×
Ad

ಶ್ರದ್ಧಾ ವಾಕರ್ ಹತ್ಯೆಯ ಆರೋಪವನ್ನು ನಿರಾಕರಿಸಿದ ಅಫ್ತಾಬ್ ಪೂನಾವಾಲಾ: ವಿಚಾರಣೆ ಎದುರಿಸುವೆ ಎಂದ ಆರೋಪಿ

Update: 2023-05-09 14:45 IST

ಹೊಸ ದಿಲ್ಲಿ: ಲಿವ್ ಇನ್ ಸಂಬಂಧ ಹೊಂದಿದ್ದ ತನ್ನ ಗೆಳತಿ ಶ್ರದ್ಧಾ ವಾಕರ್‌ಳನ್ನು ಹತ್ಯೆಗೈದು, ಆಕೆಯ ದೇಹವನ್ನು ತುಂಡುತುಂಡಾಗಿ ಕತ್ತರಿಸಿದ ಆರೋಪಕ್ಕೆ ಗುರಿಯಾಗಿರುವ ಅಫ್ತಾಬ್ ಪೂನಾವಾಲಾ ವಿರುದ್ಧ ದೆಹಲಿಯ ಸಾಕೇತ್ ನ್ಯಾಯಾಲಯವು ದೋಷಾರೋಪ ಪಟ್ಟಿಯನ್ನು ನಿಗದಿಗೊಳಿಸಿದೆ.

ಪೂನಾವಾಲಾ ವಿರುದ್ಧ ದಿಲ್ಲಿ ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಹತ್ಯೆ), 201 (ಸಾಕ್ಷ್ಯಾಧಾರಗಳ ನಾಶ)ದ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. ಈ ಸಂಬಂಧ ಪೊಲೀಸರು ಸಲ್ಲಿಸಿರುವ ಸಾಕ್ಷ್ಯಾಧಾರಗಳನ್ನು ಆಧರಿಸಿ ಸಾಕೇತ್ ನ್ಯಾಯಾಲಯವು ದೋಷಾರೋಪ ಪಟ್ಟಿಯನ್ನು ನಿಗದಿಗೊಳಿಸಿದೆ ಎಂದು ndtv.com ವರದಿ ಮಾಡಿದೆ.

ಆದರೆ, ಈ ಆರೋಪಗಳನ್ನು ಅಲ್ಲಗಳೆದಿರುವ ಪೂನಾವಾಲಾ, ಈ ಸಂಬಂಧ ವಿಚಾರಣೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ. ಪ್ರಕರಣದ ವಿಚಾರಣೆಯನ್ನು ಜೂನ್ 1ಕ್ಕೆ ಮುಂದೂಡಲಾಗಿದೆ.

ಜನವರಿ 24ರಂದು ನಡೆದಿದ್ದ ಶ್ರದ್ಧಾ ವಾಕರ್ ಹತ್ಯೆಯ ಸಂಬಂಧ ದಿಲ್ಲಿ ಪೊಲೀಸರು 6,629 ಪುಟಗಳ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

ಕಳೆದ ತಿಂಗಳು ನಾನು ನನ್ನ ಪುತ್ರಿಯ ಅಂತಿಮ ಕಾರ್ಯಗಳನ್ನು ನೆರವೇರಿಸಲು ಪ್ರಕರಣವನ್ನು ತ್ವರಿತವಾಗಿ ವಿಚಾರಣೆಗೊಳಪಡಿಸಬೇಕು ಎಂದು ಶ್ರದ್ಧಾ ವಾಕರ್ ಅವರ ತಂದೆ ವಿಕಾಸ್ ವಾಕರ್ ಆಗ್ರಹಿಸಿದ್ದರು. ಒಂದು ತಿಂಗಳೊಳಗೆ ವಿಚಾರಣೆ ಪೂರ್ಣಗೊಳ್ಳದಿದ್ದರೆ ನಾನು ಉಪವಾಸ ಸತ್ಯಾಗ್ರಹ ನಡೆಸುವುದಾಗಿಯೂ ಅವರು ಬೆದರಿಕೆ ಒಡ್ಡಿದ್ದರು.

Similar News