ಶೆಲ್ಲಿ ಒಬೆರಾಯ್ ದಿಲ್ಲಿ ಮೇಯರ್ ಆಗಿ ಪುನರಾಯ್ಕೆ; ಬಿಜೆಪಿ ಅಭ್ಯರ್ಥಿಯಿಂದ ನಾಮಪತ್ರ ವಾಪಸ್
ಹೊಸದಿಲ್ಲಿ: ಆಮ್ ಆದ್ಮಿ ಪಕ್ಷದ ಶೆಲ್ಲಿ ಒಬೆರಾಯ್ ದಿಲ್ಲಿ ಮೇಯರ್ ಆಗಿ ಇನ್ನೊಂದು ಅವಧಿಗೆ ಆಯ್ಕೆಯಾಗಿದ್ದಾರೆ. ಇಂದು ಚುನಾವಣೆ ನಡೆಯಬೇಕಿದ್ದರೂ ಬಿಜೆಪಿ ಅಭ್ಯರ್ಥಿ ಶಿಖಾ ರಾಯ್ ತಮ್ಮ ನಾಮಪತ್ರ ವಾಪಸ್ ಪಡೆದುಕೊಂಡ ಕಾರಣ ಶೆಲ್ಲಿ ಪುನರಾಯ್ಕೆಗೊಂಡರು. ದಿಲ್ಲಿ ಮುನಿಸಿಪಲ್ ಕಾರ್ಪೊರೇಷನ್ ಸಭೆ ಇಂದು ಆರಂಭಗೊಂಡ ನಂತರವಷ್ಟೇ ಸ್ಪರ್ಧೆಯಿಂದ ಹಿಂದೆ ಸರಿಯುವ ನಿರ್ಧಾರವನ್ನು ಬಿಜೆಪಿ ಪ್ರಕಟಿಸಿತ್ತು.
ಆಪ್‌ನ ಮೊಹಮ್ಮದ್ ಇಕ್ಬಾಲ್ ಕೂಡ ಉಪಮೇಯರ್ ಆಗಿ ಇನ್ನೊಂದು ಅವಧಿಗೆ ಮುಂದುವರಿಯಲಿದ್ದಾರೆ.
ಸರ್ವಾನುಮತದಿಂದ ಪುನರಾಯ್ಕೆಗೊಂಡ ಬೆನ್ನಲ್ಲೇ ಮೇಯರ್ ಶೆಲ್ಲಿ ಅವರು ಸದನವನ್ನು ಮೇ 2ರ ತನಕ ಮುಂದೂಡಿದ್ದಾರೆ.
ಶೆಲ್ಲಿ ಒಬೆರಾಯ್ ಮತ್ತು ಮೊಹಮ್ಮದ್ ಅವರು ಫೆಬ್ರವರಿ 22ರಂದು ನಡೆದ ಚುನಾವಣೆಯಲ್ಲಿ ಮೇಯರ್ ಮತ್ತು ಉಪಮೇಯರ್ ಆಗಿ ಆಯ್ಕೆಯಾಗಿದ್ದರು. ಆಪ್ ಮತ್ತು ಬಿಜೆಪಿ ಸದಸ್ಯರ ನಡುವೆ ಉಂಟಾದ ಘರ್ಷಣೆಯಿಂದ ಮೇಯರ್ ಆಯ್ಕೆಯ ಮೂರು ಯತ್ನಗಳು ಅದಕ್ಕಿಂತ ಮುಂಚೆ ವಿಫಲವಾಗಿದ್ದವು.
ಪ್ರತಿ ಆರ್ಥಿಕ ವರ್ಷದ ಅಂತ್ಯದ ವೇಳೆ ಎಂಸಿಡಿ ಹೊಸ ಮೇಯರ್, ಉಪಮೇಯರ್ ಆಯ್ಕೆ ನಡೆಯುತ್ತದೆ.
ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಶೆಲ್ಲಿ ಒಬೆರಾಯ್ ಅವರನ್ನು ಅಭಿನಂದಿಸಿದ್ದಾರೆ. ಜನರ ನಿರೀಕ್ಷೆಯಂತೆ ಕಾರ್ಯಾಚರಿಸಲು ಶ್ರಮ ವಹಿಸಿ ಎಂದು ಅವರು ಹೇಳಿದ್ದಾರೆ.