದಲ್ಲಿ ಕೊಡುವ ಅತ್ಯಂತ ಹೆಚ್ಚು ಅವಧಿಯ ಶಿಕ್ಷೆಯನ್ನು ವಿಧಿಸುತ್ತಾರೆ. 

ಯಾರಾದರೂ ಆ ಭಾಷಣವನ್ನು ಕೇಳಿದರೆ, ಇದು ಕೇವಲ ರಾಜಕೀಯ ಭಾಷಣವಾಗಿತ್ತು ಎನ್ನುವುದು ಸ್ಪಷ್ಟವಾಗುತ್ತದೆ. ಹಾಗೂ ಸಮುದಾಯಕ್ಕೆ ನೋವುಂಟು ಮಾಡುವ ಯಾವುದೇ ಉದ್ದೇಶವಿರಲಿಲ್ಲ ಎನ್ನುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಆದರೂ ರಾಹುಲ್‌ಗೆ ಎರಡು ವರ್ಷಗಳ ಸಜೆಯನ್ನು ವಿಧಿಸಲಾಗುತ್ತದೆ. ರಾಹುಲ್ ಗಾಂಧಿಗೆ ಶಿಕ್ಷೆ ನೀಡಲೇಬೇಕೆಂದಿದ್ದರೆ ಆರು ತಿಂಗಳ ಸಜೆಯನ್ನು ವಿಧಿಸಬಹುದಿತ್ತು. ಆದರೆ, ಕಾಕತಾಳೀಯವೆಂದರೆ, ಭಾರತೀಯ ನಿಯಮಗಳ ಪ್ರಕಾರ ಎರಡು ವರ್ಷಗಳ ಕಾಲ ಯಾವುದಾದರೂ ಎಂಪಿ, ಎಮ್‌ಎಲ್‌ಎ ಅಥವಾ ಎಮ್‌ಎಲ್‌ಸಿಗೆ ಶಿಕ್ಷೆ ವಿಧಿಸಿದರೆ ಆತ ತಕ್ಷಣದಿಂದ ಜಾರಿಯಾಗುವಂತೆ ಸದನದ ಸದಸ್ಯತ್ವ ಕಳೆದುಕೊಳ್ಳುತ್ತಾನೆ. 
 
ಅದರಂತೆ, ತೀರ್ಪು ಬಂದ 24 ಗಂಟೆಯೊಳಗೆ ರಾಹುಲ್‌ ಗಾಂಧಿ ಅನರ್ಹಗೊಳ್ಳುತ್ತಾರೆ. ಹಾಗೂ ಇನ್ನೂ 8 ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸಲು ಸಾಧ್ಯವಾಗದಂತಹ ಅಪಾಯವೂ ಇದೆ.

ನಿಮ್ಮ ರಾಜಕೀಯವನ್ನು ಒಂದು ಕ್ಷಣ ಮರೆತುಬಿಡಿ. ಮೇಲಿನ ಪ್ರಕರಣವು ಕಾನೂನಿಗನುಗುಣವಾಗಿ ನಡೆಯದ ಪೈಶಾಚಿಕ ರಾಜಕೀಯವಲ್ಲವೇ ? ನೂರಾರು ರಾಜಕಾರಣಿಗಳು ಮುಕ್ತರಾಗಿ ನಡೆದಾಡುತ್ತಿರಬೇಕಾದರೆ, ಕ್ಷುಲ್ಲಕ ನಿಂದನೆ ಪ್ರಕರಣಕ್ಕೆ ವಿರೋಧಪಕ್ಷದ ನಾಯಕ ಅನರ್ಹರಾದರಲ್ಲವೇ?
 
ಅಸಂಬದ್ಧ ಅನ್ನಿಸುವುದಿಲ್ಲವೇ?
ಎಷ್ಟೋ ಬಾರಿ ರಾಹುಲ್ ಎಂಬ ಹೆಸರನ್ನು ಪಪ್ಪುವಿಗೆ ಸಮೀಕರಿಸಲಾಗಿದೆ. ರಾಹುಲ್‌ ಯಾವುದಾದರೂ ಆಡಳಿತ ಪಕ್ಷದ ಪ್ರಮುಖ ನಾಯಕರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದರೆ, ಯಾವುದೇ ನ್ಯಾಯಾಲಯವು ಆಡಳಿತ ಪಕ್ಷದ ನಾಯಕನಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸುತ್ತದೆ ಎಂದು ನೀವು ಭಾವಿಸುತ್ತೀರಾ? ಇದಕ್ಕಾಗಿಯೇ ಈ ಪ್ರಕರಣವು ಬರಿಯ ರಾಜಕೀಯ ಮತ್ತು ಕಾನೂನಿಗೆ ಯಾವುದೇ ಸಂಬಂಧವಿಲ್ಲ ಎಂದು ನಾವು ಭಾವಿಸುತ್ತೇವೆ.

ನಾವೆಲ್ಲರೂ ರಾಜಕೀಯ ಮಾಡುತ್ತೇವೆ, ಆದರೆ ಈ ನಡೆ ಹಿಂದಿನ ಎಲ್ಲಾ ಸಭ್ಯತೆಯ ಮಾನದಂಡಗಳನ್ನು ದಾಟಿದೆ. ಇದರಿಂದಾಗಿಯೇ ಭಾರತದ ಬಹುತೇಕ ಸ್ವತಂತ್ರ ಮನಸ್ಸಿನ ಜನರು ಪದಗಳಲ್ಲಿ ಹೇಳಲಾಗದಷ್ಟು ಆಘಾತಕ್ಕೊಳಗಾಗಿದ್ದಾರೆ.

Full View

Similar News