ಕೋಮು ಸೌಹಾರ್ದತೆಯನ್ನು ಕಾಯ್ದುಕೊಳ್ಳಲು ದ್ವೇಷ ಭಾಷಣವನ್ನು ತ್ಯಜಿಸುವುದು ಅಗತ್ಯ: ಸುಪ್ರೀಂ ಕೋರ್ಟ್

Update: 2023-03-28 17:23 GMT

ಹೊಸದಿಲ್ಲಿ,ಮಾ.28: ದೇಶದಲ್ಲಿ ಕೋಮು ಸೌಹಾರ್ದತೆಯನ್ನು ಕಾಯ್ದುಕೊಳ್ಳಲು ದ್ವೇಷ ಭಾಷಣವನ್ನು ತ್ಯಜಿಸುವುದು ಮೂಲಭೂತ ಅಗತ್ಯವಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯವು ಮಂಗಳವಾರ ಅಭಿಪ್ರಾಯಿಸಿದೆ.


ದ್ವೇಷ ಭಾಷಣಗಳ ವಿರುದ್ಧ ಸಲ್ಲಿಸಲಾಗಿರುವ ಅರ್ಜಿಯೊಂದನ್ನು ಕೈಗೆತ್ತಿಕೊಂಡಿದ್ದ ನ್ಯಾಯಮೂರ್ತಿಗಳಾದ ಕೆ.ಎಂ.ಜೋಸೆಫ್ ಮತ್ತು ಬಿ.ವಿ.ನಾಗರತ್ನಾ ಅವರ ಪೀಠವು ಈ ಮೌಖಿಕ ಅಭಿಪ್ರಾಯವನ್ನು ವ್ಯಕ್ತಪಡಿಸಿತು.

ಕೇವಲ ದೂರುಗಳನ್ನು ದಾಖಲಿಸಿಕೊಳ್ಳುವುದರಿಂದ ದ್ವೇಷ ಭಾಷಣದ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಿಲ್ಲ ಎಂದು ಹೇಳಿದ ಪೀಠವು, ದೂರುಗಳ ಸಲ್ಲಿಕೆಯ ಬಳಿಕ ಯಾವ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಸಾಲಿಸಿಟರ್ ಜನರಲ್ ತುಷಾರ ಮೆಹ್ತಾರನ್ನು ಪ್ರಶ್ನಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ಮೆಹ್ತಾ,ದ್ವೇಷ ಭಾಷಣಗಳಿಗೆ ಸಂಬಂಧಿಸಿದಂತೆ 18 ಎಫ್ಐಆರ್ಗಳನ್ನು ದಾಖಲಿಸಲಾಗಿದೆ ಎಂದು ತಿಳಿಸಿದರು. 

ಮೆಹ್ತಾ ಮತ್ತು ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ.ನಟರಾಜ ಅವರ ಆಕ್ಷೇಪಗಳ ಹೊರತಾಗಿಯೂ ಪೀಠವು ಬುಧವಾರ ವಿಚಾರಣೆಯನ್ನು ನಿಗದಿಗೊಳಿಸಿತು. ಸಂವಿಧಾನವು ಭಾರತವನ್ನು ಜಾತ್ಯತೀತ ದೇಶವನ್ನಾಗಿ ಪರಿಗಣಿಸಿದೆ ಎಂದು ಕಳೆದ ವರ್ಷದ ಅಕ್ಟೋಬರ್ 21ರಂದು ಎತ್ತಿಹಿಡಿದಿದ್ದ ಸರ್ವೋಚ್ಚ ನ್ಯಾಯಾಲಯವು,ದ್ವೇಷ ಭಾಷಣದ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸುವಂತೆ ಮತ್ತು ದೂರು ಸಲ್ಲಿಕೆಗೆ ಕಾಯದೇ ದುಷ್ಕರ್ಮಿಗಳ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸುವಂತೆ ದಿಲ್ಲಿ,ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಸರಕಾರಗಳಿಗೆ ಆದೇಶಿಸಿತ್ತು.

ಈ ಅತ್ಯಂತ ಗಂಭೀರ ವಿಷಯದಲ್ಲಿ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ಆಡಳಿತದ ವಿಳಂಬವು ನ್ಯಾಯಾಂಗ ನಿಂದನೆ ಕ್ರಮವನ್ನು ಆಹ್ವಾನಿಸುತ್ತದೆ ಎಂದೂ ಸರ್ವೋಚ್ಚ ನ್ಯಾಯಾಲಯವು ಎಚ್ಚರಿಕೆ ನೀಡಿತ್ತು.

Similar News