×
Ad

ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ಪ್ರಕರಣ: ಕ್ರೀಡಾ ಮಂಡಳಿ, ಸಚಿವಾಲಯಕ್ಕೆ ಎನ್‌ಎಚ್‌ಆರ್‌ಸಿ ನೋಟಿಸ್

Update: 2023-05-12 18:38 IST

ಹೊಸ ದಿಲ್ಲಿ: The Indian Express ವರದಿಯ ಆಧಾರದಲ್ಲಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿರುವ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ರಾಷ್ಟ್ರೀಯ ಕ್ರೀಡಾ ಒಕ್ಕೂಟವು ಲೈಂಗಿಕ ಕಿರುಕುಳ ತಡೆ ಕಾಯ್ದೆ ಅಡಿ ನೀಡಲಾಗಿರುವ ಅವಕಾಶಗಳನ್ನು ಅನುಸರಿಸದಿರುವ ಕುರಿತು ತಪ್ಪಿತಸ್ಥ ಕ್ರೀಡಾ ಸಂಸ್ಥೆಗಳು ಹಾಗೂ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯಕ್ಕೆ ನೋಟಿಸ್ ಜಾರಿ ಮಾಡಿದೆ.

ರಾಷ್ಟ್ರೀಯ ಕ್ರೀಡಾ ಪ್ರಾಧಿಕಾರ ಹಾಗೂ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೂ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ನೋಟಿಸ್ ಜಾರಿಗೊಳಿಸಿದೆ.

ಲೈಂಗಿಕ ಕಿರುಕುಳ ತಡೆ ಕಾಯ್ದೆಯನ್ನು ಅನುಸರಿಸದಿರುವುದು ಕಳವಳಕಾರಿ ಸಂಗತಿಯಾಗಿದ್ದು, ಇದರಿಂದ ಕ್ರೀಡಾಪಟುಗಳ ಕಾನೂನಾತ್ಮಕ ಹಕ್ಕು ಹಾಗೂ ಘನತೆಗೆ ಧಕ್ಕೆಯಾಗುತ್ತದೆ ಎಂದು ಕ್ರೀಡಾ ಒಕ್ಕೂಟಗಳಿಗೆ ನಾಲ್ಕು ವಾರಗಳೊಳಗೆ ಸಮಗ್ರ ವರದಿ ಸಲ್ಲಿಸುವಂತೆ ಸೂಚಿಸಿರುವ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಅಭಿಪ್ರಾಯ ಪಟ್ಟಿದೆ.

ಕಳೆದ ತಿಂಗಳು ದೇಶದ ಕೆಲವು ಉನ್ನತ ಕುಸ್ತಿಪಟುಗಳು ರಾಷ್ಟ್ರೀಯ ಕುಸ್ತಿ ಒಕ್ಕೂಟದ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬೃಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಮಾಡಿದ್ದ ಲೈಂಗಿಕ ಆರೋಪಗಳ ಕುರಿತು ತನಿಖೆ ನಡೆಸಲು ಮೇರಿ ಕೋಮ್ ನೇತೃತ್ವದಲ್ಲಿ ಸರ್ಕಾರ ರಚಿಸಿದ್ದ ಸಮಿತಿಯು 2013ರ ಲೈಂಗಿಕ ಕಿರುಕುಳ ತಡೆ ಕಾಯ್ದೆಯಲ್ಲಿ ಕಡ್ಡಾಯಗೊಳಿಸಲಾಗಿರುವ ಆಂತರಿಕ ದೂರು ಸಮಿತಿ ಇಲ್ಲದಿರುವುದರತ್ತ ಬೊಟ್ಟು ಮಾಡಿತ್ತು.

ಮೇ 4ರಂದು The Indian Express ಪ್ರಕಟಿಸಿದ್ದ ತನಿಖಾ ವರದಿಯಲ್ಲಿ ಕೇವಲ ಕುಸ್ತಿ ಒಕ್ಕೂಟ ಮಾತ್ರ ಕಾನೂನನ್ನು ಉಲ್ಲಂಘಿಸಿಲ್ಲ ಎಂಬುದನ್ನು ಬಯಲು ಮಾಡಲಾಗಿತ್ತು. 2018ರ ಏಶಿಯನ್ ಗೇಮ್ಸ್‌, 2021ರ ಟೋಕಿಯೋ ಒಲಿಂಪಿಕ್ಸ್ ಹಾಗೂ ಕಳೇ ವರ್ಷ ನಡೆದಿದ್ದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿನ 30 ಕ್ರೀಡಾ ಪ್ರಕಾರಗಳಲ್ಲಿ ಪಾಲ್ಗೊಂಡಿದ್ದ 16 ಕ್ರೀಡಾ ಒಕ್ಕೂಟಗಳು ಸಂಪೂರ್ಣವಾಗಿ ಆಂತರಿಕ ದೂರು ಸಮಿತಿ ಕಾನೂನಿಗೆ ಬದ್ಧವಾಗಿರಲಿಲ್ಲ ಎಂಬುದರತ್ತ ಬೆಳಕು ಚೆಲ್ಲಿತ್ತು.

ಈ ಕುರಿತು ತನ್ನ ಅಂತರ್ಜಾಲ ತಾಣದಲ್ಲಿ ಪ್ರಕಟಣೆಯೊಂದನ್ನು ಹೊರಡಿಸಿರುವ ರಾಷ್ಟ್ರೀಯ ಮಾನವ ಹಕ್ಕು ಆಯೋಗವು, "ಆಯೋಗವು ಮಾಧ್ಯಮ ವರದಿಯ ತುಣುಕನ್ನು ಗಮನಿಸಿದೆ. ಒಂದು ವೇಳೆ ಇದು ಸತ್ಯವಾಗಿದ್ದರೆ ಕಾನೂನಿನ ಉಲ್ಲಂಘನೆಯಾಗುತ್ತದೆ. ಇದು ಕ್ರೀಡಾಪಟುಗಳ ಹಕ್ಕುಗಳು ಮತ್ತು ಘನತೆಯ ಮೇಲೆ ಪರಿಣಾಮ ಬೀರಲಿರುವುದರಿಂದ ಕಳವಳಕಾರಿ ಸಂಗತಿಯಾಗಿದೆ" ಎಂದು ಆತಂಕ ವ್ಯಕ್ತಪಡಿಸಿದೆ.

Similar News