ತೆಲಂಗಾಣ ಇಂಟರ್‌ಮೀಡಿಯಟ್ ಪರೀಕ್ಷೆ: ಫಲಿತಾಂಶ ಪ್ರಕಟವಾದ 24 ಗಂಟೆಗಳಲ್ಲಿ 6 ವಿದ್ಯಾರ್ಥಿಗಳು ಆತ್ಮಹತ್ಯೆ
ಹೈದರಾಬಾದ್: ತೆಲಂಗಾಣ ರಾಜ್ಯದಲ್ಲಿ 11 ಮತ್ತು 12ನೇ ತರಗತಿಗೆ ಸಮನಾದ ಇಂಟರ್‌ಮೀಡಿಯಟ್ ಪರೀಕ್ಷಾ ಫಲಿತಾಂಶ ಘೋಷಣೆಗೊಂಡ 24 ಗಂಟೆಗಳಲ್ಲಿ ಮೂವರು ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು ಆರು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ndtv.com ವರದಿ ಮಾಡಿದೆ.
ಈ ಆರು ಆತ್ಮಹತ್ಯೆ ಪ್ರಕರಣಗಳ ಪೈಕಿ ಐದು ಆತ್ಮಹತ್ಯೆಗಳು ಹೈದರಾಬಾದ್‌ನಿಂದ ವರದಿಯಾಗಿದ್ದರೆ ಮತ್ತೊಂದು ನಿಝಾಮಾಬಾದ್‌ನಿಂದ ವರದಿಯಾಗಿದೆ.
ಹೈದರಾಬಾದ್‌ನ ವಸಂತಾಲಿಪುರಂ ಗ್ರಾಮದಲ್ಲಿನ ತನ್ನ ನಿವಾಸದಲ್ಲಿ 17 ವರ್ಷದ ಬಾಲಕಿಯು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೊದಲ ಇಂಟರ್‌ಮೀಡಿಯಟ್ ವಿದ್ಯಾರ್ಥಿನಿಯಾಗಿದ್ದ 16 ವರ್ಷದ ಬಾಲಕಿಯು ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಯದುರ್ಗಂನಲ್ಲಿ ನಡೆದಿದೆ. ಪಂಜಗುಟ್ಟದಲ್ಲಿ ಎರಡನೆ ಇಂಟರ್‌ಮೀಡಿಯಟ್ ವಿದ್ಯಾರ್ಥಿನಿಯು ಆತ್ಮಹತ್ಯೆಗೆ ಈಡಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಎರಡನೆ ಇಂಟರ್‌ಮೀಡಿಯಟ್ ವ್ಯಾಸಂಗ ಮಾಡುತ್ತಿದ್ದ ಇಬ್ಬರು ವಿದ್ಯಾರ್ಥಿಗಳು ಕ್ರಮವಾಗಿ ನೆರೆಡ್‌ಮೆಟ್ ಹಾಗೂ ಸೈಫಾಬಾದ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೊದಲ ಇಂಟರ್‌ಮೀಡಿಯಟ್ ವ್ಯಾಸಂಗ ಮಾಡುತ್ತಿದ್ದ ಮತ್ತೊಬ್ಬ ವಿದ್ಯಾರ್ಥಿಯು ತಾನು ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿರುವ ಸಂಗತಿ ತಿಳಿದು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಕೋವಿಡ್ ಸಾಂಕ್ರಾಮಿಕದ ನಂತರ ಪ್ರತಿಯೊಬ್ಬ ವಿದ್ಯಾರ್ಥಿಯನ್ನೂ ದ್ವಿತೀಯ ಇಂಟರ್‌ಮೀಡಿಯಟ್ ತರಗತಿಗೆ ತೇರ್ಗಡೆ ಮಾಡಲಾಗಿದೆ ಎಂದು ಘೋಷಿಸಲಾಗಿತ್ತು. ಕಳೆದ ಅಕ್ಟೋಬರ್ ತಿಂಗಳಲ್ಲಿ ನಡೆದಿದ್ದ ಪರೀಕ್ಷೆಯಲ್ಲಿ ಶೇ. 51ರಷ್ಟು ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದರು.