ಕೊಹ್ಲಿ- ಗಂಭೀರ್ ನಡುವೆ ಸಂಧಾನಕ್ಕೆ ರವಿಶಾಸ್ತ್ರಿ ಮಧ್ಯಸ್ಥಿಕೆ

Update: 2023-05-03 05:14 GMT

ಮುಂಬೈ: ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ವಿರಾಟ್ ಕೊಹ್ಲಿ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಮೆಂಟರ್ ಗೌತಮ್ ಗಂಭೀರ್ ನಡುವೆ ಸೋಮವಾರ ನಡೆದ ಐಪಿಎಲ್ ಪಂದ್ಯದ ವೇಳೆ ಮಾತಿನ ಚಕಮಕಿ ನಡೆದ ಬೆನ್ನಲ್ಲೇ, ಉಭಯ ದಿಗ್ಗಜರ ನಡುವೆ ರಾಜಿ ಸಂಧಾನಕ್ಕೆ ಮಧ್ಯಸ್ಥಿಕೆ ವಹಿಸಲು ಹಿರಿಯ ಕ್ರಿಕೆಟಿಗ ರವಿಶಾಸ್ತ್ರಿ ಮುಂದಾಗಿದ್ದಾರೆ.

ಉಭಯ ಕ್ರಿಕೆಟಿಗರ ನಡುವಿನ ಸಂಘರ್ಷ ಋಣಾತ್ಮಕ ಪ್ರಚಾರ ಪಡೆಯುತ್ತಿರುವ ಬೆನ್ನಲ್ಲೇ ಈ ಸಂಬಂಧ ಹೇಳಿಕೆ ನೀಡಿದ ರವಿಶಾಸ್ತ್ರಿ, "ಒಂದೆರಡು ದಿನದಲ್ಲಿ ಇದು ಸರಿಯಾಗಬಹುದು ಎನ್ನುವುದು ನನ್ನ ಯೋಚನೆ. ಇದನ್ನು ಉತ್ತಮವಾಗಿ ನಿಭಾಯಿಸಬಹುದಿತ್ತು ಎನ್ನುವುದು ಅವರಿಗೆ ಮನವರಿಕೆಯಾಗಲಿದೆ. ಇಬ್ಬರೂ ಒಂದೇ ರಾಜ್ಯದ ಪರ ಆಡಿದ್ದಾರೆ ಹಾಗೂ ಸಾಕಷ್ಟು ಕ್ರಿಕೆಟ್ ಆಡಿದವರು. ಗೌತಮ್ ಅವಳಿ ವಿಶ್ವಕಪ್ ವಿಜೇತರು. ವಿರಾಟ್ ಕೂಡಾ ಐಕಾನ್. ಇಬ್ಬರೂ ದೆಹಲಿಯವರು. ಇಬ್ಬರೂ ಜತೆಗೆ ಕುಳಿತು ಮಾತನಾಡಿ ಇದಕ್ಕೆ ಮಂಗಳ ಹಾಡಬೇಕು ಎನ್ನುವುದು ನನ್ನ ಬಯಕೆ" ಎಂದು ಶಾಸ್ತ್ರಿ ಸ್ಟಾರ್ ಸ್ಪೋರ್ಟ್ಸ್ ಜತೆ ಮಾತನಾಡುವ ವೇಳೆ ಸ್ಪಷ್ಟಪಡಿಸಿದ್ದಾರೆ.

ಐಪಿಎಲ್ ನೀತಿಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಇಬ್ಬರೂ ಆಟಗಾರರಿಗೆ ಪಂದ್ಯದ ಶುಲ್ಕದ ಶೇಕಡ 100ರಷ್ಟು ದಂಡವನ್ನು ವಿಧಿಸಲಾಗಿತ್ತು.

Similar News