ಕಾಪು ಕ್ಷೇತ್ರದಲ್ಲಿ ಬಿರುಸಿನ ಶಾಂತಿಯುತ ಮತದಾನ
ಕಾಪು, ಮೇ 10: ಕಾಪು ಕ್ಷೇತ್ರದಿಂದ ರಾಜ್ಯ ವಿಧಾನಸಭೆಗೆ ಇಂದು ನಡೆದ ಚುನಾವಣೆ ಶಾಂತಿಯುತವಾಗಿ ನಡೆದು ಮುಕ್ತಾಯಗೊಂಡಿದೆ. ಬೆಳಗ್ಗೆ 7 ಗಂಟೆಯಿಂದ ಕ್ಷೇತ್ರದ 208 ಮತಗಟ್ಟೆಗಳಲ್ಲಿಯೂ ಯಾವುದೇ ಗೊಂದಲ ಗಳಿಲ್ಲದೆ ಮತದಾನ ಆರಂಭವಾಗಿದ್ದು, ಉತ್ಸಾಹದಿಂದಲೇ ಜನ ಮತಗಟ್ಟೆಯತ್ತ ಆಗಮಿಸಿ ಹಕ್ಕು ಚಲಾಯಿಸಿದರು.
ಕಾಪು, ಮೂಳೂರು ಮತಗಟ್ಟೆಯಲ್ಲಿ ಮತಯಂತ್ರ ದೋಷದಿಂದ ಮತದಾನಕ್ಕೆ ಕೊಂಚ ಮಟ್ಟಿನ ತೊಂದರೆಯಾ ದರೂ ಬಳಿಕ ಮತಯಂತ್ರ ಬದಲಿಸಿ ಮತ ಚಲಾವಣೆ ಸಾಂಗವಾಗಿ ಮುಂದುವರಿಯಿತು. ಪ್ರತಿ ಗಂಟೆಯೂ ಮತದಾನ ಏರಿಕೆ ಕಂಡಿದ್ದು, ಜನರನ್ನು ವಾಹನಗಳ ಮೂಲಕ ಮತಗಟ್ಟೆಗೆ ಕರೆತಂದು ಮತಚಲಾವಣೆಗೆ ಪ್ರೇರೇಪಿಸುತ್ತಿದ್ದ ದೃಶ್ಯ ಎಲ್ಲೆಡೆ ಕಂಡು ಬಂತು. ಉಳಿದಂತೆ ಯುವ ಮತದಾರರು ಪ್ರಥಮವಾಗಿ ಹಕ್ಕು ಚಲಾಯಿಸಿದ ಖುಷಿಯಲ್ಲಿದ್ದರೆ, ವಯೋವೃದ್ಧರೂ ಮನೆಯವರ ಆಸರೆ ಮತ್ತು ಗಾಲಿಕುರ್ಚಿಯಲ್ಲಿ ಮತಗಟ್ಟೆಗೆ ತೆರಳಿ ಹಕ್ಕು ಚಲಾವಣೆ ಮಾಡಿದರು.
ಪಡುಬಿದ್ರಿಯ ಉರ್ದು ಶಾಲೆಯಲ್ಲಿ ನಡೆದ ಮತದಾನದ ವೇಳೆ 129 ಮತದಾನವಾದ ಬಳಿಕ ಇವಿಎಂ ಯಂತ್ರ ಕೈಕೊಟ್ಟಿತು. ಕೂಡಲೇ ಮತಯಂತ್ರವನ್ನು ಬದಲಾಯಿಸಲಾುತು. 145ನೇ ಮಲ್ಲಾರು ಜನರಲ್ ಶಾಲೆಯಲ್ಲಿ ನಡೆದ ಮತದಾನದಲ್ಲಿ ಸಂಜೆಯ ವೇಳೆ ಶೇ.75ರಷ್ಟು ಮತದಾನವಾಗಿದ್ದು, ತಾಂತ್ರಿಕ ಕಾರಣಗಳಿಂದ ಯಂತ್ರ ಕೈಕೊಟ್ಟಿತು. ಕೂಡಲೇ ಅದನ್ನು ಸರಿಪಡಿಸಲಾಯಿತು.
ಮದುಮಗಳ ಮತದಾನ: ಅವರಾಲು ಮಟ್ಟುನ ಮೆಲಿಟಾ ಸುವಾರಿಸ್ ಅವರಿಗೆ ಕಾರ್ಕಳ ಮಿಯಾರಿನ ವರನೊಂದಿಗೆ ಬುಧವಾರ ಮದುವೆ ನಿಶ್ಚಯವಾಗಿತ್ತು. ಕಾರ್ಕಳ ಮಿಯಾರಿನ ಚರ್ಚ್‌ವೊಂದರಲ್ಲಿ ಮದುವೆಗೆ ಮದುವಣಗಿತ್ತಿಯಾಗಿ ಹೊರಟಿದ್ದ ಅವರು ಮನೆಯವರೊಂದಿಗೆ ಅವರಾಲು ಮಟ್ಟು ವೆಂಕಟರಮಣ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿ ಬಳಿಕ ಮದುವೆ ಶಾಸ್ತ್ರದಲ್ಲಿ ಪಾಲ್ಗೊಳ್ಳಲು ಚರ್ಚ್‌ಗೆ ತೆರಳಿದರು.
ಮತದಾನದ ಬಳಿಕ ಮೃತ್ಯು: ಹೆಜಮಾಡಿಯ ಎನ್.ಎಸ್. ರೋಡ್ ನಿವಾಸಿ ವೀಲ್‌ಚಯರ್‌ನಲ್ಲಿ 91 ವರ್ಷದ ಮರಿಯಮ್ಮ ಅವರು ತನ್ನ ಮಗನಾದ ಅಬ್ದುಲ್ಲಾ ಜತೆಗೆ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದರು. ಮತದಾನ ಮಾಡಿ ಮನೆಗೆ ತೆರಳಿದ ಕೆಲವೇ ಕ್ಷಣದಲ್ಲಿ ಅವರು ಮೃತಪಟ್ಟರು. ಇವರು ಮಗನೊಂದಿಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತದಾನ ಕೇಂದ್ರಕ್ಕೆ ತೆರಳಿ ಮತದಾನ ಮಾಡಿದ್ದು, ಬಳಿಕ ಮನೆಗೆ ತೆರಳಿದ್ದರು. ಮನೆಗೆ ತೆರಳಿ ಕೆಲವೇ ಕ್ಷಣದಲ್ಲಿ ಅವರು ಮೃತಪಟ್ಟರು.
ಹಿರಿಯರಿಂದ ಮತದಾನ: ಹಿರಿಯ ನಾಗರಿಕರಿಗೆ ಹಾಗೂ ಅನಾರೋಗ್ಯಪೀಡಿತರಿಗೆ ಮನೆಗೆ ತೆರಳಿ ಮತದಾನ ಮಾಡುವ ಅವಕಾಶ ಕಲ್ಪಿಸಲಾಗಿತ್ತು. ಸರಿಯಾದ ಮಾಹಿತಿ ಇಲ್ಲದೆ ಹಲವು ಮಂದಿ ಮತದಾನ ಕೇಂದ್ರಕ್ಕೆ ತೆರಳಿ ಮತದಾನ ಮಾಡಿದರು. ಇನ್ನು ಕೆಲವರು ಮತಗಟ್ಟೆಯಲ್ಲೇ ಮತ ಚಲಾಯಿಸಬೇಕೆಂಬ ಆಸೆಯಿಂದ ಅಲ್ಲಿಗೇ ಬಂದು ಮತದಾನ ಮಾಡಿದರು.
ಶತಾಯುಷಿಯಿಂದ ಮತದಾನ: ಪಣಿಯೂರಿನ ಮತಗಟ್ಟೆಯಲ್ಲಿ ಶತಾಯುಷಿ ಶಾಂಭವಿ ಶಂಕರ ಶೆಟ್ಟಿ ಮನೆಯವರ ಸಹಾಯದೊಂದಿಗೆ ಆಗಮಿಸಿ ಮತಚಲಾಯಿಸಿದರು. ಪೊಲಿಪು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆಯಲ್ಲಿ ಜಲಜ (93) ಮಗ ಹಾಗೂ ಅಳಿಯನ ಸಹಾಯದಿಂದ ಆಗಮಿಸಿ ಮತದಾನ ಮಾಡಿದರು. ಹೆಜಮಾಡಿ ಕೋಡಿ ಯಲ್ಲಿ ವೇದಾವತಿ ತಿಂಗಳಾಯ(85) ಮನೆಯವರ ಸಹಾಯದಲ್ಲಿ ಗಾಲಿಕುರ್ಚಿಯಲ್ಲಿ ಆಗಮಿಸಿ ಹಕ್ಕು ಚಲಾಯಿಸಿದರು. ಹೆಜಮಾಡಿ ಗುಂಡಿಯ ವಿಠ್ಠಲ್ (74) ಅಸೌಖ್ಯ ಹೊಂದಿದ್ದರೂ ಅಂಚೆ ಮತದಾನ ಮಾಡುವ ಅವಕಾಶವನ್ನು ತಿರಸ್ಕರಿಸಿ ಊರುಗೋಲಿನೊಂದಿಗೆ ಮನೆಯವರ ಸಹಾಯದಿಂದ ಹೆಜಮಾಡಿಯ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದರು.
ಮೊಬೈಲ್, ಬ್ಯಾಗ್ ನಿಷೇಧ: ಕೆಲವು ಮತದಾನ ಕೇಂದ್ರಗಳಲ್ಲಿ ಮೊಬೈಲ್ ಹಾಗೂ ಬ್ಯಾಗ್‌ಗಳನ್ನು ಕೊಂಡೊ ಯ್ಯಲು ನಿಷೇಧಿಸಲಾಗಿತ್ತು. ಕೆಲವು ಕೇಂದ್ರಗಳಲ್ಲಿ ಮೊಬೈಲ್ ಇಡಲು ವ್ಯವಸ್ಥೆ ಕಲ್ಪಿಸಿದರೆ ಇನ್ನು ಕೆಲವು ಕಡೆಗಳಲ್ಲಿ ಮೊಬೈಲ್ ಹಾಗೂ ಬ್ಯಾಗ್ ಇಡಲು ವ್ಯವಸ್ಥೆ ಇರಲಿಲ್ಲ. ವ್ಯವಸ್ಥೆ ಇಲ್ಲದ ಕಡೆಗಳಲ್ಲಿ ಮೊಬೈಲ್ ಇಡಲು ಕೆಲವರು ನಿರಾಕರಿಸಿದರು. ಕೆಲವು ಮತದಾನ ಕೇಂದ್ರಗಳಲ್ಲಿ ಮೊಬೈಲ್ ಒಳಗೆ ಕೊಂಡೊಯ್ಯಲು ನಿಷೇಧ ಇರಲಿಲ್ಲ.
ಜನರನ್ನು ಚದುರಿಸಿದ ಪೋಲಿಸರು
ಹೆಜಮಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಪಿಯು ಕಾಲೇಜಿನ ಮತಗಟ್ಟೆ ಸಮೀಪ ಹಾಕಿದ್ದ ಪಕ್ಷದ ಅಭ್ಯರ್ಥಿಗಳ ತಾತ್ಕಾಲಿಕ ಬೂತ್‌ಗಳಲ್ಲಿ ನಿಗದಿ ಪಡಿಸಿದ್ದಕ್ಕಿಂತ ಹೆಚ್ಚಿನ ಕುರ್ಚಿಗಳನ್ನು ಹಾಕಿ ಗುಂಪು ಸೇರಿದ್ದರು. ಕಾಪು ಇನ್ಸ್‌ಪೆಕ್ಟರ್ ಪೂವಯ್ಯ ಸ್ಥಳಕ್ಕೆ ಆಗಮಸಿ ನಿಗದಿ ಪಡಿಸಿದ ಕುರ್ಚಿ ಹಾಗೂ ಜನರಿಗೆ ಮಾತ್ರ ನಿಲ್ಲಲು ಅವಕಾಶ ಕೊಟ್ಟು ಸೇರಿದ ಪಕ್ಷದ ಕಾರ್ಯರ್ಕರನ್ನು ಚದುರಿಸಿದರು.
ನಿರಾಶೆ: ಮತದಾನಕ್ಕೆ ತೆರಳಿದ ಕೆಲವು ಮತದಾರರ ಹೆಸರು ಪಟ್ಟಿಯಲ್ಲಿ ಬಿಟ್ಟು ಹೋಗಿರುವುದು ಬೆಳಕಿಗೆ ಬಂದಿದೆ. ಕಳೆದ ಸಲ ಮತದಾನ ಮಾಡಿದ ಹಲವರು ಈ ಬಾರಿ ಮತದಾನ ಕೇಂದ್ರಕ್ಕೆ ತೆರಳಿ ಮತದಾನ ಮಾಡಲು ಮುಂದಾದರು. ಆದರೆ ಅಲ್ಲಿ ಅವರ ಹೆಸರು ಪಟ್ಟಿಯಿಂದ ಬಿಟ್ಟು ಹೋಗಿರುವ ಬಗ್ಗೆ ಅಧಿಕಾರಿಗಳು ತಿಳಿಸಿದ ಬಳಿಕ ನಿರಾಶೆಯಿಂದ ಹಿಂದಕ್ಕೆ ಬರಬೇಕಾಯಿತು. ಪಟ್ಟಿಯಿಂದ ಹೆಸರು ಬಿಟ್ಟು ಹೋಗಿರುವುದಕ್ಕೆ ಹಲವರು ಅಸಮಾಧಾನ ವ್ಯಕ್ತಪಡಿಸಿದರು.
ನಿಗದಿತ ಅವಧಿ ಮೀರಿ ಮುಂದುವರಿದ ಮತದಾನ
ಕಾಪು ಮಲ್ಲಾರು ಜನರಲ್ ಶಾಲೆಯ ಸಖಿ ಮತಗಟ್ಟೆಯಲ್ಲಿ ಸಂಜೆ 6:00ಗಂಟೆಯ ನಿಗದಿತ ಅವಧಿ ಮುಗಿದರೂ ಮತದಾನ ಪೂರ್ಣಗೊಳ್ಳದ ಕಾರಣ ಬಳಿಕವೂ ಮುಂದುವರಿಯಿತು.
ಮದ್ಯಾಹ್ನದ ವೇಳೆಗೆ ಹೆಚ್ಚಿನ ಮತದಾರರು ಸೆಕೆ ಹಾಗೂ ಬಿರುಬಿಸಿಲಿನ ಕಾರಣಕ್ಕೆ ಮತಗಟ್ಟೆಯತ್ತ ಸುಳಿದಿರಲಿಲ್ಲ. ಆದರೆ ಸಂಜೆ ವಾತಾವಣರ ತಂಪಾಗುತಿದ್ದಂತೆ ಮತದಾರರು ಮತಗಟ್ಟೆಯತ್ತ ಧಾವಿಸಿ ಬಂದರು. ಇದರಿಂದ ಸಂಜೆ 6:00 ಗಂಟೆಯ ನಂತರವೂ ಮತದಾನ ಮುಂದುವರಿಯಬೇಕಾಯಿತು.
1442 ಮತದಾರರು ಇರುವ ಮತಗಟ್ಟೆಯಲ್ಲಿ ಸಂಜೆ 5 ಗಂಟೆಯ ನಂತರ ಬಂದ ಮತದಾರರಿಗೆ ಟೋಕನ್ ನೀಡಿ ಮತದಾನ ಮಾಡಲು ಅವಕಾಶ ಕಲ್ಪಿಸಲಾಯಿತು.
ಸ್ಥಳದಲ್ಲಿ ಬಿಗುವಿನ ಪರಿಸ್ಥಿತಿ ಇತ್ತು. ಪೊಲೀಸ್ ಅಧಿಕಾರಿಗಳು ಪರಿಸ್ಥಿತಿ ನಿಯಂತ್ರಣಕ್ಕೆ ತಂದರು. ರಾತ್ರಿ 8 ಗಂಟೆಯವರೆಗೂ ಮತದಾನ ಪ್ರಕ್ರಿಯೆ ಮುಂದುವರಿದಿತ್ತು. ಸ್ಥಳದಲ್ಲಿ ಹೆಚ್ಚುವರಿ ಮತದಾನ ಸಿಬ್ಬಂದಿಗಳ ನಿಯೋಜನೆ ಮಾಡಿ ಸುಸೂತ್ರ ಮತದಾನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.