ಯಾರಾಗಲಿದ್ದಾರೆ ಮುಂದಿನ ಮುಖ್ಯಮಂತ್ರಿ?

Update: 2023-05-15 08:52 GMT

ರಾಜ್ಯದಲ್ಲಿ 2023 ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭೂತಪೂರ್ವ ಬಹುಮತ ಗಳಿಸಿದೆ. ಇದಕ್ಕೆ ಕಾರಣ ಹಲವಾರು.

ಪ್ರಮುಖವಾಗಿ ಬಿಜೆಪಿಯ ಜನವಿರೋಧಿ ದುರಾಡಳಿತ. ಇದರಿಂದಾದ ಬಹುದೊಡ್ಡ ಜನವಿರೋಧಿ ಅಲೆ. ಈ ಜನವಿರೋಧಿ ಅಲೆಯನ್ನು ಸಮರ್ಥವಾಗಿ ಬಳಸಿಕೊಂಡ ಕಾಂಗ್ರೆಸ್ ನಾಯಕರ ಸಮಯೋಚಿತ ನಡೆ.

ಸೋಷಿಯಲ್ ಮೀಡಿಯಾದಲ್ಲಿ ಬಿಜೆಪಿ ವಿರುದ್ದ, ಕಾಂಗ್ರೆಸ್ ಪರ ಅಭಿಪ್ರಾಯ ರೂಪಿಸಿದ ಅನೇಕ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಲ್ಲದ ಪ್ರಜ್ಞಾವಂತರು.

ಅತಿಹೆಚ್ಚು ಸಂಖ್ಯೆಯಲ್ಲಿ ಕಾಂಗ್ರೆಸ್ ಗೆ ಓಟು ಚಲಾಯಿಸಿದ ದಲಿತ ಮತದಾರರು.

ಸಿದ್ದರಾಮಯ್ಯ-ಡಿಕೇಶಿ ಜೋಡಿಯ ಸಂಘಟಿತ ಹೋರಾಟ.

ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ ಫಲ.

ಬಿಜೆಪಿಯವರ ಅಟ್ಟಹಾಸವನ್ನು ಮೆಟ್ಟಿನಿಂತ ಸಿದ್ದರಾಮಯ್ಯನವರ ಹೋರಾಟ.

ಬಡಜನರಿಗೆ ಕಾಂಗ್ರೆಸ್ ನೀಡಿದ ಐದು ಗ್ಯಾರಂಟಿಯ ಪ್ರಣಾಳಿಕೆ.

ಇದರ ಜೊತೆ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲು ಹಗಲಿರುಳು ನಿದ್ರಾಹಾರಗಳನ್ನು ತೊರೆದು ರಾಜ್ಯವನ್ನೇ ಸುತ್ತಿ ಸಂಘಟಿಸಿದ್ದ ನಮ್ಮ ದೃವನಾರಾಯಣ ಅವರ ಶ್ರಮ. ಅದನ್ನು ನೋಡಲಾಗದೆ ಅಕಾಲಿಕವಾಗಿ ಮರಣಿಸಿದ ಅವರ ಸಾವಿನ ಸಿಂಪತಿಯ ಅಲೆ... ಇದೆಲ್ಲವೂ ಕಾಂಗ್ರೆಸ್ ಪಕ್ಷಕ್ಕೆ ಓಟಿನ ಮಹಾಪೂರವೇ ಹರಿದು ಬರುವಂತೆ ಮಾಡಿದೆ.

ಬಡಜನರು ತಮಗೆ ಕಾಂಗ್ರೆಸ್ ಭರವಸೆಯಾಗಬಹುದು ಎಂದು ಒಮ್ಮತದಿಂದ ಓಟು ಹಾಕಿರುವುದು ಕಂಡುಬಂದಿದೆ. ಚುನಾವಣಾ ಅಕ್ರಮಗಳನ್ನು ಎಲ್ಲಾ ಪಕ್ಷದವರೂ ಮಾಡುತ್ತಾರೆ. ಇದೆಲ್ಲದರ ನಡುವೆಯೂ ಮತದಾರರು ತಮ್ಮದೇ ಆದ ನಿರ್ಧಾರವನ್ನು ಪ್ರಕಟಿಸಿ ಈಗ ದೇಶವೇ ನಿಬ್ಬೆರಗಾಗುವಂತಹ ಗೆಲುವನ್ನು ಕಾಂಗ್ರೆಸ್ ಪಕ್ಷಕ್ಕೆ ನೀಡಿ ಬಹುದೊಡ್ಡ ಜವಾಬ್ದಾರಿಯನ್ನು ನೀಡಿದ್ದಾರೆ. ಇದು ಜನರಿಗಿರುವ ಬಿಜೆಪಿ ಮೇಲಿನ ಅಸಮಾಧಾನ ಎಂಬುದೇ ಸೂಕ್ತ.

ಆದ್ದರಿಂದ ಜನರ ಈ ಭಾವನೆಗೆ ಚ್ಯುತಿ ಬಾರದಂತೆ ಕಾಂಗ್ರೆಸ್ ಈಗ ಬಹಳ ಎಚ್ಚರಿಕೆಯಿಂದ ಭಯ ಭಕ್ತಿಯಿಂದ ತಮ್ಮ ದರ್ಪಗಳನ್ನು ಬದಿಗೊತ್ತಿ ಜನರ ಆಶೋತ್ತರಗಳನ್ನು ನೆರವೇರಿಸುವ ಹೊಣೆ ಹೊರಬೇಕಿದೆ.

ಗೆದ್ದ ಮೇಲೆ ಈಗ ಸಿಎಂ ಹುದ್ದೆಗಾಗಿ ಕಿತ್ತಾಟ ಮಾಡುವುದನ್ನು ಪ್ರತಿಪಕ್ಷಗಳು ಲೇವಡಿ ಮಾಡಿ ಇದನ್ನು ದೊಡ್ಡ ದೌರ್ಬಲ್ಯ ಎಂಬಂತೆ ಬಿಂಬಿಸುವುದಕ್ಕೆ ಕಾದು ಕುಳಿತಿವೆ ಎಂಬುದನ್ನು ಕಾಂಗ್ರೆಸ್ ನಾಯಕರು ಅರಿಯಬೇಕು.

ನಾವು ಬಲ್ಲಂತೆ ಬಹುತೇಕ ಮತದಾರರು ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿ ಆಗುತ್ತಾರೆ ಎಂಬ ಭರವಸೆಯಲ್ಲೇ ಕಾಂಗ್ರೆಸ್ ಬೆಂಬಲಿಸಿದ್ದಾರೆ. ಅದಕ್ಕೆ ಕಾರಣ ಅವರಿಗಿರುವ ಅಧಿಕಾರದ ಅನುಭವ, ಮೋದಿ, ಸಂಘಪರಿವಾರ, ಬಿಜೆಪಿ ಮೇಲೆ ಅವರು ತೋರುವ ಅಗ್ರೆಸ್ಸಿವ್ ಆದ ಪ್ರತಿರೋಧ, ಜನಪರ ಕಾಳಜಿ, ಯಾವುದೇ ಗುರುತರ ಎನಿಸುವ ಭ್ರಷ್ಟಾಚಾರಗಳಿಲ್ಲದ ಅವರ ರಾಜಕೀಯ ಜೀವನ, ಈಗಾಗಲೇ ಸಿಎಂ ಹುದ್ದೆಯನ್ನು ಅವರು ಬಹಳ ಯಶಸ್ವಿಯಾಗಿ ನಿಭಾಯಿಸಿರುವ ರೀತಿ ಮತ್ತು ಅವರ ಬೌದ್ದಿಕತೆ. ಇದೆಲ್ಲವೂ ಅವರನ್ನು ಮತ್ತೊಮ್ಮೆ ಸಿಎಂ ಆಗಲು ಜನತೆ ಬಯಸುವ ಕಾರಣಗಳಾಗಿವೆ. 

ಸಿದ್ದರಾಮಯ್ಯ ಇದು ತಮಗೆ ಕೊನೆಯ ಚುನಾವಣೆ ಎಂದು ಘೋಷಿಸಿಕೊಂಡಿರುವುದರಿಂದಲೂ, ಈ ಬಾರಿ ತಾನು ಮುಖ್ಯಮಂತ್ರಿ ಆಗಲು ಬಯಸಿಯೇ ಪಕ್ಷ ಸಂಘಟಿಸಿರುವುದನ್ನು ಪರಿಗಣಿಸಿ ಅವರಿಗೇ ಸಿಎಂ ಪಟ್ಟ ಕಟ್ಟುವುದು ಒಳ್ಳೆಯದು.

ಈಗ ಸಿಎಂ ಆಗುವವರಿಗೆ ಬಹಳ ಚಾಲೆಂಜ್ ಆದ ಟಾಸ್ಕ್ ಗಳಿವೆ. ಸೋಲಿನಿಂದ ಬಹಳವೇ ಹತಾಶಗೊಂಡಿರುವ ಬಿಜೆಪಿ, ಸಂಘಪರಿವಾರ, ಕೇಂದ್ರ ಸರ್ಕಾರ ಈ ಸರ್ಕಾರದ ವಿರುದ್ದ ಮಸಲತ್ತು ನಡೆಸುತ್ತವೆ. ಇಂತಹ ಮಸಲತ್ತುಗಳನ್ನು ಸಶಕ್ತವಾಗಿ ನಿಭಾಯಿಸುವ ಛಾತಿ ಇರುವುದು ಸಿದ್ದರಾಮಯ್ಯನವರಿಗೆ ಎಂಬುದರಲ್ಲಿ ಅತಿಶಯವೇನಿಲ್ಲ.

ಸಿದ್ದರಾಮಯ್ಯ ಪರವಾಗಿ ನಿಲ್ಲುವ ಶಾಸಕರ ದೊಡ್ಡ ದಂಡೇ ಈಗ ಗೆದ್ದಿರುವವರಲ್ಲಿದೆ. ಬಹಳ ಮುಖ್ಯವಾಗಿ ಮುಂದಿನ ವರ್ಷ ಲೋಕಸಭಾ ಚುನಾವಣೆ ಬರುತ್ತದೆ. ಆಗ ದೇಶದ ಆಡಳಿತದಿಂದಲೇ ಬಿಜೆಪಿಯನ್ನು ಕಿತ್ತೊಗೆಯಲೇಬೇಕಾದ ಅನಿವಾರ್ಯತೆ ದೇಶದ ಜನತೆಗೆ ಉಂಟಾಗುತ್ತದೆ. ಅದಕ್ಕೆ ಪೂರಕವಾಗಿ ಕರ್ನಾಟಕದಿಂದ ಹೆಚ್ಚು ಸಂಸದರನ್ನು ಗೆಲ್ಲೆಸಬೇಕೆಂದರೆ ಸಿದ್ದರಾಮಯ್ಯ ಅವರು ಸಿಎಂ ಆಗುವುದು ಸೂಕ್ತ. 

ಕಾಂಗ್ರೆಸ್ ಗೆಲುವಿನಲ್ಲಿ ಡಿಕೆಶಿ ಪಾತ್ರವೇನು ಗೌಣವಲ್ಲ. ಪಕ್ಷದ ಅಧ್ಯಕ್ಷರಾಗಿ ಬಹಳ ಸಶಕ್ತವಾದ ಟೀಮನ್ನು ಕಟ್ಟಿ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಗೆಲ್ಲುವಲ್ಲಿ ಬಹಳ ಶ್ರಮ ಹಾಕಿದ್ದಾರೆ. ಕಾಂಗ್ರಸ್ ನಿಂದ ದೂರವಾಗಿದ್ದ ಒಕ್ಕಲಿಗ ಮತದಾರರನ್ನು ಸೆಳೆದು ಹೆಚ್ಚು ಸ್ಥಾನ ಗೆಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದಕ್ಕಾಗಿ ಚುನಾವಣಾ ಪ್ರಚಾರದಲ್ಲಿ ತಾನೂ ಸಹ ಸಿಎಂ ಆಗುತ್ತೇನೆ ಎಂದು ಹೇಳಿಕೊಂಡೇ ಬಂದಿದ್ದಾರೆ. ಅವರು ಸಿಎಂ ಆಗಲು ಸರ್ವ ರೀತಿಯಿಂದಲೂ ಅರ್ಹರಿದ್ದಾರೆ ಎಂಬುದರಲ್ಲಿ ಯಾವುದೇ ತಕರಾರಿಲ್ಲ. ಹಣಬಲವಿದೆ, ಜಾತಿಬಲವಿದೆ, ಶಾಸಕ ಬಲವೂ ಇದೆ. ಅದಲ್ಲದೆ ಕಾಂಗ್ರೆಸ್ ಕಟ್ಟಾಳು. ಎಷ್ಟೇ ಅಡೆತಡೆಗಳು ಬಂದರೂ ಕಾಂಗ್ರೆಸ್ ಪಕ್ಷಕ್ಕೆ ಬದ್ದರಾಗಿ, ಅಚಲವಾಗಿ ನಿಂತವರು. ಕೇಂದ್ರ ಸರ್ಕಾರ ಅವರ ಮೇಲೆ ಐಟಿ/ಇಡಿ ದಾಳಿ ನಡೆಸಿ, ಜೈಲಿಗೆ ಕಳುಹಿಸಿ ವಿಪರೀತ ಮಾನಸಿಕ ಹಿಂಸೆ ಕೊಟ್ಟಾಗಲೂ ಅವರಿಗಿರುವ ಅನ್ವರ್ಥ ನಾಮದಂತೆ ಬಂಡೆಯಾಗಿ ನಿಂತು ಕೇಂದ್ರ ಸರ್ಕಾರವನ್ನೆ ಎದುರಿಸಿ ಜೈಸಿಕೊಂಡು ಬಂದವರು. ಕಾಂಗ್ರೆಸ್ ಪಕ್ಷಕ್ಕೆ ಕಂಟಕ ಎದುರಾದಗಲೆಲ್ಲ ಅದನ್ನು ಪಾರು ಮಾಡುವಲ್ಲಿ ಅವರು ಎದೆಗೊಟ್ಟು ನಿಂತವರು ಎಂಬುದೆಲ್ಲವೂ ಸತ್ಯ. 

ಆದರೆ, ಅವರು ಈಗ ಸಿಎಂ ಹುದ್ದೆಗೆ ಸೂಕ್ತ ಆಯ್ಕೆಯಲ್ಲ. ಮುಂದೆ ಅವರೇ ಸಿಎಂ ಆಗಬಹುದು. ಅದಕ್ಕೆ ಎಲ್ಲಾ ಅವಕಾಶಗಳೂ ಇವೆ. ಈಗ ಅವರ ಮೇಲೆ ಕೇಂದ್ರ ಸರ್ಕಾರದ ಕಣ್ಣಿದೆ. ಅವರು ಗುರುತರವಾದ ಆರೋಪಗಳಿಗೆ ಸಿಲುಕಿದ್ದಾರೆ. ಇದು ಅವರಿಗೆ ಬಹಳವೇ ದೌರ್ಬಲ್ಯವಾಗುತ್ತದೆ. ಇದನ್ನೇ ಗುರಿಯಾಗಿಸಿ ಬಿಜೆಪಿ, ಸಂಘಪರಿವಾರ ಇಡೀ ಸರ್ಕಾರದ ಮೇಲೆ ದಾಳಿ ನಡೆಸಿದಾಗ ಪಕ್ಷಕ್ಕೆ ಸರ್ಕಾರಕ್ಕೆ ಜನಸಾಮಾನ್ಯರಿಗೆ ವಿಪರೀತ ಮುಜುಗರವಾಗುವುದು ಖಚಿತ. ಗುರುತರ ಆರೋಪಗಳನ್ನು ಹೊತ್ತಿರುವ ಡಿಕೆಶಿಯವರು ಸಿಎಂ ಆಗಿ ಪ್ರತಿಪಕ್ಷಗಳ ದಾಳಿಯನ್ನು ಸಮರ್ಥವಾಗಿ ಎದುರಿಸುವುದು ಕಷ್ಟವಾಗುತ್ತದೆ. ಆದ್ದರಿಂದ ಸರ್ಕಾರದ ಹಿತದೃಷ್ಟಿಯಿಂದ, ಸರ್ಕಾರವನ್ನು ತಂದ ಜನಸಾಮಾನ್ಯ ಮತದಾರರ ಹಿತದೃಷ್ಟಿಯಿಂದ ಈ ಸಲ ಡಿಕೆಶಿಯವರು ಸಿಎಂ ಹುದ್ದೆಯಿಂದ ಸ್ವಯಂ ದೂರ ಉಳಿದು, ಸಿದ್ದರಾಮಯ್ಯ ಅವರನ್ನೇ ಸಿಎಂ ಮಾಡಲು ಉದಾರತೆ ತೋರುವುದರಲ್ಲೇ ಅವರ ಜಾಣ್ಮೆ ಇದೆ. ಅವರು ಬೇಕಿದ್ದರೆ ಡಿಸಿಎಂ ಆಗಬಹುದು, ಪವರ್ ಫುಲ್ ಆದ ಖಾತೆಗಳನ್ನೂ ಹೊಂದಬಹುದು. ಈ ವಿಷಯದಲ್ಲಿ ಒಕ್ಕಲಿಗರು, ಒಕ್ಕಲಿಗ ಮಠಪತಿಗಳೂ ಕಾಂಗ್ರೆಸ್ ಹೈಕಮಾಂಡ್ ಮೇಲೆ ತಮ್ಮ ಒತ್ತಡತಂತ್ರ ಹೇರುವುದನ್ನು ನಿಲ್ಲಿಸಿದರೆ ತುಂಬಾ ಘನತೆಯ ನಿರ್ಧಾರವಾಗುತ್ತದೆ.

ಇನ್ನು ದಲಿತ ಸಿಎಂ ಕೂಗು ಈಗ ಮುನ್ನೆಲೆಗೆ ಬಂದಿದೆ. ಅಂದರೆ ದಲಿತ ನಾಯಕರಾದ ಪರಮೇಶ್ವರ್, ಕೆ.ಎಚ್.ಮುನಿಯಪ್ಪ, ಎಚ್.ಸಿ.ಮಹದೇವಪ್ಪ, ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ್ ಖರ್ಗೆ, ನರೇಂದ್ರಸ್ವಾಮಿ, ಎ.ಆರ್.ಕೃಷ್ಣಮೂರ್ತಿ ಅವರುಗಳಲ್ಲಿ ಯಾರಿಗೆ ಸಿ.ಎಂ ಆಗುವ ಅವಕಾಶವಿದೆ??

ಮಲ್ಲಿಕಾರ್ಜುನ ಖರ್ಗೆಯವರು ಹಿರಿಯ ಕಾಂಗ್ರೆಸ್ ಕಟ್ಟಾಳು ನಾಯಕರು ಎಂಬುದು ನಿರ್ವಿವಾದ. ಅದೇ ರೀತಿ ನುರಿತ ರಾಜಕಾರಣಿ ಹಲವು ವರ್ಷಗಳಿಂದ ವಿವಿಧ ಖಾತೆಗಳನ್ನು ಬಹಳ ಶಕ್ತವಾಗಿ ನಿರ್ವಹಿಸಿರುವ ಮುತ್ಸದ್ದಿ. ಎಂದೋ ರಾಜ್ಯದ ಮುಖ್ಯಮಂತ್ರಿ ಆಗಬೇಕಿದ್ದವರು. ಆದರೆ, ದುರಾದೃಷ್ಟವಶಾತ್ ಅವರು ಪ್ರತೀ ಬಾರಿಯೂ ಪಕ್ಷದ ಹಿತದೃಷ್ಟಿಯಿಂದ ಹೈಕಮಾಂಡ್ ನಿರ್ಧಾರಕ್ಕೆ ಬದ್ದರಾಗಿ ಸಿ.ಎಂ ಹುದ್ದೆಯನ್ನು ತ್ಯಾಗ ಮಾಡುತ್ತಲೇ ಬಂದರು. ಇವರ ತ್ಯಾಗದ ಫಲವಾಗಿಯೇ ಎಸ್.ಎಂ ಕೃಷ್ಣ, ಧರ್ಮಸಿಂಗ್, ಸಿದ್ದರಾಮಯ್ಯ ಮುಂತಾದವರು ಮುಖ್ಯಮಂತ್ರಿ ಹುದ್ದೆಗೇರಲು ಸಾಧ್ಯವಾದುದು ಎಂಬುದನ್ನು ದೇಶದ ಜನತೆಯೇ ಬಲ್ಲದು.

ಅದಕ್ಕಿಂತ ಮೊದಲು ಬಿ.ಬಸವಲಿಂಗಪ್ಪ, ಕೆ.ಎಚ್.ರಂಗಪ್ಪ, ಬಿ.ರಾಚಯ್ಯ ಮುಂತಾದವರಿಗೆ ದಲಿತ ಸಿ.ಎಂ ಆಗುವ ಅರ್ಹತೆ, ಯೋಗ್ಯತೆ, ತಾಕತ್ತು ಎಲ್ಲವೂ ಇತ್ತಾದರೂ ಅವರೆಲ್ಲರೂ ಪಕ್ಷದ ಹೈಕಮಾಂಡ್ ತೀರ್ಪಿಗೆ ತಲೆಬಾಗಿ ಇತರರಿಗೆ ಸಿ.ಎಂ ಹುದ್ದೆಯನ್ನು ತ್ಯಾಗ ಮಾಡಿದರು. ದಲಿತ ನಾಯಕರ ಈ ತ್ಯಾಗವನ್ನು ಕಾಂಗ್ರೆಸ್ ದುರುಪಯೋಗಪಡಿಸಿಕೊಂಡೇ ಬಂದಿದೆ. ಅಷ್ಟಾದರೂ ದಲಿತರು ಮಾತ್ರ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಲೇ ಬಂದಿದ್ದಾರೆ. ಪ್ರತೀ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೂ ದಲಿತರು ಸಿ.ಎಂ ಹುದ್ದೆಗಾಗಿ ಹೋರಾಟ ಮಾಡುತ್ತಲೇ ಬಂದಿದ್ದರೂ ಸಹ ಸ್ವತಃ ಕಾಂಗ್ರೆಸ್ ಒಳಗಿನ ದಲಿತ ನಾಯಕರ ಮೌನ, ಹೈಕಮಾಂಡ್ ತೀರ್ಪಿಗೆ ತೋರಿದ ಬದ್ದತೆಯಿಂದಾಗಿ ಸಿ.ಎಂ ಹುದ್ದೆ ಈಗಲೂ ಕನಸಾಗಿಯೇ ಉಳಿದಿದೆ. ಇದು  ಕಾಂಗ್ರೆಸ್ ದಲಿತರಿಗೆ ಮಾಡಿದ ಮಹಾಮೋಸ ಎಂಬುದಂತು ಖಚಿತವಾದ ಮಾತು. 

ಅಷ್ಟಾದರೂ ಮನುವಾದಿ ಬಿಜೆಪಿಯನ್ನು ನಿಯಂತ್ರಿಸುವ ಸಲುವಾಗಿ ಪ್ರತಿ ಚುನಾವಣೆಯಲ್ಲೂ ದಲಿತರು ಕಾಂಗ್ರೆಸ್ ಅನ್ನು ಅನಿವಾರ್ಯವಾಗಿ ಬೆಂಬಲಿಸಿದ್ದಾರೆ. ಈ ಚುನಾವಣೆಯಲ್ಲಂತೂ ರಾಜ್ಯದ ಬಹುತೇಕ ದಲಿತ ಹೋರಾಟಗಾರರು, ಸಾಹಿತಿಗಳು, ಚಿಂತಕರು, ಸಂಘಟನೆಗಳು ನೇರಾನೇರ ಕಾಂಗ್ರೆಸ್ ಪಕ್ಷಕ್ಕೆ ಒಕ್ಕೊರಲಿಂದ ಬೆಂಬಲ ಸೂಚಿಸಿರುವುದನ್ನು ದೇಶವೇ ಬಲ್ಲದು. ಅದರಲ್ಲೂ ಕೊಳ್ಳೇಗಾಲದಲ್ಲಿ ಬಹಳ ಪ್ರಭಲವಾಗಿ ಸಂಘಟಿತವಾಗಿ ಕಳೆದ ಚುನಾವಣೆಯಲ್ಲಿ ಶಾಸಕರನ್ನೇ ಭರ್ಜರಿ ಬಹುಮತದಿಂದ ಗೆಲ್ಲಿಸಿಕೊಂಡಿದ್ದ ಬಿಎಸ್ಪಿ ತನಗಿದ್ದ  ದೊಡ್ಡ ಓಟ್ ಬ್ಯಾಂಕನ್ನು ಅನಾಯಾಸವಾಗಿ ಕಾಂಗ್ರೆಸ್ ಪಕ್ಷಕ್ಕೆ ವರ್ಗಾಯಿಸಿಕೊಡುವ ನಿರ್ಧಾರ ಮಾಡಿ ತನ್ನ ಸ್ಪರ್ದೆಯಿಂದಲೇ ಹಿಂದೆ ಸರಿದು ಕಾಂಗ್ರೆಸ್ ಪಕ್ಷಕ್ಕೆ ಬಹಿರಂಗ ಬೆಂಬಲ ಸೂಚಿಸಿದ್ದಲ್ಲದೆ ಬಿಎಸ್ಪಿಯ ನಿಷ್ಟಾವಂತ ಕಾರ್ಯಕರ್ತರು ಹಗಲಿರುಳು ಶ್ರಮಿಸಿ ತಮ್ಮ ಎಪ್ಪತ್ತು ಸಾವಿರದಷ್ಟು ಮತಗಳನ್ನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎ.ಆರ್.ಕೃಷ್ಣಮೂರ್ತಿ ಅವರಿಗೆ ವರ್ಗಾಯಿಸಿ ರಾಜಕೀಯ ಇತಿಹಾಸದಲ್ಲೇ ಅತಿಹೆಚ್ಚು ಮತಗಳಿಂದ ಕೃಷ್ಣಮೂರ್ತಿ ಗೆಲ್ಲುವಂತೆ ಮಾಡಿದೆ. ಕಳೆದ 19 ವರ್ಷಗಳಿಂದ ಹಲವು ಚುನಾವಣೆಗಳಲ್ಲಿ ನಿರಂತರ ಸೋಲಿನಿಂದ ಜರ್ಜತಿತವಾಗಿದ್ದ ಎ.ಆರ್. ಕೃಷ್ಣಮೂರ್ತಿಯವರ ಈ ಅಭೂತಪೂರ್ವ ಗೆಲುವು ಬಿಎಸ್ಪಿಯಿಂದಾದು ಎಂಬುದನ್ನು ಕಾಂಗ್ರೆಸ್ ಹೈಕಮಾಂಡ್ ಮನಗಾಣಬೇಕು. ಯಾವ ಸ್ಟಾರ್ ಕ್ಯಾಂಪೇನರ್ ಇಲ್ಲದ ಗುಂಡ್ಲುಪೇಟೆ, ಚಾಮರಾಜನಗರ, ನಂಜನಗೂಡು, ಎಚ್.ಡಿ.ಕೋಟೆ, ಮೂಡಿಗೆರೆ ಮುಂತಾದೆಡೆ ದಲಿತರ ಒಗ್ಗಟ್ಟಿನ ಕಾರಣಕ್ಕೆ ಅಭ್ಯರ್ಥಿಗಳು ಭರ್ಜರಿ ಗೆಲುವು ದಾಖಲಿಸಿದ್ದಾರೆ ಎಂಬುದನ್ನು ಮನಗಾಣಬೇಕು. ಇದು ಕಾಂಗ್ರೆಸ್ ಪಕ್ಷದ ಅಭೂತಪೂರ್ವ ಗೆಲುವಿನಲ್ಲಿನ ದಲಿತರ ತ್ಯಾಗ ಎಂದರೆ.

ಇದರಿಂದಾಗಿಯೇ ದಲಿತರು ತಮ್ಮವರನ್ನು ಒಮ್ಮೆಯಾದರೂ ಮುಖ್ಯಮಂತ್ರಿ ಮಾಡಬೇಕೆಂದು ಆಗ್ರಹಿಸುತ್ತಲೇ ಇದ್ದಾರೆ. ಆದರ ಕಾಂಗ್ರೆಸ್ ಮಾತ್ರ ದಲಿತ ನಾಯಕರ ನಿಷ್ಟೆಯನ್ನೂ, ದಲಿತ ಮತದಾರರ ತ್ಯಾಗವನ್ನೂ ಕಡೆಗಣಿಸಿಕೊಂಡೇ ಬಂದಿದೆ. ಹೀಗಾಗಿ ಈ ಬಾರಿ ಸಂದಿಗ್ದ ಪರಿಸ್ಥಿತಿ ಬಂದಿರುವಾಗ ದಲಿತರು ಮತ್ತೊಮ್ಮೆ ತ್ಯಾಗಿಗಳಾಗಲು ಮನಸು ಮಾಡಿದ್ದಾರೆ.
ಅದಕ್ಕೆ ಕಾರಣ ಈಗಿರುವ ದುರಿತ ಕಾಲದ ಪರಿಸ್ಥಿತಿ.

ಖರ್ಗೆಯವರು ಕೇಂದ್ರದ ಉನ್ನತಹುದ್ದೆಯಲ್ಲಿದ್ದಾರೆ. ಅದಲ್ಲದೆ ಅವರೇ ನಾನು ಸಿ‌ಎಂ  ನೇಮಿಸುವ ಸ್ಥಾನದಲ್ಲಿರುವಾಗ ನಾನೇ ಸಿ.ಎಂ ಆಗುವ ಆಸೆ ಇಲ್ಲ ಎಂದಿದ್ದಾರೆ.
ಅವರ ಪುತ್ರ ಪ್ರಿಯಾಂಕ್ ಖರ್ಗೆ ಬುದ್ದಿವಂತರು, ರಾಜಕಾರಣದ ಅನುಭವವಿದ್ದರೂ ಸಿ.ಎಂ ಹುದ್ದೆಯನ್ನು ಈ ಸ್ಥಿತಿಯಲ್ಲಿ ನಿಭಾಯಿಸಲು ಕಷ್ಟವಾದುದು ಎಂದು ಬಲ್ಲರು. ಮಹದೇವಪ್ಪನವರೂ ಈಗಿರುವ ಪ್ರತಿಪಕ್ಷಗಳ ಹೊಡೆತ ನಿಭಾಯಿಸಲು ಕಷ್ಟ ಎಂಬ ಕಾರಣಕ್ಕೆ ಮೌನವಾಗಿದ್ದಾರೆ ಮಾತ್ರವಲ್ಲ ಅವರೂ ಸಿದ್ದರಾಮಯ್ಯ ಅವರಿಗಾಗಿ ತ್ಯಾಗ ಮಾಡಲು ಸಿದ್ದವಿದ್ದಾರೆ. ಕೆ.ಎಚ್.ಮುನಿಯಪ್ಪ ತಮ್ಮ ನಿಲುವು ಪ್ರಕಟಿಸಿಲ್ಲ. ಇನ್ನು ಪರಮೇಶ್ವರ್ ಅವರು ತಾವೂ ಸಹ ಸಿ.ಎಂ ಆಕಾಂಕ್ಷಿ ಎಂಬುದನ್ನು ಇದೇ ಮೊದಲ ಬಾರಿಗೆ ಹೇಳಿದ್ದಾರಾದರೂ ಅವರ ಬೆಂಬಲಕ್ಕೆ ನಿಲ್ಲುವ ಶಾಸಕರ ಬಲವೆಷ್ಟು ಎಂಬ ಲೆಕ್ಕಾಚಾರ ಅವರಿಗೇ ಇದೆ. ಡಿಕೆಶಿ ಆಪ್ತರಾದರೂ ಡಿಕೇಶಿ ಬೆಂಬಲಿತರು ಪರಮೇಶ್ವರ್ ಅವರಿಗೆ ಬೆಂಬಲದ ದಾಳ ಉರುಳಿಸಿ ಸಿ.ಎಂ ಮಾಡಬಹುದಾದ ಸಾಧ್ಯತೆಗಳಿದ್ದರೂ ಈಗಿನ ಪರಿಸ್ಥಿತಿಯಲ್ಲಿ ಸಿ.ಎಂ ಆಗಿ ಸರ್ಕಾರ ನಿಭಾಯಿಸಲು ಅವರು ಸಿದ್ದರಿರುವರೇ?ಎಂಬುದನ್ನು ಅವರು ದೃಢವಾದ ಮಾತುಗಳಲ್ಲಿ ಈಗ ವ್ಯಕ್ತಪಡಿಸಿದರೆ ಒಳ್ಳೆಯದು. ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟರೆ, ಖಂಡಿತಾ ಹೈಕಮಾಂಡ್ ಆಯ್ಕೆ ಇವರಾಗುವುದಿಲ್ಲ.

ಆದ್ದರಿಂದ ಹೈಕಮಾಂಡ್ ಮತ್ತು ಬಹುತೇಕ ಜನರ ಆಯ್ಕೆಗೆ ಈಗಿರುವ ರಾಜಕೀಯ ಪ್ರಕ್ಷುಬ್ದತೆಯನ್ನು ಸಮರ್ಥವಾಗಿ ಎದುರಿಸಲು ಸಿದ್ದರಾಮಯ್ಯ ಸೂಕ್ತ.

ಬೇಕಿದ್ದರೆ ಮುಂದಿನ ಲೋಕಸಭಾ ಚುನಾವಣೆಯ ನಂತರ ಸಿಎಂ ಹುದ್ದೆಯನ್ನು ಡಿಕೆಶಿಗೋ ಪರಮೇಶ್ವರ್ ಅವರಿಗೋ ಬಿಟ್ಟುಕೊಡಬಹುದು. ಡಿಕೆಶಿಗೆ ಪೂರ್ಣಾವಧಿ ಯೋಗವೇ ಇರುವಾಗ ಈ ಅರ್ಧ ಅವಧಿಯ ಹಂಗೇಕೆ? ಹಾಗೆಯೇ ಮುಂದೆ ಪ್ರಿಯಾಂಕ್ ಗೆ ಅಂತಹ ಅವಕಾಶ ಖಂಡಿತಾ ಇರುವಾಗ ಈಗ ಬಿಜೆಪಿ ಹದಗೆಡಿಸಿರುವ ರಾಜ್ಯದ ಹಲವು ವಿಷಯಗಳನ್ನು ಸಮರ್ಥವಾಗಿ ನಿಭಾಯಿಸಲು ಸುಮ್ಮನೆ ಸಿದ್ದರಾಮಯ್ಯನವರಿಗೆ ಸಿಎಂ ಹುದ್ದೆ ನೀಡುವುದು ಒಳ್ಳೆಯದು.  ಹಾಗೆ ದಲಿತ ನಾಯಕರಿಗೆ ಆಯಕಟ್ಟಿನ ಸ್ಥಾನಮಾನಗಳನ್ನು ನೀಡಿ ಗೌರವಿಸಬೇಕಾದ್ದು ಕಾಂಗ್ರೆಸ್ ಪಕ್ಷದ ಆದ್ಯ ಕರ್ತವ್ಯ ಎಂಬುದನ್ನು ಮರೆಯಕೂಡದು.

-ಲೇಖಕ ಡಾ.ಚಮರಂ

Similar News