ಅತ್ಯಂತ ಅನಾಗರಿಕ ವರ್ತನೆ ಮತ್ತು ಖಂಡನಾರ್ಹ ಹೇಳಿಕೆ

Update: 2023-05-11 18:47 GMT

ಮಾನ್ಯರೇ,

''ಸಹಿಷ್ಣು ಮುಸ್ಲಿಮರು ಬೆರಳೆಣಿಕೆಯಲ್ಲಿದ್ದಾರೆ ಎಂದು ಹೇಳುವ ಮೂಲಕ ಕೇಂದ್ರ ಸಹಾಯಕ ಕಾನೂನು ಮತ್ತು ನ್ಯಾಯ ಸಚಿವ ಸತ್ಯಪಾಲ್ ಸಿಂಗ್ ಬಾಘೆಲ್ ಅವರು ವಿವಾದ ಹುಟ್ಟುಹಾಕಿರುವುದು'' (ವಾ.ಭಾ.,ಮೇ.10) ಅತ್ಯಂತ ಅನಾಗರಿಕ ವರ್ತನೆ ಮತ್ತು ಖಂಡನಾರ್ಹ ಹೇಳಿಕೆ. ತಮ್ಮ ಸ್ಥಾನಕ್ಕಾದರೂ ಅವರು ಮರ್ಯಾದೆಯನ್ನು ಕೊಟ್ಟು ಕಾಪಾಡಿಕೊಳ್ಳಬೇಕಿತ್ತು. ಯಾವ ವೈಜ್ಞಾನಿಕ ಸಂಶೋಧನೆಯ ಆಧಾರದ ಮೇಲೆ ಈ ತೀರ್ಮಾನಕ್ಕೆ ಬಂದಿದ್ದಾರೆಂಬುದನ್ನಾದರೂ ತಿಳಿಸಬೇಕಾಗಿತ್ತು. ಅವರು ಏರಿದ ವೇದಿಕೆಯ ಮೇಲಿನ ವಿಕ್ರಮಾರ್ಕನ ಮಾಯಾ ಸಿಂಹಾಸನದ ಪ್ರಭಾವದಿಂದ ಉದುರಿದ ಮುಕ್ತಾಫಲಗಳಿರಬಹುದು.

''ಸಹಿಷ್ಣು ಮುಸ್ಲಿಮರನ್ನು ಬೆರಳಿನಲ್ಲಿ ಎಣಿಸಬಹುದು. ನನ್ನ ಅಭಿಪ್ರಾಯದಲ್ಲಿ ಅವರ ಸಂಖ್ಯೆ ಸಾವಿರವನ್ನೂ ದಾಟುವುದಿಲ್ಲ'' ಎಂಬ ಅವರ ಹೇಳಿಕೆ ಅವರಿಗೇ ತಿರುಗುಬಾಣವಾಗಿ ಅವರ ಸಹಿಷ್ಣು ಗುಣವನ್ನೇ ಅನುಮಾನಿಸುವಂತಾಗಿದೆ. ಇನ್ನು, ''ಅವರು(ಅಲ್ಪಸಂಖ್ಯಾತರು) ಮದ್ರಸಾದಲ್ಲಿ ಓದಿದರೆ ಉರ್ದು, ಅರೇಬಿಕ್ ಮತ್ತು ಪರ್ಶಿಯನ್ ಕಲಿಯುತ್ತಾರೆ. ಎಲ್ಲ ಸಾಹಿತ್ಯಗಳು ಒಳ್ಳೆಯವೆ. ಆದರೆ ಇಂತಹ ಅಧ್ಯಯನಗಳಿಂದ ಅವರು ಪೇಷ್-ಇಮಾಮ್‌ಗಳಾಗುತ್ತಾರೆ. ಭೌತಶಾಸ್ತ್ರ ಮತ್ತು ರಾಸಾಯನಿಕ ಶಾಸ್ತ್ರ ಓದಿದರೆ ಅವರು ಅಬ್ದುಲ್ ಕಲಾಂ ಆಗುತ್ತಾರೆ'' ಎಂಬ ಸತ್ಯಪಾಲ್‌ರ ತರ್ಕ ತುಂಬ ಬಾಲಿಶ ಹಾಗೂ ವಿಚಿತ್ರವಾಗಿದೆ. ಯಾವ ಪಂಚಾಂಗ ಅಥವಾ ಜ್ಯೋತಿಷ್ಯವನ್ನು ಅಧ್ಯಯನ ಮಾಡಿ ಈ ಎಲ್ಲ ಜ್ಞಾನವನ್ನು ಸಂಪಾದಿಸಿದ್ದಾರೊ ತಿಳಿಯದಾಗಿದೆ!
ನಂತರ ''1192ಕ್ಕೆ ಮುನ್ನ ಈ ದೇಶದ ಮೂಲರಚನೆಯು ಅಖಂಡ ಭಾರತ ಹಿಂದೂ ರಾಷ್ಟ್ರ ಎಂದಾಗಿತ್ತು'' ಎಂಬ ಅವರ ಆವಿಷ್ಕಾರಕ್ಕೆ ಯಾವುದಾದರೂ ಇತಿಹಾಸ ಅಕಾಡೆಮಿಯವರು ಯಾವುದಾದರೊಂದು ಪ್ರಶಸ್ತಿ ಕೊಟ್ಟು ಸನ್ಮಾನ ಮಾಡಲೇಬೇಕು ಎಂದನಿಸುತ್ತದೆ.
ಮುಂದುವರಿದು ಸಚಿವರು, ''ಸಂವಿಧಾನದ ಮೂಲರಚನೆಯ ಕುರಿತು ಮತ್ತು ಅದನ್ನು ಹೇಗೆ ಬದಲಿಸಬಹುದು ಎಂಬ ಬಗ್ಗೆ ಜನರು ಮಾತನಾಡುತ್ತಿರುತ್ತಾರೆ'' ಎಂಬ ಸೂಚನೆ ನೀಡಿ ತಮ್ಮ ಮನುವಾದಿ ಮನೋಭಾವವನ್ನು ಹೊರಹಾಕಿದ್ದಾರೆ. ಇಂತಹ ಅಸಂಬದ್ಧ ಯೋಚನಾಲಹರಿಗಳಲ್ಲಿ ತಮ್ಮ ವಾಗ್ಝರಿಯನ್ನು ಹರಿಸಿ ನೆರೆದಿರುವ ಹಿಂ'ಬಾಲ'ಕರ ಕರತಾಡನವನ್ನು ಗಿಟ್ಟಿಸುವ ಮಹಾನುಭಾವರು ನಮ್ಮನ್ನು ಆಳುವವರಾಗಿದ್ದಾರೆ ಎಂಬುದು ನಮ್ಮ ದುರ್ಗತಿಯಾಗಿದೆ ಅಷ್ಟೆ!
 

Similar News