ಒಕ್ಕೂಟ ವ್ಯವಸ್ಥೆಗೆ ತಕ್ಕುದಾದ ಸ್ಟಾಲಿನ್ ನಿಲುವು

Update: 2023-05-04 18:39 GMT

ಮಾನ್ಯರೇ,
  
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಕೇಂದ್ರದ ಎಲ್ಲ ಪರೀಕ್ಷೆಗಳನ್ನು 13 ಪ್ರಾದೇಶಿಕ ಭಾಷೆಗಳಲ್ಲೂ ನಡೆಸಿ ಎಂದು ಆಗ್ರಹಿಸಿದ್ದಾರೆ. (ಮೇ. 2.2023) ಇದು ತಮಿಳು ಭಾಷಾ ಅಸ್ಮಿತೆಗೆ ಸಾಕ್ಷಿಯಾಗಿದೆ. ಅಲ್ಲಿ ಕೇಂದ್ರದ ಹಿಂದಿ ಬೇಳೆ ಬೇಯುವುದಿಲ್ಲ. ಇದೇ ಹಕ್ಕೊತ್ತಾಯವನ್ನು ಎಲ್ಲಾ ಪ್ರಾದೇಶಿಕ ಭಾಷಾ ರಾಜಕಾರಣಿಗಳೂ ಮಾಡಬೇಕು. ಭಾಷಾ ಪ್ರಶ್ನೆ ಬಂದಾಗ ತಮಿಳುನಾಡು ಸಂಸದರು ಪಕ್ಷಭೇದವಿಲ್ಲದೆ ಒಮ್ಮತದಿಂದ ಹೋರಾಡುತ್ತಾರೆ. ಆದರೆ ಕರುನಾಡಿನ ರಾಜಕಾರಣಿಗಳಲ್ಲಿ ಈ ಆತ್ಮಪ್ರತ್ಯಯ ಇಲ್ಲ. ಉತ್ತರೋತ್ತರವೂ ನಮ್ಮ ರಾಜಕಾರಣಿಗಳು ರಾಷ್ಟ್ರೀಯ ಪಕ್ಷಗಳಿಗೆ ಡೊಗ್ಗು ಸಲಾಮು ಹಾಕುವುದರಲ್ಲೇ ಕಾಲ ತಳ್ಳುತ್ತಾರೆ. ಈ ನಿಟ್ಟಿನಲ್ಲಿ ರಾಷ್ಟ್ರಕವಿ ಕುವೆಂಪು ಹೇಳಿದ ಪಂಚ ಸೂತ್ರಗಳು ನೆನಪಿಗೆ ಬರುತ್ತವೆೆ:

‘‘1. ಪ್ರಾಂತೀಯ ಪ್ರಜಾಪ್ರಭುತ್ವ : (ರೀಜನಲ್ ಡೆಮಾಕ್ರಸಿ) ಎಂದರೆ ಭರತಖಂಡದ ಅಭಿವೃದ್ಧಿಗೆ ಪ್ರತಿಯೊಂದು ಪ್ರಾಂತಗಳು ಒಟ್ಟುಗೂಡಿ ಬೆಳೆಯಬೇಕು. ಭಾರತ ಜನನಿಯ ತನುಜಾತೆಯರಾದ ಪ್ರತಿಯೊಂದು ಪ್ರಾಂತವೂ ತಂತಮ್ಮ ಸಂಪನ್ಮೂಲಗಳಿಂದ ಸಂಪತ್ ಸಮೃದ್ಧಿಯನ್ನು ಸಾಧಿಸಬೇಕು. ಪ್ರತಿಯೊಂದು ಪ್ರಾಂತಕ್ಕೂ ಅದರದೇ ಆದ ಬೆಳೆ, ಕೈಗಾರಿಕೆ, ಆರ್ಥಿಕ ನೀತಿ, ನಡೆ-ನುಡಿ, ಸಾಹಿತ್ಯ ಸಂಸ್ಕೃತಿ ಮುಂತಾದುವುಗಳನ್ನು ಕಾಪಾಡಿಕೊಳ್ಳುವ ಹಕ್ಕು ರಾಜ್ಯಾಂಗದತ್ತವಾಗಿದೆ. 2. ಭಾಷಿಕ ಪ್ರಜಾಪ್ರಭುತ್ವ: (ಲಿಂಗ್ವಿಸ್ಟಿಕ್ ಡೆಮಾಕ್ರಸಿ) ಎಂದರೆ ಆಯಾ ದೇಶಭಾಷೆಗಳ ವಿಷಯದಲ್ಲಿ ಆಯಾ ಪ್ರದೇಶಗಳು ಎಷ್ಟು ಶ್ರಮಿಸಿದರೂ ಸಾಲದಾಗಿದೆ. ಎಷ್ಟು ಪ್ರೋತ್ಸಾಹ ಕೊಟ್ಟರೂ ಎಂದಿಗೂ ಅತಿರೇಕ ಎನ್ನಿಸಿಕೊಳ್ಳಲಾರದು. ಸರಕಾರಗಳಾಗಲೀ, ವಿದ್ಯಾಭ್ಯಾಸ ಇಲಾಖೆಗಳಾಗಲೀ, ವಿಶ್ವವಿದ್ಯಾನಿಲಯಗಳಾಗಲೀ, ಇತರ ಸಾಂಸ್ಕೃತಿಕ ಸಂಸ್ಥೆಗಳಾಗಲೀ, ಕಡೆಗೆ ವ್ಯಾಪಾರ ವಾಣಿಜ್ಯಾದಿ ಸಂಸ್ಥೆಗಳಾಗಲೀ ದೇಶ ಭಾಷೆಗೇ ಮೊತ್ತಮೊದಲನೆಯ ಸ್ಥಾನ ಕೊಡಬೇಕು. ಹಾಗೆ ಮಾಡದಿದ್ದರೆ ಪ್ರಜಾಪ್ರಭುತ್ವದ ಬುಡದ ಬೇರಿಗೆ ಬೆನ್ನೀರೆರೆದಂತಾಗುತ್ತದೆ.
 3. ಧಾರ್ಮಿಕ ಪ್ರಜಾಪ್ರಭುತ್ವ: (ರಿಲಿಜಿಯಸ್ ಡೆಮಾಕ್ರಸಿ) ನಮ್ಮದು ಜಾತ್ಯಾತೀತ ರಾಷ್ಟ್ರ. (ಸೆಕ್ಯುಲರ್ ಸ್ಟೇಟ್) ಎಂದರೆ ಧರ್ಮಬಾಹಿರ, ವಿದ್ವೇಷಕರ, ನಾಸ್ತಿಕ ಅಥವಾ ಚಾರ್ವಾಕ ಎಂದರ್ಥವಲ್ಲ. ಸರ್ವಧರ್ಮ ಸಮನ್ವಯ ರಾಷ್ಟ್ರ ಎಂದರ್ಥ. ಕಾವ್ಯವಾಣಿಯಲ್ಲಿ ಹೇಳುವುದಾದರೆ ಸರ್ವಜನಾಂಗದ ಶಾಂತಿಯ ತೋಟ.
4. ಶಿಕ್ಷಣದಲ್ಲಿ ಪ್ರಜಾಪ್ರಭುತ್ವ: ಭಾರತ ಒಕ್ಕೂಟದಲ್ಲಿ ಹದಿನಾಲ್ಕು ಪ್ರಾಂತಗಳಿವೆ. ಅವು ಪ್ರತಿಯೊಂದು ಇಂಗ್ಲಿಷಿಗೆ ಅಥವಾ ಹಿಂದಿಗೆ ಸರಿಮಿಗಿಲಾಗಿವೆ, ಹೆಗಲೆಣೆಯಾಗಿವೆ. ಉದಾಹರಣೆಗೆ ಕರ್ನಾಟಕದಲ್ಲಿ ಕನ್ನಡವೇ ಶಿಕ್ಷಣ ಮಾಧ್ಯಮವಾಗಬೇಕು. ಹಾಗೆ ತಮಿಳು, ತೆಲುಗು, ಬಂಗಾಳಿ ಇತರೇತರ ಭಾಷೆಗಳಿಗೂ ಇದೇ ಸೂತ್ರ ಅನ್ವಯ.
5. ಕೇಂದ್ರ ಮತ್ತು ರಾಜ್ಯಗಳ ಸಂಬಂಧ: ಯುನೈಟೆಡ್ ಸ್ಟೇಟ್ಸ್ ಆಫ್ ಇಂಡಿಯಾ ಎಂದರೆ ಮೇಲೆ ಹೇಳಿದಂತೆ ಪ್ರತಿಯೊಂದು ರಾಜ್ಯಕ್ಕೂ ಸ್ವಾಯುತ್ತತೆ ಅಮೆರಿಕದ States ಗಳಿಗಿದ್ದಂತೆ. ಅಲ್ಲಿ ಹೊಸ ಹೊಸ ಸಂಸ್ಥಾನಗಳು ಉದ್ಭವಿಸುತ್ತಲೇ ಇವೆ. ಅವುಗಳಿಗೂ ಸ್ವಾತಂತ್ರ್ಯವಿರುತ್ತದೆ, ರಾಷ್ಟ್ರಕ್ಕೂ ಭದ್ರತೆಯಿರುತ್ತದೆ. ನಮ್ಮದು United States of India   ಆಗಬೇಕೆಂಬುದೇ ನಮ್ಮ ದೃಢವಾದ ಅಭಿಪ್ರಾಯ.’’

ಪ್ರಸಕ್ತ ಅಧಿಕಾರಾರೂಢ ಬಿಜೆಪಿಯ ನಾಯಕರು ಏಕ ರಾಷ್ಟ್ರೀಯತೆ, ಏಕ ಧರ್ಮ ಏಕ ಭಾಷೆ, ಏಕ ಆರ್ಥಿಕ ವ್ಯವಸ್ಥೆ, ಮುಂತಾಗಿ ಸ್ಥಳೀಯತೆಯನ್ನು ಹತ್ತಿಕ್ಕುತ್ತಿದ್ದಾರೆ. ಇದು ಕಡೆಯದಾಗಿ ಭಾಷಾ ಸರ್ವಾಧಿಕಾರಕ್ಕೆ ಕಾರಣವಾಗುತ್ತದೆ. ಮುಂದೆ ಪ್ರಜಾಪ್ರಭುತ್ವದ ಮೌಲ್ಯಗಳು ಕುಸಿಯಬಹುದು. ಆದ್ದರಿಂದ ಪ್ರಾಂತೀಯ ರಾಜಕಾರಣಿಗಳು ಸ್ಟಾಲಿನ್ ಅವರ ನಿಲುವನ್ನು ಪಕ್ಷಭೇದ ಮರೆತು ಅನುಸರಿಸಬೇಕು.

Similar News