×
Ad

ಪಶ್ಚಿಮಬಂಗಾಳ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ 35 ಸ್ಥಾನ ನೀಡಿ: ಅಮಿತ್ ಶಾ ಕರೆ

Update: 2023-04-15 10:33 IST

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ  ಬಿಜೆಪಿಗೆ 35 ಸ್ಥಾನ ನೀಡಿ, ಆ ಮೂಲಕ ಮಮತಾ ಬ್ಯಾನರ್ಜಿ ಅವರ ಟಿಎಂಸಿ ಪಕ್ಷವನ್ನು ಉರುಳಿಸಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ  ಕರೆ ನೀಡಿದ್ದಾರೆ .

ರಾಜ್ಯದ 42 ಸಂಸದೀಯ ಸ್ಥಾನಗಳಲ್ಲಿ ಬಿಜೆಪಿಗೆ 35 ಸ್ಥಾನ ಗೆಲ್ಲಬೇಕೆಂಬ ಗುರಿಯನ್ನು ಶಾ ನಿಗದಿಪಡಿಸಿದ್ದಾರೆ. 2019ರಲ್ಲಿ ಬಿಜೆಪಿ 18 ಸ್ಥಾನಗಳನ್ನು ಗೆದ್ದಿತ್ತು.

ಬಿರ್ಭುಮ್ ಜಿಲ್ಲೆಯ ಸೂರಿಯಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಶಾ ಅವರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತೃಣಮೂಲ ಕಾಂಗ್ರೆಸ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಮತ್ತು ಅನುಬ್ರತಾ ಮೊಂಡಲ್ ಅವರನ್ನು ಗುರಿಯಾಗಿಸಿ ವಾಗ್ದಾಳಿ ನಡೆಸಿದರು.

ಜಾನುವಾರು ಕಳ್ಳಸಾಗಣೆ ತನಿಖೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ದಿಂದ  ಬಿರ್ಭುಮ್‌ನ ಪ್ರಬಲ ಟಿಎಂಸಿ ಜಿಲ್ಲಾಧ್ಯಕ್ಷ ಮೊಂಡಲ್ ರನ್ನು ಬಂಧಿಸಿ  ಜೈಲಿನಲ್ಲಿಡಲಾಗಿದೆ. ಮೊಂಡಲ್ ಅನುಪಸ್ಥಿತಿಯಲ್ಲಿ ಬಿಜೆಪಿಯು ಜಿಲ್ಲೆಯಲ್ಲಿ ನೆಲೆ ಕಾಣಲು ಯತ್ನಿಸುತ್ತಿದೆ.

"ದೀದಿ (ಮಮತಾ ಬ್ಯಾನರ್ಜಿ) ಹಾಗೂ  ಬತಿಜಾ (ಅಭಿಷೇಕ್ ಬ್ಯಾನರ್ಜಿ) ದುರಾಡಳಿತದಲ್ಲಿ ತೊಡಗಿದ್ದಾರೆ  ಇದಕ್ಕೆ  ಏಕೈಕ ಪರ್ಯಾಯ ಬಿಜೆಪಿ. ನಾವು ಗೋವು ಕಳ್ಳಸಾಗಾಣಿಕೆಯನ್ನು ನಿಲ್ಲಿಸಿದ್ದೇವೆ. ನಿಮಗೆ ಬಂಗಾಳದಲ್ಲಿ ನುಸುಳುವಿಕೆ ಬೇಕೇ? ಅದನ್ನು ತಡೆಯಲು ಬಿಜೆಪಿಗೆ ಮತ ಹಾಕುವುದು ಒಂದೇ ಮಾರ್ಗ’’ ಎಂದು ಶಾ ಹೇಳಿದರು.

"2024ರಲ್ಲಿ ನಮಗೆ 35 ಸೀಟು ನೀಡಿ  ಇದು  ಮಮತಾ ಬ್ಯಾನರ್ಜಿ ಸರಕಾರವನ್ನು ಉರುಳಿಸಲು ಸಾಕಾಗುತ್ತದೆ. ಬಂಗಾಳದಲ್ಲಿ ಭ್ರಷ್ಟಾಚಾರವಿದೆ. ಹಾಗೂ ಬಿಜೆಪಿಗೆ ಮಾತ್ರ ಇದನ್ನು ತಡೆಯಲು ಸಾಧ್ಯ'' ಎಂದು ಶಾ ಹೇಳಿದರು.

Similar News