ಯುವಕರಿಗೆ ಉದ್ಯೋಗ ಸಿಗಲಿ

Update: 2023-05-16 18:08 GMT

ಮಾನ್ಯರೇ,

ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಬಹಳ ಚುರುಕಾಗಿ ನಡೆದಿತ್ತು. ಪಕ್ಷಗಳು ಮತದಾರರ ಮನವೊಲಿಸಲು ವಿವಿಧ ಯೋಜನೆಗಳನ್ನು ಜಾರಿಗೆ ತರುವುದಾಗಿ ಆಶ್ವಾಸನೆ ಕೊಡುತ್ತಾ ಬಂದಿವೆ. ಈ ನಡುವೆ ಕಾಂಗ್ರೆಸ್ ಪಕ್ಷವೂ ಐದು ಯೋಜನೆಗಳನ್ನು ಮೊದಲ ಸಂಪುಟ ಸಭೆಯಲ್ಲೇ ಜಾರಿಗೆ ತರುವುದಾಗಿ ಭರವಸೆ ನೀಡಿತ್ತು. ಚುನಾವಣಾ ಫಲಿತಾಂಶ ಹೊರಬಿದ್ದು ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಬಹಳ ವರ್ಷಗಳ ನಂತರ ಆರಿಸಿ ಬಂದಿದೆ. ಕಾಂಗ್ರೆಸ್ ಪಕ್ಷ ನೀಡಿದ ಐದು ಯೋಜನೆಗಳಲ್ಲಿ ನಿರುದ್ಯೋಗಿ ಪದವೀಧರ ಯುವಕರಿಗೆ ರೂ. 3,000 ಮತ್ತು ಡಿಪ್ಲೊಮಾ ಪದವೀಧರರಿಗೆ ರೂ. 1,500 ನೀಡುವುದಾಗಿ ಗ್ಯಾರಂಟಿ ನೀಡಿದೆ. ಆದರೆ ಆ ಯುವಕರು ಬರುವ ಮೊತ್ತವನ್ನೂ ಇತರ ಖರ್ಚುಗಳಿಗೆ ಬಳಸಿ ಹಾಳು ಮಾಡಿಬಿಡಬಹುದು. ಉದ್ಯೋಗ ಇಲ್ಲದವರಿಗೆ ಹಣ ನೀಡುವ ಬದಲು ಉದ್ಯೋಗವನ್ನೇ ನೀಡಬಹುದಲ್ಲವೇ? ವಿವಿಧ ಸರಕಾರಿ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಕರೆಯಬಹುದಲ್ಲವೇ? ಇತರ ಕಂಪೆನಿಗಳಲ್ಲಿ ಸಾಧ್ಯವಾದರೆ ಯುವಕರಿಗೆ ಕೆಲಸ ದೊರೆಯುವಂತೆ ಪ್ರಯತ್ನಿಸಬಹುದಲ್ಲವೇ? ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲೂ ಉದ್ಯೋಗ ಮೇಳವನ್ನು ಏರ್ಪಡಿಸಿ ಅವರವರ ಅರ್ಹತೆಗೆ ತಕ್ಕಂತೆ ಉದ್ಯೋಗವನ್ನು ಯಾಕೆ ನೀಡಬಾರದು?
ಕರ್ನಾಟಕದಲ್ಲಿ ದೊಡ್ಡ ಸಮಸ್ಯೆಯೇ ನಿರುದ್ಯೋಗವಾಗಿದೆ. ಎಷ್ಟೋ ಪದವಿ ಹೊಂದಿದ ಯುವಕರು ಹಳ್ಳಿಗಳಿಂದ ನಗರಕ್ಕೆ ವಲಸೆ ಬಂದು ಗಾರೆ ಕೆಲಸ, ಡ್ರೈವಿಂಗ್, ಹೊಟೇಲ್ ಮುಂತಾದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಅವರವರ ಅರ್ಹತೆಗೆ ತಕ್ಕಂತೆ ಉದ್ಯೋಗ ನೀಡಬೇಕು. ಇಂತಹ ಉತ್ತಮ ಚಿಂತನೆಯನ್ನು ನಡೆಸಿದರೆ ನಿರುದ್ಯೋಗವನ್ನು ತಡೆಗಟ್ಟಬಹುದು. ಶಿಕ್ಷಣ ಕ್ಷೇತ್ರದಲ್ಲೂ ಅಭಿವೃದ್ಧಿ ಸಾಧಿಸಬಹುದು.
 

Similar News