ಮಹಾರಾಷ್ಟ್ರ ಹೋರಾಟಗಾರನ ಹತ್ಯೆ: ಎನ್‌ಸಿಪಿ ಶಾಸಕ ವಿರುದ್ಧ ಪ್ರಕರಣ

Update: 2023-05-14 03:02 GMT

ಪುಣೆ: ಟೋಲ್ ವಿರೋಧಿ ಹೋರಾಟಗಾರ ಮತ್ತು ಉದಯೋನ್ಮುಖ ರಾಜಕಾರಣಿ ಕಿಶೋ ಅವರೆ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಪೊಲೀಸರು ಮಾವಲ್‌ನ ಎನ್‌ಸಿಪಿ ಶಾಸಕ ಸುನೀಲ್ ಶೆಳ್ಕೆ ಮತ್ತು ಆತನ ಸಹೋದರ ಸುಧಾಕರ್ ಸೇರಿದಂತೆ ಒಟ್ಟು ಮೂರು ಮಂದಿಯ ವಿರುದ್ಧ ಅಪರಾಧ ಪಿತೂರಿ ಹಾಗೂ ಹತ್ಯೆ ಪ್ರಕರಣ ದಾಖಲಿಸಿದ್ದಾರೆ.

ಶುಕ್ರವಾರ ಅವರೆ ಮೇಲೆ ಸ್ಥಳೀಯ ಪುರಸಭೆ ಕಟ್ಟಡದ ಜಗುಲಿಯಲ್ಲಿ ಗುಂಡಿನ ದಾಳಿ ನಡೆಸಿದ ನಾಲ್ವರು ದುಷ್ಕರ್ಮಿಗಳು, ಸಾರ್ವಜನಿಕರ ಎದುರೇ ಅವರ ದೇಹವನ್ನು ತುಂಡು ತುಂಡಾಗಿ ಕತ್ತರಿಸಿದ್ದರು.

ತಮ್ಮ ಮಗನ ಹತ್ಯೆ ದೊಡ್ಡ ಪಿತೂರಿ ಎಂದು ಅವರೆಯವರ ತಾಯಿ ಸುಲೋಚನಾ (69) ನೀಡಿದ ದೂರಿನ ಮೇರೆಗೆ ಈ ಪ್ರಕರಣ ದಾಖಲಿಸಲಾಗಿದೆ.

ಶೆಳ್ಕೆ ಎಲ್ಲ ಆರೋಪಗಳನ್ನು ನಿರಾಕರಿಸಿದ್ದು, ದೂರುದಾರರು ಮಾಡಿರುವ ಎಲ್ಲ ಆರೋಪಗಳು ನಿರಾಧಾರ. ನಾವು ತನಿಖಾಧಿಕಾರಿಗಳ ಜತೆ ಸಹಕರಿಸುತ್ತೇವೆ ಹಾಗೂ ಸತ್ಯ ಶೀಘ್ರದಲ್ಲೇ ಹೊರಬರಲಿದೆ ಎಂದು ಸುದ್ದಿಗಾರರ ಜತೆ ಮಾತನಾಡಿದ ಅವರು ಹೇಳಿದರು.

ಮೃತ ಯುವಕನ ತಾಯಿ ನೀಡಿದ ದೂರಿನ ಆಧಾರದಲ್ಲಿ ಮೇಲ್ನೋಟಕ್ಕೆ ಕಂಡುಬಂದ ಅಂಶಗಳ ಅನುಸಾರ ಶಾಸಕರು ಹಾಗೂ ಇತರ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ. ಅವರೆ ಹಾಗೂ ಶಾಸಕರ ನಡುವೆ ಸುಧೀರ್ಘ ಕಾಲದಿಂದ ಇದ್ದ ವೈರತ್ವದ ಬಗ್ಗೆ ತಾಯಿ ವಿವರಿಸಿದ್ದಾರೆ. ಆದರೆ ಶಾಸಕರ ಪಾತ್ರದ ಬಗ್ಗೆ ನಾವು ಇನ್ನೂ ವಿಚಾರಣೆ ನಡೆಸಬೇಕಿದೆ. ಅವರ ಹೇಳಿಕೆಗಳನ್ನು ದಾಖಲಿಸಿಕೊಂಡು, ಈಗಾಗಲೇ ಬಂಧಿಸಿರುವ ವ್ಯಕ್ತಿಗಳ ವಿಚರಣೆ ನಡೆಸುತ್ತೇವೆ. ಶಾಸಕರು ಹಾಗೂ ಅವರ ಸಹೋದರನ ಪಾತ್ರ ದೃಢಪಟ್ಟಲ್ಲಿ, ಅವರ ಬಂಧನ ಸೇರಿದಂತೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಪಿಂಪ್ರಿ ಚಂಚವಾಡ ಎಸಿಪಿ ಪದ್ಮಾಕರ್ ಘನ್ವಾಟ್ ಸ್ಪಷ್ಟಪಡಿಸಿದ್ದಾರೆ.

Similar News