×
Ad

ಯುವಜೋಡಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ; ಕೊಲೆ ಶಂಕೆ

Update: 2023-05-11 13:25 IST

ಕಾನ್ಪುರ: ಭಿನ್ನ ಜಾತಿಗಳಿಗೆ ಸೇರಿದ ಯುವ ಜೋಡಿಯೊಂದು ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಯುವತಿಯ ಕುಟುಂಬದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ಉನ್ನಾವೊದಲ್ಲಿ ಈ ಘಟನೆ ಬೆಳಕಿಗೆ ಬಂದಿದ್ದು, ಪ್ರಿಯಕರನ ಸಹಿತ ಯುವತಿಯ ಮೃತದೇಹ ಮರದಲ್ಲಿ ನೇತಾಡುತ್ತಿತ್ತು. ಇಬ್ಬರೂ ಭಿನ್ನ ಜಾತಿಗೆ ಸೇರಿದವರಾಗಿದ್ದರಿಂದ ಇಬ್ಬರನ್ನೂ ಹತ್ಯೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಸ್ಥಳೀಯ ಪೊಲೀಸರು ಮೊದಲು ಇದನ್ನು ಆತ್ಮಹತ್ಯೆ ಎಂದು ಪರಿಗಣಿಸಿದ್ದರು. ಅದರೆ ಯುವತಿಯನ್ನು ಉಸಿರುಗಟ್ಟಿಸಿ ಸಾಯಿಸಿರುವುದು ಮತ್ತು ಯುವಕನ ದೇಹದ ಮೇಲೆ ಹಲವು ಗಾಯದ ಗುರುತುಗಳು ಇದ್ದುದು ಮರಣೋತ್ತರ ವರದಿಯಲ್ಲಿ ದೃಢಪಟ್ಟ ಹಿನ್ನೆಲೆಯಲ್ಲಿ ಪೊಲೀಸರು ತನಿಖೆಯ ದಿಕ್ಕನ್ನು ಬದಲಿಸಿ ಯುವತಿಯ ಮನೆಯವರನ್ನು ಬಂಧಿಸಿದ್ದಾರೆ. ಯುವಕನ ಕತ್ತು ಮುರಿದಿದ್ದು, ಇದು ಆತನ ಸಾವಿಗೆ ಕಾರಣ ಎಂದು ತಿಳಿದು ಬಂದಿದೆ.

ಹತ್ಯೆ ಪ್ರಕರಣ ಮತ್ತು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿ ಏಳು ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಘಟನೆಯಲ್ಲಿ ಶಾಮೀಲಾದ ಎಲ್ಲರನ್ನೂ ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಉನ್ನಾವೊ ಎಸ್ಪಿ ಸಿದ್ಧಾರ್ಥ ಮೀನಾ ಹೇಳಿದ್ದಾರೆ.

ಎಫ್‌ಐಆರ್‌ನಲ್ಲಿ ಹೆಸರಿಸಿರುವ ಎಲ್ಲ ಏಳು ಮಂದಿ ತಲೆ ಮರೆಸಿಕೊಂಡಿದ್ದಾರೆ. ಯುವತಿಯ ಕುಟುಂಬದ ನಾಲ್ಕು ಮಂದಿಯನ್ನು ಬಂಧಿಸಿ ವಿಚಾರಣೆಗೆ ಗುರಿಪಡಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಯುವಕ ಪರಿಶಿಷ್ಟ ಜಾತಿಗೆ ಸೇರಿದ್ದರಿಂದ ಈ ಜೋಡಿಯ ವಿವಾಹಕ್ಕೆ ಯುವತಿಯ ಕುಟುಂಬದ ವಿರೋಧ ಇತ್ತು. ಈ ಜೋಡಿ ಆರು ವರ್ಷಗಳಿಂದ ಪ್ರೇಮ ಸಂಬಂಧ ಹೊಂದಿತ್ತು. ಇಬ್ಬರೂ ಇತ್ತೀಚೆಗೆ ಪಲಾಯನ ಮಾಡಿದ ಹಿನ್ನೆಲೆಯಲ್ಲಿ ಯುವತಿಯ ಕುಟುಂಬದವರು ಅಪಹರಣ ಪ್ರಕರಣ ದಾಖಲಿಸಿದ್ದರು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

Similar News