×
Ad

12ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾದ 55 ವರ್ಷದ ಬಿಜೆಪಿಯ ಮಾಜಿ ಶಾಸಕ ರಾಜೇಶ್ ಮಿಶ್ರಾ

Update: 2023-04-26 14:49 IST

ಬರೇಲಿ: ಉತ್ತರ ಪ್ರದೇಶ ಪ್ರೌಢ ಶಿಕ್ಷಣ ಮಂಡಳಿ ಆಯೋಜಿಸಿದ್ದ 12ನೇ ತರಗತಿ ಪರೀಕ್ಷೆಯಲ್ಲಿ 500ಕ್ಕೆ 263 ಅಂಕ ಗಳಿಸುವ ಮೂಲಕ 55 ವರ್ಷದ ಬಿಜೆಪಿಯ ಮಾಜಿ ಶಾಸಕ ರಾಜೇಶ್ ಮಿಶ್ರಾ ಉತ್ತೀರ್ಣರಾಗಿದ್ದಾರೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.

2017-2022ರ ಅವಧಿಯಲ್ಲಿ ಬರೇಲಿ ಜಿಲ್ಲೆಯ ಬಿತ್ರಿ-ಚೈನ್‌ಪುರ್ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ರಾಜೇಶ್ ಮಿಶ್ರಾ, ಬಡವರಿಗೆ ನ್ಯಾಯ ಒದಗಿಸಲು ಇದೀಗ ಕಾನೂನು ಪದವಿ ಪಡೆಯುವ ಯೋಜನೆ ಹೊಂದಿದ್ದಾರೆ.

ಆದರೆ, ಮೂರು ವಿಷಯಗಳಲ್ಲಿ ತಾವು ಗಳಿಸಿರುವ ಅಂಕಗಳ ಬಗ್ಗೆ ಮಿಶ್ರಾಗೆ ತೃಪ್ತಿಯಾಗಿಲ್ಲ. ಈ ಕುರಿತು ಪ್ರತಿಕ್ರಿಯಿಸಿರುವ ಅವರು, "ಚಿತ್ರಕಲೆ ವಿನ್ಯಾಸ, ಪೌರ ಶಾಸ್ತ್ರ ಹಾಗೂ ಶಿಕ್ಷಣ ವಿಷಯದಲ್ಲಿ ನಾನು ಗಳಿಸಿರುವ ಅಂಕಗಳು ತೃಪ್ತಿ ತಂದಿಲ್ಲ. ನಾನು ಉತ್ತರ ಪತ್ರಿಕೆಗಳ ಮರು ಮೌಲ್ಯಮಾಪನ ಮಾಡಿಸುತ್ತೇನೆ" ಎಂದು ಹೇಳಿದ್ದಾರೆ.

ಮಾಜಿ ಬಿಜೆಪಿ ಶಾಸಕರೂ ಆದ ಮಿಶ್ರಾ, ಹಿಂದಿಯಲ್ಲಿ 57, ಪೌರ ಶಾಸ್ತ್ರದಲ್ಲಿ 47, ಶಿಕ್ಷಣದಲ್ಲಿ 42, ಚಿತ್ರಕಲೆ ವಿನ್ಯಾಸದಲ್ಲಿ 36 ಹಾಗೂ ಸಮಾಜ ಶಾಸ್ತ್ರದಲ್ಲಿ 81 ಅಂಕಗಳನ್ನು ಗಳಿಸಿದ್ದಾರೆ.

"ಎರಡು ವರ್ಷಗಳ ಹಿಂದೆ ನಾನು ಹತ್ತನೇ ತರಗತಿಯಲ್ಲಿ ಉತ್ತೀರ್ಣನಾಗಿದ್ದೆ ಮತ್ತೀಗ ಹನ್ನೆರಡನೇ ತರಗತಿಯಲ್ಲೂ ಉತ್ತೀರ್ಣನಾಗಿದ್ದೇನೆ. ನಾನೀಗ ಎಲ್‌ಎಲ್‌ಬಿ ಮುಂದುವರಿಸಲು ಬಯಸಿದ್ದು, ಅದರಿಂದ ನಾನು ಬಡವರಿಗೆ ನ್ಯಾಯ ಒದಗಿಸಬಹುದಾಗಿದೆ" ಎಂದು ಮಿಶ್ರಾ ಹೇಳಿಕೊಂಡಿದ್ದಾರೆ.

"ನಾನು ಶಾಸಕನಾಗಿದ್ದಾಗ ಸಮಾಜದಲ್ಲಿನ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಜನರಿಗೆ ಉತ್ತಮ ವಕೀಲ ದೊರೆಯದ ಕಾರಣ ನ್ಯಾಯ ದೊರೆಯುತ್ತಿಲ್ಲ ಎಂಬುದನ್ನು ಮನಗಂಡೆ. ನಾನು ಅಂತಹ ಜನರಿಗೆ ವಕೀಲನಾಗಲಿದ್ದೇನೆ" ಎಂದೂ ಹೇಳಿದ್ದಾರೆ.

Similar News