×
Ad

ಜ್ಞಾನವ್ಯಾಪಿ ಮಸೀದಿಯ ಸಂಪೂರ್ಣ ಆವರಣ ಸಮೀಕ್ಷೆಗೆ ಹೊಸ ಅರ್ಜಿ ಸಲ್ಲಿಸಿದ ಮೂಲ ಅರ್ಜಿದಾರರು

Update: 2023-05-17 14:41 IST

ವಾರಣಾಸಿ: ಜ್ಞಾನವ್ಯಾಪಿ ಮಸೀದಿ ವಿವಾದ ಪ್ರಕರಣದ ಹಿಂದೂ ಅರ್ಜಿದಾರರು ವಾರಣಾಸಿ ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಈ ಮಸೀದಿ ಹಿಂದು ದೇವಾಲಯವಿದ್ದ ಸ್ಥಳದಲ್ಲಿ ನಿರ್ಮಿಸಲಾಗಿದೆಯೇ ಎಂದು ಕಂಡುಕೊಳ್ಳಲು ಇಡೀ ಮಸೀದಿ ಆವರಣದ ಸಮೀಕ್ಷೆ ನಡೆಸಲು ಕೋರಿದ್ದಾರೆ.

ಮಸೀದಿ ಆವರಣದಲ್ಲಿ ಪ್ರಾರ್ಥನೆ ಸಲ್ಲಿಸಲು ಅನುಮತಿ ಕೋರಿ ಈ ಹಿಂದೆ ಅರ್ಜಿ ಸಲ್ಲಿಸಿದ್ದ ಐದು ಮಂದಿ ಮಹಿಳೆಯರ ಪೈಕಿ ನಾಲ್ಕು ಮಂದಿ ಈ ಹೊಸ ಅರ್ಜಿ ಸಲ್ಲಿಸಿದ್ದಾರೆ. ಮಸೀದಿಯಲ್ಲಿ ಹಿಂದು ದೇವತೆ ಶೃಂಗಾರ ಗೌರಿಯ ಚಿತ್ರವಿದೆ ಎಂದು ತಮ್ಮ ಮೊದಲ ಅರ್ಜಿಯಲ್ಲಿ ಅವರು ವಾದಿಸಿದ್ದರು.

ಹಿಂದು ಅರ್ಜಿದಾರರು ಶಿವಲಿಂಗ ಎಂದು ಹೇಳುತ್ತಿರುವ ಮಸೀದಿ ಆವರಣದಲ್ಲಿನ ಅಂಡಾಕಾರದ ವಸ್ತುವಿನ ವೈಜ್ಞಾನಿಕ ಸಮೀಕ್ಷೆ ಕೈಗೊಳ್ಳಬಹುದು ಎಂದು ಅಲಹಾಬಾದ್‌ ಹೈಕೋರ್ಟ್‌ ಇತ್ತೀಚೆಗೆ ಹೇಳಿದ ನಂತರ ಈಗ ಹೊಸ ಅರ್ಜಿ ಸಲ್ಲಿಕೆಯಾಗಿದೆ.

ವಾರಣಾಸಿ ಸಿವಿಲ್‌ ನ್ಯಾಯಾಲಯದ ಆದೇಶದಂತೆ ಕಳೆದ ವರ್ಷದ ಮೇ ತಿಂಗಳಿನಲ್ಲಿ ಮಸೀದಿ ಆವರಣದಲ್ಲಿ ನಡೆದ ಸಮೀಕ್ಷೆ ವೇಳೆ ಅಂಡಾಕಾರದ ವಸ್ತು ಪತ್ತೆಯಾದಾಗ ಹಿಂದು ಅರ್ಜಿದಾರರು ಅದು ಶಿವಲಿಂಗ ಎಂದು ಹೇಳಿಕೊಂಡಿದ್ದರು. ಆದರೆ ಮಸೀದಿ ಸಮಿತಿ ಮಾತ್ರ ಈ ವಸ್ತು ಅಲ್ಲಿನ ಕೊಳ ಅಥವಾ ವಾಝು ಖಾನ ಇದರ ಕಾರ್ಯನಿರ್ವಹಿಸದ ಕಾರಂಜಿಯ ತುದಿಯಾಗಿದೆ ಎಂದಿದ್ದರು.

ಈ ಮಸೀದಿಯಲ್ಲಿ ಹಿಂದು ದೇವರನ್ನು ಬಿಂಬಿಸುವ ವಸ್ತು ಲಕ್ಷಾಂತರ ವರ್ಷಗಳಿಂದ ಇತ್ತು ಹಾಗೂ ಮುಸ್ಲಿಂ ಆಕ್ರಮಣಕಾರರಿಂದ ಹಾನಿಗೀಡಾಗಿತ್ತು ಎಂದು ಈಗ ತಮ್ಮ ಹೊಸ ಅರ್ಜಿಯಲ್ಲಿ ಅರ್ಜಿದಾರರು  ಹೇಳಿದ್ದಾರೆ.

ಅಷ್ಟೇ ಅಲ್ಲದೆ ಮಸೀದಿಯ ರಚನೆಯನ್ನು ನೋಡಿದಾಗ ಅದು ಹಳೆಯ ಹಿಂದು ದೇವಳದ ಪಳೆಯುಳಿಕೆಯಂತೆ ಕಂಡುಬರುತ್ತದೆ ಹಾಗೂ ಈಗಿನ ಕಟ್ಟಡವನ್ನು ಯಾವುದೇ ವಿಧದಲ್ಲಿ ಅದರ ಇತಿಹಾಸ ಗಮನಿಸಿದಾಗ  ಮಸೀದಿ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

“ಮಸೀದಿಯ ಗೋಪುರದ ಅಡಿಯಲ್ಲಿ ಕಳೆದ ವರ್ಷ ನಡೆದ ಸಮೀಕ್ಷೆಯಲ್ಲಿ ಪತ್ತೆಯಾದ ಗೋಪುರವು ಅಲ್ಲಿ ಹಿಂದೆ ಹಿಂದು ದೇವಸ್ಥಾನ ಇತ್ತೆಂದು ತೋರಿಸುತ್ತದೆ. ಅಲ್ಲೊಂದು ಮೆಟ್ಟಿಲು ಕೂಡ ಇದೆ ಅದನ್ನೂ ವೈಜ್ಞಾನಿಕವಾಗಿ ಪರಿಶೀಲಿಸಬೇಕು,” ಎಂದು ಅರ್ಜಿದಾರರು ಕೋರಿದ್ದಾರೆ.

ಈ ಅರ್ಜಿಗೆ ಆಕ್ಷೇಪಣೆಗಳೇನಾದರೂ ಇದ್ದಲ್ಲಿ ಮೇ 19ರೊಳಗಾಗಿ ಸಲ್ಲಿಸುವಂತೆ ಹೇಳಿದ ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಮೇ 22ಕ್ಕೆ ನಿಗದಿಪಡಿಸಿದೆ.

Similar News