ಕಾಂಗ್ರೆಸ್ ಗೆದ್ದಿದೆ-ಆದರೆ ಬಿಜೆಪಿ ಸೋತಿದೆಯೇ?

Update: 2023-05-17 04:40 GMT

ಕಾಂಗ್ರೆಸ್‌ಗಿಂತ, ಪ್ರಗತಿಪರ-ಎಡ ಸಂಘಟನೆಗಳಿಗಿಂತ ಬಲವಾದ ಜನಸಂಘಟನೆ, ಸಾಧನಗಳು ಮತ್ತು ಸಂಪರ್ಕ ಜಾಲ ಮತ್ತು ಮಾಧ್ಯಮಗಳು ಬಿಜೆಪಿಯ ಜೊತೆ ಇರುವುದರಿಂದ ಅದಕ್ಕೆ ಈಗ ವಿರೋಧ ಪಕ್ಷವಾಗಿರುವುದು ಮತ್ತಷ್ಟು ಜನಬೆಂಬಲವನ್ನು ಹೆಚ್ಚಿಸಿಕೊಳ್ಳಲು, 2024ರ ಚುನಾವಣೆಯನ್ನು ಎದುರಿಸಲು ಅದಕ್ಕೆ ವರವಾಗಿಯೇ ಪರಿಣಮಿಸಬಹುದು. ಹೀಗಾಗಿ ಬಿಜೆಪಿ ಆಡಳಿತ ಪಕ್ಷವಾಗಿದ್ದರೆ ಎಷ್ಟು ಅಪಾಯವೋ, ಅಷ್ಟೇ ಅಪಾಯ ಅದು ಏಕಮಾತ್ರ ವಿರೋಧ ಪಕ್ಷವಾದರೂ ಇದ್ದೇ ಇರುತ್ತದೆ. ಹೀಗಾಗಿ ಶಾಸನಸಭೆಯಲ್ಲಿ ಬಿಜೆಪಿಯು ವಿರೋಧ ಪಕ್ಷವಾಗಿದ್ದರೂ, ಸಮಾಜದಲ್ಲಿ ಎಡ-ಜಾತ್ಯತೀತ-ಜನಪರ ಸಂಘಟನೆಗಳು ವಿರೋಧದ ಸ್ಪೇಸನ್ನು ಬಿಜೆಪಿಗೆ ಬಿಟ್ಟುಕೊಡದೆ ತಾವೇ ನೈಜ ವಿರೋಧ ಪಕ್ಷವಾಗಿ ನೈಜ ಸಂವಿಧಾನ ರಕ್ಷಕರಾಗಿ ಮೊದಲಿಗಿಂತ ಹೆಚ್ಚಿಗೆ ಶ್ರಮಿಸುವ ಅಗತ್ಯವಿದೆ.


ಕರ್ನಾಟಕದ 16ನೇ ವಿಧಾನಸಭಾ ಚುನಾವಣೆಯ ಫಲಿತಾಂಶಗಳು ಕಳೆದ ಐದು ವರ್ಷದಿಂದ ನೊಂದು-ಬೆಂದ ಜನರಿಗೆ ತಾತ್ಕಾಲಿಕವಾಗಿ ನಿರಾಳ ಒದಗಿಸುವಂತಿದೆ. ಚುನಾವಣಾ ಫಲಿತಾಂಶಗಳು ಮತ್ತದರ ಸೂಕ್ಷ್ಮ ಒಳವಿವರಗಳು ಈ ನಾಡಿನ ಗ್ರಾಮೀಣ ಬಡವರು, ಮಹಿಳೆಯರು, ಮುಸ್ಲಿಮರು, ದಲಿತರು ಕಾಂಗ್ರೆಸ್‌ಗೆ ಹೋದ ಚುನಾವಣೆಗಿಂತ ಹೆಚ್ಚಿನ ಮತಗಳನ್ನು ನೀಡಿ ಅಧಿಕಾರಕ್ಕೆ ತಂದಿರುವುದನ್ನು ಸ್ಪಷ್ಟಪಡಿಸುತ್ತದೆ. ಅಂದರೆ ಈ ನಾಡಿನ ಬಡವರು ಕಾಂಗ್ರೆಸನ್ನು ಗೆಲ್ಲಿಸಿದ್ದಾರೆ. ಆದರೆ ಕಾಂಗ್ರೆಸ್ ಬಡವರನ್ನು ಗೆಲ್ಲಿಸುತ್ತದೆಯೇ ಎಂಬ ಪ್ರಶ್ನೆ ಇದ್ದೇ ಇದೆ. ಕಾಂಗ್ರೆಸ್ ಬಡವರನ್ನು ಗೆಲ್ಲಿಸುವುದೇ? ಬಡವರು ಗೆಲ್ಲದೆ ಫ್ಯಾಶಿಸಂ ಸೋಲುವುದೇ?

ಈ ನಾಡಿನಲ್ಲಿ ಕೋಮುವಾದ ಮತ್ತು ಫ್ಯಾಶಿಸಂ ಅನ್ನು ಸೋಲಿಸಬೇಕೆಂದು ಕಾಂಗ್ರೆಸ್ ಪರವಾಗಿ ಅವಿರತವಾಗಿ ಶ್ರಮಿಸಿದ ಕಾಂಗ್ರೆಸೇತರ ಕಾರ್ಯಕರ್ತರಿಗೂ ಈ ಅನುಮಾನ ಇದ್ದಿರಲೇ ಬೇಕು. ಏಕೆಂದರೆ ಬಡವರು ಗೆಲ್ಲದೆ ಕೋಮುವಾದ ಸೋಲುವುದಿಲ್ಲ. ಬಡತನದ ಕೆಸರಲ್ಲೇ ಕೋಮುವಾದ-ಫ್ಯಾಶಿವಾದದ ಕಮಲ ಅರಳುತ್ತದೆ. ಆ ಆರ್ಥದಲ್ಲಿ ಬಡತನವನ್ನು ಶಾಶ್ವತಗೊಳಿಸುವ, ಅಸಮಾನತೆಯನ್ನು ಅಧಿಕಗೊಳಿಸುವ ನವ ಉದಾರವಾದಿ ಆರ್ಥಿಕತೆಯೇ ರಾಜಕೀಯವಾಗಿ ಕೋಮುವಾದೀ ಫ್ಯಾಶಿಸಂಗೆ ಗೊಬ್ಬರವನ್ನು ಹಾಕಿ ಪೋಷಿಸುತ್ತದೆ. ಒಂದು ಕಾರಣ ಮತ್ತೊಂದು ಪರಿಣಾಮ. ಹೀಗಾಗಿ ಗೆದ್ದ ಕಾಂಗ್ರೆಸ್ ಗ್ಯಾರಂಟಿಗಳನ್ನು ಮಾತ್ರ ಕೊಟ್ಟು ಉಳಿದಂತೆ ಬಡವರ ವಿರೋಧಿ ಕಾರ್ಪೊರೇಟ್ ಪರ ನವ ಉದಾರವಾದಿ ಆರ್ಥಿಕತೆಯನ್ನೇ ಮುಂದುವರಿಸಿದರೆ ಪರೋಕ್ಷವಾಗಿ ಫ್ಯಾಶಿಸಂ ಅನ್ನು ಪೋಷಿಸಿದಂತೆಯೇ ಆಗುತ್ತದೆ. ಅಷ್ಟು ಮಾತ್ರವಲ್ಲ. ಬಿಜೆಪಿಯಷ್ಟು ಉಗ್ರಗಾಮಿ ಮತ್ತು ಆಕ್ರಮಣಕಾರಿಯಲ್ಲದಿದ್ದರೂ ಕಾಂಗ್ರೆಸೇ ಈ ನಗ್ನ ಕಾರ್ಪೊರೇಟ್ ಪರ ಆರ್ಥಿಕತೆಯ ಜನಕನಾಗಿರುವುದರಿಂದ ಮತ್ತು ಕಾರ್ಪೊರೇಟ್ ಹಿತಾಸಕ್ತಿಗಳ ರಕ್ಷಕನೂ ಆಗಿರುವುದರಿಂದ ಮೃದು ಬ್ರಾಹ್ಮಣಶಾಹಿ ಹಿಂದುತ್ವವನ್ನು ಅನುಸರಿಸಿಕೊಂಡು ಬರುತ್ತಿದೆ. ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜಸ್ಥಾನ ಮತ್ತು ಛತ್ತೀಸ್‌ಗಡ ಮತ್ತು ಕರ್ನಾಟಕದ ಕಾಂಗ್ರೆಸ್‌ನ ಚುನಾವಣಾ ಪ್ರಣಾಳಿಕೆಯಲ್ಲಿನ ಕೆಲ ಅಂಶಗಳು, ರಾಮಮಂದಿರ ನಿರ್ಮಾಣ ಮತ್ತು ಮೇಲ್ಜಾತಿ ಮೀಸಲಾತಿಯ ಬಗ್ಗೆ ಕಾಂಗ್ರೆಸ್ ನಿಲುವುಗಳು, ಅದಕ್ಕೆ ಇತ್ತೀಚಿನ ಹಲವು ತಾಜ ಉದಾಹರಣೆಗಳು. ಕಾಂಗ್ರೆಸ್‌ನ ಈ ಮೃದು ಹಿಂದುತ್ವವಾದಿ ಮತ್ತು ಬಂಡವಾಳಶಾಹಿ ಪರ ನಿಲುವುಗಳೇ ನಿಧಾನವಾಗಿ ಉಗ್ರಗಾಮಿ ಮತ್ತು ಆಕ್ರಮಣಕಾರಿ ಹಿಂದುತ್ವಕ್ಕೆ ದಾರಿ ಮಾಡಿಕೊಟ್ಟಿದ್ದು ಇತಿಹಾಸ. ಹೀಗಾಗಿ; -ಕಾಂಗ್ರೆಸ್ ಗೆಲುವು ಬಡವರ ಗೆಲುವೇ?

-ಕಾಂಗ್ರೆಸ್ ಮೂಲಕ ಫ್ಯಾಶಿಸಂನ್ನು ಬಿಡಿ ಕೋಮುವಾದವನ್ನಾದರೂ ಮಣಿಸಬಹುದೇ?
-ಅವೆೆರಡೂ ಆಗದಿದ್ದರೆ ಮುಂದಿನ ಐದು ವರ್ಷಗಳಲ್ಲಿ ಹಿಂದುತ್ವವಾದಿಗಳು ಕಾಂಗ್ರೆಸ್‌ನ ನೆರಳಲ್ಲೇ ಮತ್ತಷ್ಟು ಬಲಿಷ್ಠಗೊಳ್ಳುವುದಿಲ್ಲವೇ? .... ಎಂಬ ಪ್ರಶ್ನೆಗಳನ್ನು ಬದಿಗೆ ಸರಿಸಿದರೆ ಇತಿಹಾಸದಿಂದ ನಾವು ಏನೂ ಪಾಠ ಕಲಿತಿಲ್ಲವೆಂದೇ ಅರ್ಥವಾಗುತ್ತದೆ. ಹೀಗಾಗಿ ಕಾರ್ಪೊರೇಟ್ ಬಂಡವಾಳಶಾಹಿ ಪರವಾಗಿರುವ ನವ ಉದಾರವಾದ ಮತ್ತು ಬ್ರಾಹ್ಮಣವಾದದ ವಿರುದ್ಧ ಜನ ಸಂಘಟನೆಗಳ ಪ್ರತಿರೋಧ ಇನ್ನೂ ಗಟ್ಟಿಯಾಗಿ ಮುಂದುವರಿಯುವ ಅಗತ್ಯವಿದೆ. ಇಲ್ಲವಾದರೆ ಬಿಜೆಪಿಯ ಹುಸಿ ವಿರೋಧವನ್ನೇ ಜನರು ನಿಜವೆಂದು ಭಾವಿಸಿಕೊಂಡು ಮೊದಲಿಗಿಂತ ಬಹುಮತದೊಂದಿಗೆ ಬಿಜೆಪಿಯನ್ನೇ ಅಧಿಕಾರಕ್ಕೆ ತರುತ್ತಾರೆ. ಚುನಾವಣಾ ವಿಶ್ಲೇಷಣೆಯಲ್ಲಿ ಬಿಜೆಪಿಯ ಸೋಲಿನ ಬಗ್ಗೆ ಒಂದು ಉತ್ಪ್ರೇಕ್ಷಿತ ಗ್ರಹಿಕೆ ಪ್ರಚಲಿತದಲ್ಲಿರುವುದರಿಂದ ಈ ಪ್ರಶ್ನೆ ಮತ್ತಷ್ಟು ಜರೂರಾಗಿದೆ.

ಬಿಜೆಪಿ ಗೆದ್ದಿಲ್ಲ-ಆದರೆ ಸೋತಿದೆಯೇ?

ಚುನಾವಣಾ ಫಲಿತಾಂಶಗಳು ತಿಳಿಸುವಂತೆ 224 ಸೀಟುಗಳ ಕರ್ನಾಟಕ ಶಾಸನಸಭೆಯಲ್ಲಿ ಕಾಂಗ್ರೆಸ್‌ಗೆ 135 ಸೀಟುಗಳು ಲಭ್ಯವಾಗಿವೆ. ಬಿಜೆಪಿಗೆ 65 ಮತ್ತು ಜೆಡಿಎಸ್ ಪಕ್ಷಕ್ಕೆ ಕೇವಲ 19 ಸೀಟುಗಳು ಲಭ್ಯವಾಗಿವೆ. 2018ಕ್ಕೆ ಹೋಲಿಸಿದಲ್ಲಿ ಕಾಂಗ್ರೆಸ್‌ಗೆ ಹೆಚ್ಚುವರಿಯಾಗಿ 55 ಸೀಟುಗಳು ಲಭ್ಯವಾಗಿದ್ದರೆ, ಬಿಜೆಪಿ 40 ಸೀಟುಗಳನ್ನು ಮತ್ತು ಜೆಡಿಎಸ್ 18 ಸೀಟುಗಳನ್ನು ಕಳೆದುಕೊಂಡಿವೆ. ಹೀಗಾಗಿ ಬರೀ ಸೀಟುಗಳ ಲೆಕ್ಕಾಚಾರದಲ್ಲಿ ನೋಡಿದರೆ ಕಾಂಗ್ರೆಸ್‌ಗೆ ಬಿಜೆಪಿಗಿಂತ ಎರಡು ಪಟ್ಟು ಹೆಚ್ಚಿನ ಸೀಟುಗಳು ಸಿಕ್ಕಿವೆ. ಆದರೆ ಈ ಪಕ್ಷಗಳು ಪಡೆದುಕೊಂಡಿರುವ ಮತಗಳ ಪ್ರಮಾಣ ಮಾತ್ರ ಬೇರೆಯೇ ಕಥೆಯನ್ನು ಹೇಳುತ್ತವೆ. ಕಳೆದ ಬಾರಿ ಕಾಂಗ್ರೆಸ್ ಶೇ. 38ರಷ್ಟು ಮತಗಳನ್ನು ಪಡೆದುಕೊಂಡು 80 ಸೀಟುಗಳನ್ನು ಪಡೆದುಕೊಂಡಿದ್ದರೆ, ಬಿಜೆಪಿ ಶೇ. 36ರಷ್ಟು ಮತಗಳನ್ನು ಪಡೆದುಕೊಂಡು 104 ಸೀಟುಗಳನ್ನು ಪಡೆದುಕೊಂಡಿತ್ತು. ಅಂದರೆ ಇಡೀ ಕರ್ನಾಟಕದ ಒಟ್ಟಾರೆ ಮತಗಳಲ್ಲಿ ಅತಿ ಹೆಚ್ಚು ಮತಗಳನ್ನು ಕಾಂಗ್ರೆಸ್ ಪಡೆದುಕೊಂಡಿದ್ದರೂ ಹೆಚ್ಚು ಸೀಟುಗಳನ್ನು ಪಡೆದುಕೊಳ್ಳಲು ನಮ್ಮ ಚುನಾವಣಾ ಪದ್ಧತಿಯ ವಿಲಕ್ಷಣತೆಯ ಕಾರಣದಿಂದ ಆಗಲಿಲ್ಲ. ಈ ಬಾರಿಯೂ ಬಿಜೆಪಿ 2018ರಲ್ಲಿ ಪಡೆದುಕೊಂಡಿದ್ದಷ್ಟೆ ಅಂದರೆ ಶೇ. 36ರಷ್ಟು ಮತಗಳನ್ನೇ ಪಡೆದುಕೊಂಡಿದೆ. ಕಾಂಗ್ರೆಸ್ 2018ಕ್ಕಿಂತ ಶೇ. 5 ರಷ್ಟು ಹೆಚ್ಚಿನ ಮತಗಳನ್ನು ಪಡೆದುಕೊಂಡು ಶೇ. 43ರಷ್ಟು ಮತಗಳನ್ನು ಪಡೆದುಕೊಂಡಿದೆ. ಅಂದರೆ ಬಿಜೆಪಿಗಿಂತ ಶೇ. 7ರಷ್ಟು ಹೆಚ್ಚಿನ ಮತಗಳನ್ನು ಪಡೆದುಕೊಂಡರೂ, ಬಿಜೆಪಿಗಿಂತ 70 ಸೀಟುಗಳನ್ನು ಹೆಚ್ಚಾಗಿ ಪಡೆದುಕೊಂಡಿದೆ. ಆದರೆ ವಾಸ್ತವವೇನು? ಬಿಜೆಪಿಗಿಂತ ಎರಡು ಪಟ್ಟು ಹೆಚ್ಚಿನ ಸೀಟುಗಳನ್ನು ಪಡೆದುಕೊಂಡ ಕಾಂಗ್ರೆಸ್ ಬಿಜೆಪಿಗಿಂತ ಎರಡು ಪಟ್ಟು ಹೆಚ್ಚು ಮತಗಳನ್ನು ಪಡೆದುಕೊಂಡಿಲ್ಲ. ವಾಸ್ತವವಾಗಿ ಬಿಜೆಪಿಯ ಮತಪ್ರಮಾಣದಲ್ಲಿ ಶೇಕಡಾವಾರು ಗಳಿಕೆಯಲ್ಲಿ ಇಳಿಕೆಯಾಗಿಲ್ಲ. ಅದು ಕಳೆದ ಬಾರಿಯೂ ಶೇ. 36ರಷ್ಟು ಮತಗಳನ್ನು ಪಡೆದುಕೊಂಡಿತ್ತು. ಈ ಬಾರಿಯೂ ಶೇ. 36ರಷ್ಟು ಮತಗಳನ್ನು ಪಡೆದುಕೊಂಡಿದೆ. ಅಂದರೆ ಕಾಂಗ್ರೆಸ್‌ನ ಗೆಲುವು ಬಿಜೆಪಿಯ ಮತಪ್ರಮಾಣದ ಅರ್ಥಾತ್ ಸಾಮಾಜಿಕ ಬೆಂಬಲವನ್ನೇನೂ ಕಸಿದುಕೊಂಡಿಲ್ಲ. ಅಂದರೆ ಬಿಜೆಪಿಯ ಕೋಮುವಾದಿ ನೆಲೆಯನ್ನು ಕಾಂಗ್ರೆಸ್ ಅಲುಗಾಡಿಸಿಲ್ಲ ಎಂಬುದೇ ಇದರ ಅರ್ಥ.

ಇದನ್ನು ಇನ್ನಷ್ಟು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕೆಂದರೆ-ಈ ಬಾರಿ ಕರ್ನಾಟಕದಲ್ಲಿ 5.5 ಕೋಟಿ ಅರ್ಹ ಮತದಾರರಿದ್ದರು. ಅದರಲ್ಲಿ 3.8 ಕೋಟಿ ಮತದಾರರು ಮತ ಚಲಾಯಿಸಿದ್ದಾರೆ. ಆ 3.8 ಕೋಟಿ ಮತದಾರರಲ್ಲಿ 1.67 ಕೋಟಿಯಷ್ಟು ಮತದಾರರು ಕಾಂಗ್ರೆಸ್‌ಗೆ ವೋಟು ಹಾಕಿದ್ದರೆ, 1.40 ಕೋಟಿ ಮತದಾರರು ಇಷ್ಟೆಲ್ಲಾ ಹಗರಣ, ಭ್ರಷ್ಟಾಚಾರ, ಕೋಮುವಾದಿ ದಾಳಿ, ಮೋಸಗಳ ನಡುವೆಯೂ ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಕಾಂಗ್ರೆಸ್ ಬಿಜೆಪಿಗಿಂತ 27 ಲಕ್ಷ ಹೆಚ್ಚು ಮತದಾರರ ಬೆಂಬಲವನ್ನು ಮಾತ್ರ ಪಡೆದುಕೊಂಡಿದೆ. ಈ ಮತಪ್ರಮಾಣವನ್ನು 2018ಕ್ಕೆ ಹೋಲಿಸಿದರೆ ವಿಷಯ ಇನ್ನಷ್ಟು ಸ್ಪಷ್ಟವಾದೀತು. 2018ರಲ್ಲಿ ಕಾಂಗ್ರೆಸ್‌ಗೆ 1.39 ಕೋಟಿ ಮತದಾರರು ವೋಟು ಹಾಕಿದ್ದರು. ಈ ಬಾರಿ 1.67 ಕೋಟಿ. ಎಂದರೆ 2018ಕ್ಕಿಂತ 28 ಲಕ್ಷ ಜನ ಹೆಚ್ಚುವರಿಯಾಗಿ ಮತಹಾಕಿದ್ದಾರೆ. 2018ರಲ್ಲಿ ಬಿಜೆಪಿಗೆ 1.32 ಕೋಟಿ ಜನ ವೋಟುಹಾಕಿದ್ದರು. ಈ ಬಾರಿ 1.40 ಕೋಟಿ ಜನ ವೋಟು ಹಾಕಿದ್ದಾರೆ. ಅಂದರೆ 2018ಕ್ಕೆ ಹೋಲಿಸಿದಲ್ಲಿ 8 ಲಕ್ಷ ಜನ ಹೆಚ್ಚುವರಿಯಾಗಿ ಬಿಜೆಪಿಗೆ ಮತಹಾಕಿದ್ದಾರೆ. ಇದರ ತಾತ್ಪರ್ಯವೇನು? ಕಳೆದ ನಾಲ್ಕು ವರ್ಷಗಳಲ್ಲಿ ಬಿಜೆಪಿಯ ಡಬಲ್ ಇಂಜಿನ್ ಸರಕಾರ ಜನರ ಬದುಕನ್ನು ಕಂಗೆಡಿಸಿದ್ದರೂ, ಬಿಜೆಪಿಗೆ ಮತಬೆಂಬಲ ಕುಸಿಯಲಿಲ್ಲ. ಕಾಂಗ್ರೆಸ್ ಬಿಜೆಪಿಗಿಂತ ಜಾಸ್ತಿ ಬೆಂಬಲ ಪಡೆದುಕೊಂಡಿದ್ದರಿಂದ ಅಧಿಕಾರಕ್ಕೆ ಬಂದಿದೆ. ಇದರ ತಾತ್ಪರ್ಯವನ್ನು ಇನ್ನಷ್ಟು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕೆಂದರೆ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಎದುರಿಸಿದ ಆಡಳಿತ ವಿರೋಧಿ ಅಲೆ ಮತ್ತು ಲಿಂಗಾಯತರ ಅಸಮಾಧಾನವನ್ನೇ ಕಾಂಗ್ರೆಸ್ ಎದುರಿಸಿದಾಗ ಏನಾಗಿತ್ತು ಎಂದು ಹೋಲಿಸಬೇಕು.

1994ರ ಕಾಂಗ್ರೆಸ್- 2023ರ ಬಿಜೆಪಿ! 

1985-89ರ ನಡುವಿನ ಜನತಾ ಆಡಳಿತದ ಭ್ರಷ್ಟಾಚಾರದ ವಿರುದ್ಧ 1989ರಲ್ಲಿ ಕರ್ನಾಟಕದ ಜನ ಕಾಂಗ್ರೆಸ್‌ಗೆ ಶೇ. 43.76ರಷ್ಟು ಮತಗಳನ್ನು ಮತ್ತು 178 ಸೀಟುಗಳನ್ನು ಕೊಟ್ಟಿದ್ದರು. ಆದರೆ ಆಗಿನ ಕಾಂಗ್ರೆಸ್ ಅಧ್ಯಕ್ಷ ರಾಜೀವ್ ಗಾಂಧಿಯವರು ಲಿಂಗಾಯತ ಮುಖ್ಯಮಂತ್ರಿ ವೀರೇಂದ್ರ ಪಾಟೀಲರನ್ನು ಅತ್ಯಂತ ಅಗೌರವಯುತವಾಗಿ ಕೆಳಗಿಳಿಸಿದ ಮೇಲೆ ಲಿಂಗಾಯತ ಸಮುದಾಯಕ್ಕೆ ಕಾಂಗ್ರೆಸ್‌ನ ಮೇಲೆ ಅಸಮಾಧಾನ ಹೆಚ್ಚಾಯಿತು. 1994ರಲ್ಲಿ ಚುನಾವಣೆ ನಡೆಯುವ ವೇಳೆಗೆ ಅಪಾರವಾದ ಆಡಳಿತ ವಿರೋಧಿ ಅಲೆಯನ್ನೂ ಕಾಂಗ್ರೆಸ್ ಸರಕಾರ ಎದುರಿಸಬೇಕಾಯಿತು. ಹೀಗಾಗಿ 1994ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸುಮಾರು ಶೇ. 17ರಷ್ಟು ವೋಟು ಶೇರನ್ನು ಕಳೆದುಕೊಂಡು ಕೇವಲ ಶೇ.26.95ರಷ್ಟು ವೋಟುಗಳನ್ನು ಮಾತ್ರ ಪಡೆಯಿತು ಮತ್ತು 144 ಸೀಟುಗಳನ್ನು ಕಳೆದುಕೊಂಡು ಕೇವಲ 34 ಸೀಟುಗಳನ್ನು ಪಡೆಯಿತು. ಈಗ 2023ರಲ್ಲಿ ಅದೇ ಬಗೆಯ ಆಡಳಿತ ವಿರೋಧಿ ಅಲೆಯನ್ನು ಮತ್ತು ಯಡಿಯೂರಪ್ಪ, ಸವದಿ, ಶೆಟ್ಟರ್ ಪ್ರಕರಣದಲ್ಲಿ ಹಾಗೂ ಬಿ.ಎಲ್. ಸಂತೋಷ್ ಮತ್ತು ಸಿ.ಟಿ. ರವಿ ಇಬ್ಬರೂ ಬಿಜೆಪಿಗೆ ಲಿಂಗಾಯತರ ಅಗತ್ಯವಿಲ್ಲ ಎಂದು ಬಹಿರಂಗವಾಗಿ ಹೇಳಿ ಲಿಂಗಾಯತರಿಗೆ ಅಪಮಾನ ಮಾಡಿದ್ದರೂ ಲಿಂಗಾಯತ ಪ್ರಾಧಾನ್ಯತೆ ಇರುವ ಕಿತ್ತೂರು ಕರ್ನಾಟಕದಲ್ಲಿ ಬಿಜೆಪಿ ಕಳೆದುಕೊಂಡಿರುವುದು ಕೇವಲ ಶೇ. 3.5ರಷ್ಟು ಮತಗಳನ್ನು ಮಾತ್ರ. ಹಾಗೂ ಅಲ್ಲಿ ಕಳೆದುಕೊಂಡ ಮತಗಳನ್ನು ಅದು ಬೆಂಗಳೂರು ಮತ್ತು ಹಳೆ ಮೈಸೂರು ಪ್ರಾಂತಗಳಲ್ಲಿ ಒಕ್ಕಲಿಗ ಮತಗಳಿಂದ ಭರ್ತಿ ಮಾಡಿಕೊಂಡಿದೆ.

ಲಿಂಗಾಯತರಲ್ಲಿ ಕಳೆದದ್ದು ಒಕ್ಕಲಿಗರಲ್ಲಿ ಭರ್ತಿಯಾಯಿತೇ?

ಮತದಾನದ ನಂತರ ದಿಲ್ಲಿಯ ಸಿಎಸ್‌ಡಿಎಸ್-ಲೋಕನೀತಿ ನಡೆಸಿರುವ ಮತದಾನೋತ್ತರ ಸಮೀಕ್ಷೆಯ ಪ್ರಕಾರ ಈ ಚುನಾವಣೆಯಲ್ಲೂ ಶೇ. 59ರಷ್ಟು ಲಿಂಗಾಯತರು ಬಿಜೆಪಿಗೆ ಮತಹಾಕಿದ್ದಾರೆ. ಅಷ್ಟು ಮಾತ್ರವಲ್ಲ. ಕುರುಬರನ್ನು ಹೊರತುಪಡಿಸಿ ಇತರ ಹಿಂದುಳಿದ ಜಾತಿಗಳಲ್ಲೂ ಬಿಜೆಪಿ ಕಾಂಗ್ರೆಸ್‌ಗಿಂತ ಹೆಚ್ಚಿನ ಮತಗಳನ್ನು ಪಡೆದುಕೊಂಡಿದೆ. ಹಳೆಮೈಸೂರು ಪ್ರಾಂತದಲ್ಲಿ 2018ಕ್ಕಿಂತ ಶೇ. 3ರಷ್ಟು ಹಾಗೂ ಬೆಂಗಳೂರಿನಲ್ಲಿ 2018ಕ್ಕಿಂತ ಶೇ. 7ರಷ್ಟು ಹೆಚ್ಚಿನ ಮತಗಳನ್ನು ಪಡೆದುಕೊಂಡಿದೆ. ಅಂದರೆ ಬಿಜೆಪಿಯು ಈ ಚುನಾವಣೆಯಲ್ಲಿ ಸೋತಿದ್ದರೂ ಅದರ ಸಾಮಾಜಿಕ ಬೆಂಬಲ 2018ಕ್ಕೆ ಹೋಲಿಸಿದರೆ ಕುಸಿದಿಲ್ಲ. ಬದಲಿಗೆ ಹೆಚ್ಚಿದೆ. ಹಾಗೂ ರಾಜ್ಯಾದ್ಯಂತ ವಿಸ್ತರಿಸುತ್ತಲೂ ಇದೆ. ಹೀಗಾಗಿ ಬಿಜೆಪಿ ಸೋತಿದೆ ಎಂದು ಹೇಳುವುದಕ್ಕೆ ವಿಶೇಷ ಕಾರಣವಿಲ್ಲ. ಹಳೆ ಮೈಸೂರು ಪ್ರಾಂತದಲ್ಲಿ ಬಿಜೆಪಿಗೆ ಸೀಟುಗಳು ಹೆಚ್ಚದಿದ್ದರೂ ಮತಗಳಿಕೆ ಶೇ. 4-5ರಷ್ಟು ಹೆಚ್ಚಿರುವುದು ಅಪಾಯಕಾರಿ ಸಂಗತಿಯೇ ಆಗಿದೆ. ವಾಸ್ತವದಲ್ಲಿ ಸಂಘಪರಿವಾರದ ಲಕ್ಷ ಸದ್ಯದ ಚುನಾವಣೆ ಮಾತ್ರವಾಗಿರುವುದಿಲ್ಲ ಅದರ ಉದ್ದೇಶವೇ ಕ್ರಮೇಣವಾಗಿ ಸಮಾಜವನ್ನು ದ್ವೇಷ ರಾಜಕಾರಣದ ಆಧಾರದಲ್ಲಿ ಧ್ರುವೀಕರಿಸುವುದಾಗಿದೆ. ಹೀಗಾಗಿ ಒಕ್ಕಲಿಗ ಸಮಾಜ ಈವರೆಗೆ ಅವರಿಗೆ ದಕ್ಕಿರಲಿಲ್ಲ. ಆದರೆ ಈ ಬಾರಿ ಒಕ್ಕಲಿಗರ ನಡುವೆ ಬಿಜೆಪಿ ಮತ್ತದರ ದ್ವೇಷ ರಾಜಕಾರಣ ಯಶಸ್ವಿಯಾಗಿ ಪ್ರವೇಶ ಮಾಡಿದೆಯೇ ಎಂಬ ಅನುಮಾನವನ್ನು ಈ ಚುನಾವಣೆ ಹುಟ್ಟುಹಾಕಿದೆ. ಹೀಗಾಗಿ ಉರಿಗೌಡ-ನಂಜೇಗೌಡ ಪ್ರಕರಣದಲ್ಲಿ ಬಿಜೆಪಿಯ ಅಪಪ್ರಚಾರವನ್ನು ಸೋಲಿಸುವುವಲ್ಲಿ ನಿಜಕ್ಕೂ ಯಶಸ್ವಿಯಾದವೆ ಎಂಬ ಪ್ರಶ್ನೆಯನ್ನು ಈ ಚುನಾವಣೆ ಹುಟ್ಟುಹಾಕಬೇಕಿದೆ.

ಹಾಗೆ ನೋಡಿದರೆ, ಜನರ ದೈನಂದಿನ ಜೀವನದ ಸಮಸ್ಯೆಗಳ ಬಗ್ಗೆ ಗುಜರಾತ್, ಉತ್ತರ ಪ್ರದೇಶ ಚುನಾವಣೆಗಳಲ್ಲೂ ಅಲ್ಲಿಯ ಜನರು ಸರಕಾರದ ಬಗ್ಗೆ ಅಸಮಾಧಾನವಿಟ್ಟುಕೊಂಡಿದ್ದರೂ ಅಂತಿಮವಾಗಿ ಬಿಜೆಪಿಗೇ ವೋಟುಹಾಕಿದ್ದರು. ಕರ್ನಾಟಕದಲ್ಲಿ ಬಿಜೆಪಿ ಮೊದಲಿಗಿಂತ ಹೆಚ್ಚಿನ ಮತಗಳನ್ನು ಗಳಿಸಿಕೊಳ್ಳದಿದ್ದರೂ ತಾನು ಗಳಿಸಿಕೊಂಡಿದ್ದನ್ನು ಕಳೆದುಕೊಂಡಿಲ್ಲ. ಮೇಲಾಗಿ ಹೊಸ ಕ್ಷೇತ್ರಗಳಿಗೆ ವಿಸ್ತರಿಸಿದೆ. ಇದು ಸಾಧ್ಯವಾಗುತ್ತಿರುವುದು ಅದರ ದ್ವೇಷಾಧಾರಿತ ಹಿಂದುತ್ವ ರಾಜಕಾರಣ-ಹಿಂದೂ ರಾಷ್ಟ್ರ ಕ್ರಮಕ್ರಮೇಣವಾಗಿ ಸಮಾಜದೊಳಗೆ ಇಳಿಯುತ್ತಿರುವುದು. ವಾಸ್ತವವಾಗಿ ಚುನಾವಣಾ ಪೂರ್ವ ಮತ್ತು ಮತಗಟ್ಟೆ ಸಮೀಕ್ಷೆಗಳಲ್ಲಿ ಸತ್ಯಕ್ಕೆ ಸಮೀಪವಾದಂಥ ಸರ್ವೇಗಳನ್ನು ಮಾಡಿದ್ದ ಈ ದಿನ.ಕಾಂ ಮತ್ತು ಇಂಡಿಯಾ ಟುಡೆ ಸಂಸ್ಥೆಗಳು ಸಹ ಈ ಅಂಶದ ಬಗ್ಗೆ ಬೆಳಕು ಚೆಲ್ಲುವ ಪ್ರಶ್ನೆಗಳನ್ನು ಮತದಾರರಲ್ಲಿ ಕೇಳಿರಲಿಲ್ಲ. ಸಿಎಸ್‌ಡಿಎಸ್ ಸಂಸ್ಥೆಯು ನಡೆಸಿದ ಮತದಾನೋತ್ತರ ಸಮೀಕ್ಷೆಯಲ್ಲೂ ಈ ಬಗ್ಗೆ ಹೆಚ್ಚಿನ ಪ್ರಶ್ನೆಗಳನ್ನು ಕೇಳಿಲ್ಲ. ಆದರೆ ಬಿಜೆಪಿ ಸರಕಾರದ ಹೊಸ ಮೀಸಲಾತಿ ಸೂತ್ರದ ಬಗ್ಗೆ ಕೇಳಿದ ಒಂದು ಪ್ರಶ್ನೆಯಲ್ಲಿ ಶೇ. 50ರಷ್ಟು ಜನ ಮುಸ್ಲಿಮ್ ಮೀಸಲಾತಿ ರದ್ದಿನ ಪರವಾಗಿಯೂ, ಕೇವಲ ಶೇ. 25ರಷ್ಟು ಜನ ಮಾತ್ರ ಮುಸ್ಲಿಮ್ ಮೀಸಲಾತಿ ಪರವಾಗಿಯೂ ಅಭಿಪ್ರಾಯ ವ್ಯಕ್ತಪಡಿಸಿರುವುದು ಸಹ ಈ ಚುನಾವಣೆ ಕೋಮುವಾದಿ ವಿರೋಧಿ ಆದೇಶವಲ್ಲ ಎನ್ನುವುದನ್ನೇ ತಿಳಿಸುತ್ತದೆ. ಹೀಗಾಗಿ ಕರ್ನಾಟಕದ ಚುನಾವಣೆಯಲ್ಲಿ ಬಿಜೆಪಿ ಗೆದ್ದಿಲ್ಲವಾದರೂ, ಈ ನಿಟ್ಟಿನಲ್ಲಿ ಸೋತಿಲ್ಲ ಎಂಬುದೇ ಮೇಲಿನ ಉದಾಹರಣೆಗಳು ಸ್ಪಷ್ಟಪಡಿಸುತ್ತವೆ. ಆದರೆ ಈ ಬೆಳವಣಿಗೆ ಮತ್ತೊಂದು ಅಪಾಯವನ್ನು ಕರ್ನಾಟಕದ ಮುಂದಿರಿಸಿದೆ.

ವಿರೋಧದ ಸ್ಪೇಸನ್ನು ಬಿಜೆಪಿಗೆ ಬಿಟ್ಟುಕೊಡುವ ಅಪಾಯ 

ಯಾವುದು ಏನೇ ಇದ್ದರೂ ಈಗ ಬಿಜೆಪಿ ಶಾಸನಸಭೆಯಲ್ಲಿ ಪ್ರಮುಖ ವಿರೋಧ ಪಕ್ಷವಾಗಲಿದೆ. ಆಡಳಿತರೂಢ ಕಾಂಗ್ರೆಸ್ ಪಕ್ಷ ಮಾಡುವ ಪ್ರತಿಯೊಂದು ತಪ್ಪುಗಳು ಮತ್ತು ಮಾಡದಿರುವ ತಪ್ಪುಗಳೆಲ್ಲವೂ ಕಾಂಗ್ರೆಸ್‌ನ ವಿರೋಧವಾಗಿ ಮತ್ತು ಬಿಜೆಪಿ ಪರವಾಗಿ ಮಾತ್ರವಲ್ಲದೆ ಹಿಂದುತ್ವದ ಪರವಾದ ಅಭಿಪ್ರಾಯವನ್ನು ಮತ್ತು ಬೆಂಬಲವನ್ನು ರೂಢಿಸುವ ಅವಕಾಶಗಳನ್ನು ಒದಗಿಸಿಕೊಡಲಿದೆ. ಕಳೆದ 30-40 ವರ್ಷಗಳ ಭಾರತದ ಮಾತ್ರವಲ್ಲ ಜಗತ್ತಿನ ಪ್ರಜಾತಾಂತ್ರಿಕ ದೇಶಗಳ ಚುನಾವಣಾ ಇತಿಹಾಸವನ್ನು ನೋಡಿದರೆ ಆಡಳಿತರೂಢ ಯಥಾಸ್ಥಿತಿವಾದಿ ಪಕ್ಷಗಳ ಅಥವಾ ಪ್ರಗತಿಪರ ಪಕ್ಷಗಳ ಸರಕಾರಗಳು ಭರವಸೆಗಳನ್ನು ಈಡೇರಿಸದಿರುವುದು ಅಥವಾ ಭ್ರಷ್ಟಾಚಾರಗಳಲ್ಲಿ ತೊಡಗಿದ್ದು ಅಥವಾ ತೊಡಗಿದ್ದವು ಎಂಬ ಗುಮಾನಿಗಳನ್ನು ಬಿಜೆಪಿಯಂಥ ಉಗ್ರ ಫ್ಯಾಶಿಸ್ಟ್ ಪಕ್ಷಗಳು ಬಳಸಿಕೊಂಡು ಸರ್ವಾಧಿಕಾರಿ ಫ್ಯಾಶಿಸ್ಟ್ ಆಳ್ವಿಕೆಯನ್ನು ತರುವಲ್ಲಿ ಯಶಸ್ವಿಯಾಗಿವೆ. ಭಾರತದ ಇತಿಹಾಸವನ್ನೇ ನೋಡಿದರೆ, 2009ರಲ್ಲಿ ಶೇ. 18ರಷ್ಟು ಮತಗಳನ್ನು ಮತ್ತು ಕೇವಲ 116 ಸೀಟುಗಳನ್ನು ಪಡೆದುಕೊಂಡು ಸಂಸತ್ತಿನಲ್ಲಿ ವಿರೋಧ ಪಕ್ಷವಾಗಿದ್ದ ಬಿಜೆಪಿ, ಆಗಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಮಾಡಿದ ಮತ್ತು ಮಾಡಿರದ ಹಗರಣಗಳನ್ನು ಬಳಸಿಕೊಂಡು ಅದನ್ನು ಹಿಂದೂ ರಾಷ್ಟ್ರದ ಅಗತ್ಯದೊಂದಿಗೆ ಬೆರೆಸಿಕೊಂಡು ಜನರಲ್ಲಿ ಉನ್ಮಾದವನ್ನು ಸೃಷ್ಟಿಸಿ 2014ರಲ್ಲಿ ಶೇ. 31ರಷ್ಟು ವೋಟು ಶೇರು ಮತ್ತು 282 ಸೀಟುಗಳನ್ನು ಪಡೆದುಕೊಂಡಿತ್ತು. ಕಾಂಗ್ರೆಸ್‌ನ ಜನವಿರೋಧಿ ಆಡಳಿತದ ವಿರೋಧದ ಸ್ಪೇಸನ್ನು ಸಂಪೂರ್ಣವಾಗಿ ಬಿಜೆಪಿಯೇ ಆವರಿಸಿಕೊಂಡಿದ್ದರಿಂದ ಕಾಂಗ್ರೆಸ್ ವಿರೋಧದ ಜನಾಭಿಪ್ರಾಯ ಹಿಂದೂ ರಾಷ್ಟ್ರದ ಪರವಾಗಿ ದುಡಿಸಿಕೊಳ್ಳಲು ಅವಕಾಶವಾಯಿತು.

ಹಾಗೆಯೇ 2016ರಲ್ಲಿ ಪ. ಬಂಗಾಳದ ಚುನಾವಣೆಯಲ್ಲಿ ಕೇವಲ ಶೇ. 10ರಷ್ಟು ಮತಗಳನ್ನು ಮತ್ತು ಕೇವಲ 3 ಸೀಟುಗಳನ್ನು ಪಡೆದುಕೊಂಡಿದ್ದ ಬಿಜೆಪಿ ಕ್ರಮೇಣ ಅಲ್ಲಿಯ ಆಡಳಿತ ವಿರೋಧಿ ವಿಪಕ್ಷದ ಸ್ಪೇಸನ್ನು ತಾನೇ ಕಬಳಿಸಿಕೊಂಡಿತು. ಅಲ್ಲಿ ಎಡಪಕ್ಷಗಳು ಮತ್ತು ಕಾಂಗ್ರೆಸ್ ವಿರೋಧ ಪಕ್ಷದಲ್ಲಿದ್ದರೂ, ತನ್ನ ಕೋಮುವಾದಿ ಉನ್ಮಾದ, ಅಪಪ್ರಚಾರ ಮತ್ತು ಕೇಂದ್ರದ ಬಲವನ್ನು ಬಳಸಿಕೊಂಡು 2021ರ ಚುನಾವಣೆಯ ವೇಳೆಗೆ ಬಿಜೆಪಿ ಶೇ. 38ರಷ್ಟು ಮತಗಳನ್ನು ಮತ್ತು 77 ಸೀಟುಗಳನ್ನು ಪಡೆದುಕೊಂಡಿತ್ತು. ಕಾಂಗ್ರೆಸ್‌ಗೆ ಒಂದು ಸೀಟು ದೊರೆತರೆ ಎಡಪಕ್ಷಗಳು ಈಗ ಶಾಸನಸಭೆಯಲ್ಲಿ ಇಲ್ಲವೇ ಇಲ್ಲ. ಹೀಗಾಗಿ ಇದೀಗ ಅಲ್ಲಿ ಏಕಮಾತ್ರ ವಿರೋಧ ಪಕ್ಷವಾಗಿರುವ ಬಿಜೆಪಿ ಆಡಳಿತ ರೂಢ ಟಿಎಂಸಿ ವಿರುದ್ಧದ ಅಸಮಾಧಾನದ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳುತ್ತಿರುವುದು ಮಾತ್ರವಲ್ಲದೆ ಅದನ್ನು ಹಿಂದುತ್ವದ ಪರವಾದ ಬೆಂಬಲವಾಗಿ ರೂಪಿಸಿಕೊಳ್ಳುತ್ತಿದೆ. ಇಂದು ಕರ್ನಾಟಕದಲ್ಲೂ ಬಿಜೆಪಿಯೇ ಪ್ರಧಾನವಾದ ವಿರೋಧ ಪಕ್ಷವಾಗಲಿದೆ. ಕಾಂಗ್ರೆಸ್ ಸಹಜವಾಗಿಯೇ ತನ್ನ ಕಾರ್ಪೊರೇಟ್ ಪರ ಆರ್ಥಿಕ ನೀತಿಗಳ ಕಾರಣಕ್ಕೆ, ಸಹಜವಾಗಿ ಆಗಬಹುದಾದ ಆಡಳಿತ ಲೋಪ, ಮಾಡುವ, ಮಾಡದಿರುವ ಭ್ರಷ್ಟಾಚಾರಗಳಂಥ ಕಾರಣಗಳಿಗಾಗಿ ತಪ್ಪುಗಳನ್ನು ಮಾಡುವುದು ಸಹಜ. ಆಗ ಅದನ್ನು ವಿರೋಧಿಸಿ ತನ್ನನ್ನು ಜನಪರ ಎಂದು ಬಿಂಬಿಸಿಕೊಳ್ಳುವ ಬೃಹತ್ ಅವಕಾಶ ತಾನಾಗಿಯೇ ಬಿಜೆಪಿಗೆ ದಕುತ್ತದೆ.

ಅಷ್ಟು ಮಾತ್ರವಲ್ಲ, ಬಿಜೆಪಿ ವಿರೋಧ ಪಕ್ಷದಲ್ಲಿದ್ದಾಗಲೇ ಕೋಮುವಾದಿ ಗಲಭೆಗಳನ್ನು ಹೆಚ್ಚಾಗಿ ಹುಟ್ಟುಹಾಕಿ ಸಮಾಜದ ಧ್ರುವೀಕರಣಕ್ಕೆ ಯತ್ನಿಸುತ್ತದೆ. ಅದನ್ನು ಕಾಂಗ್ರೆಸ್ ತನ್ನ ಮೃದು ಹಿಂದುತ್ವವಾದಿ ಧೋರಣೆಯಿಂದ ಕಡೆಗಣಿಸಿದರೂ ಬಿಜೆಪಿಗೆ ಲಾಭವಾಗುತ್ತದೆ ಅಥವಾ ಅದನ್ನು ತಡೆಗಟ್ಟಲು ಕ್ರಮ ತೆಗೆದುಕೊಂಡರೂ 2013-18ರ ನಡುವೆ ಮಾಡಿದಂತೆ ಹಿಂದೂ ವಿರೋಧಿ ಎಂಬ ಅಭಿಯಾನವನ್ನು ಬಿಜೆಪಿ ಕೈಗೊಳ್ಳುತ್ತದೆ. ಕಾಂಗ್ರೆಸ್‌ಗಿಂತ, ಪ್ರಗತಿಪರ-ಎಡ ಸಂಘಟನೆಗಳಿಗಿಂತ ಬಲವಾದ ಜನಸಂಘಟನೆ, ಸಾಧನಗಳು ಮತ್ತು ಸಂಪರ್ಕ ಜಾಲ ಮತ್ತು ಮಾಧ್ಯಮಗಳು ಅದರ ಜೊತೆ ಇರುವುದರಿಂದ ಬಿಜೆಪಿ ಈಗ ವಿರೋಧ ಪಕ್ಷವಾಗಿರುವುದು ಮತ್ತಷ್ಟು ಜನಬೆಂಬಲವನ್ನು ಹೆಚ್ಚಿಸಿಕೊಳ್ಳಲು, 2024ರ ಚುನಾವಣೆಯನ್ನು ಎದುರಿಸಲು ಅದಕ್ಕೆ ವರವಾಗಿಯೇ ಪರಿಣಮಿಸಬಹುದು. ಹೀಗಾಗಿ ಬಿಜೆಪಿ ಆಡಳಿತ ಪಕ್ಷವಾಗಿದ್ದರೆ ಎಷ್ಟು ಅಪಾಯವೋ, ಅಷ್ಟೇ ಅಪಾಯ ಅದು ಏಕಮಾತ್ರ ವಿರೋಧ ಪಕ್ಷವಾದರೂ ಇದ್ದೇ ಇರುತ್ತದೆ. ಹೀಗಾಗಿ ಶಾಸನಸಭೆಯಲ್ಲಿ ಬಿಜೆಪಿಯು ವಿರೋಧ ಪಕ್ಷವಾಗಿದ್ದರೂ, ಸಮಾಜದಲ್ಲಿ ಎಡ-ಜಾತ್ಯತೀತ-ಜನಪರ ಸಂಘಟನೆಗಳು ವಿರೋಧದ ಸ್ಪೇಸನ್ನು ಬಿಜೆಪಿಗೆ ಬಿಟ್ಟುಕೊಡದೆ ತಾವೇ ನೈಜ ವಿರೋಧ ಪಕ್ಷವಾಗಿ ನೈಜ ಸಂವಿ�

Similar News