ಮೂರು ಸಾಗರೋತ್ತರ ಸಂಸ್ಥೆಗಳೊಂದಿಗೆ ಅದಾನಿ ವ್ಯವಹಾರಗಳ ತನಿಖೆ ಸೆಬಿ ನಡೆಸುತ್ತಿದೆ: ವರದಿ

Update: 2023-04-02 14:53 GMT

ಹೊಸದಿಲ್ಲಿ: ಭಾರತದ ಮಾರುಕಟ್ಟೆ ನಿಯಂತ್ರಕ ಸೆಬಿ ಕನಿಷ್ಠ ಮೂರು ಸಾಗರೋತ್ತರ ಸಂಸ್ಥೆಗಳೊಂದಿಗಿನ ಅದಾನಿ ಗ್ರೂಪ್ ವ್ಯವಹಾರಗಳಲ್ಲಿ ‘ಸಂಬಂಧಿತ ಪಾರ್ಟಿ’ ವಹಿವಾಟು ನಿಯಮಗಳ ಸಂಭಾವ್ಯ ಉಲ್ಲಂಘನೆಯ ಕುರಿತು ತನಿಖೆ ನಡೆಸುತ್ತಿದೆ ಮತ್ತು ಈ ಸಂಸ್ಥೆಗಳು ಗೌತಮ್ ಅದಾನಿಯವರ ಸೋದರ ವಿನೋದ್ ಅದಾನಿ ಜೊತೆಗೆ ನಂಟುಗಳನ್ನು ಹೊಂದಿವೆ ಎಂದು ಮೂಲಗಳನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ.

ಕನಿಷ್ಠ ಎಂಟು ವ್ಯವಹಾರಗಳಲ್ಲಿ ವಿನೋದ ಅದಾನಿಯವರ ಸಂಭಾವ್ಯ ಪಾತ್ರದ ಕುರಿತು ತನ್ನ ಇತ್ತೀಚಿನ ತನಿಖಾ ವರದಿಯಲ್ಲಿ ದಿ ವಾಲ್ ಸ್ಟ್ರೀಟ್ ಜರ್ನಲ್ ಅವರನ್ನು ‘ನುಣುಚಿಕೊಳ್ಳುವ ’ ಸೋದರ ಎಂದು ಬಣ್ಣಿಸಿದೆ.

ಈ ಮೂರು ಸಂಸ್ಥೆಗಳು ಅದಾನಿ ಕಳೆದ 13 ವರ್ಷಗಳಲ್ಲಿ ಸ್ಥಾಪಿಸಿರುವ ಅನ್ಲಿಸ್ಟೆಡ್ ಅಂದರೆ ಶೇರು ವಿನಿಮಯ ಕೇಂದ್ರಗಳಲ್ಲಿ ಪಟ್ಟಿಯಾಗದಿರುವ ಕಂಪನಿಗಳೊಂದಿಗೆ ಹಲವಾರು ಹೂಡಿಕೆ ವಹಿವಾಟುಗಳನ್ನು ನಡೆಸಿವೆ ಎಂದು ಸುದ್ದಿಸಂಸ್ಥೆಯು ಹೇಳಿದೆ.

ಅದಾನಿ ಗ್ರೂಪ್ನಿಂದ ಬಹಿರಂಗ ಪಡಿಸುವಿಕೆಯ ಕೊರತೆಯು ಸಂಬಂಧಿತ ಪಾರ್ಟಿ ನಿಯಮಗಳನ್ನು ಉಲ್ಲಂಘಿಸಿವೆಯೇ ಎಂಬ ಬಗ್ಗೆ ಸೆಬಿ ತನಿಖೆ ನಡೆಸುತ್ತಿದೆ ಎನ್ನಲಾಗಿದೆ. ಭಾರತೀಯ ಕಾನೂನಿನಡಿ ನೇರ ಸಂಬಂಧಿಗಳು,ಪ್ರವರ್ತಕ ಗುಂಪುಗಳು ಮತ್ತು ಲಿಸ್ಟೆಡ್ ಕಂಪನಿಗಳ ಅಂಗಸಂಸ್ಥೆಗಳನ್ನು ಸಂಬಂಧಿತ ಪಾರ್ಟಿಗಳೆಂದು ಪರಿಗಣಿಸಲಾಗುತ್ತದೆ. ಇಂತಹ ಕಂಪನಿಗಳ ನಡುವಿನ ವಹಿವಾಟುಗಳನ್ನು ನಿಯಂತ್ರಕ ಮತ್ತು ಪಬ್ಲಿಕ್ ಫೈಲಿಂಗ್ಗಳಲ್ಲಿ ವಿಧ್ಯುಕ್ತವಾಗಿ ಬಹಿರಂಗಗೊಳಿಸಬೇಕು ಮತ್ತು ಆಗಾಗ್ಗೆ ಇದಕ್ಕೆ ಶೇರುದಾರರ ಅನುಮೋದನೆಯ ಅಗತ್ಯವಿದೆ.

ತನಿಖೆಗೆ ಆದೇಶಿಸಲಾಗಿದೆಯೇ ಎಂಬ ಕುರಿತು ಸುದ್ದಿಸಂಸ್ಥೆಯ ಪ್ರಶ್ನೆಗಳಿಗೆ ಸೆಬಿ ಉತ್ತರಿಸಿಲ್ಲ ಮತ್ತು ಅದರ ಅಧ್ಯಕ್ಷೆ ಮಾಧವಿ ಪುರಿ ಬುಚ್ ಅವರು ಕಳೆದ ವಾರ ಸುದ್ದಿಗೋಷ್ಠಿಯಲ್ಲಿ ಅದಾನಿ ಗ್ರೂಪ್ ತನಿಖೆಗಳ ಕುರಿತು ಕೇಳಿದಾಗ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

ಗೌತಮ ಅದಾನಿ ಮತ್ತು ವಿನೋದ ಅದಾನಿ ನಡುವಿನ ವ್ಯವಹಾರ ಸಂಬಂಧಗಳು ಚರ್ಚೆಯ ವಿಷಯಗಳಾಗಿವೆ ಮತ್ತು ಆರಂಭದಲ್ಲಿ ಗೌತಮ ಅದಾನಿ ಸೋದರನಿಂದ ಅಂತರವನ್ನು ಕಾಯ್ದುಕೊಂಡಿದ್ದರೂ ಬಳಿಕ ಕಳೆದ ತಿಂಗಳಿನಲ್ಲಿ ತನ್ನನ್ನು ಮತ್ತು ವಿನೋದ ಅದಾನಿಯನ್ನು ಒಂದೇ ಆಗಿ ನೋಡಬೇಕು ಎಂದು ಅದಾನಿ ಗ್ರೂಪ್ ಘೋಷಿಸಿತ್ತು. ಇದು ಅದಾನಿ ಗ್ರೂಪ್ನ ಕೆಲವು ಕಂಪನಿಗಳ ಫ್ರೀ-ಫ್ಲೋಟ್ (ಮಾರುಕಟ್ಟೆಯಲ್ಲಿ ವಹಿವಾಟಿಗೆ ಲಭ್ಯವಿರುವ ಕಂಪನಿಯ ಶೇರುಗಳು) ಸ್ಥಿತಿಗತಿಯ ಮೇಲೆ ಹೇಗೆ ಪರಿಣಾಮವನ್ನು ಬೀರಿರಬಹುದು ಎನ್ನುವುದನ್ನು ಸುದ್ದಿಜಾಲತಾಣ (The Wire) ವಿಶ್ಲೇಷಿಸಿದೆ. ಹಿಂಡೆನ್ಬರ್ಗ್ ರೀಸರ್ಚ್ ತನ್ನ ವಿರುದ್ಧ ಮಾಡಿರುವ ಆರೋಪಗಳನ್ನು ಈಗಾಗಲೇ ನಿರಾಕರಿಸಿರುವ ಅದಾನಿ ಗ್ರೂಪ್ ಕಾನೂನಿಗೆ ಅನುಗುಣವಾಗಿ ಸಾಗರೋತ್ತರ ಕಂಪನಿಗಳು ಸೇರಿದಂತೆ ಎಲ್ಲ ಸಂಬಂಧಿತ ಪಾರ್ಟಿ ವಹಿವಾಟುಗಳನ್ನು ತಾನು ಬಹಿರಂಗಗೊಳಿಸಿರುವುದಾಗಿ ಆಗ ಹೇಳಿತ್ತು.

ಫೋರ್ಬ್ಸ್ ನ ಇತ್ತೀಚಿನ ವರದಿಯೊಂದು ಗೌತಮ್ ಮತ್ತು ವಿನೋದ್ ಅದಾನಿಯವರ ವಿವಾದಾತ್ಮಕ ಗ್ರೂಪ್ ಅನ್ನು ಮತ್ತು ಅದು ವಿಫಲಗೊಳ್ಳದಿರುವಷ್ಟು ರಾಜಕೀಯ ಸಂಪರ್ಕವನ್ನು ಹೊಂದಿರಬಹುದು ಎನ್ನುವುದನ್ನು ಪ್ರಸ್ತಾಪಿಸಿದೆ. ವಿವಿಧ ತನಿಖೆಗಳನ್ನು ಪಟ್ಟಿ ಮಾಡಿರುವ ಅದು,ತನ್ನ ಯಶಸ್ಸಿಗಾಗಿ ತಾನು ಪ್ರಧಾನಿ ನರೇಂದ್ರ ಮೋದಿಯವರಿಗೆ ಋಣಿಯಾಗಿರಬೇಕು ಎಂಬ ಟೀಕಾಕಾರರ ಹೇಳಿಕೆಯ ಕುರಿತು ಅದಾನಿ ರಕ್ಷಣಾತ್ಮಕವಾಗಿದ್ದಾರೆ ಎಂದು ಬರೆದಿದೆ.

2007ರಲ್ಲಿ ಸೆಬಿ ಆರಂಭಿಸಿದ್ದ ಮತ್ತು 2014-15ರಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯವು ಕೈಗೊಂಡಿದ್ದ ತನಿಖೆಗಳು ಮತ್ತು ನಿಯಂತ್ರಕ ಕ್ರಮಗಳನ್ನು ಫೋರ್ಬ್ಸ್ ಪಟ್ಟಿ ಮಾಡಿದೆಯಾದರೂ, ಇದಾವ್ಯೆದೂ ಅದಾನಿಯ ನಾಗಾಲೋಟವನ್ನು ನಿಧಾನಿಸಿರಲಿಲ್ಲ ಎಂಬ ತೀರ್ಮಾನಕ್ಕೆ ಬಂದಿದೆ. ಸರ್ವೋಚ್ಚ ನ್ಯಾಯಾಲಯದ ಸಮಿತಿ ಮತ್ತು ಸೆಬಿ ತನಿಖೆ ಕುರಿತಂತೆ ಗೌತಮ ಅದಾನಿ ಆತ್ಮವಿಶ್ವಾಸವನ್ನು ಹೊಂದಿದ್ದಾರೆ ಮತ್ತು ಅವರ ಹಿಂದಿನ ದಾಖಲೆಗಳನ್ನು ಪರಿಗಣಿಸಿದರೆ ಇದರಲ್ಲಿ ಅಚ್ಚರಿಯೇನಿಲ್ಲ ಎಂದು ಫೋರ್ಬ್ಸ್ ಬರೆದಿದೆ.‘ಅದು ಕಾಲಮಿತಿಯಲ್ಲಿ ಅಂತ್ಯಗೊಳ್ಳುತ್ತದೆ ಮತ್ತು ಸತ್ಯವು ಉಳಿದುಕೊಳ್ಳುತ್ತದೆ ’ಎದು ಅದಾನಿ ಕಳೆದ ತಿಂಗಳು ಟ್ವೀಟಿಸಿದ್ದರು

Similar News