ಸತತ ಎರಡು ಬಾರಿ ಶೂನ್ಯಕ್ಕೆ ಔಟಾಗಿರುವ ರೋಹಿತ್ ವಿಶ್ರಾಂತಿ ಪಡೆಯುವುದು ಸೂಕ್ತ: ಸುನೀಲ್ ಗವಾಸ್ಕರ್

Update: 2023-05-07 09:58 GMT

ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ  ಶನಿವಾರ ನಡೆದ ಐಪಿಎಲ್ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಅವರು ಬ್ಯಾಟಿಂಗ್ ನಲ್ಲಿ ಮತ್ತೊಮ್ಮೆ ವಿಫಲರಾದರು.ಅವರು  ಸತತ 2ನೇ ಪಂದ್ಯದಲ್ಲಿ ಶೂನ್ಯಕ್ಕೆ ಔಟಾದರು. ರೋಹಿತ್ ಬ್ಯಾಟಿಂಗ್ ವೈಫಲ್ಯದ ಕುರಿತು ಲೆಜೆಂಡರಿ ಕ್ರಿಕೆಟಿಗ ಸುನೀಲ್ ಗವಾಸ್ಕರ್ ಗಮನ ಸೆಳೆಯುವ ಹೇಳಿಕೆ ನೀಡಿದ್ದಾರೆ.

ಸಾಂಪ್ರದಾಯಿಕ ಎದುರಾಳಿ ಮುಂಬೈ ಇಂಡಿಯನ್ಸ್  ವಿರುದ್ಧ  ಎಂ.ಎಸ್. ಧೋನಿ ನೇತೃತ್ವದ  ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಚೆನ್ನೈನ  ಎಮ್‌ಎ ಚಿದಂಬರಂ ಸ್ಟೇಡಿಯಂನಲ್ಲಿ ಜಯಭೇರಿ ಬಾರಿಸಿತು.

ಪವರ್‌ಪ್ಲೇಯ ಆರಂಭದಲ್ಲಿ ರೋಹಿತ್‌ರನ್ನು ಔಟ್  ಮಾಡುವ ಮೂಲಕ ಮುಂಬೈ ಇಂಡಿಯನ್ಸ್‌  ಮೇಲುಗೈ ಸಾಧಿಸಿತು.  ಇನಿಂಗ್ಸ್  ಮೂರನೇ ಓವರ್‌ನಲ್ಲಿ ರೋಹಿತ್  ಔಟಾಗುವುದರ ಹಿಂದೆ ಚೆನ್ನೈ ನಾಯಕ ಧೋನಿ ಸೂತ್ರಧಾರರಾದರು.

ಐಪಿಎಲ್ ನ 49 ನೇ ಪಂದ್ಯದಲ್ಲಿ  ಸಿಎಸ್‌ಕೆ ವೇಗಿ ದೀಪಕ್ ಚಹಾರ್ ಅವರು 3ನೇ ಕ್ರಮಾಂಕದಲ್ಲಿ  ಬ್ಯಾಟಿಂಗ್  ಮಾಡಿದ ರೋಹಿತ್  ರನ್ನು ಔಟ್ ಮಾಡಿದರು. 3 ಎಸೆತಗಳನ್ನು ಎದುರಿಸಿದರೂ ರನ್ ಖಾತೆ ತೆರಯುವಲ್ಲಿ ವಿಫಲರಾದರು.

 ಈಗ  ನಡೆಯುತ್ತಿರುವ ಐಪಿಎಲ್ ನಲ್ಲಿ  ರೋಹಿತ್ ಅವರ ಬ್ಯಾಟಿಂಗ್ ಫಾರ್ಮ್ ಅನ್ನು ಉಲ್ಲೇಖಿಸಿರುವ ಬ್ಯಾಟಿಂಗ್ ದಂತಕತೆ  ಗವಾಸ್ಕರ್ ಅವರು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ಗೆ ತಮ್ಮನ್ನು ತಾವು ಫಿಟ್ ಆಗಿ ಇರಿಸಿಕೊಳ್ಳಲು ವಿರಾಮ ತೆಗೆದುಕೊಳ್ಳುವಂತೆ ಭಾರತದ ನಾಯಕನನ್ನು ಆಗ್ರಹಿಸಿದ್ದಾರೆ.

ಐಪಿಎಲ್ ಋತುವಿನ ಮುಕ್ತಾಯದ ನಂತರ ನಾಯಕ ರೋಹಿತ್ ನೇತೃತ್ವದ ಟೀಮ್ ಇಂಡಿಯಾ ಜೂನ್ 7 ರಂದು ಓವಲ್‌ನಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಪ್ಯಾಟ್ ಕಮಿನ್ಸ್ ನೇತೃತ್ವದ ಆಸ್ಟ್ರೇಲಿಯಾವನ್ನು ಎದುರಿಸಲಿದೆ.

"ರೋಹಿತ್ ಸದ್ಯಕ್ಕೆ ವಿರಾಮ ತೆಗೆದುಕೊಳ್ಳಬೇಕು ಹಾಗೂ  ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ತನ್ನನ್ನು ತಾನು ಫಿಟ್ ಆಗಿಟ್ಟುಕೊಳ್ಳಬೇಕು ಎಂದು ನಾನು ಹೇಳುತ್ತೇನೆ. ಅವರು ಕೊನೆಯ ಕೆಲವು ಪಂದ್ಯಗಳಿಗೆ ಮತ್ತೆ ಹಿಂತಿರುಗಬಹುದು, ಆದರೆ ಇದೀಗ ಅವರು ಸ್ವಲ್ಪ ಸಮಯ ತೆಗೆದುಕೊಳ್ಳಬೇಕು'' ಎಂದು  ಗವಾಸ್ಕರ್ 'ಸ್ಟಾರ್ ಸ್ಪೋರ್ಟ್ಸ್‌'ಗೆ ತಿಳಿಸಿದರು.

ರೋಹಿತ್ ಐಪಿಎಲ್ ಇತಿಹಾಸದಲ್ಲಿ 16ನೇ ಬಾರಿ ಶೂನ್ಯಕ್ಕೆ ಔಟಾಗಿ ಅನಪೇಕ್ಷಿತ ದಾಖಲೆ ಬರೆದರು.

Similar News